ಶನಿವಾರ, ಸೆಪ್ಟೆಂಬರ್ 26, 2020
23 °C

ರಾಷ್ಟ್ರೀಯ ಶಿಕ್ಷಣ ನೀತಿ | ಪೂರ್ಣ ಚಿತ್ರಣ ಬದಲಾಗಲಿದೆ: ಎಂ.ಕೆ. ಶ್ರೀಧರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದ ಭವ್ಯ ಪರಂಪರೆ ಮತ್ತು ಸಂಸ್ಕೃತಿಯ ತಳಹದಿಯ ಮೇಲೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು ಎಂಬ ಬಹಳ ದಿನಗಳ ಕನಸು ಮತ್ತು ಬೇಡಿಕೆಗೆ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ–2019’ ಮುನ್ನುಡಿ ಬರೆಯಲಿದೆ.

– ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಸದಸ್ಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎಂ.ಕೆ. ಶ್ರೀಧರ್‌ ಅವರ ಅಭಿಪ್ರಾಯವಿದು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದ ನಂತರ ‘ಪ್ರಜಾವಾಣಿ’ ಜತೆ ಅವರು ಮಾತಿಗೆ ಸಿಕ್ಕರು.

ದೇಶದ ಶಿಕ್ಷಣ ವ್ಯವಸ್ಥೆಯನ್ನು ಹೊಸ ಶಿಕ್ಷಣ ನೀತಿ ಬದಲಾವಣೆಯ ದಿಕ್ಕಿನತ್ತ ಕೊಂಡೊಯ್ಯಲಿದೆ. ಸಾಮಾಜಿಕ ನ್ಯಾಯ ಮತ್ತು ಜ್ಞಾನ ಆಧಾರಿತ ಸಮಾಜ ನಿರ್ಮಾಣಕ್ಕೆ ಇದು ನಾಂದಿ ಹಾಡಲಿದೆ. ಗುಣಮಟ್ಟದ ಶಿಕ್ಷಣ ಸಮಾಜದ ಪ್ರತಿ ಮಗುವಿಗೂ ಸಿಗಬೇಕು ಎಂಬ ಉನ್ನತ ಆಶಯದೊಂದಿಗೆ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದರು.

ಜ್ಞಾನ, ಕೌಶಲ ಮತ್ತು ಮೌಲ್ಯಾಧಾರಿತ ನೈತಿಕ ಶಿಕ್ಷಣ ನೀಡುವ ಮೂಲಕ ಭಾರತವನ್ನು ಜಗತ್ತಿನ ಜ್ಞಾನದ ಶಕ್ತಿಕೇಂದ್ರವನ್ನಾಗಿ ಪರಿವರ್ತಿಸುವುದು ಹೊಸ ಶಿಕ್ಷಣ ನೀತಿಯ ಮುಖ್ಯ ಧ್ಯೇಯವಾಗಿದೆ ಎನ್ನುತ್ತಾರೆ ಶ್ರೀಧರ್.

ಹೊಸ ಶಿಕ್ಷಣ ನೀತಿಯನ್ನು ದೇಶದ ವೃತ್ತಿ ಮತ್ತು ಉದ್ಯೋಗ ವಲಯದ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ದೇಶದ ರೂಪುರೇಷೆಗಳನ್ನು ಸಿದ್ಧಪಡಿಸಿದ ಈ ನೀಲನಕ್ಷೆಯ ಹಿಂದೆ ಸುಮಾರು ಆರು ವರ್ಷಗಳ ಶ್ರಮವಿದೆ ಎಂದು ತಿಳಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ಕೇಂದ್ರ ಸರ್ಕಾರ 2017ರ ಜೂನ್‌ನಲ್ಲಿ ಡಾ. ಕಸ್ತೂರಿರಂಗನ್‌ ನೇತೃತ್ವದಲ್ಲಿ ಕರಡು ಸಮಿತಿ ರಚಿಸಿತ್ತು. 2019ರ ಮೇ ತಿಂಗಳಲ್ಲಿ ಸರ್ಕಾರಕ್ಕೆ 484 ಪುಟಗಳ ಕರಡು ವರದಿ ಸಲ್ಲಿಸಲಾಗಿತ್ತು. ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿತ್ತು. 2.25 ಲಕ್ಷ ಸಲಹೆ, ಸೂಚನೆ ಮತ್ತು ಅಭಿಪ್ರಾಯ ಸಂಗ್ರಹಿಸಲಾಯಿತು. ಸಮಾಜದ ಎಲ್ಲ ಸ್ತರಗಳ ಜನರ ಜತೆ ವರ್ಷಗಳ ಕಾಲ ಸುದೀರ್ಘ ಸಮಾಲೋಚನೆ, ಪರಾಮರ್ಶೆ ನಂತರ ಈ ಶಿಕ್ಷಣ ನೀತಿ ಜನ್ಮತೆಳೆದಿದೆ ಎಂದು ತಿಳಿಸಿದರು.

‘ಕರಡು ಸಮಿತಿ ಸದಸ್ಯರು ಬೇರೆ, ಬೇರೆ ದೇಶಗಳ ಶಿಕ್ಷಣ ವ್ಯವಸ್ಥೆ ಮತ್ತು ನೀತಿಗಳನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿದ್ದೇವೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಸದ್ಯದ ಸ್ಥಿತಿ ಮತ್ತು ಮುಂದೆ ಎದುರಾಗಬಹುದಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಸಾರ್ವಜನಿಕರ ಸಲಹೆ, ಸೂಚನೆಗಳನ್ನು 25 ವಿಷಯಗಳಲ್ಲಿ ವಿಂಗಡಿಸಲಾಯಿತು. ಪ್ರತಿಯೊಂದು ವಿಷಯದ ಮೇಲೂ ನಮ್ಮ ಶಿಕ್ಷಣ ತಜ್ಞರು ಮತ್ತು ಸಂಶೋಧಕರ ತಂಡ ಅಧ್ಯಯನ ನಡೆಸಿ ಅಭಿಪ್ರಾಯ ಮಂಡಿಸಿತ್ತು.

‘ಇದೇ ಮೊದಲ ಬಾರಿಗೆ ಪೂರ್ವ ಪ್ರಾಥ ಮಿಕ ಶಿಕ್ಷಣವನ್ನು ಶಿಕ್ಷಣ ವ್ಯವಸ್ಥೆ ವ್ಯಾಪ್ತಿಯೊಳಗೆ ತರಲಾಗಿದೆ. ಮಗು ಕೇಂದ್ರಿತ ಶಿಕ್ಷಣ ವ್ಯವಸ್ಥೆ ರೂಪಿಸಲಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣದವರೆಗೂ ಸಮಾನವಾಗಿ ಗಮನ ಹರಿಸಲಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

‘ಪಠ‍್ಯದಷ್ಟೇ ಪಠ‍್ಯೇತರ ಚಟುವಟಿಕೆಗಳಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ವಿಜ್ಞಾನ, ಕಲೆ, ವಾಣಿಜ್ಯ, ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ, ಕೃಷಿ ವಿಜ್ಞಾನ ಹೀಗೆ ಎಲ್ಲ ತೆರನಾದ ಶಿಕ್ಷಣ ಪದ್ಧತಿಯನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗಿದೆ. ಕಲೆ ಮತ್ತು ವಿಜ್ಞಾನ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ’ ಎಂದು ಶ್ರೀಧರ್‌ ತಿಳಿಸಿದರು.

ಆರನೇ ತರಗತಿಯಿಂದಲೇ ವೃತ್ತಿ ಶಿಕ್ಷಣ ತರಬೇತಿ ಆರಂಭವಾಗಲಿದೆ. ಪದವಿಯ ಹಂತದಲ್ಲಿಯೇ ಸಂಶೋಧನೆಗೆ ಒತ್ತು ನೀಡಲು ಪದವಿ ಅವಧಿಯನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಲು ಸಲಹೆ ಮಾಡಲಾಗಿದೆ. ಅನಿವಾರ್ಯ ಕಾರಣಗಳಿಗೆ ಅರ್ಧಕ್ಕೆ ಓದು ನಿಲ್ಲಿಸಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.