ಗುರುವಾರ , ಅಕ್ಟೋಬರ್ 1, 2020
27 °C
ಬಿಜೆಪಿ ನೂತನ ಪದಾಧಿಕಾರಿಗಳ ಸಭೆ * ಕ್ವಾರಂಟೈನ್‌ನಿಂದ ಕೆಲವರ ಗೈರು

ತಂಡವಾಗಿ ಕೆಲಸ ಮಾಡೋಣ: ನಳಿನ್ ಕುಮಾರ್‌ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಳಿನ್ ಕುಮಾರ್‌ ಕಟೀಲ್‌

ಬೆಂಗಳೂರು: ‘ನಾವು ಹೊಸ ಪದಾಧಿಕಾರಿಗಳು ಒಂದು ತಂಡವಾಗಿ ಪಕ್ಷವನ್ನು ಮುನ್ನಡೆಸಲು ನಿರ್ಧರಿಸಿದ್ದೇವೆ. ಉಪಾಧ್ಯಕ್ಷರ ಹುದ್ದೆಯೂ ಸೇರಿ ಯಾವುದೂ ಗೌರವದ ಹುದ್ದೆಯಲ್ಲ. ಎಲ್ಲರಿಗೂ ಕೆಲಸ ಮಾಡಲು ಅವಕಾಶಗಳಿವೆ. ಒಗ್ಗೂಡಿ ಕೆಲಸ ಮಾಡಲು ತೀರ್ಮಾನಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ನೂತನ ಪದಾಧಿಕಾರಿಗಳ ಪರಿಚಯದ ಸಭೆಯ ಬಳಿಕ ಅವರು ‘ಪ್ರಜಾವಾಣಿ’ಗೆ ಈ ಮಾಹಿತಿ ನೀಡಿದರು. ‘ಪಕ್ಷದಲ್ಲಿ ಎಲ್ಲರ ಅಭಿಪ್ರಾಯಗಳಿಗೂ ಮನ್ನಣೆ ನೀಡಲಾಗುವುದು. ಎಲ್ಲರಿಗೂ ಅವಕಾಶ ನೀಡಲಾಗುವುದು. ಬೇರೆ ಪಕ್ಷಗಳಲ್ಲಿ ಜನಪ್ರತಿನಿಧಿಯಾದರೆ ಮಾತ್ರ ಗೌರವ. ನಮ್ಮಲ್ಲಿ ಪದಾಧಿಕಾರಿಗಳಾಗುವುದು ಗೌರವ’ ಎಂದು ಹೇಳಿದರು.

‘ಸಂಘಟನೆ ಮತ್ತು ಪಕ್ಷವನ್ನು ಪ್ರಬಲವಾಗಿ ಬೆಳೆಸಲು ಎಲ್ಲ ಪದಾಧಿಕಾರಿಗಳು ಶ್ರಮಿಸಬೇಕು. ಅದಕ್ಕಾಗಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ಮಾಡಲಾಯಿತು. ಕೆಲವು ಪದಾಧಿಕಾರಿಗಳು ಎಲ್ಲೆಲ್ಲೋ ಓಡಾಡಿದ್ದರಿಂದ ಕ್ವಾರಂಟೈನ್‌ನಲ್ಲಿ ಇರುವಂತೆ ನಾನೇ ತಿಳಿಸಿದೆ. ಹೀಗಾಗಿ ಸಭೆಗೆ ಕೆಲವು ಪದಾಧಿಕಾರಿಗಳ ಬಂದಿರಲಿಲ್ಲ’ ಎಂದು ಹೇಳಿದರು.

‘ಪಕ್ಷದ ವರಿಷ್ಠರು ನಮ್ಮೆಲ್ಲರನ್ನು ಗುರುತಿಸಿ ಜವಾಬ್ದಾರಿ ನೀಡಿದ್ದಾರೆ. ಇಲ್ಲಿ ಹುದ್ದೆಗಳಿಗಿಂತ ನಮ್ಮ ಕರ್ತವ್ಯ ಮುಖ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕಾರ್ಯಕ್ರಮಗಳನ್ನು ಜನರ ಬಳಿಗೆ ಒಯ್ಯಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಅವರು ತಿಳಿಸಿದರು.

ಇಡೀ ದಿನ ಸಭೆ ನಡೆಯಿತು. ಕಟೀಲ್‌ ಅವರು ಮೊದಲಿಗೆ ಉಪಾಧ್ಯಕ್ಷರ ಜತೆ ಪ್ರತ್ಯೇಕ ಸಭೆ ನಡೆಸಿದರು. ಬಳಿಕ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್‌ ಮತ್ತು ಎಲ್ಲ ಪದಾಧಿಕಾರಿಗಳ ಸಭೆ ನಡೆಸಿ, ನೇಮಕಾತಿ ಪತ್ರಗಳನ್ನು ನೀಡಿದರು.

ಇಂದಿನ ಸಭೆಗೆ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಎನ್‌.ರವಿಕುಮಾರ್‌, ಬಿ.ವೈ.ವಿಜಯೇಂದ್ರ, ಅಶೋಕ್ ಗಸ್ತಿ, ತೇಜಸ್ವಿನಿ ಅನಂತಕುಮಾರ್ ಪೂರ್ವಾನು ಮತಿಯೊಂದಿಗೆ‌ ಗೈರಾಗಿದ್ದರು. 

ಮನೆಯಲ್ಲೇ ರಾಮನ ಪೂಜೆ ಮಾಡಲು ಸೂಚನೆ

ಇದೇ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದ್ದು, ಅಂದು ಪಕ್ಷದ ಎಲ್ಲ ಕಾರ್ಯಕರ್ತರು ತಮ್ಮ ಮನೆಗಳಲ್ಲಿ ರಾಮನ ಪೂಜೆ ಮಾಡಬೇಕು. ಬೀದಿಯಲ್ಲಿ ಪೂಜೆ ಮಾಡುವುದು, ಪಟಾಕಿ ಹಚ್ಚಬಾರದು ಎಂದು ನಳಿನ್‌ ಕುಮಾರ್‌ ಕಟೀಲ್‌ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

‘ಅಯೋಧ್ಯೆಯಂತಹ ಸೂಕ್ಷ್ಮ ವಿಚಾರದಲ್ಲಿ ಯಾರ ಭಾವನೆಗಳಿಗೂ ಧಕ್ಕೆ ತರುವ ಕೆಲಸ ಮಾಡಬಾರದು. ಇದನ್ನು ಪ್ರತಿಯೊಬ್ಬ ಕಾರ್ಯಕರ್ತರು ಗಮನದಲ್ಲಿ ಇಟ್ಟುಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು. ಯಾವುದೇ ಕಾರಣಕ್ಕೂ ಪಟಾಕಿ ಹೊಡೆಯುವುದು ಮತ್ತು ಗುಂಪುಗೂಡಿ ಸಂಭ್ರಮಿಸಬಾರದು’ ಎಂದು ಅವರು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು