ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರ: ಕೊಡಗಿನಲ್ಲಿ ಪ್ರವಾಹ ಭೀತಿ

ಕಬಿನಿ ನದಿ ಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ
Last Updated 4 ಆಗಸ್ಟ್ 2020, 22:27 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಆಶ್ಲೇಷ ಮಳೆ ಅಬ್ಬರ ಮುಂದುವರಿದಿದೆ. ಕೊಡಗು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಕುಶಾಲನಗರದ ನಿವಾಸಿಗಳಿಗೆ ಸತತ 3ನೇ ವರ್ಷವೂ ಜಲಾವೃತದ ಆತಂಕ ಶುರುವಾಗಿದೆ.

ಮೈಸೂರು ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಳವಾಗಿದೆ. ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇರುವುದರಿಂದ ಮಂಗಳವಾರ 30 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿದೆ.ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಘೋಷಿಸಿದೆ.

ಭಾಗಮಂಡಲ ತ್ರಿವೇಣಿ ಸಂಗಮ ಸಂ‍ಪೂರ್ಣ ಭರ್ತಿಯಾಗಿದೆ.ಮಡಿಕೇರಿ, ಮಾದಾಪುರ, ಸೋಮವಾರಪೇಟೆ ಭಾಗ ದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಾರಂಗಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹೊರ ಹರಿವು ಮತ್ತೆ ಹೆಚ್ಚಿಸಲಾಗಿದೆ.

ಕೊಡಗಿನಲ್ಲಿ ಆಗಸ್ಟ್ 7ರ ವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭೂಕುಸಿತವಾಗುವ ಸಾಧ್ಯತೆಯಿದ್ದು, ಎತ್ತರ ಪ್ರದೇಶಗಳಲ್ಲಿ ವಾಸವಿರುವ ಜನರ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಧರೆಗುರುಳಿದ ಮರ: ಹಾಸನ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಗಾಳಿ, ಮಳೆಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.

ಪ್ರವಾಹ ಮುನ್ನೆಚ್ಚರಿಕೆ:ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಆರ್ಭಟ ಮುಂದುವರಿದಿದೆ. ಹೊಸ ನಗರ, ತೀರ್ಥಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ತುಂಗ–ಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.

ತೀರ್ಥಹಳ್ಳಿಯಲ್ಲಿ 104ಸೆ.ಮೀ, ಹೊಸನಗರದಲ್ಲಿ 210.80ಸೆ.ಮೀ ಮಳೆಯಾಗಿದೆ. ಪ್ರಮುಖ ನದಿಗಳಾದ ತುಂಗೆ, ಮಾಲತಿ, ಕುಶಾವತಿ ಹೊಳೆ, ಕುಂಟೇಹಳ್ಳ ಸೇರಿ ಸಣ್ಣ ಪುಟ್ಟ ಹಳ್ಳಗಳು ತುಂಬಿ ಹರಿಯುತ್ತಿವೆ.

ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಜಗಳೂರು ತಾಲ್ಲೂಕುಗಳಾದ್ಯಂತ ಮಂಗಳವಾರ ಉತ್ತಮ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿಯೂ ಉತ್ತಮ ಮಳೆಯಾಗಿದೆ.

ಕಲಬುರ್ಗಿ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನ ಕೆಲ ಹೊತ್ತು ತುಂತುರು ಮಳೆ ಸುರಿಯುವ ಮೂಲಕ ನಗರವನ್ನು ತಂಪಾಗಿಸಿತು. ಬೀದರ್‌ ಹಾಗೂ ಬಸವಕಲ್ಯಾಣದಲ್ಲಿಯೂ ಸಾಧಾರಣ ಮಳೆಯಾಯಿತು.

ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಿದೆ. ರಭಸದ ಗಾಳಿ ಬೀಸುತ್ತಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ರಭಸದ ಗಾಳಿ ಹಾಗೂ ಮಳೆಯಾಗಿದೆ. ಶಿರಸಿ, ಯಲ್ಲಾಪುರ ಸುತ್ತ–ಮುತ್ತ ಸೋಮವಾರ ರಾತ್ರಿ ಶುರುವಾದ ಮಳೆ ದಿನವಿಡೀ ಸುರಿಯಿತು.

‌ಕುಮಟಾದಲ್ಲಿ ಅಘನಾಶಿನಿ ನದಿ ಭರ್ತಿಯಾಗಿ ಹರಿಯುತ್ತಿದ್ದು, ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗುವ ಹಂತದಲ್ಲಿದೆ. ಕಾರವಾರವೂ ಸೇರಿದಂತೆ ಕರಾವಳಿಯಾದ್ಯಂತ ದಿನವಿಡೀ ಜೋರಾಗಿ ಗಾಳಿ ಬೀಸಿದ್ದು, ಆಗಾಗ ಬಿರುಸಾದ ಮಳೆ ಬಂತು.

ಮಳೆ ಎಲ್ಲಿ ಎಷ್ಟು?: ಸಿದ್ದಾಪುರ–15.1 ಸೆಂ.ಮೀ, ಅಂಕೋಲಾ–12.1 ಸೆಂ.ಮೀ, ಶಿರಸಿಯಲ್ಲಿ 10.5 ಸೆಂ.ಮೀ, ಕುಮಟಾದಲ್ಲಿ 9 ಸೆಂ.ಮೀ, ಕಾರವಾರದಲ್ಲಿ 8.7 ಸೆಂ.ಮೀ. ಮಳೆಯಾಗಿದೆ.

ಬೆಳಗಾವಿ ನಗರವೂ ಸೇರಿದಂತೆ ಎಂ.ಕೆ. ಹುಬ್ಬಳ್ಳಿ, ಹಿರೇಬಾಗೇವಾಡಿ, ರಾಯಬಾಗ, ಖಾನಾಪುರ, ಚಿಕ್ಕೋಡಿಯಲ್ಲಿ ಮಂಗಳವಾರ ಮಳೆಯಾಗಿದೆ. ಬೆಳಗಾವಿಯಲ್ಲಿ ದಿನವಿಡೀ ಜೋರು ಮಳೆ ಸುರಿಯಿತು.

ಧಾರವಾಡ, ಹಾವೇರಿ ಜಿಲ್ಲೆಯಲ್ಲಿಯೂ ಸಂಜೆ ಮಳೆಯಾಯಿತು.

ಭೂಕುಸಿತ: ಕರಾವಳಿ, ಮಲೆನಾಡು ಭಾಗಗಳಲ್ಲಿ ಎರಡು ದಿನಗಳಿಂದ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ತುಂಗಾ, ಭದ್ರಾ, ಹೇಮಾವತಿ, ಸೌಪರ್ಣಿಕಾ ನದಿಗಳು ತುಂಬಿ ಹರಿಯುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ. ರಸ್ತೆಗೆ ಮರವೊಂದು ಬಿದ್ದಿದ್ದು, ಅದನ್ನು ತೆರವುಗೊಳಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದ ಎರಡನೇ ದಿನ ಸಂಪೂರ್ಣ ಮುಳುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT