ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್ | ‘ಹಮ್ಮು’ ಬಿಟ್ಟು ‘ಕೂಲಿ’ಗಿಳಿದರು

ಉದ್ಯೋಗ ಕಳೆದುಕೊಂಡ ಪದವೀಧರರಿಂದ ನರೇಗಾ ಅಡಿ ಕೆಲಸ
Last Updated 1 ಆಗಸ್ಟ್ 2020, 20:33 IST
ಅಕ್ಷರ ಗಾತ್ರ

ಬೆಂಗಳೂರು: ಎಂಬಿಎ ಮುಗಿಸಿದವರು, ಎಂಜಿನಿ ಯರಿಂಗ್‌ ಪೂರೈಸಿದವರು, ಬಿ.ಇಡಿ ಓದಿದವರು... ಹಳ್ಳಿಗಳಲ್ಲಿ ಈಗ ಯಾರಿಲ್ಲ ಹೇಳಿ? ಕೊರೊನಾ ಕಾರಣದಿಂದ ತಮ್ಮೂರುಗಳಿಗೆ ವಾಪಸ್‌ ಬಂದಿರುವ ಅವರೀಗ ‘ದೊಡ್ಡ ಪದವಿ’ಗಳ ಹಮ್ಮು ಬಿಮ್ಮು ಬಿಟ್ಟು ಜಾಬ್‌ ಕಾರ್ಡ್‌ ಮಾಡಿಸಿದ್ದಾರೆ. ಗುದ್ದಲಿ, ಸಲಿಕೆ, ಹಾರೆ, ಪಿಕಾಸೆ ಹಿಡಿದು ಕೆರೆಯ ಹೂಳೆತ್ತಲು, ಇಂಗುಗುಂಡಿಗಳನ್ನು ನಿರ್ಮಿಸಲು ಹೋಗುತ್ತಾರೆ.

ರಾಜ್ಯದಲ್ಲಿ, ಅದರಲ್ಲೂ ಮಧ್ಯ ಮತ್ತು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ, ಮರು ವಲಸೆ ತಂದಿರುವ ಬದಲಾವಣೆ ಇದು.

ಕುಟುಂಬದ ನೊಗಕ್ಕೆ ಹೆಗಲಾಗುವ ಕನಸಿನೊಂದಿಗೆ ಉದ್ಯೋಗ ಅರಸಿ ಪಟ್ಟಣ ಸೇರಿದ್ದ ಲಕ್ಷಾಂತರ ಮಂದಿ, ಉದ್ಯೋಗ ನಷ್ಟ, ಸುದೀರ್ಘ ರಜೆ ಮತ್ತಿತರ ಕಾರಣಗಳಿಂದ ಈಗ ತಮ್ಮ ಹಳ್ಳಿಗಳನ್ನು ಸೇರಿದ್ದಾರೆ. ಇಂಥವರಲ್ಲಿ ಕೂಲಿನಾಲಿ ಮಾಡುತ್ತಿದ್ದವರು, ಕಟ್ಟಡನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡವರೂ ಇದ್ದಾರೆ, ಐಟಿ ಕಂಪನಿಗಳ ಉದ್ಯೋಗಿಗಳೂ ಇದ್ದಾರೆ. ಅಂಥವರಲ್ಲಿ ಬಹುತೇಕರು ಕೃಷಿ ಚಟುವಟಿಕೆಗೆ ಇಳಿದಿದ್ದರಿಂದ ಪಾಳು ಬಿದ್ದಿದ್ದ ಜಮೀನುಗಳು ಮತ್ತೆ ನಳನಳಿಸುವ ಲಕ್ಷಣಗಳು ಕಾಣಿಸುತ್ತಿವೆ. ಹಳ್ಳಿ ಜೀವನದ ಸುಖ ಕಂಡ ಅನೇಕರು ‘ಮರಳಿ ಪಟ್ಟಣಕ್ಕೆ ಹೋಗುವುದು ಬೇಡ’ ಎಂದು ತೀರ್ಮಾನಿಸಿದ್ದಾರೆ.

ಬ್ಯಾಂಕ್‌ ಸಾಲ ಪಡೆದು ಶಿಕ್ಷಣ ಮುಗಿಸಿ, ಈಗಷ್ಟೇ ವೃತ್ತಿ ಬದುಕನ್ನು ಆರಂಭಿಸಿದವರೂ ಊರಿಗೆ ವಾಪಸ್‌ ಬಂದವರಲ್ಲಿ ಸೇರಿದ್ದಾರೆ. ಅವರಲ್ಲಿ ಕೆಲವರು ಉದ್ಯೋಗ ಕಳೆದುಕೊಂಡು ಸಾಲ ಮರಳಿಸಲೂ ಆಗದ ಸ್ಥಿತಿಯಲ್ಲಿದ್ದಾರೆ. ಇಂಥವರಿಗೆ ಉದ್ಯೋಗ ಖಾತ್ರಿ ಯೋಜನೆ ಸದ್ಯಕ್ಕೆ ಆಸರೆ ಒದಗಿಸಿದೆ. ವೃತ್ತಿಪರ ಕೋರ್ಸ್‌ ಓದಿರುವ ಹಲವು ಯುವಕ– ಯುವತಿಯರು ಜಾಬ್‌ ಕಾರ್ಡ್‌ ಮಾಡಿಸಿಕೊಂಡು, ಕೀಳರಿಮೆ ಬಿಟ್ಟು ಕೆರೆಯ ಹೂಳೆತ್ತುವುದು, ಇಂಗುಗುಂಡಿ ನಿರ್ಮಾಣ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಕೊರೊನಾ ದೂರವಾಗಬಹುದು, ಆದರೆ ಅರ್ಥ ವ್ಯವಸ್ಥೆಯು ಮತ್ತೆ ಹಿಂದಿನಂತಾಗಲು ಇನ್ನೂ ಆರು ತಿಂಗಳು ಅಥವಾ ಒಂದು ವರ್ಷವೇ ಹಿಡಿಯಬಹುದು. ಕಳೆದುಹೋದ ಉದ್ಯೋಗ ಮರಳಿ ಲಭಿಸುತ್ತದೆ ಎಂಬ ಖಾತರಿ ಇಲ್ಲ. ಆದ್ದರಿಂದ ಮುಂದಿನ ದಾರಿ ಏನು ಎಂಬುದು ಇವರ ಮುಂದೆ ಪ್ರಶ್ನೆಯಾಗಿದೆ. ಹೀಗೆ ಕೂಲಿ ಕೆಲಸ ಮಾಡುತ್ತಿರುವ ಕೆಲವರು ‘ಪ್ರಜಾವಾಣಿ’ ಜತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ

‘ಊರಲ್ಲೇ ನೆಮ್ಮದಿ ಇದೆ’

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಅಗಸನಕೊಪ‍್ಪದ ಮಂಜುನಾಥ ಕರಿಯಪ್ಪನವರ, ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಆರ್ಕಿಟೆಕ್ಟ್ ವಿಷಯದಲ್ಲಿ ಎಂಜಿನಿಯರಿಂಗ್ ಮುಗಿಸಿದ್ದರು. ಗದಗದಲ್ಲಿ ಆರು ತಿಂಗಳು ಇಂಟರ್ನಶಿಪ್
ಮುಗಿಸಿ ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಕೆಲಸಕ್ಕೆ ಸೇರಿದ್ದರು.

‘ತಿಂಗಳಿಗೆ ₹16 ಸಾವಿರ ಸಂಬಳ ಸಿಗುತ್ತಿತ್ತು. ಖರ್ಚುವೆಚ್ಚಗಳನ್ನೆಲ್ಲ ಕಳೆದು ₹8 ಸಾವಿರವೂ ಕೈಯಲ್ಲಿ ಉಳಿಯುತ್ತಿರಲಿಲ್ಲ. ಇಲ್ಲಿ ಹೆಚ್ಚೂ ಕಡಿಮೆ ಅಷ್ಟೇ ದುಡಿಯುತ್ತಿದ್ದೇನೆ. ನಮಗೆ 10 ಎಕರೆ ಒಣ ಬೇಸಾಯದ ಜಮೀನಿದೆ. ಎಂಜಿನಿಯರಿಂಗ್ ಓದಲು ಊರಿನ ಸಿಂಡಿಕೇಟ್ ಬ್ಯಾಂಕ್‌ನಿಂದ ಶಿಕ್ಷಣ ಸಾಲ ಪಡೆದಿದ್ದೆ. ಈಗ ಉದ್ಯೋಗ ಖಾತರಿಯಡಿ ದುಡಿದು ತೀರಿಸುತ್ತಿದ್ದೇನೆ. ಇಲ್ಲಿಯೇ ನೆಮ್ಮದಿ ಇದೆ’ ಎನ್ನುತ್ತಾರೆ ಮಂಜುನಾಥ.

‘ಪದವಿಯನ್ನು ಹೊತ್ತುಕೊಳ್ಳಲೇ?’

ಮೆಕ್ಯಾನಿಕಲ್‌ ಎಂಜಿನಿ ಯರಿಂಗ್‌ ಪದವಿ ಮುಗಿಸಿರುವ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಹನುಮಂತಪುರ ಗ್ರಾಮದ ಎಚ್‌.ಎನ್‌. ಕಾರ್ತಿಕ್‌, ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸಕ್ಕೆ ಹಾಜರಾಗಬೇಕು ಎನ್ನುವಷ್ಟರಲ್ಲಿ
ಲಾಕ್‌ಡೌನ್‌ ಘೋಷಣೆಯಾಯಿತು. ಅವರು ತಡಮಾಡದೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಮಾಡಿಕೊಂಡರು.

‘ಎಂಜಿನಿಯರಿಂಗ್‌ ಮಾಡಿದ್ದೇನೆ ಎಂದು ಪದವಿಯನ್ನು ತಲೆಯ ಮೇಲೆ ಹೊತ್ತು ಕುಳಿತುಕೊಳ್ಳಲು ಸಾಧ್ಯವೇ? ಕೊರೊನಾ ಸೋಂಕು ಹರಡುವ ಸಂದರ್ಭದಲ್ಲಿ ಹಳ್ಳಿಯಲ್ಲೇ ಉಳಿಯುವುದು ಅನಿವಾರ್ಯವಾಗಿತ್ತು. ಹಳ್ಳಿಯಲ್ಲಿ ನರೇಗಾ ಕೆಲಸ ಬಿಟ್ಟರೆ ಮತ್ತೇನೂ ಸಿಗುವುದಿಲ್ಲ. ಸ್ವಾಭಿಮಾನದ ಜೀವನ ನಡೆಸುತ್ತಿದ್ದು ಇದರಿಂದ ನನಗೇನೂ ಬೇಸರವಿಲ್ಲ’ ಎನ್ನುತ್ತಾರೆ ಕಾರ್ತಿಕ್‌.

ಕಾರ್ತಿಕ್‌ ಅವರಿಗೆ 2 ಎಕರೆ ಜಮೀನಿದ್ದು ನರೇಗಾ ಅಡಿ ವೈಯಕ್ತಿಕ ಕೃಷಿ ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬೇವು, ಬೀಟೆ, ಹಲಸು, ಮಾವು, ನೇರಳೆ ಮುಂತಾದ ಸಸಿ ನೆಡಿಸಿದ್ದಾರೆ. ಇತರ ಗ್ರಾಮಸ್ಥರಿಗೂ ಈ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಕುಹಕಕ್ಕೆ ತಲೆ ಕೆಡಿಸಿಕೊಂಡಿಲ್ಲ

‘ಎಂಬಿಎ ಮಾಡಿ ಕೂಲಿ ಕೆಲಸ ಮಾಡ್ತಿದಾನ್ರೀ...’ ಎಂದು ಕೆಲವರು ಕುಹಕದಿಂದ ಮಾತನಾಡುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಂಡಿಲ್ಲ. ನನಗಿರುವ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವಾಗಿದೆ. ಹೇಗೆ ಬರುತ್ತದೆಯೋ ಹಾಗೆ ಜೀವನ ಮಾಡಬೇಕಾಗುತ್ತದೆ.... ’ – ಇದು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಮಲಬಾದ ಗ್ರಾಮದ ಎಂಬಿಎ ಪದವೀಧರ ನಿರಂಜನ ಲಖನಗೌಡ ಪಾಟೀಲ ಅವರ ಮಾತುಗಳಿವು.

‘ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕುಟುಂಬದ ಹೊಣೆ ನನ್ನಮೇಲಿದೆ. ಆದ್ದರಿಂದ ಊರಿಗೆ ಮರಳಿದ್ದೇನೆ. ನನ್ನ ಜಮೀನಿನಲ್ಲಿ ಬದು ನಿರ್ಮಾಣ ಮೊದಲಾದ ಕೆಲಸ ಮಾಡಿದ್ದೇನೆ. ನನ್ನ ವಿದ್ಯಾರ್ಹತೆಗೆ ಸಮೀಪದಲ್ಲಿ ಕೆಲಸ ಸಿಗುವುದಿಲ್ಲ. ಆದರೆ, ಉದ್ಯೋಗ ಖಾತ್ರಿ ನೆರವಾಗಿದೆ. 30 ದಿನಗಳಿಗೂ ಹೆಚ್ಚು ಕೂಲಿ ಮಾಡಿದ್ದೇನೆ’ ಎಂದು ಅವರು ತಿಳಿಸಿದರು.

ಆಶ್ವಾಸನೆಯಷ್ಟೇ ಸಿಕ್ಕಿದೆ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅಂಜಿನಾಪುರದ ಎಂ.ಎಸ್ಸಿ ಪದವೀಧರೆ ದೀಪಶ್ರೀ ಅವರು ಕೂಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಆಕೆಗೆ ಉದ್ಯೋಗದ ಭರವಸೆ ನೀಡಿದ್ದರು. ಆ ಭರವಸೆ ಈಡೇರಿಲ್ಲ. ದೀಪಶ್ರೀ ಕೂಲಿ ಕೆಲಸ ಮುಂದುವರಿಸಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ದೀಪಶ್ರೀ, ಲಾಕ್‌ಡೌನ್‌ ಬಳಿಕ ಮನೆಯಲ್ಲಿ ಉಳಿದಿದ್ದರು. ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು. ಅವರಿಗೆ ನೆರವಾಗಲು ದೀಪಶ್ರೀ ಕೂಡ, ಗ್ರಾಮದಲ್ಲಿ ನಡೆಯುವ ಬದು ನಿರ್ಮಾಣ ಕೆಲಸ ಮಾಡಿದ್ದಾರೆ. ಉಪನ್ಯಾಸಕಿ ಆಗುವ ಕನಸು ಕಾಣುತ್ತಿರುವ ಯುವತಿಗೆ, ಕೂಲಿ ಕೆಲಸ ಮಾಡಲು ಕೀಳರಿಮೆ ಇಲ್ಲ.

ಹೊಸ ಅನುಭವ ನೀಡಿತು

‘ಬಿ.ಎಸ್ಸಿ, ಬಿ.ಇಡಿ ಓದಿದ್ದೇನೆ. ಕೊಳಾರ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಸಂಜೆ ಇನ್ನೊಂದು ಕಂಪನಿಯಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಿದ್ದೆ. ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಲಾಕ್‌ಡೌನ್‌ನಿಂದಾಗಿ ಕಂಪನಿಗಳು ಬಾಗಿಲು ಮುಚ್ಚಿ ಸಂಕಷ್ಟ ಎದುರಿಸಬೇಕಾಯಿತು. ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಕೆರೆ ಹೂಳೆತ್ತುವ ಕೆಲಸ ಸಿಕ್ಕಿತು. ಅನಕ್ಷರಸ್ಥ ಗ್ರಾಮೀಣ ಮಹಿಳೆಯರ ಜತೆ ಕೆಲಸ ಮಾಡಲು ಮೊದಲ ದಿನ ಸಂಕೋಚ ಆಯಿತು. ಆದರೆ, ನಂತರ ಹೊಂದಿಕೊಂಡು ಕೆಲಸ ಮಾಡಿದೆ. 21 ದಿನಗಳಲ್ಲಿ ₹ 5,700 ಕೂಲಿ ಸಿಕ್ಕಿತು. ಶ್ರಮಪಟ್ಟು ದುಡಿದ ನಂತರ ಕೈಸೇರಿದ ಹಣ ನೋಡಿ ಬಹಳ ಖುಷಿ ಆಯಿತು. ಅಷ್ಟೇ ಅಲ್ಲಇದುನನಗೆ ಹೊಸ ಪಾಠವನ್ನೂ ಕಲಿಸಿತು’ ಎನ್ನುತ್ತಾರೆ ಬೀದರ್‌ನ ಪ್ರೀತಂ ಅರ್ಜುನ.

ಶಿಕ್ಷಕರಿಗೆ ‘ಖಾತ್ರಿ’ಯಾದ ನೆರವು

ಹಳ್ಳಿಯ ಖಾಸಗಿ ಶಾಲೆಗಳಲ್ಲಿ ಶಿಕ್ಷಕಿಯರಾಗಿದ್ದ ಹಲವರಿಗೆ ಉದ್ಯೋಗ ಖಾತ್ರಿಯೇ ಈಗ ಆಸರೆಯಾಗಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕು ತುಂಬ ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅನಸೂಯಾ ಪಾಟೀಲ ಈಗ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.

‘ಸಾಲಿಯಲ್ಲಿ ಕೊಡುವ ಪಗಾರಕ್ಕಿಂತ ಇಲ್ಲಿ ಹೆಚ್ಚು ಸಿಗುತ್ತಿದೆ. ಮನೆಯಲ್ಲಿ ಖಾಲಿ ಕೂರುವುದು ಬೇಡ ಎಂದು ಕೆಲಸಕ್ಕೆ ಕರೆದೊಯ್ಯುತ್ತಿದ್ದೇನೆ’ ಎಂದು ಅನಸೂಯಾ ತಾಯಿ ನೀಲವ್ವ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ 2019ರಲ್ಲಿ ಸಮೂಹ ಸಂವಹನ ಮತ್ತುಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೈದಾಪುರ ಗ್ರಾಮದ ಮಾಳಪ್ಪ ಮೈಲಾರಪ್ಪ ಕರಿಗುಡ್ಡ, ನರೇಗಾ ಅಡಿ ಕೂಲಿ ಮಾಡುತ್ತಿದ್ದಾರೆ.

‘ಕಾಯಕವೇ ಕೈಲಾಸ ಎಂಬುದು ಯುವಕರಿಗೆ ಜೀವನದ ಪಾಠವಾಗಬೇಕು. ಬಿಡುವಿನ ವೇಳೆಯಲ್ಲಿ ಕೂಲಿ ಕಾರ್ಮಿಕರಿಗೆ ಅಕ್ಷರದ ಮಹತ್ವ ತಿಳಿಸುತ್ತಿದ್ದೇನೆ. ಹಿಂಜರಿಕೆ ಇಲ್ಲದೇ ಕೆಲಸ ಮಾಡೋಣ ಎಂದು ಎಲ್ಲರನ್ನೂ ಪ್ರೇರೇಪಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕು ಬೈಲಾಪುರದ ಗಾಯತ್ರಿ ಬಾಲಪ್ಪ ಚಲುವಾದಿ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಎಂ.ಎ ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿನಿ. ಕಾಲೇಜು ಬಂದ್‌ ಇರುವುದರಿಂದ ಮನೆಯವರೊಂದಿಗೆ ನಾಲೆಯ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದಾರೆ.

‘ಈಗ ಬೇರೆ ಕೆಲಸ ಇಲ್ಲ. ಮನೆಯವರಿಗೆ ನೆರವಾಗಲು ನರೇಗಾ ಕೂಲಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ಅವರು.

ಯಾದಗಿರಿ ತಾಲ್ಲೂಕಿನಅಲ್ಲಿಪುರ ಗ್ರಾಮದ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿರುವ ಬಸವರಾಜ, ನರೇಗಾ ಅಡಿ ತಮ್ಮ ಹೊಲದಲ್ಲೇ ತಂದೆಯೊಂದಿಗೆ ಬದು ನಿರ್ಮಾಣ ಕೆಲಸ ಮಾಡುತ್ತಿದ್ದಾರೆ.‘ಕಷ್ಟದ ಕಾಲದಲ್ಲಿ ಉದ್ಯೋಗ ಖಾತ್ರಿ ಕೈ ಹಿಡಿದಿದೆ. ನಮ್ಮ ಹೊಲದಲ್ಲಿ ದುಡಿದು ಕೂಲಿ ಪಡೆಯುವುದು ವಿಶಿಷ್ಟ ಅನುಭವ’ ಎನ್ನುತ್ತಾರೆ ಅವರು.

ಈಗಷ್ಟೇ ಶಿಕ್ಷಣದ ಒಂದು ಹಂತವನ್ನು ಮುಗಿಸಿ ಉದ್ಯೋಗದ ಕನಸು ಕಾಣುತ್ತಿದ್ದವರು, ಸದ್ಯಕ್ಕೆ ಉದ್ಯೋಗದ ನಿರೀಕ್ಷೆಯನ್ನು ಬಿಟ್ಟಿದ್ದಾರೆ. ಅಂತಿಮ ವರ್ಷದ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಅನೇಕರು ಜಾಬ್‌ ಕಾರ್ಡ್‌ ಮಾಡಿಸಿದ್ದಾರೆ. ಸದ್ಯಕ್ಕೆ ಇದೊಂದೇ ಆಸರೆ ಎಂದು ಹಲವರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT