ಸೋಮವಾರ, ಡಿಸೆಂಬರ್ 6, 2021
27 °C
ಹಾರಂಗಿ ಜಲವಿದ್ಯುತ್ ಘಟಕ ಕಾರ್ಯಾರಂಭ, 30 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ನಿರೀಕ್ಷೆ

ಹೆಚ್ಚು ವಿದ್ಯುತ್‌ ಉತ್ಪಾದನೆ ಗುರಿ

ರಘು ಹೆಬ್ಬಾಲೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ರಾಜ್ಯದ ಜಲ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದ ಬಳಿಯ ‘ಎನರ್ಜಿ ಡೆವಲಪ್‌ಮೆಂಟ್ ಕಂಪನಿ’ (ಇಡಿಸಿಎಲ್) ವತಿಯಿಂದ ಸ್ಥಾಪಿಸಿರುವ ಜಲವಿದ್ಯುತ್ ಘಟಕ ಈ ಬಾರಿ 30 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯ ಗುರಿಯೊಂದಿಗೆ ಕಾರ್ಯಾರಂಭಗೊಂಡಿದೆ.

ಕೊಡಗಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯ ಜುಲೈ ಮೂರನೇ ವಾರವೇ ಅಂದರೆ ಜುಲೈ 18ರಂದು ಬಹುತೇಕ ಭರ್ತಿಯಾಗಿತ್ತು. ನದಿಗೆ 5,100 ಹಾಗೂ ಬಲದಂಡೆ ನಾಲೆಗೆ 400 ಕ್ಯುಸೆಕ್‌ ನೀರು ಹರಿಸಲಾಯಿತು.

ಆದರೆ, ಕಳೆದ ವರ್ಷ ಜಲಾಶಯ ಆ. 9ರಂದು ತುಂಬಿತ್ತು. ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ 21 ದಿನಗಳ ಮುಂಚಿತವಾಗಿಯೇ ಜಲಾಶಯ ಭರ್ತಿಯಾಗುವ ಮೂಲಕ ಆಶಾಭಾವನೆ ಮೂಡಿಸಿದೆ.

ಜುಲೈ 18ರಂದು ಜಲಾಶಯದಿಂದ ಬಲದಂಡೆ ನಾಲೆಗೆ 400 ಕ್ಯುಸೆಕ್‌ ನೀರು ಬಿಟ್ಟ ದಿನದಿಂದಲೇ ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಜುಲೈ 31ರಂದು ರೈತರ ಎಡದಂಡೆ ನಾಲೆ 1,500 ಕ್ಯುಸೆಕ್‌ ನೀರು ಹರಿಸಿದ ತರುವಾಯ ಅಧಿಕೃತವಾಗಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.

ಜಲಾಶಯದ ನೀರನ್ನೇ ಇಡಿಸಿಎಲ್ ಕಂಪನಿ ಅವಲಂಬಿಸಿಕೊಂಡಿದ್ದು, ಹಾರಂಗಿ ಜಲಾನಯನ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಜಲಾಶಯದ ನೀರಿನ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನಾ ಕಾರ್ಯ ಭರದಿಂದ ಆರಂಭಗೊಂಡಿದ್ದು, ಇದರಿಂದ ಈ ವರ್ಷ ಕೊಡಗಿನಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಕಂಡುಬರುವ ಲಕ್ಷಣ ಕಾಣುತ್ತಿಲ್ಲ.

ಎನರ್ಜಿ ಡೆವಲಪ್‌ಮೆಂಟ್ ಕಂಪನಿ (ಇಡಿಸಿಎಲ್)ಯು ಸರ್ಕಾರದೊಂದಿಗೆ 30 ವರ್ಷಗಳ ಒಡಂಬಡಿಕೆಯೊಂದಿಗೆ ಜಲಾಶಯದ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು 1998ನೇ ಇಸವಿಯಲ್ಲಿ ಸ್ಥಾಪನೆಗೊಂಡಿತು. ಈ ಜಲವಿದ್ಯುತ್ ಘಟಕವು ಇದೀಗ 21 ವರ್ಷಗಳನ್ನು ಪೂರೈಸಿದೆ. ಈ ಘಟಕವು ಪ್ರತಿವರ್ಷ ಮಳೆಗಾಲದಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಸರ್ಕಾರ ಪ್ರತಿ ಯೂನಿಟ್‌ಗೆ ₹ 3ರಂತೆ ಖರೀದಿಸುತ್ತಿದೆ.

ಜಲಾಶಯದಿಂದ 1,900 ಕ್ಯುಸೆಕ್ ನೀರನ್ನು ಕಾಲುವೆ ಮೂಲಕ ಇಡಿಸಿಎಲ್‌ಗೆ ಪೂರೈಸಲಾಗುತ್ತಿದ್ದು, ಈ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಜುಲೈನಿಂದ ಡಿಸೆಂಬರ್‌ವರೆಗೆ 5 ತಿಂಗಳು ಮಾತ್ರ ಈ ಘಟಕವು ವಿದ್ಯುತ್ ಉತ್ಪಾದನೆ ಮಾಡಲಿದ್ದು, ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಹರಿಸುವ ನೀರನ್ನೇ ವಿದ್ಯುತ್ ಉತ್ಪಾದಿಸಲು ಇಡಿಸಿಎಲ್ ವಿದ್ಯುತ್ ಘಟಕ ಅವಲಂಬಿಸಿಕೊಂಡಿದೆ.

ರೈತರ ಕಾಲುವೆಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರತಿ ದಿನ ಹೆಚ್ಚಿನ ವಿದ್ಯುತ್ ಉತ್ಪಾದಿಸಲಾಗುತ್ತದೆ.

2,859 ಗರಿಷ್ಠ ಮಟ್ಟದ ಜಲಾಶಯದಲ್ಲಿ ನೀರಿನ ಮಟ್ಟ 2856.77 ಅಡಿಗಳಷ್ಟು ದಾಖಲಾಗಿದೆ ಕಳೆದ ವರ್ಷ ಆ. 9ರಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿತ್ತು. ಆದರೆ, ಈ ಬಾರಿ ಮುಂಗಾರು ಜೂನ್‌ನಿಂದಲೇ ಚುರುಕುಗೊಂಡ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ.

ಕಳೆದ ವರ್ಷ ಜೂನ್, ಜುಲೈನಲ್ಲಿ ಮುಂಗಾರು ವೈಫಲ್ಯಗೊಂಡು ಆಗಸ್ಟ್‌ನಲ್ಲಿ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಅಲ್ಪಾವಧಿಯಲ್ಲಿ ಕೇವಲ 19 ಮಿಲಿಯನ್ ಯೂನಿಟ್‌ನಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿತ್ತು.

2014ರಲ್ಲಿ ಅತೀ ಹೆಚ್ಚು ಅಂದರೆ 36 ಮಿಲಿಯನ್ ಯೂನಿಟ್ ಉತ್ಪಾದಿಸಲಾಗಿತ್ತು. ಈ ವರ್ಷ 30 ಮಿಲಿಯನ್ ಯೂನಿಟ್‌ಗಳಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಇಡಿಸಿಎಲ್ ಘಟಕದ ವ್ಯವಸ್ಥಾಪಕ ಶಿವಸುಬ್ರಮಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೇಗ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ವಿದ್ಯುತ್ ಉತ್ಪಾದನೆಗೆ 1,900 ಕ್ಯುಸೆಕ್‌ ನೀರನ್ನು ನಾಲೆಗಳ ಮೂಲಕ ರೈತರ ಕೃಷಿ ಚಟುವಟಿಕೆಗೆ ಹರಿಬಿಡಲಾಗುತ್ತಿದೆ ಎಂದು ಅಣೆಕಟ್ಟೆ ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಂದ್ರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು