ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ ನಿಯಮ ಅಂತಿಮ

ಆಕ್ಷೇಪಣೆ ಗಣನೆಗೆ ತೆಗೆದುಕೊಳ್ಳದ ಇಲಾಖೆ: ಆರೋಪ
Last Updated 25 ಜುಲೈ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯ ಸರ್ಕಾರ ಶಿಕ್ಷಕರ ವರ್ಗಾವಣೆ ನಿಯಮಗಳನ್ನು ಅಂತಿಮಗೊಳಿಸಿದೆ. ಆದರೆ, ವರ್ಗಾವಣೆ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಆಕ್ಷೇಪಣೆಗಳ ಪೈಕಿ ಒಂದನ್ನೂ ಸರ್ಕಾರ ಪರಿಗಣಿಸಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.

‘ಸೇವಾ ಅವಧಿಯಲ್ಲಿ ಒಂದೇ ಬಾರಿ ಪರಸ್ಪರ ವರ್ಗಾವಣೆಗೆ ಅವಕಾಶವಿದೆ. ಆದರೆ, ಹೀಗೆ ಪರಸ್ಪರ ವರ್ಗಾವಣೆ ತೆಗೆದುಕೊಳ್ಳುವವರು ಕನಿಷ್ಠ ಏಳು ವರ್ಗ ಸೇವೆ ಸಲ್ಲಿಸಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ನಿಯಮ ತೆಗೆದು, ಎರಡು ವರ್ಷದ ಪ್ರೊಬೇಷನರಿ ಪೂರ್ಣಗೊಳಿಸಿದವರಿಗೆ ಅವಕಾಶ ನೀಡಬೇಕು ಎಂದು ಕೋರಿದ್ದೆವು. ಈ ಆಕ್ಷೇಪಣೆಯನ್ನು ಸರ್ಕಾರ ಪರಿಗಣಿಸಿಲ್ಲ’ ಎಂದು ಶಿಕ್ಷಕರೊಬ್ಬರು ದೂರಿದರು.

‘ಪರಸ್ಪರ ವರ್ಗಾವಣೆ ಬಯಸುವವರ ಪೈಕಿ ಒಬ್ಬರು ಮೂರು ವರ್ಷವಾಗಿದ್ದರೆ, ಇನ್ನೊಬ್ಬರು 10 ವರ್ಷ ಸೇವೆ ಸಲ್ಲಿಸಿರುತ್ತಾರೆ. ಇಬ್ಬರದೂ ಏಳು ವರ್ಷಗಳಾಗಿರಲೇಬೇಕು ಎಂಬ ನಿಯಮದಿಂದ ವರ್ಗಾವಣೆ ಕಷ್ಟವಾಗುತ್ತದೆ. ಒಂದೇ ವಿಷಯದ ಶಿಕ್ಷಕರು ಬದಲಾಗುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲ. ಸರ್ಕಾರಕ್ಕೂ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ’ ಎಂದು ಅವರು ಹೇಳಿದರು.

‘ಯಾವುದಾದರೂ ಒಂದು ನಿಯಮ ರೂಪಿಸಬೇಕು ಎಂಬ ಕಾರಣಕ್ಕೆ ಈ ರೀತಿ ಷರತ್ತುಗಳನ್ನು ಹಾಕುವುದು ಸರಿಯಲ್ಲ. ಅಲ್ಲದೆ, ಯಾವುದೇ ಮನವಿಯನ್ನು ಪರಿಗಣಿಸದಿದ್ದ ಮೇಲೆ ಆಕ್ಷೇಪಣೆಗಳನ್ನು ಏಕೆ ಆಹ್ವಾನಿಸಬೇಕಿತ್ತು’ ಎಂದೂ ಅವರು ಪ್ರಶ್ನಿಸಿದರು.

‘ಸರ್ಕಾರಕ್ಕೆ ಒಟ್ಟು 2,500 ಆಕ್ಷೇಪಣೆಗಳನ್ನು ಸಲ್ಲಿಸಿದ್ದೆವು. ಆದರೆ, ಯಾವುದನ್ನೂ ಸರ್ಕಾರ ಪರಿಗಣಿಸಿಲ್ಲ. ಕರಡು ನಿಯಮಗಳನ್ನೇ ಅಂತಿಮಗೊಳಿಸಲಾಗಿದೆ’ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ತಾಲ್ಲೂಕಿನಲ್ಲಿ ಖಾಲಿ ಇರುವ ಹುದ್ದೆಗಳು ಶೇ 25ಕ್ಕಿಂತ ಹೆಚ್ಚಿದ್ದರೆ, ಆ ತಾಲ್ಲೂಕುಗಳ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ನಿಯಮದಿಂದ ರಾಜ್ಯದಲ್ಲಿನ 13ರಿಂದ 17 ತಾಲ್ಲೂಕುಗಳ ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗುತ್ತಾರೆ. ಈ ನಿಯಮವನ್ನು ರದ್ದು ಮಾಡಬೇಕು ಮತ್ತು ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರ ಸೇವಾ ಅವಧಿ ಷರತ್ತನ್ನು ಮೂರು ವರ್ಷಕ್ಕೆ ಇಳಿಸಬೇಕು ಎಂದು ಪ್ರಮುಖವಾಗಿ ಒತ್ತಾಯಿಸಿದ್ದೆವು. ಅದನ್ನೂ ಪರಿಗಣಿಸಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT