ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ತರಕಾರಿ ವ್ಯಾಪಾರಿ ಪುತ್ರಿ ಡಿಸ್ಟಿಂಕ್ಷನ್

ಇಂಗ್ಲಿಷ್ ಫಲಿತಾಂಶದ ಮೇಲೆ ಲಾಕ್‌ಡೌನ್‌ ಪರಿಣಾಮ
Last Updated 14 ಜುಲೈ 2020, 13:25 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಟೂರ ಗ್ರಾಮದ ತರಕಾರಿ ವ್ಯಾಪಾರಿ ಹಾಗೂ ಸಣ್ಣ ಕೃಷಿಕರೂ ಆಗಿರುವ ಅಣ್ಣಪ್ಪ–ಸುರೇಖಾ ದಂಪತಿಯ ಪುತ್ರಿ ಅನುಷಾ ಬಮ್ಮನ್ನವರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ (567 ಅಂಕ, ಶೇ 94.5) ತೇರ್ಗಡೆಯಾಗಿ ಗಮನಸೆಳೆದಿದ್ದಾರೆ.

ನೀಡಸೊಸಿಯ ಎಸ್.ಜೆ.ಪಿ.ಎನ್. ಕಾಲೇಜಿನ ವಿದ್ಯಾರ್ಥಿನಿಯಾದ ಅವರು, ಇಂಗ್ಲಿಷ್ ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲೂ 90ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ. ಭೌತವಿಜ್ಞಾನದಲ್ಲಿ 100ಕ್ಕೆ 99 ಹಾಗೂ ಗಣಿತದಲ್ಲಿ 100ಕ್ಕೆ 98 ಅಂಕಗಳ ಸಾಧನೆ ತೋರಿದ್ದಾರೆ. ಹಿಂದಿಯಲ್ಲಿ 94, ರಸಾಯನವಿಜ್ಞಾನದಲ್ಲಿ 93 ಹಾಗೂ ಜೀವವಿಜ್ಞಾನ ವಿಷಯದಲ್ಲಿ 97 ಅಂಕಗಳನ್ನು ಗಳಿಸಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 91 ಅಂಕಗಳನ್ನು ಗಳಿಸಿದ್ದ ಅವರು, ದ್ವಿತೀಯ ಪಿಯುನಲ್ಲಿ ಕಾಲೇಜಿನ 2ನೇ ಟಾಪರ್‌ ಎನಿಸಿದ್ದಾರೆ.

‘ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರುವ ಬಯಕೆ ಇದೆ. ಸೀಟು ಪಡೆಯಲು ಸಿಇಟಿಗೆ ಸಿದ್ಧತೆ ನಡೆಸುತ್ತಿದ್ದೇನೆ. ಶೇ 92ರಷ್ಟು ಅಂಕಗಳು ಬರಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಅಂಕಗಳು ಸಿಕ್ಕಿವೆ. ಇದರಿಂದ ಖುಷಿಯಾಗಿದೆ. ತಂದೆ–ತಾಯಿ ಕಷ್ಟಪಟ್ಟು ದುಡಿದು ನನ್ನನ್ನು ಓದಿಸುತ್ತಿದ್ದಾರೆ. ಅವರಿಗೆ ಒಳ್ಳೆಯ ಹೆಸರು ತರಬೇಕು ಎನ್ನುವುದು ನನ್ನ ಗುರಿಯಾಗಿದೆ. ಜೀವನದಲ್ಲಿ ಇನ್ನೂ ಮುಂದೆ ಬಂದು ಅವರಿಗೆ ನೆರವಾಗುವೆ’ ಎಂದು ಅನುಷಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಂದಿನ ಪಾಠ ಅಂದೇ ಓದಿಕೊಳ್ಳುತ್ತಿದ್ದೆ. ನಿತ್ಯ 4ರಿಂದ 5 ತಾಸು ಓದುತ್ತಿದ್ದೆ. ಪರೀಕ್ಷೆ ಸಂದರ್ಭದಲ್ಲಿ ಹೆಚ್ಚಿನ ಸಮಯ ವಿನಿಯೋಗಿಸಿದ್ದೆ. ಇದರಿಂದ ಒಳ್ಳೆಯ ಪ್ರತಿಫಲ ಸಿಕ್ಕಿದೆ’ ಎಂದು ಹೇಳಿದರು.

ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ ಪರಿಣಾಮ ಇಂಗ್ಲಿಷ್‌ ವಿಷಯದ ಪರೀಕ್ಷೆ ಮುಂದೂಡಿದ್ದು ಅವರಿಗೆ ವ್ಯತಿರಿಕ್ತ ಪರಿಣಾಮ ಬೀರಿದೆ. ‘ನಿಗದಿಯಂತೆ ಪರೀಕ್ಷೆ ನಡೆದಿದ್ದರೆ ಇಂಗ್ಲಿಷ್‌ನಲ್ಲಿ ಇನ್ನೂ ಹೆಚ್ಚಿನ ಅಂಕ ಗಳಿಸುತ್ತಿದ್ದೆ. ಆದರೆ, ಮುಂದೂಡಿದ್ದು ಹಾಗೂ ಬಹಳ ಕೊರೊನಾ ಭೀತಿಯಿಂದ ಅಂತರ ಹೆಚ್ಚಾಗಿದ್ದರಿಂದ ಅಂಕಗಳು ಕಡಿಮೆಯಾದವು. ಇಲ್ಲದಿದ್ದರೆ ಫಲಿತಾಂಶ ಮತ್ತಷ್ಟು ಸುಧಾರಿಸುತ್ತಿತ್ತು’ ಎಂದು ಅನಿಸಿಕೆ ಹಂಚಿಕೊಂಡರು.

‘ಎಕರೆ ಜಮೀನಿದೆ. ಅದರಲ್ಲಿ ಕೃಷಿ ಮಾಡುತ್ತೇನೆ. ಇದರೊಂದಿಗೆ ತರಕಾರಿಯನ್ನೂ ಮಾರುತ್ತೇನೆ. ಇದರಿಂದ ಕುಟುಂಬದ ನಿರ್ವಹಣೆ ಆಗುತ್ತಿದೆ. ಮಗನನ್ನೂ ಓದಿಸುತ್ತಿದ್ದೇನೆ. ಮಗಳು ಒಳ್ಳೆಯ ಅಂಕಗಳನ್ನು ಗಳಿಸಿರುವುದರಿಂದ ಖುಷಿಯಾಗಿದೆ. ಮುಂದೆಯೂ ಆಕೆಯನ್ನು ಓದಿಸುತ್ತೇನೆ’ ಎಂದು ಅಣ್ಣಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT