ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ಟುಪಾಳ್ಯದಲ್ಲಿ 17 ದಲಿತರನ್ನು ಬಲಿಪಡೆದುಕೊಂಡಿದ್ದು ಜಾತಿ ತಾರತಮ್ಯದ 'ಗೋಡೆ'

Last Updated 4 ಡಿಸೆಂಬರ್ 2019, 7:08 IST
ಅಕ್ಷರ ಗಾತ್ರ

ಚೆನ್ನೈ: ಡಿಸೆಂಬರ್ 2, ಸೋಮವಾರಬೆಳಗ್ಗೆ ತಮಿಳುನಾಡಿನಮೆಟ್ಟುಪಾಳ್ಯದಲ್ಲಿ ಆವರಣ ಗೋಡೆಯೊಂದು ಕುಸಿದು17 ಮಂದಿ ದಲಿತರು ಸಾವಿಗೀಡಾಗಿದ್ದಾರೆ.ಹಿಂದಿನ ದಿನ ಸುರಿದ ಭಾರೀ ಮಳೆಗೆ ಗೋಡೆ ಕುಸಿದಿತ್ತು .ಕೊಯಮತ್ತೂರುಜಿಲ್ಲೆಯ ನಾಡೂರ್ ಗ್ರಾಮದ ದಿವ್ಯಾ ಎಂಬ ಯುವತಿಗೆ ಈ ವಿಷಯ ಗೊತ್ತಾಗಿದ್ದು ಸೋಮವಾರ ಬೆಳಗ್ಗೆ 5 ಗಂಟೆಗೆ. ವಿಷಯ ತಿಳಿದು ಮೆಟ್ಟುಪಾಳ್ಯಕ್ಕೆಬಂದಾಗ 5 ಜನ ಸಂಬಂಧಿಕರು ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಜೀವ ಕಳೆದುಕೊಂಡಿದ್ದರು.

ಇಲ್ಲಿನ ಕಣ್ಣಪ್ಪನ್ ನಗರದಲ್ಲಿ ವಾಸಿಸುತ್ತಿರುವ 300 ದಲಿತ ಕುಟುಂಬಗಳ ಜತೆ ದಿವ್ಯಾ ವಾಸಿಸುತ್ತಿದ್ದಾರೆ. ಮಳೆ ಬಂದರೆ ಸೋರುವ ಮನೆಯ ಹಿಂದೆನೆರೆಮನೆಯವರು 8 ವರ್ಷಗಳ ಹಿಂದೆ 20 ಅಡಿ ಎತ್ತರದ ಬೃಹತ್ ಆವರಣ ಗೋಡೆ ನಿರ್ಮಿಸಿದ್ದರು.

ನಾನು ಮದುವೆಯಾದ ನಂತರ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ಮನೆಯಹಿಂದಿರುವ ಗೋಡೆ ಕುಸಿದು ಬೀಳುತ್ತದೆ ಎಂಬ ಭಯ ನನ್ನ ಸಂಬಂಧಿಕರಿಗೆ ಇತ್ತು. ಈ ಬಗ್ಗೆ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಏನೂ ಆಗಲ್ಲ ಎಂದು ನಂಬಿದ್ದೆ. ಆದರೆ ನನ್ನ ನಂಬಿಕೆ ಸುಳ್ಳಾಯಿತು ಎಂದು ದಿ ನ್ಯೂಸ್ ಮಿನಿಟ್ ಜತೆ ಮಾತನಾಡಿದ ದಿವ್ಯಾ ಹೇಳಿದ್ದಾರೆ.

ಆವರಣ ಗೋಡೆ ಅಲ್ಲ ಜಾತಿ ತಾರತಮ್ಯದಗೋಡೆ
ಮೆಟ್ಟುಪಾಳ್ಯದಲ್ಲಿ ಕುಸಿದು ಬಿದ್ದ ಆವರಣ ಗೋಡೆ, ಜಾತಿ ತಾರತಮ್ಯದ ಗೋಡೆಯಾಗಿತ್ತು ಅಂತಾರೆ ಕಣ್ಣಪ್ಪನ್ ನಗರದ ನಿವಾಸಿಗಳು.

ಬಟ್ಟೆ ಅಂಗಡಿ ಮಾಲೀಕರಾದ ಶಿವಸುಬ್ರಣಿಯಮ್ ಎಂಬವರು 8 ಅಡಿ ಎತ್ತರವಿದ್ದ ಗೋಡೆಯನ್ನು 20 ಅಡಿ ಏರಿಸಿದ್ದರು. ಗೋಡೆಯ ಎತ್ತರ ಏರಿಸುವುದಕ್ಕೆ ದಲಿತರು ಪ್ರತಿಭಟನೆನಡೆಸಿದ್ದರೂ ಪ್ರಯೋಜನವಾಗಲಿಲ್ಲ.
ಕಂದು ಬಣ್ಣದ ಕಲ್ಲಿನಿಂದ ನಿರ್ಮಿಸಿದ ಗೋಡೆ ಇದಾಗಿದ್ದು ಇದಕ್ಕೆ ನಗರ ಪಾಲಿಕೆಯಿಂದ ಅನುಮತಿ ದೊರೆತಿರಲಿಲ್ಲ ಎಂದು ನಗರ ಪಾಲಿಕೆಯ ಮೂಲಗಳು ಹೇಳಿವೆ.

ಗೋಡೆ ಕುಸಿದು ನನ್ನ ಕುಟುಂಬದ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ ಅಂತಾರೆ 50ರ ಹರೆಯದ ಮುರುಗೇಶ್. ಇಲ್ಲಿ ಸಾವಿಗೀಡಾದವರೆಲ್ಲ ದಲಿತರೇ. ಈ ಗೋಡೆಯಿಂದಾಗಿ ನಷ್ಟವಾಗಿದ್ದು ನಮಗೆ ಮಾತ್ರ. ಇಷ್ಟೊಂದು ದೊಡ್ಡ ಗೋಡೆ ನಿರ್ಮಿಸುವ ಅಗತ್ಯವೇನಿತ್ತು? ಸೆಂಟ್ರಲ್ ಜೈಲಿನ ಗೋಡೆಯೂ ಇಷ್ಟು ಎತ್ತರವಿರುವುದಿಲ್ಲ ಅಂತಾರೆ ಇವರು.

ತಮ್ಮ ಜಮೀನಿಗೆ ದಲಿತರು ಕಾಲಿಡದಂತೆ ತಡೆಯಲು ಶಿವಸುಬ್ರಮಣಿಯಮ್ ಆವರಣ ಗೋಡೆಯ ಎತ್ತರವನ್ನು ಮತ್ತಷ್ಟು ಏರಿಸಿದ್ದರು.

ನಾವು ಪರಿಶಿಷ್ಟ ಜಾತಿಗೆ ಸೇರಿದವರು. ದೈನಂದಿನ ತುತ್ತಿಗೆ ಕಷ್ಟಪಡುತ್ತಿದ್ದೇವೆ. ಹೀಗಿರುವಾಗ ನಾವು ಗೋಡೆ ಹಾರಿ ಅವರ ಮನೆಯ ಆವರಣದಿಂದ ಕದಿಯುತ್ತೇವೆ ಎಂದು ಅವರು ನಂಬಿದ್ದಾರೆ. ಇಲ್ಲವಾದರೆ ಅಷ್ಟೊಂದು ದೊಡ್ಡ ಆವರಣ ಗೋಡೆ ಯಾಕೆ ಅಂತ ಪ್ರಶ್ನಿಸಿದ್ದಾರೆ ಅಲ್ಲಿನ ನಿವಾಸಿ ನಂದ ಕುಮಾರ್.

ಇದು ಆವರಣ ಗೋಡೆಯಲ್ಲಜಾತಿಗಳಮಧ್ಯೆ ಇರುವ ಗೋಡೆ ಎಂದು ಇಲ್ಲಿನ ರಾಜಕೀಯ ಪ್ರತಿನಿಧಿಗಳು ಹೇಳುತ್ತಾರೆ. ತಮಿಳುನಾಡಿನಲ್ಲಿ ದಲಿತರನ್ನು ದೂರವಿಡುವುದಕ್ಕಾಗಿ ಈ ರೀತಿ ಗೋಡೆಗಳನ್ನು ನಿರ್ಮಿಸುತ್ತಾರೆ.

ಶಿವಸುಬ್ರಮಣಿಯಮ್ ಅವರ ಮನೆಯ ಮುಂಭಾಗದಲ್ಲಿ ಇಷ್ಟೊಂದು ದೊಡ್ಡ ಆವರಣ ಗೋಡೆ ಏನೂ ಇಲ್ಲ. ಮನೆಯ ಹಿಂಭಾಗದಲ್ಲಿ ದಲಿತರು ವಾಸಿಸುತ್ತಿರುವ ಕಾರಣ ಬೃಹತ್ ಗೋಡೆ ನಿರ್ಮಿಸಲಾಗಿದೆ. ದಲಿತರು ಪ್ರತಿಭಟನೆ ನಡೆಸಿದರೂ ಅವರು ಗೋಡೆ ಕಟ್ಟಿದ್ದರು. ಅದು ಅಸ್ಪೃಶ್ಯತೆಗೆ ಉದಾಹರಣೆ ಎಂದು ಎನ್‌ಜಿಒ ಕಾರ್ಯಕರ್ತ ಐ ಪಾಂಡ್ಯನ್ .

ವ್ಯಕ್ತಿಯ ಹಿನ್ನಲೆ ಅರಿತು ದೌರ್ಜನ್ಯವೆಸಗಿದರೆ ಪರಿಶಿಷ್ಟ ಜಾತಿ/ ವರ್ಗಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಇದು ಶಿಕ್ಷಾರ್ಹ ಎಂದು ಪಾಂಡ್ಯನ್ ಹೇಳಿದ್ದಾರೆ.

ಮೆಟ್ಟುಪಾಳ್ಯನಲ್ಲಿ 17 ಮಂದಿ ದಲಿತರ ಸಾವಿಗೆ ಕಾರಣವಾಗಿದ್ದು 'ಅಸ್ಪೃಶ್ಯತೆ' ಎಂದು ಸಂಸದ, ವಿಸಿಕೆ ನಾಯಕ ಡಿ. ರವಿ ಕುಮಾರ್ ಅವರು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದು ಪ್ರಕರಣದ ಬಗ್ಗೆಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.

ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸಿದ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ಬಂಧಿಸಿದ್ದರು ಎಂದು ಹೇಳಿದ ರವಿ ಕುಮಾರ್, ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.


ಈ ಗೋಡೆಯ ಬಗ್ಗೆ ಮುನ್ಸಿಪಲ್ ಕಾರ್ಪೊರೇಷನ್ ಮೂಲಗಳಲ್ಲಿ ಕೇಳಿದಾಗ ಖಾಸಗಿ ಜಮೀನಿನಲ್ಲಿ ಇಂಥದೊಂದು ಗೋಡೆ ಇರುವುದು ಗೊತ್ತಿಲ್ಲಎಂದಿದ್ದಾರೆ.

ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಮಂಗಳವಾರ ಮೆಟ್ಟುಪಾಳ್ಯಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಟುಂಬವನ್ನು ಸಂತೈಸಿದ್ದಾರೆ. ಈ ದುರಂತದಲ್ಲಿ ಮನೆ ಕಳೆದು ಕೊಂಡ ಕುಟುಂಬಗಳಿಗೆ ಮನೆ, ಸರ್ಕಾರಿ ಕೆಲಸ ಮತ್ತು ಪರಿಹಾರ ನೀಡುವಂತೆ ಒತ್ತಾಯಿಸಿರುವ ಸ್ಟಾಲಿನ್ ಪ್ರತಿಭಟನಕಾರರ ಮೇಲೆ ದಾಳಿ ನಡೆಸಿರುವ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT