ಗುರುವಾರ , ಜುಲೈ 29, 2021
21 °C
ಶೇ 41 ಪ್ರಕರಣಗಳಲ್ಲಿ ‘ಕ್ಲಾಡ್ ಎ3ಐ’ ಪ್ರಸರಣ: ಸಿಎಸ್‌ಐಆರ್‌ ಅಧ್ಯಯನ

ಭಾರತದಲ್ಲಿ ಕೊರೊನಾ ಭಿನ್ನ!

ಕಲ್ಯಾಣ್ ರೇ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶಿಷ್ಟ ಎನಿಸಿರುವ ಕೊರೊನಾ ವೈರಸ್‌ನ ಮಾದರಿಯೊಂದು ಭಾರತದಲ್ಲಿ ಫೆಬ್ರುವರಿಯಲ್ಲಿ ಗೋಚರಿಸಿತ್ತು. ಈ ವೈರಾಣು ಮಾದರಿಯು ಇದೀಗ ಬಹುತೇಕ ರಾಜ್ಯಗಳಲ್ಲಿ ವ್ಯಾಪಿಸಿದೆ. ದೇಶವನ್ನು ವ್ಯಾಪಿಸಿರುವ ಸಾಂಕ್ರಾಮಿಕ ವೈರಾಣುವಿನ ಎರಡನೇ ಅತ್ಯಂತ ಪ್ರಬಲ ವಿಧ ಎನಿಸಿಕೊಂಡಿದೆ.

ಸಿಎಸ್‌ಐಆರ್ ವಿಜ್ಞಾನಿಗಳು ವೈರಸ್‌ನ ಈ ವಿಶಿಷ್ಟ ಗುಣಗಳನ್ನು ಅರಿಯಲು ಯತ್ನಿಸಿದ್ದು, ಇದರ ವಿರುದ್ಧ ಪ್ರಬಲವಾಗಿ ಹೋರಾಡಬಲ್ಲ ಔಷಧಕ್ಕಾಗಿ ಶೋಧ ನಡೆಸುತ್ತಿದ್ದಾರೆ.

ಕ್ಲಾಡ್ ಎ3ಐ (Clade A3i) ಹೆಸರಿನ ವೈರಾಣು ಮಾದರಿಯು ಈಗ ಭಾರತದಲ್ಲಿ ಹರಡುತ್ತಿರುವ ಶೇ 41ರಷ್ಟು ಪ್ರಕರಣಗಳಲ್ಲಿ ಕಂಡುಬಂದಿದೆ. ಪ್ರಬಲ ಹಾಗೂ ಹೆಚ್ಚು ವ್ಯಾಪಿಸಿರುವ ಕ್ಲಾಡ್ ಎ2ಎ ಹೆಸರಿನ ವೈರಾಣು ಶೇ 50ರಷ್ಟು ವ್ಯಾಪಿಸಿದೆ.

ಕ್ಲಾಡ್ ಎ2ಎ ಜಗತ್ತಿನ ಎಲ್ಲೆಡೆ ಕಂಡು ಬರುತ್ತಿದೆ. ಕ್ಲಾಡ್ ಎ3ಐ ಭಾರತದಲ್ಲಿ ಹೆಚ್ಚಾಗಿ ಕಂಡುಬಂದಿದೆ. ಸಿಂಗಪುರದಲ್ಲಿ ಇದರ ಪ್ರಮಾಣ ಶೇ 8ರಷ್ಟು ಮಾತ್ರ ಎಂದು ಸಿಎಸ್‌ಐಆರ್ ಸಂಶೋಧನಾ ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಭಿನ್ನವಾಗಿರುವ ವೈರಾಣು ಮಾದರಿಯು ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ಮೊದಲಿಗೆ ಪತ್ತೆಯಾಗಿತ್ತು. ಕ್ರಮೇಣ ದೇಶದಾದ್ಯಂತ ಕಂಡುಬಂದ ಇದು, ದಕ್ಷಿಣ ಭಾರತದಲ್ಲಿ ಹೆಚ್ಚು ವ್ಯಾಪಿಸಿತು ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

200ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ‘ಕ್ಲಾಡ್ ಎ3ಐ’ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿದೆ. ಆದರೆ ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಇದು ಎರಡನೇ ಪ್ರಮುಖ ಮಾದರಿ ಎನಿಸಿದೆ.

ಈ ಮಾದರಿಯಲ್ಲಿ ನಾಲ್ಕು ಅನನ್ಯ ಗುಣಲಕ್ಷಣಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಸಿಎಸ್‌ಐಆರ್‌ನ ಎರಡು ಪ್ರಯೋಗಾಲಯಗಳಾದ ಹೈದರಾಬಾದ್‌ನ ‘ಸೆಂಟರ್‌ ಫಾರ್ ಸೆಲ್ಯುಲರ್ ಆ್ಯಂಡ್ ಮಾಲಿಕ್ಯುಲರ್ ಬಯಾಲಜಿ’ ಮತ್ತು ದೆಹಲಿಯ ‘ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಆ್ಯಂಡ್ ಇಂಟಗ್ರೇಟಿವ್ ಬಯಾಲಜಿ’ ಯಲ್ಲಿ ಅಧ್ಯಯನ ನಡೆದಿದೆ.

ಕ್ಲಾಡ್ ಎ2ಎ ಹೆಸರಿನ ವೈರಸ್ ಮಾದರಿಯು ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಬಲವಾಗಿ ಕಾಣಿಸುತ್ತಿದೆ ಎಂಬುದಾಗಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೆನೋಮಿಕ್ಸ್‌ನ ಇಬ್ಬರು ಭಾರತೀಯ ವಿಜ್ಞಾನಿಗಳು ಹೇಳಿದ್ದರು. ಇದಾದ ತಿಂಗಳ ಬಳಿಕ ಹೆಚ್ಚಿನ ಸಂಶೋಧನೆ ನಡೆದಿದೆ. 

ರೂಪಾಂತರ ಪ್ರಮಾಣ ಕಡಿಮೆ
ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿರುವ ಸಾರ್ಸ್‌ ಕೊವ್–2 (SARS-CoV-2) ಎಂಬ ವೈರಸ್,‌ 10 ಕ್ಲಾಡ್‌ಗಳಲ್ಲಿ ಭಿನ್ನ ರೂಪದಲ್ಲಿ ಗೋಚರಿಸಿದೆ. ಅದು ನಿರಂತರವಾಗಿ ವಿಕಸನಗೊಳ್ಳುತ್ತಲೇ ಇದೆ. ಕ್ಲಾಡ್‌ ಎ2ಎಗೆ ಹೋಲಿಸಿದರೆ ಕ್ಲಾಡ್ ಎ3ಐ ರೂಪಾಂತರಗೊಳ್ಳುವ (ಮ್ಯುಟೇಷನ್) ಪ್ರಮಾಣ ಕಡಿಮೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೋವಿಡ್: ಕ್ಷಿಪ್ರವಾಗಿ 2 ಲಕ್ಷ ದಾಟಿದ ಭಾರತ
ಭಾರತದಲ್ಲಿ ಈವರೆಗೆ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಮಂಗಳವಾರ ರಾತ್ರಿ ವೇಳೆಗೆ 2 ಲಕ್ಷವನ್ನು ಸಮೀಪಿಸಿದೆ/ದಾಟಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳು 1 ಲಕ್ಷದಿಂದ 2 ಲಕ್ಷವನ್ನು ತಲುಪಲು ಕಡಿಮೆ ಅವಧಿಯನ್ನು ತೆಗೆದುಕೊಂಡಿದೆ. ಎರಡರಿಂದ ಮೂರು ಲಕ್ಷ ಪ್ರಕರಣಗಳು ಪತ್ತೆಯಾಗಿರುವ ದೇಶಗಳಲ್ಲಿ, ಭಾರತದಲ್ಲೇ ಹೆಚ್ಚು ಕ್ಷಿಪ್ರವಾಗಿ ಸೋಂಕು ಹರಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ.

ತಪಾಸಣೆಯಲ್ಲೂ ಭಾರತ ಹಿಂದೆ
ಪ್ರತಿ 10 ಲಕ್ಷ ಜನರಲ್ಲಿ ತಪಾಸಣೆಗೆ ಒಳಪಡಿಸುತ್ತಿರುವ ಪ್ರಮಾಣದಲ್ಲೂ ಭಾರತ ಹಿಂದೆ ಉಳಿದಿದೆ. 2 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ದೇಶಗಳಿಗೆ ಹೋಲಿಸಿದರೆ ಭಾರತವು ನಡೆಸುತ್ತಿರುವ ತಪಾಸಣೆಗಳ ಪ್ರಮಾಣ ಅತ್ಯಂತ ಕಡಿಮೆ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು