ಬುಧವಾರ, ಮೇ 27, 2020
27 °C

ತಿಥಿಯೂಟ ಕಾರ್ಯಕ್ರಮದಲ್ಲಿ ಭಾಗಿ: 26,000ಕ್ಕಿಂತಲೂ ಹೆಚ್ಚು ಜನರು ಕ್ವಾರಂಟೈನ್ 

ಪಿಟಿಐ Updated:

ಅಕ್ಷರ ಗಾತ್ರ : | |

covid

ಭೋಪಾಲ್: ಮಧ್ಯಪ್ರದೇಶದ ಮನೆಯೊಂದರಲ್ಲಿ ನಡೆದ ತಿಥಿಯೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 10 ಮಂದಿಗೆ ಕೋವಿಡ್ ರೋಗ ಇರುವುದಾಗಿ ದೃಢಪಟ್ಟಿದ್ದು, ಅವರ ಒಡನಾಡಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರ  ಸಂಪರ್ಕದಲ್ಲಿದ್ದ 26,000ಕ್ಕಿಂತಲೂ ಹೆಚ್ಚು ಜನರು ಮತ್ತು ಕುಟುಂಬದ ಸದಸ್ಯರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. 

ದುಬೈ ಹೋಟೆಲ್‌ನಲ್ಲಿ ನೌಕರಿ ಮಾಡುತ್ತಿದ್ದ ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಅಮ್ಮ ನಿಧನರಾದ ಸುದ್ದಿ ತಿಳಿದು ಮಾರ್ಚ್ 17ರಂದು ಊರು ಮೊರೆನಾಗೆ ಬಂದಿದ್ದರು ಎಂದು ಉಪ ವಿಭಾಗೀಯ ಮೆಜಿಸ್ಟ್ರೇಟ್ ಆರ್.ಎಸ್. ಬಕ್ನಾ ಹೇಳಿದ್ದಾರೆ. ಮಾರ್ಚ್ 20ರಂದು ಈ ವ್ಯಕ್ತಿ ತಿಥಿಯೂಟಕ್ಕೆ ಜನರನ್ನು ಆಮಂತ್ರಿಸಿದ್ದರು. ಆದಾಗ್ಯೂ, ದುಬೈಯಿಂದ ಬಂದ ವಿಷಯವನ್ನು ಇವರು ಮುಚ್ಚಿಟ್ಟಿದ್ದರು. ಏಪ್ರಿಲ್ 2 ರಂದು ಆ ವ್ಯಕ್ತಿ  ಮತ್ತು ಅವರ ಪತ್ನಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ  ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ದುಬೈಯಿಂದ ವಾಪಸ್ ಆಗಿರುವ ವಿಷಯವನ್ನು ಆ ವ್ಯಕ್ತಿ ಆಗ ಬಹಿರಂಗಪಡಿಸಿದ್ದರು ಎಂದು ಮುಖ್ಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಅಧಿಕಾರಿ ಆರ್.ಸಿ ಬಂದಿಲ್ ಹೇಳಿದ್ದಾರೆ.  

ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಮಾರ್ಚ್ 27ರಂದು ಈ ದಂಪತಿ ಆಸ್ಪತ್ರೆಗೆ ಬಂದಿದ್ದರು. ದಂಪತಿಗಳಿಗೆ ಕೊರೊನಾ ಸೋಂಕು ಇರುವುದಾಗಿ ವೈದ್ಯರಿಗೆ ಸಂದೇಹ ಬಂದ ಕೂಡಲೇ ಅವರನ್ನು ಐಸೋಲೇಷನ್ ವಾರ್ಡ್‌ಗೆ ಕಳುಹಿಸಿ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ವೈದ್ಯಕೀಯ  ಪರೀಕ್ಷೆಯಲ್ಲಿ ಈ ದಂಪತಿಗಳಿಗೆ ರೋಗ ಇರುವುದು ಪತ್ತೆಯಾಗಿತ್ತು.

ಇವರೊಂದಿಗೆ ಸಂಪರ್ಕದಲ್ಲಿದ್ದ 10 ಮಂದಿಗೆ ಸೋಂಕು ತಗುಲಿರುವುದು ಏಪ್ರಿಲ್ 3ರಂದು ತಿಳಿದುಬಂತು. ಇದಾದ ನಂತರ ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ ಸುಮಾರು 1,000ದಿಂದ 1,200 ಜನರು ತಿಥಿಯೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ತಿಳಿದು ಬಂದಿರುವುದಾಗಿ ಜಿಲ್ಲಾಡಳಿತ ಹೇಳಿದೆ. 

ತಿಥಿಯೂಟದಲ್ಲಿ ಜನರು ಸೇರಿದ್ದರಿಂದ ಸೋಂಕು ಹರಡುವಿಕೆ ಜಾಸ್ತಿಯಾಯಿತು. ಆ ವ್ಯಕ್ತಿ ಇರುವ ವಾರ್ಡ್ ನಂಬರ್ 47ನ್ನು ಸಂಪೂರ್ಣವಾಗಿ ಮುದ್ರೆಯೊತ್ತಲಾಗಿದೆ

ಈವರೆಗೆ ಜಿಲ್ಲೆಯಲ್ಲಿ  2,881 ಮಂದಿಯನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ತಿಥಿಯೂಟದಲ್ಲಿ ಭಾಗವಹಿಸಿದ ಜನರು ಮತ್ತು ಅವರ ಒಡನಾಡಿಗಳ ಸಂಖ್ಯೆ 26,000ದಷ್ಟಿದೆ. 24 ಮಂದಿಯನ್ನು  ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಂದಿಲ್ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು