ಶನಿವಾರ, ಜನವರಿ 18, 2020
20 °C
ಜೈಪುರದಲ್ಲಿ 2008ರಲ್ಲಿ ನಡೆದಿದ್ದ ಕೃತ್ಯ: ಒಬ್ಬನ ಖುಲಾಸೆ

ಸರಣಿ ಸ್ಫೋಟ: ನಾಲ್ವರು ದೋಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಜೈಪುರದಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ನಾಲ್ವರನ್ನು ಅಪರಾಧಿಗಳು ಎಂದು ಘೋಷಿಸಿ ಬುಧವಾರ ತೀರ್ಪು ನೀಡಿದ್ದು, ಒಬ್ಬರನ್ನು ಖುಲಾಸೆಗೊಳಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯೂ ಸೇರಿ ವಿವಿಧ ಪ್ರಕರಣಗಳಡಿ ಈ ನಾಲ್ವರ ವಿರುದ್ಧದ ಆರೋಪಗಳು ಸಾಬೀತಾಗಿವೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಗುರುವಾರ ಪ್ರಕಟಿಸಲಿದೆ.  

2008ರಲ್ಲಿ ಎಂಟು ಜನನಿಬಿಡ ಸ್ಥಳಗಳಲ್ಲಿ 25 ನಿಮಿಷಗಳ ಅಂತರದಲ್ಲಿ ಬಾಂಬ್‌ಗಳು ಸ್ಫೋಟಿಸಿದ್ದವು. 72 ಜನರು ಬಲಿಯಾಗಿದ್ದು, 170 ಜನರು ಗಾಯಗೊಂಡಿದ್ದರು. 11 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ.

ಮೊಹಮ್ಮದ್‌ ಸೈಫ್‌, ಸರ್ವರ್‌ ಅಜಾಮಿ, ಸೈಫ್‌ ಉರ್ ರೆಹಮಾನ್‌, ಸಲ್ಮಾನ್‌ ಶಿಕ್ಷೆಗೆ ಗುರಿಯಾದವರು. 5ನೇ ಆರೋಪಿ ಶಹಬಾಜ್‌ ಹುಸೇನ್‌ವಿರುದ್ಧದ ಎಲ್ಲ ಎಂಟು ಆರೋಪಗಳಿಂದ ಕೋರ್ಟ್‌ ಖುಲಾಸೆಗೊಳಿಸಿತು. 

ಖುಲಾಸೆ ಏಕೆ?: ಅಮಿಕಸ್‌ ಕ್ಯೂರಿ ಸುರೇಶ್‌ ವ್ಯಾಸ್ ಪ್ರಕಾರ, ‘ಶಹಬಾಜ್‌ ಹುಸೇನ್‌ ವಿರುದ್ಧ ದಾಖಲಿಸಿದ್ದ ಇ–ಮೇಲ್‌ ಕಳುಹಿಸಿದ್ದ, ಸ್ಫೋಟ ಪ್ರಕರಣದ ಹೊಣೆ ಹೊತ್ತಿದ್ದು ಸೇರಿದಂತೆ ಆರೋಪಗಳನ್ನು ಸಾಬೀತುಪಡಿಸಲು ಸರ್ಕಾರದ ಪರ ವಕೀಲರು ವಿಫಲರಾಗಿದ್ದು ಖುಲಾಸೆಗೊಳ್ಳಲು ಕಾರಣವಾಯಿತು’. ‌

ನಾಲ್ವರ ವಿರುದ್ಧ ಕೊಲೆ, ಶಸ್ತ್ರಾಸ್ತ್ರ ಬಳಸಿ ಗಂಭೀರವಾಗಿ ಗಾಯಗೊಳಿಸುವುದು, ಕ್ರಿಮಿನಲ್‌ ಸಂಚು ಆರೋಪಗಳು ಸಾಬೀತಾಗಿವೆ.

ದೋಷಾರೋಪ ಪಟ್ಟಿ ಪ್ರಕಾರ, ಶಹಬಾಜ್‌ ಹುಸೇನ್‌ ಉತ್ತರ ಪ್ರದೇಶದ ಗಾಜಿಯಾಬಾದ್‌ ಜಿಲ್ಲೆಯ ಸಾಹಿಬಾಬಾದ್‌ನಲ್ಲಿ ಸೈಬರ್‌ ಕೆಫೆ ಹೊಂದಿದ್ದಾನೆ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಸದಸ್ಯ. ಈತನನ್ನೇ ಮೊದಲು ಬಂಧಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು