ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಅಪ್ಪಿಕೊಂಡಾಗ ನಿರಾಳ ಭಾವ ಮೂಡಿತ್ತು: ಇಸ್ರೋ ಮುಖ್ಯಸ್ಥ ಶಿವನ್‌

Last Updated 2 ಜನವರಿ 2020, 13:43 IST
ಅಕ್ಷರ ಗಾತ್ರ

ನವದೆಹಲಿ: ‘ಚಂದ್ರಯಾನ’ವಿಫಲವಾದ ಸಂದರ್ಭದಲ್ಲಿ ಪ್ರಧಾನಿಮೋದಿ ನನ್ನನ್ನು ಅಪ್ಪಿಕೊಂಡರು. ಅವರ ಅಪ್ಪುಗೆನನ್ನಲ್ಲಿ ನಿರಾಳ ಭಾವ ಮೂಡಿಸಿತ್ತು,’ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್‌ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿ ಎನ್‌ಡಿಟಿವಿಯೊಂದಿಗೆಮಾತನಾಡಿರುವ ಶಿವನ್‌, ‘ನಾನು ಭಾವುಕನಾಗಿದ್ದ ಹೊತ್ತಿನಲ್ಲಿ ಪ್ರಧಾನಿ ಮೋದಿ ನನ್ನನ್ನು ಅಪ್ಪಿಕೊಂಡರು. ನನ್ನ ಮನಸ್ಸಿನಲ್ಲಿದ್ದ ತೊಳಲಾಟಗಳು ಅವರಿಗೆ ಅರಿವಾಗಿತ್ತು. ಆಗ ಅವರು ಮುತ್ಸದ್ಧಿತನ ತೋರಿದರು. ಅವರ ಅಪ್ಪುಗೆ ನನಗೆ ಹಲವು ಪಾಠಗಳನ್ನು ಹೇಳಿಕೊಟ್ಟಿತು. ಪ್ರಧಾನಿಯೊಬ್ಬರು ನನ್ನನ್ನು ಸಮಾಧಾನಪಡಿಸಿದ್ದು ದೊಡ್ಡ ವಿಚಾರ. ಅವರ ಅಪ್ಪುಗೆ ನನಗೆ ನಿರಾಳತೆ ಉಂಟು ಮಾಡಿತು,’ ಎಂದು ಹೇಳಿದ್ದಾರೆ.

‘ ಮೋದಿ ಅವರ ಈ ನಡೆಮುಂದೆ ಬಾಹ್ಯಾಕಾಶದಲ್ಲಿ ಸಾಧನೆ ಮಾಡಲು ನನಗೆ ಪ್ರೇರಣಾದಾಯಕವಾಯಿತು. ಆ ಘಟನೆ ನಂತರ ನಾವು ಮತ್ತಷ್ಟು ಪರಿಣಾಮಕಾರಿಯಾಗಿ ಬಾಹ್ಯಾಕಾಶ ಅಧ್ಯಯನದಲ್ಲಿ ತೊಡಗಿದ್ದೇವೆ. ಮತ್ತಷ್ಟು ಸಾಧನೆಯತ್ತ ಮುಖ ಮಾಡಿದ್ದೇವೆ,’ ಎಂದು ಹೇಳಿದ್ದಾರೆ ಶಿವನ್‌.

ಮಾನವ ಸಹಿತ ಅಂತರಿಕ್ಷ ಯಾನಕ್ಕೆ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್‌ಗಳ ಆಯ್ಕೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ 2022ರಲ್ಲಿ ಕೈಗೊಳ್ಳಲಿರುವ ಪ್ರಪ್ರಥಮಮಾನವ ಸಹಿತ ಅಂತರಿಕ್ಷ ಯಾನಕ್ಕೆ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್‌ಗಳು ಆಯ್ಕೆಯಾಗಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್‌ ತಿಳಿಸಿದ್ದಾರೆ.

‘ಈಗಾಗಲೇ ನಾಲ್ವರು ಪೈಲಟ್‌ಗಳನ್ನು ಅಂತರಿಕ್ಷ ಯಾನಕ್ಕೆ ಆಯ್ಕೆ ಮಾಡಲಾಗಿದೆ. ಭಾರತ ಮತ್ತು ರಷ್ಯಾದಲ್ಲಿ ಅವರಿಗೆ ವೈದ್ಯಕೀಯ ತಪಾಸಣೆಗಳನ್ನೂ ಮಾಡಲಾಗಿದೆ. ಅಲ್ಲಿ ಅವರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಅಲ್ಲದೆ, ಮಾನವ ಸಹಿತ ಅಂತರಿಕ್ಷ ಯಾನದ ರೂಪುರೇಷೆ ಈಗಾಗಲೇ ಸಿದ್ಧವಾಗಿದೆ,’ ಎಂದು ಶಿವನ್‌ ಹೇಳಿದ್ದಾರೆ.

ಅಂತರಿಕ್ಷ ಯಾನಕ್ಕೆ ಆಯ್ಕೆಯಾಗಿರುವ ನಾಲ್ವರು ಪೈಲಟ್‌ಗಳು ಯಾರು ಎಂಬ ಗುಟ್ಟನ್ನು ಶಿವನ್‌ ಅವರು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಮಾಹಿತಿ ರಹಸ್ಯವಾಗಿಯೇ ಉಳಿದಿದೆ. ಆರೋಗ್ಯ, ಸದೃಢರಾಗಿರುವ ಕಾರಣಕ್ಕೆ ಪೈಲಟ್‌ಗಳನ್ನು ಈ ಮಹತ್ವದ ಕಾರ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ,’ ಎಂದೂ ಅವರು ತಿಳಿಸಿದ್ದಾರೆ.

‘ಅಂತರಿಕ್ಷ ಯಾನಕ್ಕೆ ಸಿದ್ಧರಿರುವವರ ದೊಡ್ಡ ಪಟ್ಟಿಯೇ ಇಸ್ರೋದ ಬಳಿ ಇದೆ. ಈಗ ಆಯ್ಕೆಯಾಗಿರುವ ನಾಲ್ವರಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ, ಪಟ್ಟಿಯ ಕುರಿತು ಚರ್ಚೆ ಮಾಡಲಾಗುವದು,’ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಮಾನವ ರಹಿತ ಅಂತರಿಕ್ಷಯಾನ ‘ಗಗನಯಾನ’ದ ಕುರಿತೂ ಶಿವನ್‌ ಮಾತನಾಡಿದ್ದಾರೆ. ‘ಗಗನಯಾನ’ ಯೋಜನೆಯನ್ನು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪೂರ್ಣಗೊಳಿಸಲಾಗುವುದು. ಈ ವರ್ಷವೇ ಪೂರ್ಣಗೊಳಿಸಬೇಕು ಎಂಬುದು ನಮ್ಮ ಗುರಿ. ಆದರೆ, ಬಹುತೇಕ ಮುಂದಿನ ವರ್ಷ ಅದು ಸಾಧ್ಯವಾಗಬಹುದು,’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT