ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಬಂಧನದಲ್ಲಿ 4 ಸಾವಿರ ಮಂದಿ

Last Updated 18 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಬಳಿಕ ಉಂಟಾಗಬಹುದಾಗಿದ್ದ ಪ್ರತಿಭಟನೆ ತಡೆಯಲು ಅಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿಯಲ್ಲಿ ಕನಿಷ್ಠ 4,000 ಜನರನ್ನು ಸೆರೆಯಲ್ಲಿ ಇರಿಸಲಾಗಿದೆ ಎಂದು ಹೆಸರುಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಂಧಿತರಲ್ಲಿ ಹೆಚ್ಚಿನವರನ್ನು ಕಾಶ್ಮೀರದ ಹೊರಗಿನ ಜೈಲುಗಳಲ್ಲಿ ಇರಿಸಲಾಗಿದೆ. ಕಾಶ್ಮೀರದ ಜೈಲುಗಳು ತುಂಬಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಮ್ಮು–ಕಾಶ್ಮೀರದಲ್ಲಿ ಸಂವಹನಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಆದರೆ, ತಮಗೆ ಕೊಟ್ಟ ಸ್ಯಾಟಲೈಟ್‌ ಫೋನ್‌ ಬಳಸಿ, ತಮ್ಮ ಸಹೋದ್ಯೋಗಿಗಳ ಜತೆಗೆ ಮಾತನಾಡಿ ಬಂಧಿತರ ಸಂಖ್ಯೆಯನ್ನು ಅಂದಾಜಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.

ನೂರಾರು ರಾಜಕಾರಣಿಗಳು, ಹೋರಾಟಗಾರರನ್ನು ಬಂಧಿಸಲಾಗಿದೆ. ಆದರೆ, ಬಂಧನಕ್ಕೆ ಒಳಗಾದ ಜನರ ಒಟ್ಟು ಸಂಖ್ಯೆ ಎಷ್ಟು ಎಂಬುದನ್ನು ದೃಢಪಡಿಸಲು ಅಲ್ಲಿನ ಅಧಿಕಾರಿಗಳು ನಿರಾಕರಿಸುತ್ತಲೇ ಬಂದಿದ್ದಾರೆ. ಈ ಪ್ರದೇಶದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳಲು ಕೆಲವರನ್ನು ಬಂಧಿಸಲಾಗಿದೆ ಎಂದಷ್ಟೇ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ.

ಬಂಧನಕ್ಕೆ ಒಳಗಾದ ಜನರ ಸಂಖ್ಯೆ ಎಷ್ಟು ಎಂಬುದು ಲಭ್ಯವಿಲ್ಲ ಎಂದು ಸರ್ಕಾರದ ವಕ್ತಾರ ರೋಹಿತ್‌ ಕನ್ಸಲ್‌ ಇತ್ತೀಚೆಗೆ ಹೇಳಿದ್ದರು.

ಆದರೆ, ಸುದ್ದಿಸಂಸ್ಥೆ ಎಎಫ್‌ಪಿಯ ವರದಿಗಾರರು ಶ್ರೀನಗರ ಮತ್ತು ಇತರ ನಗರಗಳಲ್ಲಿ ಪೊಲೀಸ್‌, ಭದ್ರತಾ ಪಡೆ ಹಾಗೂ ಇತರ ಅಧಿಕಾರಿಗಳನ್ನು ಮಾತನಾಡಿಸಿ ಬಂಧನದ ಕುರಿತಂತೆ ಮಾಹಿತಿ ಕಲೆ ಹಾಕಿದ್ದಾರೆ.

‘ಶ್ರೀನಗರದ ಕೆಲವೆಡೆಗಳಲ್ಲಿ, ಬಂಧನದ ನಂತರ ವೈದ್ಯಕೀಯ ಪರೀಕ್ಷೆಗೆ ಒಳಗಾದ ಜನರ ಸಂಖ್ಯೆ ಆರು ಸಾವಿರಕ್ಕೂ ಹೆಚ್ಚು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಂಧಿತರನ್ನು ಮೊದಲಿಗೆ ಶ್ರೀನಗರದ ಜೈಲಿಗೆ ಹಾಕಿ, ಬಳಿಕ ಅಲ್ಲಿಂದ ಅವರನ್ನು ಸೇನೆಯ ವಿಮಾನಗಳಲ್ಲಿ ಹೊರ ರಾಜ್ಯಗಳ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಬಹಳಷ್ಟು ಬಂಧನಗಳನ್ನು ದಾಖಲಿಸಿಕೊಂಡಿಲ್ಲ. ಹಾಗಾಗಿ ಬಂಧಿತರ ನಿಖರ ಸಂಖ್ಯೆ ದೊರೆಯುತ್ತಿಲ್ಲ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

‘ಉಗ್ರರು ಏಕಾಂಗಿ’

ಶ್ರೀನಗರ (ಪಿಟಿಐ): ಭಯೋತ್ಪಾದಕರು ಏಕಾಂಗಿಯಾಗುವ ರೀತಿಯಲ್ಲಿ ಪೊಲೀಸರು ಭಾರಿ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ಉಗ್ರರು ಜನರನ್ನು ದಾರಿತಪ್ಪಿಸುವುದು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಆಗಿದೆ ಎಂದು ಜಮ್ಮು–ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಜನರು ನೀಡಿದ ಸಹಕಾರಕ್ಕೆ ಸಿಂಗ್‌ ಕೃತಜ್ಞತೆ ಸಲ್ಲಿಸಿದ್ದಾರೆ. ಒಂದು ವರ್ಷದಿಂದ ಪೊಲೀಸ್‌ ಮುಖ್ಯಸ್ಥರಾಗಿರುವ ಸಿಂಗ್‌, ಪಿಟಿಐಗೆ ಸಂದರ್ಶನ ನೀಡಿದ್ದಾರೆ.

‘ಪೊಲೀಸ್‌, ಅರೆಸೇನಾ ಪಡೆ, ಸೇನೆ ಒಳಗೊಂಡ ಭದ್ರತಾ ತಂಡಗಳು ಅತ್ಯುತ್ತಮ ಕೆಲಸ ಮಾಡುತ್ತಿವೆ. ಈ ಪ್ರಯತ್ನದಲ್ಲಿ ರಾಜ್ಯದ ಜನರ ಸಹಕಾರವನ್ನು ಮರೆಯಲಾಗದು’ ಎಂದು ಹೇಳಿದ್ದಾರೆ.

ಭಯೋತ್ಪಾದನೆ ನಿಗ್ರಹ ತಂಡಗಳು ಉಗ್ರರ ಮೇಲೆ ಒತ್ತಡ ಹೇರುತ್ತಿದ್ದರೆ, ಉಳಿದ ಪಡೆಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವತ್ತ ಗಮನ ಹರಿಸಿವೆ. ವಿಶೇಷಾಧಿಕಾರ ರದ್ದತಿ ಬಳಿಕ ಸಣ್ಣಪುಟ್ಟ ಪ್ರತಿಭಟನೆಗಳು ನಡೆದಿವೆ. ಅವನ್ನು ಸ್ಥಳೀಯವಾಗಿ ನಿಯಂತ್ರಿಸಲಾಗಿದೆ ಎಂದರು.

ಲಡಾಖ್‌ಗೆ ಬುಡಕಟ್ಟು ಪ‍್ರದೇಶ ಸ್ಥಾನಕ್ಕೆ ಆಗ್ರಹ

ಲೇಹ್‌ (ಪಿಟಿಐ): ತಮ್ಮ ನೆಲ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವುದೇ ಲಡಾಖ್‌ನ ಜನರ ಅತ್ಯಂತ ದೊಡ್ಡ ಕಾಳಜಿ. ಹಾಗಾಗಿ ಲಡಾಖ್‌ ಅನ್ನು ಬುಡಕಟ್ಟು ಪ್ರದೇಶ ಎಂದು ಘೋಷಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಮತ್ತು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಕ್ರಮನ್ನು ಸ್ಥಳೀಯರು ಸ್ವಾಗತಿಸಿದ್ದಾರೆ. ಆದರೆ, ಇದರ ಪರಿಣಾಮವಾಗಿ ಹೊರಗಿನ ಜನರು ದೊಡ್ಡ ಸಂಖ್ಯೆಯಲ್ಲಿ ಬಂದು ಲಡಾಖ್‌ನಲ್ಲಿ ನೆಲೆಯಾಗಿ ಇಲ್ಲಿನ ಸಾಮಾಜಿಕ–ಸಾಂಸ್ಕೃತಿಕ ಸ್ಥಿತಿಯನ್ನೇ ಬದಲಾಯಿಸಬಹುದು ಎಂಬ ಆತಂಕ ಇಲ್ಲಿನವರನ್ನು ಕಾಡುತ್ತಿದೆ.ಲಡಾಖ್‌ನ ಜನಸಂಖ್ಯೆಯ ಶೇ 98ರಷ್ಟು ಮಂದಿ ಬುಡಕಟ್ಟು ಜನರು. ಹಾಗಾಗಿ ಈ ಪ್ರದೇಶವನ್ನು ಬುಡಕಟ್ಟು ಪ್ರದೇಶ ಎಂದು ಘೋಷಿಸಬೇಕು ಎಂದು ಕೋರಿ ಅಲ್ಲಿನ ಸಂಸದ ಜಮ್ಯಂಗ್‌ ತ್ಸೆರಿಂಗ್‌ ನಾಮ್‌ಗ್ಯೆಲ್‌ ಅವರು ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ಅವರಿಗೆ ಪತ್ರ ಬರೆದಿದ್ದಾರೆ.

ಹೂಡಾ ಬೆಂಬಲ

ವಿಶೇಷಾಧಿಕಾರ ರದ್ದತಿಯನ್ನು ಬೆಂಬಲಿಸಿದ ಕಾಂಗ್ರೆಸ್ಸಿಗರ ಪಟ್ಟಿಗೆ ಹಿರಿಯ ಮುಖಂಡ, ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಕೂಡ ಸೇರಿದ್ದಾರೆ. ಈ ಮೂಲಕ ಅವರು ಪಕ್ಷದ ಅಧಿಕೃತ ನಿಲುವಿನ ವಿರುದ್ಧ ನಿಂತಿದ್ದಾರೆ. ಈ ವರ್ಷ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

‘370ನೇ ವಿಧಿ ಅಸಿಂಧುವಾಗಿದೆ. ನನ್ನ ಕೆಲವು ಸಹೋದ್ಯೋಗಿಗಳು ಅದನ್ನು ವಿರೋಧಿಸುತ್ತಿದ್ದಾರೆ. ನನ್ನ ಪಕ್ಷವೂ ಈ ವಿಚಾರದಲ್ಲಿ ಎಡವಿದೆ. ಕಾಂಗ್ರೆಸ್‌ ಈಗ ಹಿಂದಿನಂತೆ ಇಲ್ಲ. ದೇಶಭಕ್ತಿ ಮತ್ತು ಆತ್ಮಗೌರವದ ವಿಚಾರದಲ್ಲಿ ನಾನು ಯಾವತ್ತೂ ರಾಜಿ ಮಾಡಿಕೊಳ್ಳುವು
ದಿಲ್ಲ’ ಎಂದು ಅವರು ಹೇಳಿದ್ದಾರೆ.

ಭೂಪಿಂದರ್‌ ಮಗ ದೇವೇಂದರ್‌ ಸಿಂಗ್‌ ಹೂಡಾ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ‘ನಾನು ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಕೀಯದಿಂದ ಸದಾ ದೂರ ಇರಿಸುತ್ತೇನೆ. 370ನೇ ವಿಧಿ ಬಗ್ಗೆಯೇ ಮಾತನಾಡೋಣ. ಅದು ತಾತ್ಕಾಲಿಕ ವ್ಯವಸ್ಥೆ. ವಿಧಿ ರದ್ದತಿಯ ವಿಧಾನವನ್ನು ನಾನು ವಿರೋಧಿಸುತ್ತೇನೆ. ಆದರೆ, ರದ್ದತಿಯನ್ನು ಬೆಂಬಲಿಸುತ್ತೇನೆ. ಈ ವಿಚಾರವನ್ನು ರಾಜಕೀಯಕ್ಕೆ ಬಳಸುವವರ ಜತೆಗೆ ನಾನು ಇಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT