ಬುಧವಾರ, ಸೆಪ್ಟೆಂಬರ್ 18, 2019
24 °C

ವಾಯುಪಡೆ ಮುಖ್ಯಸ್ಥರ ಜತೆ ಮಿಗ್–21ರಲ್ಲಿ ಹಾರಾಟ ನಡೆಸಿದ ಅಭಿನಂದನ್

Published:
Updated:

ನವದೆಹಲಿ: ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್‌–16 ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಸೋಮವಾರ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಜತೆ ಮಿಗ್–21 ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

‘ಅಭಿನಂದನ್ ಮತ್ತು ಧನೋವಾ ಇದ್ದ ಮಿಗ್–21 ಯುದ್ಧವಿಮಾನ ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆಯಿಂದ ಹಾರಾಟ ನಡೆಸಿದೆ. ಸಂಪೂರ್ಣ ವೈದ್ಯಕೀಯ ತಪಾಸಣೆ ಬಳಿಕ ಅಭಿನಂದನ್ ಅವರು ವಿಮಾನ ಹಾರಾಟ ನಡೆಸಬಹುದು ಎಂದು ಕಳೆದ ತಿಂಗಳು ಪ್ರಮಾಣ ಪತ್ರ ನೀಡಲಾಗಿತ್ತು’ ಎಂದು ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ... 

ಸುಮಾರು 30 ನಿಮಿಷ ಹಾರಾಟ ನಡೆಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ವೈದ್ಯಕೀಯ ಪ್ರಮಾಣ ಪತ್ರ ದೊರೆತ ಬಳಿಕ ಅಭಿನಂದನ್ ಅವರು ಆಗಸ್ಟ್‌ನಲ್ಲಿ ವಿಮಾನ ಹಾರಾಟ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿರುವ ಭಾರತೀಯ ವಾಯುಪ್ರದೇಶ ವೈದ್ಯಕೀಯ ಸಂಸ್ಥೆಯು ಅಭಿನಂದನ್ ಅವರ ಸಮಗ್ರ ಪರೀಕ್ಷೆ ನಡೆಸಿತ್ತು. ಅವರು ಯುದ್ಧ ವಿಮಾನ ಹಾರಿಸಲು ಸಮರ್ಥರಿದ್ದಾರೆ ಎಂದು ಪ್ರಮಾಣಪತ್ರವನ್ನು ನೀಡಿತ್ತು.

ಇದನ್ನೂ ಓದಿ: ಭಾರತ ವಾಯುಪಡೆ ಉರುಳಿಸಿದ ಪಾಕ್ ಯುದ್ಧವಿಮಾನದ ಮೊದಲ ಚಿತ್ರ ಬಹಿರಂಗ

ಬಾಲಾಕೋಟ್‌ ಮೇಲೆ ಫೆ. 26ರಂದು ವಾಯು ದಾಳಿ ನಡೆಸಲಾಗಿತ್ತು. ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಅಭಿನಂದನ್‌ ಚಲಾಯಿಸುತ್ತಿದ್ದ ಮಿಗ್‌–21 ಬೈಸನ್‌ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು. ಪ್ಯಾರಾಚೂಟ್‌ ಮೂಲಕ ಹೊರಕ್ಕೆ ಜಿಗಿದಿದ್ದ ಅಭಿನಂದನ್‌ ಅವರು ಗಾಯಗೊಂಡಿದ್ದರು.  

ಪಾಕಿಸ್ತಾನ ನೆಲದಲ್ಲಿ ಇಳಿದಿದ್ದ ಅವರನ್ನು ಅಲ್ಲಿನ ಪಡೆಯು ಫೆ. 27ರಂದು ಬಂಧಿಸಿತ್ತು. ಅ‌ವರ ಬಂಧನದ ಬಳಿಕ ಭಾರತ–ಪಾಕಿಸ್ತಾನದ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮಾರ್ಚ್‌ 1ರಂದು ರಾತ್ರಿ ಅವರನ್ನು ಪಾಕಿಸ್ತಾನವು ಬಿಡುಗಡೆ ಮಾಡಿತ್ತು.

ಪಾಕಿಸ್ತಾನದೊಳಗೆ ಇರುವ ಬಾಲಾಕೋಟ್‌ನ ಜೈಷ್‌–ಎ–ಮೊಹಮ್ಮದ್‌ ಉಗ್ರಗಾಮಿ ಶಿಬಿರಗಳ ಮೇಲೆ ಭಾರತದ ವಾಯುಪಡೆಯ ವಿಮಾನಗಳು ಬಾಂಬ್‌ ದಾಳಿ ನಡೆಸಿದ್ದವು. ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಪುಲ್ವಾಮಾ ದಾಳಿಯ ಎರಡು ವಾರ ಬಳಿಕ ಭಾರತದ ವಾಯುಪಡೆ ಈ ಕ್ರಮ ಕೈಗೊಂಡಿತ್ತು.

Post Comments (+)