ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನಾ ಕೃತಿಚೌರ್ಯಕ್ಕೆ ಕಠಿಣ ಶಿಕ್ಷೆ

ಮಾಹಿತಿ ತಿರುಚುವಿಕೆ ಗಂಭೀರ ಅಪರಾದ: ಶೈಕ್ಷಣಿಕ ನೈತಿಕತೆ ರಾಷ್ಟ್ರೀಯ ನೀತಿ ಕರಡು ಸಿದ್ಧ
Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಶೈಕ್ಷಣಿಕ ದುರ್ನಡತೆಗೆ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಶೈಕ್ಷಣಿಕ ಪ್ರಬಂಧಗಳು ಮತ್ತು ಸಂಶೋಧನೆಯಲ್ಲಿ ದೊಡ್ಡ ಮಟ್ಟದಲ್ಲಿ ಕೃತಿಚೌರ್ಯ ಮತ್ತು ದತ್ತಾಂಶ ವಂಚನೆ ನಡೆಸುವುದನ್ನು ‘ಅತ್ಯಂತ ಗಂಭೀರ ಅಪರಾಧ’ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ.

‘ದೊಡ್ಡ ಮಟ್ಟದಲ್ಲಿ ನೈತಿಕ ಉಲ್ಲಂಘನೆಗಳ ವಿರುದ್ಧ ತೀವ್ರವಾದ ಶಿಸ್ತು ಕ್ರಮ ನಡೆಸುವ ಅಗತ್ಯ ಇದೆ. ಸಮಂಜಸ ಎನಿಸಿದರೆ ಇಂತಹ ಅಪರಾಧ ಎಸಗಿದವರನ್ನು ವಜಾ ಮಾಡುವ ಕ್ರಮವನ್ನೂ ಕೈಗೊಳ್ಳಬಹುದು’ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ ರಾಘವನ್‌ ಅವರು ಸಲಹೆ ಮಾಡಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳನ್ನೂ ಸೇರಿಸಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಶೈಕ್ಷಣಿಕ ನೈತಿಕತೆ ರಾಷ್ಟ್ರೀಯ ನೀತಿಯ ಕರಡನ್ನು ರೂಪಿಸಲಾಗಿದೆ. ಈ ಕರಡುವಿನಲ್ಲಿ ಈ ಪ್ರಸ್ತಾಪ ಇದೆ.

ಕೃತಿಚೌರ್ಯ ಯಾವುದೇ ರೀತಿಯಲ್ಲಿದ್ದರೂ ಸ್ವೀಕಾರಾರ್ಹವಲ್ಲ. ಆದರೆ, ಕೆಲವೊಮ್ಮೆ ಉದ್ದೇಶಪೂರ್ವಕವಲ್ಲದೆ ಕೃತಿಚೌರ್ಯ ಸಂಭವಿಸಬಹುದು. ಇಂತಹ ಪ್ರಕರಣಗಳಲ್ಲಿ ‘ತಿದ್ದುಪಡಿ ಕ್ರಮ’ಕ್ಕೆ ಅವಕಾಶ ಇದೆ ಎಂದು ಕರಡುವಿನಲ್ಲಿ ಹೇಳಲಾಗಿದೆ.

ಆರು ಪುಟಗಳ ಕರಡು ನೀತಿಯನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಸಂಸ್ಥೆಗಳು ತಮ್ಮ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.

ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಪ್ರಾಮಾಣಿಕರಾಗಿರಬೇಕು. ತಮ್ಮ ನಡತೆಯ ಮೂಲಕ ಮಾರ್ಗದರ್ಶಕರು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ನೈತಿಕ ಮೌಲ್ಯಗಳು ಮತ್ತು ವೃತ್ತಿಪರತೆಯನ್ನು ಮೂಡಿಸಬೇಕು ಎಂದು ಈ ಪ್ರಸ್ತಾವದಲ್ಲಿ ಹೇಳಲಾಗಿದೆ.

ಸಂಶೋಧನಾ ಪ್ರಬಂಧಗಳ ಲೇಖಕರು, ಪುಸ್ತಕಗಳು ಮತ್ತು ಇತರ ದಾಖಲೆಗಳ ಪಟ್ಟಿಯಲ್ಲಿ ಅನಗತ್ಯ ಹೆಸರು ಸೇರ್ಪಡೆ ಆಗಬಾರದು. ಹಾಗೆಯೇ ಸಂಶೋಧನೆಗೆ ಗಣನೀಯ ನೆರವು ನೀಡಿದವರಿಗೆ ಅದರ ಶ್ರೇಯವನ್ನು ನಿರಾಕರಿಸಲೂಬಾರದು ಎಂದು ಶಿಫಾರಸು ಮಾಡಲಾಗಿದೆ.

ನೀತಿ ಪ್ರಸ್ತಾವಗಳು

ಯಾವುದೇ ಪ್ರಬಂಧದಲ್ಲಿ ಕೃತಿಚೌರ್ಯ ಅಥವಾ ದತ್ತಾಂಶ ತಿರುಚುವಿಕೆ ಕಂಡು ಬಂದರೆ, ಮೂಲ ಪ್ರಬಂಧವು ಪ್ರಕಟವಾದ ಅದೇ ಸ್ಥಳದಲ್ಲಿ ತಿದ್ದುಪಡಿ ಪ್ರಕಟಿಸಬೇಕು. ಅಥವಾ ಪ್ರಬಂಧವನ್ನು ಹಿಂದಕ್ಕೆ ಪಡೆಯಲಾಗಿದೆ ಎಂಬುದನ್ನು ಪ್ರಕಟಿಸಬೇಕು

ಕೃತಿಚೌರ್ಯ ಅಥವಾ ದತ್ತಾಂಶ ವಂಚನೆ ಆಗಿದೆ ಎಂದು ಪೂರ್ವಗ್ರಹಪೀಡಿತವಾಗಿ ಅಥವಾ ಹಿತಾಸಕ್ತಿ ಸಂಘರ್ಷದ ಕಾರಣಕ್ಕೆ ನಿರ್ಧಾರ ಕೈಗೊಂಡಿದ್ದರೆ, ಸಂಸ್ಥೆಯು ಈ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು

ಅನೈತಿಕ ಕ್ರಮದ ಮೂಲಕ ಸುಳ್ಳು ಮಾಹಿತಿ ಅಥವಾ ತಪ್ಪು ನಿರ್ಧಾರಗಳು ಪ್ರಚಾರ ಆಗದಂತೆ ನೋಡಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು

ನೀತಿಗಳ ಉಲ್ಲಂಘನೆ ವಿಚಾರದ ದೂರುಗಳನ್ನು ಸಕಾಲಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಪರಿಹರಿಸಲು ವ್ಯವಸ್ಥೆ ಮತ್ತು ಕ್ರಮಗಳನ್ನು ಸಂಸ್ಥೆಗಳು ರೂಪಿಸಬೇಕು

ಶೈಕ್ಷಣಿಕ ಅಧ್ಯಯನವು ಜನರಿಗೆ ಮತ್ತು ಪರಿಸರಕ್ಕೆ ಯಾವುದೇ ಅಪಾಯ ಒಡ್ಡದಂತೆ ನೋಡಿಕೊಳ್ಳಲು ಸಮರ್ಪಕವಾದ ಮಾರ್ಗದರ್ಶಿ ಸೂತ್ರಗಳು ಮತ್ತು ನಿಬಂಧನೆಗಳನ್ನು ರೂಪಿಸಬೇಕು

ವಿಕಿರಣಶೀಲ, ವಿಷಕಾರಿ ಅಥವಾ ಅಪಾಯಕಾರಿ ವಸ್ತುಗಳ ನಿರ್ವಹಣೆ, ಸಂಗ್ರಹ ಮತ್ತು ವಿಲೇವಾರಿಗೆ ಬೇಕಾದ ನಿಯಮಗಳನ್ನು ರೂಪಿಸಬೇಕು. ಇಂತಹ ವಸ್ತುಗಳ ವಿಚಾರದಲ್ಲಿ ಅಗತ್ಯವಾದ ಅನುಮತಿ, ಪರವಾನಗಿಯನ್ನು ಪಡೆಯಬೇಕು.

***

ಪ್ರಮುಖ ಕೊಡುಗೆ ನೀಡಿದ ವ್ಯಕ್ತಿಯ ಹೆಸರನ್ನು ಹಿತಾಸಕ್ತಿ ಸಂಘರ್ಷದ ಕಾರಣಕ್ಕೆ ಕೆಲವೊಮ್ಮೆ ಕೈಬಿಡಲಾಗುತ್ತದೆ. ಅವರ ಬದಲಿಗೆ ಇನ್ನಾರದೋ ಹೆಸರು ಸೇರ್ಪಡೆ ಆಗುತ್ತದೆ. ಇದು ಅನೈತಿಕ

–ಶೈಕ್ಷಣಿಕ ನೈತಿಕತೆ ರಾಷ್ಟ್ರೀಯ ನೀತಿಯ ಕರಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT