ಮಂಗಳವಾರ, ನವೆಂಬರ್ 19, 2019
22 °C

ಅಯೋಧ್ಯೆ ತೀರ್ಪು ಹಿನ್ನೆಲೆ: ಉತ್ತರ ಪ್ರದೇಶದಲ್ಲಿ ಬಂದೋಬಸ್ತ್‌ಗೆ ಹೆಲಿಕಾಪ್ಟರ್‌

Published:
Updated:

ಲಖನೌ: ಅಯೋಧ್ಯೆ ವಿವಾದದ ತೀರ್ಪಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಸಂದರ್ಭದ ಬಳಕೆಗೆಂದು ಎರಡು ಹೆಲಿಕಾಪ್ಟರ್‌ಗಳನ್ನು ಸರ್ಕಾರ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಉತ್ತರ ಪ್ರದೇಶ ರಾಜಧಾನಿ ಲಖನೌ ಮತ್ತು ವಿವಾದಿತ ಸ್ಥಳವಾದ ಅಯೋಧ್ಯೆಯಲ್ಲಿ ಗಂಭೀರ ಸ್ಥಿತಿ ಉದ್ಭವಿಸಿದರೆ ಆ ಎರಡು ಹೆಲಿಕಾಪ್ಟರ್‌ಗಳ ಸಹಾಯ ಪಡೆಯಲಾಗುವುದೆಂದು ಅವರು ಹೇಳಿದ್ದಾರೆ.

ಗುರುವಾರ ರಾತ್ರಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು, ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ನ್ಯಾಯಾಧೀಶರ ಜೊತೆ ಸಿಎಂ ಆದಿತ್ಯನಾಥ್‌ ಅವರು ಸಮಾಲೋಚನೆ ನಡೆಸಿದ್ದಾರೆ. 

ಲಖನೌದಲ್ಲಿ ರಾಜ್ಯಮಟ್ಟದ ನಿಯಂತ್ರಣ ಕೊಠಡಿ ಸೇರಿದಂತೆ ಪ್ರತಿ ಜಿಲ್ಲೆಯಲ್ಲಿಯೂ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗುವುದು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಿಎಂ ಆದಿತ್ಯನಾಥ್‌ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)