ಗುರುವಾರ , ಏಪ್ರಿಲ್ 2, 2020
19 °C

ವಾರಿಸ್ ಪಠಾಣ್‌ನ ಬೆದರಿಕೆಗಳು ಭಾರತದಲ್ಲಿ ನಡೆಯುವುದಿಲ್ಲ: ಬಿಜೆಪಿ ಟ್ವೀಟ್ 

ಪಿಟಿಐ Updated:

ಅಕ್ಷರ ಗಾತ್ರ : | |

AIMIM leader Waris Pathan

ಬೆಂಗಳೂರು: 'ಇತರ 100 ಕೋಟಿ ಜನರ ಮೇಲೆ ಪ್ರಾಬಲ್ಯ ಮೆರೆಯಲು 15 ಕೋಟಿ ಮುಸ್ಲಿಮರು ಸಾಕು' ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ (ಎಐಎಂಐಎಂ) ನಾಯಕ ವಾರಿಸ್ ಪಠಾಣ್ ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

ಫೆಬ್ರುವರಿ 16ರಂದು  ಕಲ್ಬುರ್ಗಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಠಾಣ್ ಈ ರೀತಿ ಹೇಳಿದ್ದರು. 

'ನಾವು ಜತೆಯಾಗಿ ಮುಂದೆ ಸಾಗಬೇಕಿದೆ.  ನಾವು ಆಜಾದಿ (ಸ್ವಾತಂತ್ರ್ಯ) ಪಡೆದುಕೊಳ್ಳಬೇಕು. ನಮಗೆ ಬೇಕಾಗಿರುವುದು ಸಿಗದಿದ್ದರೆ ಅದನ್ನು ಬಲವಂತವಾಗಿ ಪಡೆಯಬೇಕು ಎಂಬುದು ನೆನಪಿರಲಿ.  ಈಗ ಸಮಯ ಬಂದಿದೆ. ನಾವು ಹೊದಿಕೆ ಹೊದ್ದು ಕುಳಿತು ನಮ್ಮ ತಾಯಿ ಮತ್ತು ಸಹೋದರಿಯರನ್ನು ಪ್ರತಿಭಟನೆಗೆ ಕಳಿಸಿದ್ದೇವೆ ಎಂದು ಹೇಳಲಾಗುತ್ತಿದೆ. ನಮ್ಮ ಸಿಂಹಿಣಿಗಳು ಮಾತ್ರ ಹೊರಬಂದಿದ್ದಾರೆ. ಈಗಾಗಲೇ ನೀವು ಬೆವರಲು ಶುರುವಾಗಿದ್ದೀರಿ. ನಾವು ಎಲ್ಲರೂ ಜತೆಯಾಗಿ ಬಂದರೆ ಏನಾಗಬಹುದು ಎಂದು ಊಹಿಸಿ. ನಾವು 15 ಕೋಟಿ ಇರಬಹುದು ಆದರೆ 100 ಕೋಟಿ ಜನರ ಮೇಲೆ ಪ್ರಾಬಲ್ಯ ಮೆರೆಯಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ' ಎಂದಿದ್ದರು ಪಠಾಣ್. 

ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ಟೀಕಿಸುತ್ತಿರುವವರಿಗೆ ಪಠಾಣ್ ನೀಡಿದ ಉತ್ತರ ಇದಾಗಿತ್ತು.

ಪಠಾಣ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕರ್ನಾಟಕ ಬಿಜೆಪಿ ಘಟಕವು, ಮಹಿಳೆ ಮತ್ತು ಮಕ್ಕಳ ಹಿಂದೆ ಅಡಗಿ ಕುಳಿತಿರುವ ಮಹಾನುಭಾವರು ಆಜಾದಿ ಕೇಳುತ್ತಿದ್ದಾರೆ. ಇದಕ್ಕಿಂತ ಹೆಚ್ಚು ಯಾವ ಆಜಾದಿ ಬೇಕು. 1947ರಿಂದ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಅವರು ಅನುಭವಿಸುತ್ತಿಲ್ಲವೇ?  ವಾರಿಸ್ ಪಠಾಣ್ ಮತ್ತು ಎಐಎಂಐಎಂನ ಇತರ ನಾಯಕರು ಔರಂಗಜೇಬ್‌ನ ಜಗತ್ತಿನಿಂದ ಹೊರಬರಬೇಕು. ಈ ರೀತಿಯ ಬೆದರಿಕೆಗಳು ನವಭಾರತದಲ್ಲಿ  ನಡೆಯುವುದಿಲ್ಲ ಎಂದು ಟ್ವೀಟಿಸಿದೆ.

ವಾರಿಸ್ ಪಠಾಣ್ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಹೊತ್ತಲ್ಲೇ ಆತ ಪತ್ರಕರ್ತ ಅರ್ನಬ್ ಗೋಸ್ವಾಮಿ , ಕೇಂದ್ರ ಸಚಿವ ಪೀಯೂಷ್ ಗೋಯಲ್, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡಣವಿಸ್ ಜತೆಗಿರುವ ಫೋಟೊ ಟ್ವಿಟರ್‌ನಲ್ಲಿ ಹರಿದಾಡಿದೆ. 

ಇದನ್ನೂ ಓದಿದೆಹಲಿ ಪ್ರಚಾರದಲ್ಲಿ ‘ಗುಂಡಿಕ್ಕಿ ಕೊಲ್ಲಿ’!

ಪಠಾಣ್ ಹೇಳಿಕೆ ಖಂಡಿಸಿದ ತೇಜಸ್ವಿ ಯಾದವ್: ವಾರಿಸ್ ಪಠಾಣ್ ಅವರ ಹೇಳಿಕೆ ಖಂಡಿಸಿದ ಆರ್‌ಜೆಡಿ ನೇತಾರ ತೇಜಸ್ವಿ ಯಾದವ್ , ಆತನನ್ನು ಬಂಧಿಸಬೇಕು ಎಂದಿದ್ದಾರೆ. ಎಐಎಂಐಎಂ ಬಿಜೆಪಿಯ ಬಿ ತಂಡದಂತೆ ವರ್ತಿಸುತ್ತದೆ. ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮೊದಲಾದವರನ್ನೂ ಬಂಧಿಸಬೇಕು. ಯಾರೇ ಆಗಲಿ ಪ್ರಚೋದನಾಕಾರಿ ಹೇಳಿಕೆ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಪರಿಸ್ಥಿತಿ ದೆಹಲಿಗೂ ಬಂದೀತು ಜೋಕೆ: ಬಿಜೆಪಿ ಸಂಸದ ಪರ್ವೇಶ್ ವರ್ಮಾ

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು