ಶುಕ್ರವಾರ, ಏಪ್ರಿಲ್ 16, 2021
28 °C
ವಿಮಾನಯಾನ ಸಂಸ್ಥೆ ಮಾರಾಟದ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ

ಭಾರತೀಯರಿಗಷ್ಟೇ ಏರ್‌ ಇಂಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾಲಕ್ಕೆ ಸಿಲುಕಿ ನಲುಗಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನ ಯಾನ ಸಂಸ್ಥೆಯನ್ನು ಅತ್ಯುತ್ತಮ ಲಾಭ ದೊರೆಯುವ ಮತ್ತು ಭಾರತೀಯರ ಕೈಯಲ್ಲಿಯೇ ಉಳಿಯುವ ರೀತಿಯಲ್ಲಿ ಖಾಸಗೀಕರಣ ಮಾಡಲಾಗುವುದು ಎಂದು ಲೋಕಸಭೆಗೆ ಸರ್ಕಾರ ತಿಳಿಸಿದೆ.

‘ಭಾರತದ ಬೇರೊಂದು ಸಂಸ್ಥೆಯು ಏರ್‌ ಇಂಡಿಯಾವನ್ನು ಖರೀದಿಸಲಿದೆಯೋ ಅಥವಾ ವಿಮಾನ ಯಾನ ಕ್ಷೇತ್ರ ಪ್ರವೇಶಿಸುವ ಹೊಸತೊಂದು ಸಂಸ್ಥೆ ಖರೀದಿಸಲಿದೆಯೋ ಎಂಬ ಬಗ್ಗೆ ಭವಿಷ್ಯ ನುಡಿಯಲಾಗದು. ಪರ್ಯಾಯ ವ್ಯವಸ್ಥೆ ರೂಪುಗೊಂಡ ತಕ್ಷಣವೇ ಈ ಬಗ್ಗೆ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ಅವರು ಹೇಳಿದ್ದಾರೆ. 

ಶೂನ್ಯ ವೇಳೆಯಲ್ಲಿ ವಿವಿಧ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ಏರ್‌ ಇಂಡಿಯಾ ಮಾರಾಟದ ಪ್ರಯತ್ನವನ್ನು ಕಳೆದ ಮೇಯಲ್ಲಿಯೇ ನಡೆಸಲಾಗಿತ್ತು. ಆದರೆ ಅದು ಯಶಸ್ಸು ಕಾಣಲಿಲ್ಲ. ಈಗ ಮತ್ತೊಮ್ಮೆ ಈ ಪ್ರಕ್ರಿಯೆ ಆರಂಭಿಸುವಾಗ ನಾವು ಕೆಲವು ಪಾಠಗಳನ್ನು ಕಲಿತಿದ್ದೇವೆ. ಶೇ 24ರಷ್ಟು ಪಾಲನ್ನು ಸರ್ಕಾರ ಉಳಿಸಿಕೊಳ್ಳುವುದು ಅಥವಾ ಇಂತಹ ಬೇರೆ ಕೆಲವು ಷರತ್ತುಗಳು ಕಳೆದ ಬಾರಿ ಇದ್ದವು. ಬಹುಶಃ ಈ ಬಾರಿ ಅಂತಹ ತಪ್ಪುಗಳನ್ನು ಮಾಡುವುದಿಲ್ಲ’ ಎಂದು ಅವರು ತಿಳಿಸಿದರು. 

‘ಈಗ, ಜೆಟ್‌ ಏರ್‌ವೇಸ್‌ ಸ್ಥಗಿತಗೊಂಡಿರುವುದರಿಂದ ಏರ್‌ ಇಂಡಿಯಾವನ್ನು ಖರೀದಿಸುವುದು ಬಹಳ ಆಕರ್ಷಕವಾದ ಹೂಡಿಕೆಯಾಗಿದೆ. ಸಂಸ್ಥೆಯನ್ನು ಖರೀದಿಸಲು ಆಸಕ್ತಿ ಇರಬಹುದಾದ ಸಂಸ್ಥೆಗಳ ಪಟ್ಟಿಯನ್ನು ಸರ್ಕಾರ ತಯಾರಿಸುತ್ತಿದೆ. ಏರ್‌ ಇಂಡಿಯಾ ಮಾರಾಟದ ವಿಚಾರ ಬಹಳ ಸಮಯದಿಂದ ಇದೆ. ಈ ಬಾರಿ ಸರ್ಕಾರ ಅದರಲ್ಲಿ ಯಶಸ್ವಿಯಾಗಲಿದೆ’ ಎಂಬ ವಿಶ್ವಾಸವನ್ನು ಪುರಿ ವ್ಯಕ್ತಪಡಿಸಿದರು. 

‘125 ವಿಮಾನಗಳನ್ನು ಹೊಂದಿರುವ ಏರ್‌ಇಂಡಿಯಾ ಅತ್ಯುತ್ತಮವಾದ ಆಸ್ತಿ. ಈಗ ಅದರ ವ್ಯವಹಾರ ಕೂಡ ಅತ್ಯುತ್ತಮವಾಗಿದೆ. ಆದರೆ, ಭಾರಿ ಸಾಲದ ಹೊರೆಯಿಂದಾಗಿ ಅದನ್ನು ಮಾರಾಟ ಮಾಡುವ ನಿರ್ಧಾರವನ್ನು ಸರ್ಕಾರವು ಬಹಳ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡಿದೆ ಎಂದು ವಿವರಿಸಿದರು. 

₹78 ಸಾವಿರ ಕೋಟಿ ಸಾಲ: ಏರ್‌ ಇಂಡಿಯಾದ ಈಗಿನ ಸ್ಥಿತಿ ಉತ್ತಮವಾಗಿದೆ. 40 ಅಂತರರಾಷ್ಟ್ರೀಯ ಮತ್ತು 80 ದೇಶೀಯ ತಾಣಗಳಿಗೆ ವಿಮಾನ ಹಾರಾಟ ನಡೆಸುತ್ತಿದೆ. ಲಾಭದಾಯಕವಾಗಿಯೂ ಇದೆ. ಆದರೆ, ಸಾಲದ ಹೊರೆಯೇ ದೊಡ್ಡ ಚಿಂತೆಯಾಗಿದೆ.

ಏರ್‌ ಇಂಡಿಯಾಕ್ಕೆ ₹58 ಸಾವಿರ ಕೋಟಿ ಸಾಲ ಇದೆ ಎಂಬುದು ಮೇಲ್ನೋಟದ ಲೆಕ್ಕಾಚಾರ. ವಿವರವಾಗಿ ಪರಿಶೀಲಿಸಿದರೆ ಇನ್ನೂ ಒಂದು ₹20 ಸಾವಿರ ಕೋಟಿ ಹೆಚ್ಚಾಗಬಹುದು ಎಂದು ಸರ್ಕಾರ ಹೇಳಿದೆ. 

‘ಮೋದಿ ದೇಶವನ್ನೇ ಮಾರಲಿದ್ದಾರೆ’


ರೈಲ್ವೆ ಖಾಸಗೀಕರಣವನ್ನು ಕಾಂಗ್ರೆಸ್‌ ಪಕ್ಷವು ವಿರೋಧಿಸಿದೆ. ರೈಲ್ವೆಯ ಆಸ್ತಿಯನ್ನು ಕೇಂದ್ರ ಸರ್ಕಾರವು ಮಾರಲು ಹೊರ
ಟಿದೆ. ಜನರಿಗೆ ಕನಸುಗಳನ್ನು ಮಾರುವ ಬಿಜೆಪಿ, ತಳಮಟ್ಟದಲ್ಲಿ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದೆ. ನಾಗರಿಕ ವಿಮಾನಯಾನ ಸಚಿವರು ಏರ್‌ಇಂಡಿಯಾ ಮಾರಲು ಹೊರಟಿದ್ದಾರೆ.

ರೈಲ್ವೆಯ ಆಸ್ತಿಯನ್ನು ರೈಲ್ವೆ ಸಚಿವರು ಮಾರಲು ಹೊರಟಿದ್ದಾರೆ. ಮುಂದೊಂದು ದಿನ ದೇಶವನ್ನೇ ಮೋದಿ ಅವರು ಮಾರಲಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಅವರು ಆರೋಪಿಸಿದರು.

‘ಬುಲೆಟ್‌ ರೈಲು ಸರಿಹೋಗಲ್ಲ’


ಬುಲೆಟ್‌ ರೈಲು ಪರಿಕಲ್ಪನೆಯು ಭಾರತಕ್ಕೆ ಸರಿಹೊಂದಲ್ಲ. ಇದು ಸರ್ಕಾರ ಕೊಟ್ಟಿರುವ ಹುಸಿ ಭರವಸೆ ಎಂದು ಲೋಕಸಭೆಯಲ್ಲಿ ಟಿಎಂಸಿ ಪ್ರತಿಪಾದಿಸಿದೆ. 

ಸರ್ಕಾರವು ಹೈಸ್ಪೀಡ್‌ ರೈಲನ್ನು ಬುಲೆಟ್‌ ರೈಲು ಎಂದು ಹೇಳುತ್ತಿದೆ ಎಂದು ಟಿಎಂಸಿಯ ಸುದೀಪ್‌ ಬಂದೋಪಾಧ್ಯಾಯ ಹೇಳಿದರು. 

ನೂರು ವರ್ಷಗಳಿಗೂ ಹಳೆಯದಾದ ರೈಲ್ವೆ ಸೇತುವೆಗಳು ಬಹಳಷ್ಟಿವೆ. ಇದು ಪ್ರಯಾಣಿಕರ ಸುರಕ್ಷತೆಯ ವಿಚಾರ. ಹಾಗಾಗಿ, ಇದನ್ನು ಪರಿಶೀಲಿಸುವತ್ತ ಸರ್ಕಾರ ಗಮನ ಹರಿಸಬೇಕು. ಅದಲ್ಲದೆ, ಗ್ಯಾಂಗ್‌ಮನ್‌ ಮತ್ತು ಚಾಲಕರ ಕೊರತೆಯೂ ತೀವ್ರವಾಗಿದೆ ಎಂದು ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು