ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿತ್‌ ಪವಾರ್‌ ಬಿಜೆಪಿಯ ದೊಡ್ಡ ಬೇಟೆ

ಪ್ರಾದೇಶಿಕ ಪಕ್ಷಗಳ ಅತೃಪ್ತ ನಾಯಕರಿಗೆ ಗಾಳ l ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಯಶಸ್ವಿಯಾದ ಕಾರ್ಯತಂತ್ರ
Last Updated 24 ನವೆಂಬರ್ 2019, 20:31 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರ ಸ್ವೀಕರಿಸಿರುವ ದೇವೇಂದ್ರ ಫಡಣವೀಸ್‌– ಅಜಿತ್‌ ಪವಾರ್‌ ನೇತೃತ್ವದ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗುವುದೆ ಎಂಬುದು ಈಗಲೂ ಪ್ರಶ್ನೆಯಾಗಿ ಉಳಿದಿದೆ. ಆದರೆ, ಹೊಸ ಬೆಳವಣಿಗೆಯಿಂದ ಖುಷಿಪಡಲು ಬಿಜೆಪಿಗೆ ಒಂದಿಷ್ಟು ಕಾರಣಗಳಂತೂ ಇವೆ.

ಮಹಾರಾಷ್ಟ್ರದ ಬಲಿಷ್ಠ ಮರಾಠಾ ನಾಯಕ ಶರದ್‌ ಪವಾರ್‌ ಅವರ ಶಕ್ತಿಯನ್ನು ಕುಂದಿಸುವಲ್ಲಿ ಯಶಸ್ವಿಯಾಗಿರುವುದು ಒಂದೆಡೆಯಾದರೆ, ಅವರ ಪಾರಂಪರಿಕ ಕ್ಷೇತ್ರಗಳಲ್ಲಿ ಅರ್ಧದಷ್ಟನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ. ಯಾವ ದೃಷ್ಟಿಯಿಂದ ನೋಡಿದರೂ ಅಜಿತ್‌ ಪವಾರ್‌ ಅವರು ಬಿಜೆಪಿಯ ಬಲೆಗೆ ಬಿದ್ದಿರುವ ಬಲಿಷ್ಠ ಬೇಟೆಯಾಗಿ ಕಾಣಿಸುತ್ತಾರೆ.

ಪಕ್ಷದ ಮೇಲೆ ಹಿಡಿತ ಹೊಂದಿರುವ ಮತ್ತು ತಳಮಟ್ಟದಲ್ಲಿ ಬದಲಾವಣೆಗಳನ್ನು ತರಬಲ್ಲ, ಪ್ರಾದೇಶಿಕ ಪಕ್ಷಗಳ ಪ್ರಭಾವಿ ನಾಯಕರ ಮಹತ್ವಾಕಾಂಕ್ಷೆ ಮತ್ತು ಅಸಮಾಧಾನಗಳ ಲಾಭ ಪಡೆಯುವುದು ಬಿಜೆಪಿ ಇತ್ತೀಚೆಗೆ ಅನುಸರಿಸಿದ ತಂತ್ರಗಾರಿಕೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಲ ನೀಡಿದ್ದು ಈ ತಂತ್ರವೇ. ಅಸ್ಸಾಂನಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಿಮಂತ ವಿಶ್ವ ಶರ್ಮಾ ಅವರನ್ನು ಹಾಗೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕ ಮುಕುಲ್‌ ರಾಯ್‌ ಅವರನ್ನು ತನ್ನತ್ತ ಸೆಳೆಯುವ ಮೂಲಕ ಆ ಎರಡೂ ಪಕ್ಷಗಳಿಗೆ ಬಿಜೆಪಿ ಬಿಸಿ ಮುಟ್ಟಿಸಿತ್ತು.

ಶರ್ಮಾ ಮತ್ತು ರಾಯ್‌, ಇಬ್ಬರೂ ತಮ್ಮ ಪಕ್ಷದ ಮೇಲೆ ಹಿಡಿತ ಹೊಂದಿದ್ದರು. ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್‌ ಅವರೂ ಪಕ್ಷದ ಮೇಲೆ ಇಂಥದ್ದೇ ಪ್ರಭಾವ ಹೊಂದಿದ್ದರು. ಈ ಮೂವರಿಗೂ ತಮ್ಮದೇ ಆದ ಮಹತ್ವಾಕಾಂಕ್ಷೆಗಳಿದ್ದವು, ಆದರೆ ಪಕ್ಷದಲ್ಲಿ ಗಡೆಗಣನೆಗೆ ಒಳಗಾದ ಭಾವನೆ ಹೊಂದಿದ್ದರು. ಬಿಜೆಪಿ ತೆರೆಮರೆಯಲ್ಲಿ ನಿಂತು ಇಂಥ ನಾಯಕನ್ನು ಮಾತೃ ಪಕ್ಷದಿಂದ ಬೇರ್ಪಡಿಸಲು ಹೊಂಚುಹಾಕುತ್ತಿತ್ತು.

ಅಸ್ಸಾಂನಲ್ಲಿ ತರುಣ್‌ ಗೊಗೊಯಿ ಬದಲು ಕಾಂಗ್ರೆಸ್‌ ಪಕ್ಷವು ಸಿಎಂ ಹುದ್ದೆಗೆ ತನ್ನ ಹೆಸರನ್ನು ಘೋಷಿಸಬೇಕು ಎಂದು ಶರ್ಮಾ ಬಯಸಿದ್ದರು. ಆದರೆ, ಗೊಗೊಯಿ ಅವರನ್ನೇಕಾಂಗ್ರೆಸ್‌ ನೆಚ್ಚಿಕೊಂಡಿತು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಮಮತಾ ಅವರ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಅವರು ಪಕ್ಷದಲ್ಲಿ ಹೆಚ್ಚು ಅಧಿಕಾರ ಪಡೆಯುತ್ತಿರುವುದರಿಂದ ಮುಕುಲ್‌ ರಾಯ್‌ ಅವರು ಅಭದ್ರ ಭಾವನೆ ಅನುಭವಿಸಿದ್ದರು.

2016ರಲ್ಲಿ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಈಶಾನ್ಯ ರಾಜ್ಯದಲ್ಲಿ ಬಿಜೆಪಿಗೆ ಲಭಿಸಿದ ಮೊದಲ ಗೆಲುವು ಇದಾಗಿತ್ತು. ಇಲ್ಲಿ 2014ರಲ್ಲಿ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯು 2019ರಲ್ಲಿ 18 ಸ್ಥಾನಗಳನ್ನು ಗೆದ್ದುಕೊಂಡಿತು. ಇದರ ಹಿಂದಿನ ಶಕ್ತಿ ಹಿಮಂತ ವಿಶ್ವ ಶರ್ಮಾ ಎಂಬುದು ಸ್ಪಷ್ಟ.

ಎನ್‌ಸಿಪಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಹಾಗೂ ಅಜಿತ್‌ ಪವಾರ್‌ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಟಿಕೆಟ್‌ ಹಂಚಿಕೆಯ ಸಂದರ್ಭದಲ್ಲಿ ಇದು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಿತ್ತು. ಇತ್ತೀಚೆಗೆ ಶಿವಸೇನಾ– ಎನ್‌ಸಿಪಿ– ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಗೆ ಮುಂದಾದಾಗಲೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಲು ಪಕ್ಷ ಮುಂದಾಗಿತ್ತು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಅಜಿತ್‌ ಅವರ ಬೇಸರಕ್ಕೆ ಕಾರಣವಾಗಿದ್ದವು.

ನಾಡಿಮಿಡಿತ ಅರಿತ ನಾಯಕ

ಎನ್‌ಸಿಪಿ ಕಾರ್ಯಕರ್ತರಿಂದ ‘ದಾದಾ’ (ಅಣ್ಣ) ಎಂದೇ ಕರೆಯಿಸಿಕೊಳ್ಳುವ ಅಜಿತ್‌ ಅವರು 2009ರಿಂದ 2014ರ ಅವಧಿಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದರು. ರಾಜ್ಯ ರಾಜಕೀಯದ ನಾಡಿಮಿಡಿತ ಅವರಿಗೆ ತಿಳಿದಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ಸುಪ್ರಿಯಾ ಸುಳೆ ಸ್ಪರ್ಧಿಸಿ ಗೆಲ್ಲುವವರೆಗೂ, ಅಜಿತ್‌ ಅವರು ಎನ್‌ಸಿಪಿಯಲ್ಲಿ ಶರದ್‌ ಪವಾರ್‌ ನಂತರದ ಸ್ಥಾನದಲ್ಲಿದ್ದರು. ಸಂಸದೆಯಾದ ನಂತರ ಸುಪ್ರಿಯಾಗೆ ಪಕ್ಷದಲ್ಲಿ ಉನ್ನತ ಸ್ಥಾನ ಲಭಿಸಲು ಆರಂಭವಾಯಿತು. ಅಜಿತ್‌ ಈಗಲೂ ತಳಮಟ್ಟದ ಜೊತೆ ಸಂಪರ್ಕಹೊಂದಿರುವ ನಾಯಕರಾಗಿದ್ದಾರೆ.

ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಬಿಜೆಪಿ ಇತ್ತೀಚೆಗೆ ಶಕ್ತಿಯನ್ನು ಕಳೆದುಕೊಂಡಿದೆ. ಇಲ್ಲಿ ಎನ್‌ಸಿಪಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ಈಗ ಬಿಜೆಪಿ ಜೊತೆ ಕೈಜೋಡಿಸಿರುವ ಅಜಿತ್‌, ಈ ಲೆಕ್ಕಾಚಾರವನ್ನು ಬದಲಿಸುವ ಶಕ್ತಿ ಹೊಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 24 ಹೊಸ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಇದರಲ್ಲಿ ಆರು ಕ್ಷೇತ್ರಗಳಲ್ಲಿ ಶಿವಸೇನಾ ತ್ಯಜಿಸಿ ಬಿಜೆಪಿಗೆ ಬಂದವರೇ ಗೆದ್ದಿದ್ದಾರೆ. ಇನ್ನು ಮುಂದೆ, ಪಶ್ಚಿಮ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಭದ್ರಕೋಟೆ ಎನಿಸಿರುವ ಅಹಮದ್‌ನಗರ, ಅಕೋಲೆ, ಶಿರೂರ್‌, ಶಿರಡಿ ಹಾಗೂ ಬಾರಾಮತಿ ಭಾಗದಲ್ಲೂ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT