ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡ್ಸೆ ಕುರಿತ ಹೇಳಿಕೆಗಳು ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧವಾದವು: ಅಮಿತ್ ಶಾ

ವರದಿ ಸಲ್ಲಿಸುವಂತೆ ಪಕ್ಷದ ಶಿಸ್ತು ಸಮಿತಿಗೆ ಸೂಚನೆ
Last Updated 17 ಮೇ 2019, 10:03 IST
ಅಕ್ಷರ ಗಾತ್ರ

ನವದೆಹಲಿ:ನಾಥುರಾಂ ಗೋಡ್ಸೆ ಕುರಿತುಸಾಧ್ವಿ ಪ್ರಜ್ಞಾ ಸಿಂಗ್‌ ಸೇರಿದಂತೆ ಕೆಲವು ನಾಯಕರು ನೀಡಿರುವ ಹೇಳಿಕೆಗಳು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದವು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಗೋಡ್ಸೆ ಕುರಿತ ಹೇಳಿಕೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದ್ದಾರೆ. ಜತೆಗೆ, ಈ ವಿಷಯಕ್ಕೆ ಸಂಬಂಧಿಸಿ ಮುಂದಿನ ಕ್ರಮ ಕೈಗೊಳ್ಳುವುದಕ್ಕಾಗಿ 10 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಪಕ್ಷದ ಶಿಸ್ತು ಸಮಿತಿಗೆ ಸೂಚಿಸಿದ್ದಾರೆ.

ನಾಥುರಾಂ ಗೋಡ್ಸೆ ಒಬ್ಬ ದೇಶಭಕ್ತ ಎಂದು ಭೋಪಾಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿದ್ದರು. ಇದಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಗೋಡ್ಸೆ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಹ ಟ್ವೀಟ್ ಮಾಡಿದ್ದು ನಂತರ ಅಳಿಸಿ ಹಾಕಿದ್ದಾರೆ. ಗಾಂಧಿಜಿ ಅವರ ಹತ್ಯೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ, ನನ್ನ ಟ್ವೀಟ್ ಖಾತೆ ನಿನ್ನೆ ಹ್ಯಾಕ್ ಆಗಿದೆ ಎಂದು ಬಳಿಕ ಹೆಗಡೆ ಸಮಜಾಯಿಷಿ ನೀಡಿದ್ದಾರೆ.

ಈ ಮಧ್ಯೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉಗ್ರ ಕಸಬ್, ಗೋಡ್ಸೆ ಜತೆ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರನ್ನು ಹೋಲಿಸಿ ಟ್ವೀಟ್ ಮಾಡಿದ್ದರು. ಇದು ವಿವಾದಕ್ಕೀಡಾಗುತ್ತಿದ್ದಂತೆಯೇ ಟ್ವೀಟ್ಅಳಿಸಿ ಹಾಕಿದ್ದ ಕಟೀಲ್, ಕ್ಷಮೆ ಯಾಚಿಸಿದ್ದರು.

ಹೇಳಿಕೆಗಳು ವೈಯಕ್ತಿಕ:‘ಗೋಡ್ಸೆ ಕುರಿತು ಕೆಲವು ನಾಯಕರು ನೀಡಿರುವ ಹೇಳಿಕೆಗಳಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವು ವೈಯಕ್ತಿಕ ಹೇಳಿಕೆಗಳು. ತಮ್ಮ ಹೇಳಿಕೆಗಳನ್ನು ಅವರು ಹಿಂಪಡೆದಿದ್ದು ಕ್ಷಮೆಯನ್ನೂ ಕೋರಿದ್ದಾರೆ. ಆದರೂ ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕ್ರಮಕೈಗೊಳ್ಳಲಿದೆ’ ಎಂದೂ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT