ಶುಕ್ರವಾರ, ಸೆಪ್ಟೆಂಬರ್ 17, 2021
31 °C

ಅಮಿತ್ ಶಾ ರೋಡ್‌ ಶೋ ಗಲಭೆ: ವೈರಲ್‌ ವಿಡಿಯೊಗಳಲ್ಲಿ ಕಂಡವರು ಯಾರು?

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಲ್ಕತ್ತದಲ್ಲಿ ಅಮಿತ್‌ ಶಾ ರೋಡ್‌ ಶೋ ನಡೆಯುತ್ತಿದ್ದಾಗ ಕಾಲೇಜಿಗೆ ನುಗ್ಗಿ ಗಲಭೆ ನಡೆಸಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೇಸರಿ ಬಣ್ಣದ ಟೀಶರ್ಟ್‌ ಧರಿಸಿದವರು ಹಿಂಸಾಚಾರ ನಡೆಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ರೋಡ್‌ ಶೋ ವೇಳೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರೇ ಹಿಂಸಾಚಾರ ಸೃಷ್ಟಿಸಿದ್ದು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಬುಧವಾರ ಆರೋಪಿಸಿದ್ದಾರೆ.

 

‘ತೃಣಮೂಲ ಕಾಂಗ್ರೆಸ್‌ ವಿದ್ಯಾರ್ಥಿ ಪರಿಷತ್‌’ (ಟಿಎಂಸಿಪಿ) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರೂ ಬಿಜೆಪಿ ಕಾರ್ಯಕರ್ತರು ಯಾವುದೇ ಹಾನಿ ಮಾಡಿಲ್ಲ. ಕಾಲೇಜಿನ ಗೇಟುಗಳು ಮುಚ್ಚಿದ್ದವು, ಕೊಠಡಿಗಳು ಬಂದ್‌ ಆಗಿದ್ದವು... ಯಾರು ಬೀಗ ತೆರೆದರು. ಬಿಜೆಪಿ ಕಾರ್ಯಕರ್ತರು ಯಾರೂ ಕಾಲೇಜಿನೊಳಗೆ ಪ್ರವೇಶಿಸಲಿಲ್ಲ’ ಎಂದು ಶಾ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ಬಾವುಟ ಹಾಗೂ ಕೇಸರಿ ಟೀಶರ್ಟ್‌ ಧರಿಸಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಕೆಲವರು, ಗಲಭೆ ಶುರುವಾಗುತ್ತಿದ್ದಂತೆ ಅಲ್ಲಿಂದ ಚದುರಿದ್ದಾರೆ. ಕೆಲವರು ವಿದ್ಯಾಸಾಗರ ಕಾಲೇಜಿನ ಗೇಟ್‌ ಮುರಿದು ಒಳನುಗ್ಗಿ ಅಲ್ಲಿ ನಿಲ್ಲಿಸಲಾಗಿದ್ದ ಸೈಕಲ್‌ ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯಗಳು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ದಿ ಲಾಜಿಕಲ್‌ ಬೆಂಗಾಲ್‌ ಫೇಸ್‌ಬುಕ್‌ ಪುಟದಲ್ಲಿ ಈ ಘಟನೆ ಕುರಿತ ಸರಣಿ ವಿಡಿಯೊಗಳನ್ನು ಪಬ್ಲಿಷ್‌ ಮಾಡಲಾಗಿದೆ. ಕಾಲೇಜಿನ ಒಳಗೆ ಹೋಗಿ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದು, ವಾಹನಗಳಿಗೆ ಬೆಂಕಿ ಹಚ್ಚುತ್ತಿರುವುದು ಹಾಗೂ ಕಾಲೇಜಿನ ಮೇಲೆ ಕಲ್ಲು ತೂರಾಟ ನಡೆಸಿರುವ ವಿಡಿಯೊಗಳು ಇವೆ.

ಟಿಎಂಸಿ ಫೇಸ್‌ಬುಕ್‌, ಟ್ಟಿಟ್ಟರ್‌ಗೆ ವಿದ್ಯಾಸಾಗರ  ಫ್ರೊಫೈಲ್‌ ಚಿತ್ರ 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಮಾಜ ಸೇವಕ ಈಶ್ವರಚಂದ್ರ ವಿದ್ಯಾಸಾಗರ್ ಅವರು ಚಿತ್ರವನ್ನು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮಗಳ ಫ್ರೊಫೈಲ್‌ಗೆ ಹಾಕಿಕೊಂಡಿದ್ದಾರೆ.

ರೋಡ್‌ ಶೋ ವೇಳೆ ನಡೆದ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರು ವಿದ್ಯಾಸಾಗರ ಕಾಲೇಜಿನಲ್ಲಿದ್ದ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾಗಿ ಟಿಎಂಸಿ ಆರೋಪಿಸಿದೆ.

ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಅಧಿಕೃತ ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ ಖಾತೆಗಳ ಪ್ರೋಫೈಲ್‌ಗೂ ವಿದ್ಯಾಸಾಗರ್ ಅವರ ಚಿತ್ರವನ್ನು ಹಾಕಲಾಗಿದೆ. ಅಲ್ಲದೆ ಟಿಎಂಸಿಯ ಪ್ರಮುಖ ನಾಯಕರು, ಬೆಂಬಲಿಗರು ಸಹ ವಿದ್ಯಾಸಾಗರ್ ಅವರ ಚಿತ್ರವನ್ನು ತಮ್ಮ ಫ್ರೊಫೈಲ್‌ ಚಿತ್ರವನ್ನು ಬದಲಿಸಿಕೊಂಡಿದ್ದಾರೆ.

ಕಾಲೇಜಿಗೆ ಬುಧವಾರ ಭೇಟಿ ನೀಡಿದ ಮಮತಾ ಬ್ಯಾನರ್ಜಿ ಅವರು ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿದರು. ‘ಇದೊಂದು ದೃರಾದೃಷ್ಟಕರ ಘಟನೆ ಮತ್ತು ಇದರಿಂದ ಕಾಲೇಜು ಸಂಪೂರ್ಣ ಧ್ವಂಸವಾಗಿದೆ. ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯೊಂದು ಒಡೆದು ಹೋಗಿದೆ. ಈ ರೀತಿಯ ರಾಜಕೀಯ ಹಿಂಸಾಚಾರವನ್ನು ನಾನು ಕೋಲ್ಕತ್ತದಲ್ಲಿ ಯಾವತ್ತೂ ನೋಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು