ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ವಿಸ್ತಾ ಯೋಜನೆ; ತಳಮಟ್ಟದ ಬದಲಾವಣೆಗೆ ಡಿಡಿಎ ಹೊಣೆ– ಸುಪ್ರೀಂ

Last Updated 19 ಜೂನ್ 2020, 12:09 IST
ಅಕ್ಷರ ಗಾತ್ರ

ನವದೆಹಲಿ: ಸೆಂಟ್ರಲ್‌ ವಿಸ್ತಾ ಯೋಜನೆಯಡಿ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ ವರೆಗಿನ 3 ಕಿ.ಮೀ. ವ್ಯಾಪ್ತಿಯಲ್ಲಿನೆಲಮಟ್ಟದಲ್ಲಿ ಮಾಡುವ ಬದಲಾವಣೆಗೆ ಸಂಬಂಧಪಟ್ಟ ಪ್ರಾಧಿಕಾರವೇ ಹೊಣೆ ಎಂದು‍ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.

ನೂತನ ಸಂಸತ್‌ ಭವನ ಹಾಗೂ ಕೇಂದ್ರ ಸರ್ಕಾರದ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬದಲಾವಣೆಗಳ ಕುರಿತು ಅಧಿಸೂಚನೆ ಹೊರಡಿಸುವ ಮುನ್ನ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮಾಹಿತಿ ನೀಡುವ ಅಗತ್ಯ ಇಲ್ಲ ಎಂಬ ದೆಹಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ನ್ಯಾಯಮೂರ್ತಿಗಳಾದ ದಿನೇಶ್‌ ಮಾಹೇಶ್ವರಿ, ಸಂಜೀವ್‌ ಖನ್ನಾ ಅವರೂ ನ್ಯಾಯಪೀಠದಲ್ಲಿದ್ದಾರೆ.

ಉದ್ದೇಶಿತ ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರದೇಶದಲ್ಲಿ ಹಲವಾರು ರಾಷ್ಟ್ರೀಯ ಸ್ಮಾರಕಗಳು ಇವೆ. ಯೋಜನೆಯಲ್ಲಿನ ಬದಲಾವಣೆಗೆ ಸಂಬಂಧಿಸಿ ಡಿಡಿಎ ಈಗಾಗಲೇ ಎರಡು ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಈ ಪ್ರದೇಶದ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡದಂತೆ ಡಿಡಿಎಗೆ ಸೂಚಿಸಬೇಕು ಎಂದು ಅರ್ಜಿದಾರ ಕೋರಿದ್ದರು.

ರಾಷ್ಟ್ರಪತಿ ಭವನ ಹಾಗೂ ವಿಜಯ್‌ ಚೌಕ್‌ ನಡುವಿನ ಹಸಿರು ಪ್ರದೇಶ ನೂತನ ಕಟ್ಟಡ ನಿರ್ಮಾಣಕ್ಕಾಗಿ ನಾಶವಾಗಲಿದೆ ಎಂದೂ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, ‘ಯೋಜನೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ’ ಎಂದು ತಿಳಿಸಿದರು.

ನ್ಯಾಯಪೀಠ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು. ಬೇರೆ ದೂರುಗಳಿದ್ದಲ್ಲಿ ಅವುಗಳನ್ನು ಸೇರಿಸಿದ ಅರ್ಜಿಯನ್ನು ಜೂನ್‌ 23ರ ಒಳಗಾಗಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ, ಈ ಬಗ್ಗೆ ಜುಲೈ 3ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT