ಭಾನುವಾರ, ಸೆಪ್ಟೆಂಬರ್ 15, 2019
27 °C

ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಇನ್ನಿಲ್ಲ; ಇಂದು ಅಂತ್ಯಕ್ರಿಯೆ

Published:
Updated:

ನವದೆಹಲಿ: ತೀವ್ರ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಾಯಕ ಅರುಣ್ ಜೇಟ್ಲಿ (66) ಅವರು ಶನಿವಾರ ಮಧ್ಯಾಹ್ನ 12.07ರ ಹೊತ್ತಿಗೆ ನಿಧನರಾದರು.

ಅರುಣ್ ಜೇಟ್ಲಿ ಕುರಿತು ಇನ್ನಷ್ಟು... www.prajavani.net/tags/arun-jaitley

ಶನಿವಾರ ಮಧ್ಯಾಹ್ನವೇ ಅವರ ದೇಹವನ್ನು ದೆಹಲಿಯ ಅವರ ನಿವಾಸಕ್ಕೆ ತರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಜೇಟ್ಲಿ ಅವರ ಅಂತಿಮ ದರ್ಶನ ಪಡೆದರು.

ಭಾನುವಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

2018ರಲ್ಲಿ ಜೇಟ್ಲಿ ಅವರು ಮೂತ್ರಪಿಂಡದ ಕಸಿ ಮಾಡಿಸಿಕೊಂಡಿದ್ದರು. ಆಗಿನಿಂದಲೂ ಅವರು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದರು. ಇದೇ ಆಗಸ್ಟ್‌ 9ರ ರಾತ್ರಿ ಉಸಿರಾಟದ ತೊಂದರೆ ಎದುರಿಸಿದ ಕಾರಣ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡವು ಜೇಟ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಅವರ ಆರೋಗ್ಯ ಸುಧಾರಿಸಿರಲಿಲ್ಲ. ಅವರನ್ನು ಜೀವರಕ್ಷಕ ಸಾಧನಗಳಲ್ಲಿ ಇರಿಸಲಾಗಿತ್ತು.

* ತೀಕ್ಷ್ಣಮತಿಯ ವಕೀಲ, ಅನುಭವಿ ರಾಜಕಾರಣಿ, ಸಾಟಿಯೇ ಇಲ್ಲದಂತಹ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಕೊಡುಗೆಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿವೆ

-ರಾಮನಾಥ ಕೋವಿಂದ್, ರಾಷ್ಟ್ರಪತಿ

* ಮೇಧಾವಿ ರಾಜಕಾರಣಿ ಅರುಣ್ ಜೇಟ್ಲಿ ಅವರು ಭಾರತವು ಮರೆಯಲೇ ಅಗದಂತಹ ಕೊಡುಗೆ ನೀಡಿದ್ದಾರೆ. ಅವರ ಸಾವು ಅತ್ಯಂತ ನೋವು ತಂದಿದೆ

-ನರೇಂದ್ರ ಮೋದಿ, ಪ್ರಧಾನಿ

ತೀವ್ರ ನಿಶ್ಯಕ್ತಿ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಗಸ್ಟ್‌ 9ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಹೃದ್ರೋಗ ಹಾಗೂ ಇತರೆ ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು.

ಇದೇ ಜನವರಿಯಲ್ಲಿ ವೈದ್ಯಕೀಯ ತಪಾಸಣೆಗಾಗಿ ಅವರು ನ್ಯೂಯಾರ್ಕ್‌ಗೆ ತೆರಳಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಕಿಡ್ನಿ ಸಮಸ್ಯೆಯಿಂದ ಏಮ್ಸ್‌ಗೆ ದಾಖಲಾಗಿದ್ದ ಅರುಣ್‌ ಜೇಟ್ಲಿ ಮೇನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಜೇಟ್ಲಿ ಅನುಪಸ್ಥಿತಿಯಲ್ಲಿ 2019ರ ಫೆಬ್ರುವರಿ 1ರಂದು ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಅನ್ನು ಸಚಿವ ಪಿಯೂಶ್‌ ಗೋಯಲ್‌ ಮಂಡಿಸಿದ್ದರು. ‌

ಅರುಣ್‌ ಜೇಟ್ಲಿ ಅವರ ಬದುಕಿನ ಹಾದಿ...

ವಕೀಲರಾಗಿ, ಬಿಜೆಪಿ ಪಕ್ಷ ಸಂಘಟನೆಯಲ್ಲಿ ತಮ್ಮದೇ ವಾಕ್ಚಾತುರ್ಯ ಮೆರೆದ ಹಾಗೂ ವಿತ್ತ ಸಚಿವರಾಗಿ ವಿದೇಶಗಳಲ್ಲಿ ಭಾರತದ ಆರ್ಥಿಕ ಚಿಂತನೆಯ ಮಜಲುಗಳನ್ನು ಬಿಚ್ಚಿಟ್ಟು ಪ್ರತಿಪಾದಿಸಿದ ಮತ್ತು ಕರ್ನಾಟಕದ ಜತೆಗೆ ಹಿಂದಿನಿಂದಲೂ ಒಡನಾಟ ಹೊಂದಿದ್ದ ಅರುಣ್‌ ಜೇಟ್ಲಿ ಅವರ ಬದುಕಿನ ಘಟ್ಟಗಳ ಒಂದು ನೋಟ ಇಲ್ಲಿದೆ.  

ಜನನ: 1952 ಡಿಸೆಂಬರ್‌ 28

ಜನ್ಮ ಸ್ಥಳ: ನವದೆಹಲಿ

ತಂದೆ: ಮಹಾರಾಜ್‌ ಕಿಶನ್‌ ಜೇಟ್ಲಿ

ತಾಯಿ: ರತನ್‌ ಪ್ರಭಾ ಜೇಟ್ಲಿ

ವಿವಾಹ: 1982ರ ಮೇ 24 

ಪತ್ನಿ: ಸಂಗೀತಾ ಜೇಟ್ಲಿ

ಮಕ್ಕಳು: ಒಬ್ಬ ಪುತ್ರಿ, ಒಬ್ಬ ಪುತ್ರ

ರಾಜ್ಯ: ಗುಜರಾತ್‌

ಶಾಶ್ವತ ವಿಳಾಸ: 42/ಬಿ, ಬನ್ಸಿಧರ್‌ ಸೊಸೈಟಿ, ಜವಾಹರ್‌ ನಗರ, ವಾಸ್ನಾ, ಪಾಲ್ಡಿ, ಅಹಮದಾಬಾದ್‌. ಪಿನ್: 380007

ಪ್ರಸ್ತುತ ವಿಳಾಸ: ಎ–44, ಕೈಲಾಶ್‌ ಕಾಲೋನಿ, ನವದೆಹಲಿ.

ಶೈಕ್ಷಣಿಕ ಅರ್ಹತೆ: ಬಿ.ಕಾಂ(ಗೌರವ), ಕಾನೂನು ಪದವಿ(ಎಲ್‌ಎಲ್‌ಬಿ) ಶ್ರೀ ರಾಮ್‌ ಕಾಲೇಜ್‌ ಆಫ್‌ ಕಾಮರ್ಸ್‌ ಮತ್ತು ದೆಹಲಿ ವಿಶ್ವವಿದ್ಯಾಲಯ ಕಾನೂನು ವಿಭಾಗ.

ವೃತ್ತಿ ಜೀವನ: ಹಿರಿಯ ವಕೀಲ, ಸುಪ್ರೀಂ ಕೋರ್ಟ್‌

1977ರಿಂದ ವಿವಿಧ ಹೈಕೋರ್ಟ್‌ಗಳಲ್ಲಿ ವಕೀಲ ವೃತ್ತಿ

ಪಕ್ಷ: ಭಾರತೀಯ ಜನತಾ ಪಕ್ಷ(ಬಿಜೆಪಿ)

ಇದನ್ನೂ ಓದಿ: ಕರ್ನಾಟಕದೊಂದಿಗೆ ಜೇಟ್ಲಿ ನಂಟು 

ಹೊಂದಿದ್ದ ಸ್ಥಾನಗಳು: 

1989–1990: ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ 

2000: ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ(ಸ್ವತಂತ್ರ ಖಾತೆ)

ಜುಲೈ 1999–2000: ಅಭಿವೃದ್ಧಿ ಮತ್ತು ಹೂಡಿಕೆ ಇಲಾಖೆ ರಾಜ್ಯ ಸಚಿವ(ಹೆಚ್ಚುವರಿ), (ಸ್ವತಂತ್ರ ಖಾತೆ).

2000:

* ರಾಜ್ಯಸಭೆಗೆ ಆಯ್ಕೆ

* ಜುಲೈ 23: ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿ ನೇಮಕ(ಸ್ವತಂತ್ರ ಖಾತೆ).

* ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವ 

2001: ಸಾಗರಯಾನ ಖಾತೆ ಸಚಿವ(ಹೆಚ್ಚುವರಿ)

2003:

* ‘ಕೋರ್ಟ್‌ ಆಫ್‌ ದೆಹಲಿ ವಿಶ್ವವಿದ್ಯಾಲಯ’ ಸದಸ್ಯ. 

* ಗೃಹ ವ್ಯವಹಾರಗಳ ಸಮಿತಿ, ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯ

* ಕಾನೂನು ಮತ್ತು ನ್ಯಾಯ ಸಚಿವ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ

2004–2009: ಸವಲತ್ತುಗಳ ಸಮಿತಿ ಸದಸ್ಯ

2004–2009: ವಾಣಿಜ್ಯ ಸಮಿತಿ ಸದಸ್ಯ

2009: ಗೃಹ ಸಚಿವಾಲಯ ಸಲಹಾ ಸಮಿತಿ ಸದಸ್ಯ

2006: ಜಾಗತಿಕ ವ್ಯಹಾರಗಳನ್ನು ಗಮನಿಸುವು ಭಾರತೀಯ ಸಂಸ್ಥೆ(ಇಂಡಿಯನ್‌ ಕೌನ್ಸಿಲ್ ಆಫ್‌ ವರ್ಲ್ಡ್)

2006: ರಾಜ್ಯಸಭೆಗೆ ಪುನರ್ ಆಯ್ಕೆ

2008: ಸಾಂವಿಧಾನಿಕ ಮತ್ತು ಕಾನೂನು ಸ್ಥಾನ ಪರಿಶೀಲನಾ ಜಂಟಿ ಸಮಿತಿ

2009:  ರಾಜ್ಯಸಭೆ ವಿಪಕ್ಷ ನಾಯಕ

2009: ಸಂಸತ್‌ ಭವನದ ಸಂಕೀರ್ಣದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಸಂಸದರ ಭಾವಚಿತ್ರಗಳು/ಪ್ರತಿಮೆಗಳ ಸ್ಥಾಪನೆ ಜಂಟಿ ಸಮಿತಿ ಸದಸ್ಯ.

2009 ಮತ್ತು 2012: ಪಾರಂಪರಿಕ ತಾಣಗಳ ನಿರ್ವಹಣೆ ಮತ್ತು ಸಂಸತ್‌ ಭವನದ ಅಭಿವೃದ್ಧಿಯ ಜಂಟಿ ಸಂಸದೀಯ ಸಮಿತಿ ಸದಸ್ಯ

ಪ್ರಕಟವಾದ ಪುಸ್ತಕಗಳು: ಕಾನೂನು ಮತ್ತು ಪ್ರಸ್ತುತ ವ್ಯವಹಾರಗಳ ಹಲವು ಪುಸ್ತಕ ಮತ್ತು ಬರಹಗಳು

ಇತರೆ: ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಸಾಹಿತ್ಯ, ಕಲೆ, ವೈಜ್ಞಾನಿಕ ಮತ್ತಿತರ ವಿಷಯಗಳ ಬಗ್ಗೆ ಆಸಕ್ತಿ. 

ಕ್ರೀಡೆ, ಕ್ಲಬ್‌, ಪ್ರಮುಖ ಸಂಸ್ಥೆಗಳಲ್ಲಿ ಸ್ಥಾನಗಳು: ದೆಹಲಿ ಕ್ರಿಕೆಟ್‌ ಕಮಿಟಿ(ಡಿಡಿಸಿಎ) ಅಧ್ಯಕ್ಷ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಉಪಾಧ್ಯಕ್ಷ. ಇಂಡಿಯನ್‌ ಪ್ರೀಮಿಯರ್‌ ಲೀಗ್(ಐಪಿಎಲ್‌) ಸದಸ್ಯ.

ಭೇಟಿ ನೀಡಿದ ದೇಶಗಳು:  ಅಮೆರಿಕಾ, ಸ್ವಿಜ್ಜರ್‌ಲೆಂಡ್, ಸ್ವೀಡನ್, ರಷ್ಯಾ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಇಂಗ್ಲೆಂಡ್‌, ಡೆನ್ಮಾರ್ಕ್‌, ಫ್ರಾನ್ಸ್, ಅರಬ್‌ ರಾಷ್ಟ್ರಗಳು, ಬ್ರೆಜಿಲ್‌, ಮೆಕ್ಸಿಕೊ, ಈಜಿಪ್ಟ್‌, ಚೀನಾ, ಥೈಲ್ಯಾಂಡ್, ಜಪಾನ್‌, ದಕ್ಷಿಣ ಕೋರಿಯ, ಮಯುನ್ಮಾರ್‌, ಜರ್ಮನಿ, ದಕ್ಷಿಣ ಆಫ್ರಿಕಾ, ಮಿಕ್ಸಿಕೊ ಸೇರಿದಂತೆ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್‌, ಆಫ್ರಿಕಾ ಮತ್ತು ಏಷ್ಯಾದ ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ.

ಇತರ ಚಟುವಟಿಕೆ:

ವಿದ್ಯಾರ್ಥಿ ದಿನಗಳಲ್ಲಿ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. 1974ರಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 

1973: ಜಯಪ್ರಕಾಶ ನಾರಾಯಣ (ಜೆಪಿ) ಅವರು ಸ್ಥಾಪಿಸಿದ ಭ್ರಷ್ಟಾಚಾರ ವಿರುದ್ಧದ ಚಳಚಳಿಯ ಪ್ರಮುಖ ನಾಯಕ. ಜಯಪ್ರಕಾಶ ನಾರಾಯಣ ಅವರಿಂದ ವಿದ್ಯಾರ್ಥಿಗಳ ಮತ್ತು ಯುವ ಸಂಘಟನೆಯ ರಾಷ್ಟ್ರೀಯ ಸಮಿತಿಯ ಸಂಯೋಜಕರಾಗಿ ನೇಮಕ. 

* ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಂತರಿಕ ಭದ್ರತಾ ಕಾಯ್ದೆ(ಎಂಐಎಸ್‌ಎ) ಅಡಿ 19 ತಿಂಗಳು ಬಂಧನಕ್ಕೊಳಗಾಗಿದ್ದರು(1975–77)

* 1977ರಿಂದ ಸುಪ್ರೀಂ ಕೋರ್ಟ್‌ ಮತ್ತು ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ವಕೀಲ ವೃತ್ತಿ.

* 1989ರಲ್ಲಿ ಹಿರಿಯ ವಕೀಲರಾಗಿ ನೇಮಕ

* 1998ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನಕ್ಕೆ ಭಾರತೀಯ ನಿಯೋಗದ ಸದಸ್ಯರಾಗಿ ತೆರಳಿದ್ದರು. ಅಲ್ಲಿ ಮಾದಕ ವಸ್ತು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಕಾನೂನುಗಳನ್ನು ಅನುಮೋದಿಸಲಾಯಿತು.

* ಆದಾಯ ತೆರಿಗೆ ಪಾವತಿ, ಭಾರತದ ಪ್ರಸಾರ ಕಾನೂನುಗಳು, ಹೂಡಿಕೆ ಮತ್ತು ಭಾರತೀಯ ಸಂವಿಧಾನದ ಕಾರ್ಯಗಳ ವಿಮರ್ಶೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಉಪನ್ಯಾಸ ನೀಡಿದ್ದಾರೆ.

* ಲಂಡನ್‌ನಲ್ಲಿ ‘ವೈ ಇಂಡಿಯಾ ಮ್ಯಾಟರ್ಸ್‌’,‘ವೈಬ್ರೆಂಟ್‌ ಗುಜರಾತ್‌ ಗ್ಲೋಬಲ್‌ ಇನ್ವೆಸ್ಟರ್ಸ್‌ ಶೃಂಗಸಭೆ, 2003ರ ಎಫ್‌ಐಸಿಐಐ–ಯುಎನ್‌ಸಿಟಿಎಡಿಯ ಜಂಟಿ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದ್ದಾರೆ.

* 2002ರಲ್ಲಿ ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಷಯದಲ್ಲಿ ಜಮ್ಮು ಮತ್ತು ಕಾಶ್ಮಿರ ಸರ್ಕಾರ ಮತ್ತು ಇತರ ಗುಂಪುಗಳೊಂದಿಗೆ ಚರ್ಚಿಸಲು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನೇಮಕ.

* ಭಾರತೀಯ ಜನತಾ ಪಕ್ಷದಲ್ಲಿ(ಬಿಜೆಪಿ) ವಿವಿಧ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದು, 2004ರ ಜುಲೈನಿಂದ 2009ರ ಜೂನ್‌ ವರೆಗೆ ಪ್ರಧಾನ ಕಾರ್ಯರ್ಶಿಯಾಗಿ ಜವಾಬ್ಧಾರಿ ನಿರ್ವಹಿಸಿದ್ದಾರೆ.

Post Comments (+)