ಸೋಮವಾರ, ಜುಲೈ 4, 2022
21 °C
ಸಭಾ‌ಧ್ಯಕ್ಷರ ಆಕ್ರೋಶದ ಮಾತು

ದರಿದ್ರ, ಹೊಲಸು ಎಲ್ಲವೂ ಹೊರಗೆ ಬರಲಿ: ಸಭಾಧ್ಯಕ್ಷರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೊಟ್ಟೆಯೊಳಗೆ ಇರುವ ಎಲ್ಲ ಹೊಲಸು ಹೊರಗೆ ಬರಲಿ. ನಾನು ಯಾರಿಗೂ ಅಡ್ಡಿ ಮಾಡುವುದಿಲ್ಲ. ಈ ವ್ಯಾಪಾರ, ದರಿದ್ರ ಎಲ್ಲವನ್ನೂ ಇಲ್ಲಿ ಹೇಳಿಕೊಳ್ಳಿ. ಎಲ್ಲವನ್ನೂ ಜನರು ನೋಡಲಿ. ಅವರೇ ತೀರ್ಮಾನ ಮಾಡಲಿ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಆಕ್ರೋಶದಿಂದ ನುಡಿದರು.

ವಿಧಾನಸಭೆಯಲ್ಲಿ ಶುಕ್ರವಾರ ‘ಶಾಸಕರ ಖರೀದಿ’ ಬಗ್ಗೆ ಕೆಲವು ಶಾಸಕರು ಪ್ರಸ್ತಾಪ ಮಾಡಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. ‘ಶಾಂತವೇರಿ ಗೋಪಾಲಗೌಡರಂತಹ ಮಹನೀಯರು ಇದ್ದ ವಿಧಾನಸಭೆಯ ಇದು ಎಂಬ ಅನುಮಾನ ಮೂಡುತ್ತಿದೆ. ಅವರು ಮುಖ್ಯಮಂತ್ರಿ ಆಗಿರಲಿಲ್ಲ. ಬಹಳ ಸಲ ಶಾಸಕರೂ ಆಗಿರಲಿಲ್ಲ. ಅವರಿದ್ದಂತಹ ಭೂಮಿಗೆ ಈ ದರಿದ್ರ ಸ್ಥಿತಿ ಬಂದಿದೆಯಾ’ ಎಂದು ಅವರು ಹೇಳಿದರು.

‘ತಮ್ಮ ಪಕ್ಷದ ಶಾಸಕರ ಮೇಲೆ ಬಿಜೆಪಿಯವರು ಕಾವಲು ಇಟ್ಟಿದ್ದಾರೆ. ನೀವು ಆ ಕೆಲಸವನ್ನೂ ಮಾಡಲಿಲ್ಲವಲ್ಲ. ಅವರ ಮೇಲೆ ನಿಗಾ ಇಡುವ ಸಮಯದಲ್ಲಿ ನಿದ್ದೆ ಮಾಡಿದ್ದೀರಿ’ ಎಂದು ಆಡಳಿತ ಪಕ್ಷದ ನಾಯಕರ ಮೇಲೆಯೂ ಚಾಟಿ ಬೀಸಿದರು.

‘ನಾನು ಇಲ್ಲಿ ಬೆಂಕಿಯ ಮೇಲೆ ಕುಳಿತಿದ್ದೇನೆ. ನನ್ನ ಮಾತು, ತೀರ್ಪು ಇತಿಹಾಸ ಆಗಬೇಕು ಎಂಬುದು ನನ್ನ ಇಚ್ಛೆ. ನಿಯಮ ಬಿಟ್ಟು ನಾನು ಇಂಚೂ ಕದಲುವುದಿಲ್ಲ. ಆದರೂ, ನನ್ನ ವಿರುದ್ಧ ಕೆಲವು ಹಿರಿಯರು ಹಾಗೂ ಕೆಲವರು ಆರೋಪ ಮಾಡಿದ್ದಾರೆ. ಪಕ್ಷಪಾತ ಮಾಡಿ ಬದುಕುವ ಸ್ಥಿತಿ ನನಗೆ ಬಂದಿಲ್ಲ. ನನ್ನ ಚಾರಿತ್ರ್ಯ ವಧೆ ಮಾಡುವವರು ನೂರು ಸಲ ಹಿಂತಿರುಗಿ ನೋಡಿ. ಆಗ ನೀವೇನೂ ಎಂಬುದು ಗೊತ್ತಾಗುತ್ತದೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಪರಿಷತ್: ವಾರ ಪೂರ್ತಿ ಕಲಾಪ ಬಲಿ
ಬೆಂಗಳೂರು: ವಿಧಾನ ಪರಿಷತ್ ಕಲಾಪ ಶುಕ್ರವಾರವೂ ನಡೆಯಲಿಲ್ಲ. ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂಭಾಗದಲ್ಲಿ ಧರಣಿ ಆರಂಭಿಸಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸದನವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ಸದನ ಸೇರುತ್ತಿದ್ದಂತೆ, ಧರಣಿ ಮುಂದುವರಿದ ಕಾರಣ ಮುಂದಕ್ಕೆ ಹಾಕಲಾಯಿತು.

ಜುಲೈ 12ರಂದು ಸಂತಾಪ ಸೂಚಿಸಿದ ನಂತರ ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು. ಐದು ದಿನಗಳ ಕಾಲವೂ ಧರಣಿ ಮುಂದುವರಿದಿದ್ದರಿಂದ ಯಾವುದೇ ಕಲಾಪ ನಡೆಯಲಿಲ್ಲ.

ಇನ್ನಷ್ಟು... 

‘ಅಧಿಕಾರ’ಕ್ಕಾಗಿ ನಿಲ್ಲದ ಹಗ್ಗಜಗ್ಗಾಟ: ರಾಜ್ಯಪಾಲರಿಗೆ ‘ದೋಸ್ತಿ’ ಸಡ್ಡು

ಶಾಸಕರಿಗೆ ಕೋಟಿ ಕೋಟಿ ಆಮಿಷ: ಬಿಜೆಪಿ ವಿರುದ್ಧ ಕಾಂಗ್ರೆಸ್–ಜೆಡಿಎಸ್ ಆರೋಪ

ರಾಜ್ಯಪಾಲರ ವಿರುದ್ಧ ಜೆಡಿಎಸ್‌–ಕಾಂಗ್ರೆಸ್‌ ಶಾಸಕರು ಕಿಡಿ

ಬಿಜೆಪಿ ಮೇಲಿನ ದಾಳಿಗೆ ಮಾಧುಸ್ವಾಮಿ ‘ತಡೆಗೋಡೆ’

ಉಲ್ಟಾ ಹೊಡೆದ ‘ಗುಳ್ಳೆ ನರಿ ಶಾಸ್ತ್ರ’

ಸುಪ್ರೀಂ ಕೋರ್ಟ್‌ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು