ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶು ಜನನ: ಭಾರತದ್ದೇ ದಾಖಲೆ!

Last Updated 2 ಜನವರಿ 2020, 21:52 IST
ಅಕ್ಷರ ಗಾತ್ರ
ADVERTISEMENT
""

ವಿಶ್ವಸಂಸ್ಥೆ: ಹೊಸ ವರ್ಷದ ಮೊದಲ ದಿನ ಭಾರತ ಹೊಸದೊಂದು ದಾಖಲೆ ಬರೆದಿದೆ. ಆ ದಿನ ಭಾರತದಲ್ಲಿ 67,385 ಶಿಶುಗಳು ಜನಿಸಿದ್ದು ಇದು, ವಿಶ್ವದಲ್ಲಿಯೇ ಅತ್ಯಧಿಕ.

ಯುನಿಸೆಫ್‌ನ ಅಂಕಿ ಅಂಶಗಳ ಪ್ರಕಾರ, ‘ಹೊಸ ವರ್ಷದ ಮೊದಲ ದಿನದಂದು ವಿಶ್ವದಾದ್ಯಂತ 3,92,078 ಶಿಶುಗಳು ಜನಿಸಿವೆ’.

ಸದ್ಯಕ್ಕೆ ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ, ಹೊಸ ವರ್ಷದಂದು ಶಿಶುಗಳ ಜನನ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾದಲ್ಲಿ ಆ ದಿನ 46,299 ಶಿಶುಗಳು ಜನಿಸಿವೆ ಎಂದು ಯುನಿಸೆಫ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಹೆನ್ರಿಟ್ಟಾ ಫೊರೆ ತಿಳಿಸಿದ್ದಾರೆ.

2020ರ ಹೊಸ ವರ್ಷದ ಮೊದಲ ದಿನದ ಮೊದಲ ಶಿಶು ಫಿಜಿಯಲ್ಲಿ ಜನಿಸಿದ್ದರೆ, ಕಡೆಯ ಶಿಶು ಅಮೆರಿಕದಲ್ಲಿ ಜನಿಸಿದೆ ಎಂದೂ ಯುನಿಸೆಫ್‌ ತಿಳಿಸಿದೆ.

ನವಜಾತ ಶಿಶುಗಳ ಕುಗ್ಗದ ಮರಣ ಪ್ರಮಾಣ:ಯುನಿಸೆಫ್‌ ಪ್ರತಿವರ್ಷ ಹೊಸ ವರ್ಷದ ಮೊದಲ ದಿನ ಶಿಶುಗಳ ಜನನ ಸಂಭ್ರಮ ಆಚರಿಸಲಿದೆ. ವರ್ಷದ ಮೊದಲ ದಿನ ಶಿಶು ಜನನಕ್ಕೆ ಶುಭಕಾಲ ಎಂಬ ಭಾವನೆ ವಿಶ್ವದ ವಿವಿಧೆಡೆ ಇದೆ. ವಾಸ್ತವವಾಗಿ ಬಹುತೇಕ ಶಿಶುಗಳ ಪಾಲಿಗಂತೂ ಶುಭಗಳಿಗೆ ಆಗಿರುವುದಿಲ್ಲ.

2018ರಲ್ಲಿ ಮೊದಲ ದಿನ ಜನಿಸಿದ್ದ 2.5 ದಶಲಕ್ಷ ಶಿಶುಗಳು ತಿಂಗಳಲ್ಲೇ ಸತ್ತಿದ್ದವು. ಅವಧಿಪೂರ್ವ ಜನನ, ಸುಸೂತ್ರವಾಗದ ಹೆರಿಗೆ, ಸೆಪ್ಸಿಸ್‌ನಂತಹ ಸೋಂಕುಗಳು ಸಾವಿಗೆ ಕಾರಣವಾಗಿದ್ದವು. ಇದರ ಹೊರತಾಗಿ, ಪ್ರತಿ ವರ್ಷ 2.5 ದಶಲಕ್ಷಕ್ಕೂ ಅಧಿಕ ಶಿಶುಗಳು ಜನಿಸುವಾಗಲೇ ಸತ್ತಿರುತ್ತವೆ.

ಯುನಿಸೆಫ್‌ ಪ್ರಕಾರ, ಮಕ್ಕಳ ಉಳಿವಿನ ಪ್ರಮಾಣ ಕಳೆದ ಮೂರು ದಶಕದಲ್ಲಿ ಏರಿದೆ. ವಿಶ್ವದಾದ್ಯಂತ ಐದನೇ ವರ್ಷದ ಜನ್ಮದಿನಕ್ಕೂ ಮೊದಲೇ ಅಸುನೀಗುವ ಮಕ್ಕಳ ಪ್ರಮಾಣ ಕುಗ್ಗಿದೆ.

ಆದರೆ, ನವಜಾತ ಶಿಶುಗಳ ವಿಷಯದಲ್ಲಿ ಸುಧಾರಣೆ ಕಂಡುಬಂದಿಲ್ಲ. 2018ರಲ್ಲಿ ಶೇ 47ರಷ್ಟು ಶಿಶುಗಳು ಮೊದಲ ತಿಂಗಳಲ್ಲೇ ಮೃತಪಟ್ಟಿವೆ. 1990ರಲ್ಲಿ ಈ ಪ್ರಮಾಣ ಶೇ 40ರಷ್ಟಿತ್ತು.

ಚೀನಾ ಮೀರಿಸುವುದೇ ಭಾರತ?
ವಿಶ್ವಸಂಸ್ಥೆ: ಭಾರತ ಜನಸಂಖ್ಯೆಯಲ್ಲಿ 2027ರ ವೇಳೆಗೆ ಚೀನಾವನ್ನು ಮೀರಿಸುವ ನಿರೀಕ್ಷೆಗಳಿವೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ.

ಭಾರತದ ಜನಸಂಖ್ಯೆ 2019 ಮತ್ತು 2050ರ ನಡುವೆ 27.3 ಕೋಟಿಯಷ್ಟು ವೃದ್ಧಿಯಾಗಲಿದೆ. ಅಂತೆಯೇ, ನೈಜಿರಿಯಾದಲ್ಲಿ 20 ಕೋಟಿ ಹೆಚ್ಚಲಿದೆ. ವಿಶ್ವದ ಜನಸಂಖ್ಯೆಗೆ ಈ ಎರಡೂ ದೇಶಗಳ ಪಾಲು 2050ರ ವೇಳೆಗೆ ಶೇ 23ರಷ್ಟಿರಲಿದೆ.

ಜನಸಂಖ್ಯೆಯಲ್ಲಿ ಪ್ರಸ್ತುತ ಚೀನಾ, ಭಾರತ ಅಗ್ರಸ್ಥಾನದಲ್ಲಿವೆ. 2019ರ ಅಂಕಿ ಅಂಶದ ಪ್ರಕಾರ, ಚೀನಾದ ಜನಸಂಖ್ಯೆ 143 ಕೋಟಿ, ಭಾರತದ ಜನಸಂಖ್ಯೆ 137 ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT