ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’

7

ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’

Published:
Updated:

‘ಅಜಾತಶತ್ರು’. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಪಕ್ಷಾತೀತವಾಗಿ ಚಾಲ್ತಿಯಲ್ಲಿರುವ ಶಬ್ದವಿದು. ಇದು ಭಾರತಕ್ಕಷ್ಟೇ ಸೀಮಿತವಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಅಜಾತಶತ್ರುವೇ. ದೇಶದ ಗಡಿಯಾಚೆಗೂ ಅವರು ಚಾಚಿದ್ದ ಸ್ನೇಹ ಹಸ್ತವೇ ಅದಕ್ಕೆ ಸಾಕ್ಷಿ. ಭಾರತದ ಬದ್ಧ ವೈರಿ ಎಂದೇ ಗುರುತಿಸಿಕೊಂಡು ಬಂದಿರುವ ಪಾಕಿಸ್ತಾನದ ಜತೆಗೂ ಬಾಂಧವ್ಯ ವೃದ್ಧಿಗೆ ಸಿಕ್ಕ ಸಣ್ಣ ಅವಕಾಶವನ್ನೂ ವಾಜಪೇಯಿಯವರು ನಿರ್ಲಕ್ಷಿಸುತ್ತಿರಲಿಲ್ಲ. ಇದಕ್ಕೆ ಹಲವು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ತಮ್ಮ ನೇತೃತ್ವದಲ್ಲಿ ಆರಂಭಿಸಲಾಗಿದ್ದ ದೆಹಲಿ–ಲಾಹೋರ್ ಬಸ್‌ ಸಂಪರ್ಕವನ್ನು ಕಾರ್ಗಿಲ್ ಕದನ ನಡೆದಾಗಲೂ ಕಡಿದುಕೊಳ್ಳಲು ಅವರು ಮುಂದಾಗಿರಲಿಲ್ಲ. ಹೇಗಾದರೂ ಸರಿ, ನೆರೆ ರಾಷ್ಟ್ರದ ಜತೆ ಸ್ನೇಹದಿಂದ ಇರಬೇಕು ಎಂಬುದೇ ಅವರ ಆಶಯವಾಗಿತ್ತು ಎಂಬುದಕ್ಕೆ ಇದೊಂದು ನಿದರ್ಶನ.

ಬಸ್‌ನಲ್ಲಿ ಲಾಹೋರ್‌ಗೆ ತೆರಳಿದ್ದ ಶಾಂತಿದೂತ!

ವಾಜಪೇಯಿ ಅವರು ಎರಡನೇ ಬಾರಿ ಪ್ರಧಾನಿಯಾಗಿದ್ದ ಸಂದರ್ಭ. ಭಾರತ–ಪಾಕಿಸ್ತಾನ ನಡುವಣ ಸಂಬಂಧ ಹದಗೆಡುತ್ತಾ ಸಾಗಿದ್ದ ಸಮಯವದು. 1988ರಲ್ಲಿ ಭಾರತ ನಡೆಸಿದ್ದ ಪೋಖ್ರಣ್ ಅಣ್ವಸ್ತ್ರ ಪರೀಕ್ಷೆ ಮತ್ತು ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಚಘೈಹಿಲ್ಸ್‌ನಲ್ಲಿ ನಡೆಸಿದ್ದ ಅಣ್ವಸ್ತ್ರ ಪರೀಕ್ಷೆಗಳಿಂದ ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಹಳಸಿತ್ತು. ಅಂತಹ ಸನ್ನಿವೇಶದಲ್ಲೂ ಪಾಕಿಸ್ತಾನದ ಜತೆ ಸ್ನೇಹ ಹಸ್ತಚಾಚಲು ಮುಂದಾಗಿದ್ದರು ವಾಜಪೇಯಿ. ಇದರ ಫಲವೇ ಲಾಹೋರ್ ಒಪ್ಪಂದ ಮತ್ತು ದೆಹಲಿ–ಲಾಹೋರ್ ನಡುವಣ ಬಸ್‌ ಸೇವೆಯ ಆರಂಭ.

1999ರ ಫೆಬ್ರುವರಿ 19ರಂದು ದೆಹಲಿ–ಲಾಹೋರ್ ಬಸ್‌ ಸೇವೆ ಆರಂಭಗೊಂಡಿತು. ವಾಜಪೇಯಿ ಅವರು ಬಸ್‌ನಲ್ಲಿ ಲಾಹೋರ್‌ಗೆ ಸಂಚರಿಸುವ ಮೂಲಕ ವಿಶ್ವದ ಗಮನ ಸೆಳೆದರು. ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಶರೀಫ್ ಅವರು ವಾಜಪೇಯಿ ಅವರನ್ನು ಲಾಹೋರ್‌ನಲ್ಲಿ ಸ್ವಾಗತಿಸಿದರು. ಸ್ವಾತಂತ್ರ್ಯಾನಂತರ ಎರಡೂ ರಾಷ್ಟ್ರಗಳ ನಡುವೆ ಕಡಿತಗೊಂಡಿದ್ದ ಸಾರಿಗೆ ಸಂಪರ್ಕವನ್ನು (1976ರಲ್ಲಿ ಸಂಝೋತಾ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭವಾಗಿದ್ದು ಬಿಟ್ಟರೆ ಬೇರೆ ಸಾರಿಗೆ ಸಂಪರ್ಕ ಇರಲಿಲ್ಲ) ಮತ್ತೆ ಆರಂಭಿಸುವ ನಿಟ್ಟಿನಲ್ಲಿ ವಾಜಪೇಯಿ ಕೈಗೊಂಡ ಮಹತ್ವದ ನಿರ್ಧಾರ ಇದಾಗಿತ್ತು. ವಾಘಾ ಗಡಿಯ ಮೂಲಕ ಸಂಚರಿಸುವ ಈ ಬಸ್‌ ಸೇವೆ ಉಭಯ ರಾಷ್ಟ್ರಗಳ ನಾಗರಿಕರಿಗೆ ನೆರೆ ರಾಷ್ಟ್ರದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗುವ ಸದವಕಾಶ ಕಲ್ಪಿಸಿತು.

1999ರ ಮೇನಲ್ಲಿ ಕಾರ್ಗಿಲ್‌ ಕದನ ನಡೆಯಿತು. ಆದರೂ ಬಸ್‌ ಸೇವೆ ಮುಂದುವರಿದೇ ಇತ್ತು! 2001ರಲ್ಲಿ ಭಾರತದ ಸಂಸತ್‌ ಮೇಲೆ ಉಗ್ರರು ದಾಳಿ ನಡೆಸಿದ ನಂತರ ದೆಹಲಿ–ಲಾಹೋರ್ ಬಸ್ ಸೇವೆಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾಯಿತು.

ಐತಿಹಾಸಿಕ ಲಾಹೋರ್ ಒಪ್ಪಂದದ ಹರಿಕಾರ

ಆಕಸ್ಮಿಕ ಮತ್ತು ಅನಧಿಕೃತವಾಗಿ ಅಣ್ವಸ್ತ್ರ ಬಳಕೆ ತಡೆಗೆ ಎರಡೂ ರಾಷ್ಟ್ರಗಳು ಮಾಡಿಕೊಂಡ ಮಹತ್ವದ ಒಪ್ಪಂದ ಇದಾಗಿದೆ. 1999ರ ಫೆಬ್ರುವರಿ 21ರಂದು ಲಾಹೋರ್‌ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ವಾಜಪೇಯಿ ಮತ್ತು ನವಾಜ್ ಶರೀಫ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಜತೆಗೆ, 1998ರಲ್ಲಿ ಉಭಯ ರಾಷ್ಟ್ರಗಳು ಮಾಡಿಕೊಂಡಿದ್ದ ಅಣ್ವಸ್ತ್ರ ಅತಿಕ್ರಮಣ ತಡೆ ಒಪ್ಪಂದವನ್ನು (ಎನ್‌ಎನ್‌ಎಎ) ಮುಂದುವರಿಸಿಕೊಂಡು ಹೋಗಲೂ ನಿರ್ಧರಿಸಲಾಯಿತು. ಈ ಒಪ್ಪಂದಕ್ಕೆ ಅಂತರರಾಷ್ಟ್ರೀಯ ಸಮುದಾಯದಿಂದ ಶ್ಲಾಘನೆ ವ್ಯಕ್ತವಾಯಿತು.

ಇತ್ತ ಭಾರತದಲ್ಲಿ ವಾಜಪೇಯಿ ಸರ್ಕಾರದ ಜನಪ್ರಿಯತೆ ಹೆಚ್ಚಾಯಿತು. ರಾಜಕೀಯವಾಗಿ ತಾನೊಬ್ಬ ಗಟ್ಟಿ ನಿಲುವಿನ ವ್ಯಕ್ತಿ ಎಂಬುದನ್ನೂ ಈ ಒಪ್ಪಂದದ ಮೂಲಕ ವಾಜಪೇಯಿ ತೋರಿಸಿಕೊಟ್ಟರು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು.


ಲಾಹೋರ್ ಒಪ್ಪಂದದ ಸಂದರ್ಭ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಜತೆ ಅಟಲ್ ಬಿಹಾರಿ ವಾಜಪೇಯಿ

ಬೆನ್ನಿಗೆ ಇರಿದ ಪಾಕಿಸ್ತಾನ, ಘಟಿಸಿತು ಕಾರ್ಗಿಲ್ ಕದನ!

ಒಂದೆಡೆ ವಾಜಪೇಯಿ ನೆರೆ ರಾಷ್ಟ್ರದೊಂದಿಗೆ ಸ್ನೇಹ ವೃದ್ಧಿಗೆ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ ಅತ್ತ ಪಾಕಿಸ್ತಾನ ಬೆನ್ನಿಗೆ ಇರಿಯುವ ಕೆಲಸ ಮಾಡಿತು (ಅಂದಿನ ಪ್ರಧಾನಿ ನವಾಜ್ ಷರೀಫ್ ಅವರೇ ಇದನ್ನು 2016ರಲ್ಲಿ ಒಪ್ಪಿಕೊಂಡಿದ್ದಾರೆ).

ದೆಹಲಿ–ಲಾಹೋರ್ ಬಸ್‌ ಸೇವೆ ಆರಂಭಗೊಂಡ ಕೆಲವೇ ತಿಂಗಳುಗಳಲ್ಲಿ, ಅಂದರೆ 1999ರ ಮೇ ತಿಂಗಳಿನಲ್ಲಿ ಪಾಕಿಸ್ತಾನದ ಸೈನಿಕರು ಮತ್ತು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದರು. ತಡಮಾಡದ ವಾಜಪೇಯಿ ಅವರು ‘ಆಪರೇಷನ್ ವಿಜಯ್’ ಘೋಷಿಸಿದರು. ನಂತರ ನಡೆದ ಸೇನಾ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನಿ ಪಡೆಗಳು ಅತಿಕ್ರಮಿಸಿಕೊಂಡಿದ್ದ ಕೆಲವು ಪ್ರದೇಶಗಳನ್ನು ಮರುವಶಪಡಿಸಿಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ನಂತರ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸೇನೆಯನ್ನು ಹಿಂಪಡೆಯಿತು. ಜುಲೈನಲ್ಲಿ ಕದನವಿರಾಮ ಏರ್ಪಟ್ಟಿತು.

ಮೊದಲಿಗೆ, ಕಾರ್ಗಿಲ್ ಕದನಕ್ಕೆ ಕಾಶ್ಮೀರಿ ಉಗ್ರಗಾಮಿಗಳ ಮೇಲೆ ಪಾಕಿಸ್ತಾನ ಗೂಬೆಕೂರಿಸಿತ್ತು. ಆದರೆ, ನಂತರದ ಬೆಳವಣಿಗೆಗಳಿಂದ ಪಾಕಿಸ್ತಾನ ಸೇನೆಯ ಕೈವಾಡ ಇರುವುದು ದೃಢಪಟ್ಟಿತ್ತು.

‘ನನ್ನ ಬೆನ್ನಿಗೆ ಇರಿದಿರಿ ನೀವು...’

‘ಲಾಹೋರ್‌ ಒಪ್ಪಂದ ಘೋಷಿಸಿದ ತಕ್ಷಣವೇ ಕಾರ್ಗಿಲ್‌ನಲ್ಲಿ ದುಸ್ಸಾಹಸಕ್ಕೆ ಕೈಹಾಕಿ ನೀವು ನನ್ನ ಬೆನ್ನಿಗೆ ಇರಿದಿರಿ.’ ಹೀಗೆಂದು ವಾಜಪೇಯಿ ಅವರು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಜತೆ ಬೇಸರ ವ್ಯಕ್ತಪಡಿಸಿದ್ದರಂತೆ. ಇದನ್ನು ಷರೀಫ್ ಅವರೇ ಹೇಳಿಕೊಂಡಿದ್ದಾರೆ.

2016ರ ಫೆಬ್ರುವರಿಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ್ದ ಷರೀಫ್ ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. ಜತೆಗೆ, ‘ನಿಮ್ಮ ಜಾಗದಲ್ಲಿ ನಾನೇ ಇದ್ದಿದ್ದರೂ ಅದೇ ಮಾತು ಹೇಳುತ್ತಿದ್ದೆ ಎಂದು ವಾಜಪೇಯಿ ಅವರಿಗೆ ಉತ್ತರಿಸಿದ್ದೆ’ ಎಂದೂ ನೆನಪಿಸಿಕೊಂಡಿದ್ದಾರೆ.

ಪಟ್ಟುಬಿಡದ ಮುಷರಫ್, ವಿಫಲವಾದ ಆಗ್ರಾ ಶೃಂಗಸಭೆ

ಪಾಕಿಸ್ತಾನದ ಜತೆ ಬಾಂಧವ್ಯದ ಬೆಸುಗೆ ಗಟ್ಟಿಗೊಳಿಸಬೇಕು ಎಂಬ ವಾಜಪೇಯಿ ಅವರ ಪ್ರಬಲ ಇಚ್ಛಾಶಕ್ತಿಯ ಕೊನೆಯ ಪ್ರಯತ್ನದ ಫಲವೇ ಆಗ್ರಾ ಶೃಂಗಸಭೆ. 2001ರ ಜುಲೈ14ರಿಂದ 16ರ ವರೆಗೆ ನಡೆದ ಶೃಂಗಸಭೆಯಲ್ಲಿ ವಾಜಪೇಯಿ ಮತ್ತು ಪಾಕಿಸ್ತಾನದ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಮಾತುಕತೆ ನಡೆಸಿದ್ದರು. ಉಭಯ ರಾಷ್ಟ್ರಗಳ ನಡುವೆ ದೀರ್ಘಕಾಲದಿಂದ ಇರುವ ವೈಮನಸ್ಸನ್ನು, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಶೃಂಗಸಭೆ ಆಯೋಜನೆಯಾಗಿತ್ತು.

ಆದರೆ, ಕಾಶ್ಮೀರ ಸಮಸ್ಯೆ ಮೊದಲು ಬಗೆಹರಿಸಬೇಕು ಎಂಬ ವಾದ ಮುಷರಫ್ ಅವರದ್ದಾಗಿತ್ತು. ಗಡಿಯಾಚೆ ತರಬೇತಿ ಪಡೆದು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನೆಸಗುವ ಭಯೋತ್ಪಾದಕರನ್ನು ಮಟ್ಟಹಾಕಬೇಕು. ಭಯೋತ್ಪಾದನೆ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂಬುದು ವಾಜಪೇಯಿ ಅವರ ನಿಲುವಾಗಿತ್ತು. ಕೊನೆಗೆ ಇವೆರಡೇ ವಿಷಯಗಳ ಚರ್ಚೆಯೊಂದಿಗೆ ಶೃಂಗಸಭೆ ಅಂತ್ಯಗೊಂಡಿತು. ಆಗ್ರಾ ಘೋಷಣೆಯ ಕರಡು ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದಂತೆಯೇ, ನಮ್ಮ ಅಧ್ಯಕ್ಷರು ಅದಕ್ಕೆ ಸಹಿ ಹಾಕದೇ ಹಿಂತಿರುಗುತ್ತಾರೆ ಎಂದಿತು ಪಾಕಿಸ್ತಾನ ಸರ್ಕಾರ. ಶೃಂಗಸಭೆ ವಿಫಲವಾಯಿತು.

ಇದಾದ ಕೆಲವೇ ತಿಂಗಳುಗಳಲ್ಲಿ, ಅಂದರೆ 2001ರ ಡಿಸೆಂಬರ್‌ 13ರಂದು ಭಾರತದ ಸಂಸತ್‌ ಭವನದ ಮೇಲೆ ಪಾಕಿಸ್ತಾನ ಮೂಲದ ಉಗ್ರರು ದಾಳಿ ನಡೆಸಿದರು. ನೆರೆ ರಾಷ್ಟ್ರದ ಜತೆ ಹೇಗಾದರೂ ಮಾಡಿ ಸ್ನೇಹದಿಂದ ಇರಬೇಕೆಂಬ ವಾಜಪೇಯಿ ಅವರ ಕನಸನ್ನು ಈ ದಾಳಿ ಮತ್ತಷ್ಟು ಮಬ್ಬಾಗಿಸಿತು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !