ಶುಕ್ರವಾರ, ಮೇ 29, 2020
27 °C
ಬಾಬರಿ ಮಸೀದಿ ವಿವಾದ ವಿಚಾರಣೆ ಸಂವಿಧಾನ ಪೀಠಕ್ಕಿಲ್ಲ;

ಅಯೋಧ್ಯೆ ತೀರ್ಪು: ಇಸ್ಲಾಂಗೆ ಮಸೀದಿ ಹಂಗಿಲ್ಲ,1994ರ ತೀರ್ಪು ಎತ್ತಿಹಿಡಿದ ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದವನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಶಿಫಾರಸು ಮಾಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಈ ಹಿಂದೆ 1994ರಲ್ಲಿ ಇಸ್ಮಾಯಿಲ್‌ ಫಾರೂಕಿ ಪ್ರಕರಣದಲ್ಲಿ ನೀಡಿದ್ದ ‘ಮಸೀದಿಯು ಇಸ್ಲಾಂ‌ ಧರ್ಮದ ಅಂತರ್ಗತ ಅಂಶವಲ್ಲ’ ಎಂಬ ತೀರ್ಪನ್ನು ಮರು ಪರಿಶೀಲಿಸುವ ಬೇಡಿಕೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ 2:1 ಬಹುಮತದಲ್ಲಿ ತಳ್ಳಿ ಹಾಕಿದೆ.

ಸಾಕ್ಷ್ಯಾಧಾರಗಳ ಆಧಾರ ಮತ್ತು ಕಾನೂನುಬದ್ಧ ಅಂಶಗಳ ಮೇಲೆ ಸಿವಿಲ್‌ ದಾವೆಗಳು ನಿರ್ಧಾರವಾಗುತ್ತವೆ. ಈ ಪ್ರಕರಣಕ್ಕೂ ಹಿಂದೆ ತಾನು ನೀಡಿದ್ದ ತೀರ್ಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೋರ್ಟ್‌ ಹೇಳಿದೆ.

15ನೇ ಶತಮಾನದ ಬಾಬರಿ ಮಸೀದಿಯನ್ನು ಕರಸೇವಕರು 1992ರಲ್ಲಿ ನೆಲಸಮಗೊಳಿಸಿದ ನಂತರ, ಈ ವಿವಾದಾತ್ಮಕ ನಿವೇಶನವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಸಮನಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು.

2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ನ್ಯಾಯಪೀಠದಲ್ಲಿ ಭಿನ್ನ ಅಭಿಮತ: ‘ಪ್ರಾರ್ಥನೆ (ನಮಾಜ್‌) ಸಲ್ಲಿಸಲು ಮುಸ್ಲಿಮರಿಗೆ ಮಸೀದಿಯೇ ಬೇಕು ಎಂದೇನಿಲ್ಲ. ಎಲ್ಲಿ ಬೇಕಾದರೂ ಪ್ರಾರ್ಥನೆ ಸಲ್ಲಿಸಬಹುದು. ಮಸೀದಿಯು ಇಸ್ಲಾಂ ಧರ್ಮದ ಅಂತರ್ಗತವಲ್ಲ. ಬಯಲಿನಲ್ಲಿಯೂ ನಮಾಜ್‌ ಮಾಡಲು ಅವಕಾಶವಿದೆ’ ಎಂದು ಎಂದು ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ತಮ್ಮ ತೀರ್ಪು ಓದಿದರು.

ಆದರೆ, ಇದನ್ನು ಒಪ್ಪದ ಮೂರನೇ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌, ‘ಮಸೀದಿಯು ಇಸ್ಲಾಂ‌ ಧರ್ಮದ ಅಂತರ್ಗತ ವಿಚಾರದ ಇತ್ಯರ್ಥದಲ್ಲಿ ಧಾರ್ಮಿಕ ನಂಬುಗೆ ಮತ್ತು ಸಿದ್ಧಾಂತಗಳನ್ನು ಸಮಗ್ರವಾಗಿ ಪರಿಗಣಿಸಬೇಕಾಗುತ್ತದೆ’ ಎಂದು ಭಿನ್ನ ತೀರ್ಪು ನೀಡಿದರು.

ಮಹಿಳಾ ಸುನ್ನತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ತೀರ್ಪನ್ನು ಪ್ರಸ್ತಾಪ ಮಾಡಿದ ನಜೀರ್‌, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಬೇಕು ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

**

ಅ. 29ರಿಂದ ವಿಚಾರಣೆ

ಪ್ರಕರಣದ ವಿಚಾರಣೆ ನಡೆಸುತ್ತಿರುವ ಮಿಶ್ರಾ ಇದೇ ಅ. 2ರಂದು ನಿವೃತ್ತರಾಗಲಿದ್ದಾರೆ. ಹೀಗಾಗಿ ಮೂವರು ನ್ಯಾಯಮೂರ್ತಿಗಳ ಹೊಸ ನ್ಯಾಯಪೀಠ ಅಕ್ಟೋಬರ್‌ 29ರಿಂದ ಪ್ರಕರಣದ ವಿಚಾರಣೆ ಆರಂಭಿಸಲಿದೆ.

**

ಅಯೋಧ್ಯೆ ಹಿಂದೂ ಧರ್ಮ ಕೇಂದ್ರ

ಲಖನೌ: ಅಯೋಧ್ಯೆಯ ರಾಮ ಜನ್ಮಭೂಮಿ– ಬಾಬರಿ ಮಸೀದಿ ವಿವಾದಾತ್ಮಕ ನಿವೇಶನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಧಾರ್ಮಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಇದು ಧರ್ಮಕ್ಕೆ ಸಂಬಂಧಿಸಿದ ವಿವಾದವಲ್ಲ. ಅಯೋಧ್ಯೆಯ ರಾಮ ಜನ್ಮಭೂಮಿ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳ. ಕ್ರೈಸ್ತರಿಗೆ ವ್ಯಾಟಿಕನ್‌ನಂತೆ ಮುಸ್ಲಿಮರಿಗೆ ಮೆಕ್ಕಾ ಧಾರ್ಮಿಕ ಸ್ಥಳವೇ ಹೊರತು ಅಯೋಧ್ಯೆ ಅಲ್ಲ. ಇದಕ್ಕೆ ಅನಗತ್ಯವಾಗಿ ಧರ್ಮದ ಬಣ್ಣ ಬಳಿಯಲಾಗಿದೆ. ಕೊನೆಗೆ ಭೂ ವಿವಾದದ ಸ್ವರೂಪ ಪಡೆದಿದೆ’ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ವಿವಾದಿತ ಸ್ಥಳದಲ್ಲಿ ಆದಷ್ಟೂ ಬೇಗ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಮುಖಂಡ ರಾಂ ವಿಲಾಸ್‌ ವೇದಾಂತಿ ಪ್ರತಿಕ್ರಿಯಿಸಿದ್ದಾರೆ.

ಮಸೀದಿ ಇಸ್ಲಾಂ ಧರ್ಮದ ಅಂಗ. ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸದಸ್ಯ ಮೌಲಾನಾ ಖಾಲಿದ್‌ ರಶೀದ್‌ ಫೀರಂಗಿಮಹಾಲಿ ಹೇಳಿದ್ದಾರೆ.

**

‘ತೀರ್ಪು ನಮ್ಮ ಪರವಾಗೇ ಇದೆ’

ಅಯೋಧ್ಯೆ: ಸುಪ್ರೀಂ ಕೋರ್ಟ್‌ ತೀರ್ಪನ್ನು ಮುಸ್ಲಿಂ ಸಂಘಟನೆಗಳು ಸ್ವಾಗತಿಸಿವೆ. ‘ಈ ತೀರ್ಪು ನಮ್ಮ ಪರವಾಗಿಯೇ ಬಂದಿದೆ’ ಎಂದು ಅಯೋಧ್ಯೆ ಪ್ರಕರಣದಲ್ಲಿ ವಾದಿಗಳಾಗಿರುವ ಮುಸ್ಲಿಂ ಸಂಘಟನೆಗಳು ಹೇಳಿವೆ.

‘ಸುಪ್ರೀಂ ಕೋರ್ಟ್‌ ಗುರುವಾರ ನೀಡಿರುವ ತೀರ್ಪು ಮಸೀದಿಗಾಗಿ ಭೂಸ್ವಾಧೀನ ಮಾಡಿಕೊಳ್ಳುವ ವ್ಯಾಜ್ಯಕ್ಕೆ ಸಂಬಂಧಿಸಿದ್ದು. ನಮ್ಮ ಹೋರಾಟ ಇರುವುದು ಬಾಬ್ರಿ ಮಸೀದಿ ಸ್ಥಳ ಯಾರಿಗೆ ಸೇರಬೇಕು ಎಂಬುದರ ಬಗ್ಗೆ. ಗುರುವಾರದ ತೀರ್ಪು ಮುಖ್ಯ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ’ ಎಂದು ವಾದಿಗಳಲ್ಲಿ ಒಬ್ಬರಾದ ಖಾಲಿಕ್ ಅಹಮದ್ ಖಾನ್ ಹೇಳಿದ್ದಾರೆ.

‘ದಾಖಲೆಗಳ ಆಧಾರದಲ್ಲಿ ವಿಚಾರಣೆ ನಡೆಸುತ್ತೇವೆ, ಧಾರ್ಮಿಕ ನಂಬಿಕೆಯ ಮೇಲಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಗುರುವಾರದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಆ ಜಾಗದಲ್ಲಿದ್ದ ಮಂದಿರವನ್ನು ಕೆಡವಿ, ಬಾಬ್ರಿ ಮಸೀದಿ ಕಟ್ಟಲಾಗಿತ್ತು ಎಂಬ ವಾದಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ನಾವು ಕಂದಾಯದ ದಾಖಲೆಗಳನ್ನು ಇಟ್ಟುಕೊಂಡು ಹೋರಾಡುತ್ತಿದ್ದೇವೆ. ಹೀಗಾಗಿ ಈ ತೀರ್ಪು ನಮ್ಮ ಪರವಾಗೇ ಇದೆ’ ಎಂದು ಸುನ್ನಿ ವಕ್ಫ್ ಮಂಡಳಿ ಹೇಳಿದೆ.

**

ರಾಮಮಂದಿರ–ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು ಮತ್ತು ಸರ್ಕಾರ ಅದನ್ನು ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಹೇಳುತ್ತಲೇ ಬಂದಿದೆ.
–ಕಾಂಗ್ರೆಸ್

**

ರಾಮಜನ್ಮ ಭೂಮಿ ವಿವಾದ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 29ರಂದೇ ಆರಂಭಿಸುತ್ತೇವೆ ಎಂಬುದನ್ನು ಸುಪ್ರೀಂ ಕೋರ್ಟ್ ದೃಢಪಡಿಸಿದೆ. ಈ ಪ್ರಕರಣದ ತೀರ್ಪೂ ಶೀಘ್ರವೇ ಬರಲಿದೆ ಎಂದು ನಿರೀಕ್ಷಿಸಿದ್ದೇವೆ.
–ರಾಷ್ಟ್ರೀಯ ಸ್ವಯಂಸೇವಕ ಸಂಘ

**

ಈ ಹಿಂದೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಿದ್ದ ತೀರ್ಪನ್ನು ರಾಮ ಜನ್ಮಭೂಮಿ –ಬಾಬರಿ ಮಸೀದಿ ಭೂ ವಿವಾದಕ್ಕೆ ಮಾತ್ರ ಸೀಮಿತವಾಗಿ ನೋಡಬೇಕು.
–ಅಶೋಕ್‌ ಭೂಷಣ್ , ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

**

1994ರಲ್ಲಿ ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಪೀಠ ಯಾವ ಸಂದರ್ಭ ಮತ್ತು ಸನ್ನಿವೇಶದಲ್ಲಿ ತೀರ್ಪು ನೀಡಿದೆ ಎನ್ನುವುದನ್ನು ಪರಿಶೀಲಿಸಬೇಕಾಗುತ್ತದೆ.
– ದೀಪಕ್‌ ಮಿಶ್ರಾ, ಸುಪ್ರೀಂ ಕೋರ್ಟ್ ಖ್ಯ ನ್ಯಾಯಮೂರ್ತಿ

**

ಮಸೀದಿಯು ಇಸ್ಲಾಂ‌ ಧರ್ಮದ ಅಂತರ್ಗತ ಅಂಶ ಹೌದೇ ಎಂಬ ವಿಚಾರವನ್ನು ಧಾರ್ಮಿಕ ನಂಬಿಕೆಯ ನೆಲೆಯಲ್ಲಿ ಸಮಗ್ರವಾಗಿ ಪರಿಶೀಲಿಸಬೇಕು.
–ಅಬ್ದುಲ್‌ ನಜೀರ್‌, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು