ಮಂಗಳವಾರ, ಆಗಸ್ಟ್ 20, 2019
25 °C

ಅಯೋಧ್ಯೆ ಪ್ರಕರಣ: ಇತ್ಯರ್ಥಕ್ಕೆ ಸಂಧಾನ ಸಮಿತಿ ವಿಫಲ, 6ರಿಂದ ನಿತ್ಯ ವಿಚಾರಣೆ

Published:
Updated:

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸುವ ಪ್ರಯತ್ನ ವಿಫಲವಾಗಿದೆ. ಹಾಗಾಗಿ, ಇದೇ 6ರಿಂದ (ಮಂಗಳವಾರ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಿತ್ಯವೂ ನಡೆಯಲಿದೆ. 

ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ. ಖಲೀಫುಲ್ಲಾ ನೇತೃತ್ವದ ಮೂವರು ಸದಸ್ಯರ ಸಮಿತಿಯು ಕೊಟ್ಟ ವರದಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನ ಪೀಠವು ಪರಿಶೀಲಿಸಿತು. 

‘ಮಧ್ಯಸ್ಥಿಕೆ ಪ್ರಕ್ರಿಯೆಯು ವಿವಾದವನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ವಿಚಾರಣೆ ನಡೆಸಲಾಗುವುದು’ ಎಂದು ಪೀಠವು ಹೇಳಿತು.  ಮೇಲ್ಮನವಿ ಸಲ್ಲಿಸಿರುವವರು ತಮ್ಮ ವಾದ ಮಂಡನೆಗೆ ಸಿದ್ಧರಾಗಬೇಕು. ಹಾಗೆಯೇ, ದಿನನಿತ್ಯದ ವಿಚಾರಣೆಗೆ ಅನುಕೂಲವಾಗುವಂತೆ ಅಗತ್ಯ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಸಿದ್ಧಪಡಿಸಿಡಬೇಕು. ವಾದ–ಪ್ರತಿವಾದಗಳು ಪೂರ್ಣಗೊಳ್ಳುವವರೆಗೆ ನಿತ್ಯವೂ ವಿಚಾರಣೆ ನಡೆಯಲಿದೆ ಎಂದು ಪೀಠ ಹೇಳಿದೆ. 

ರಾಮಜನ್ಮ ಭೂಮಿ- ಬಾಬರಿ ಮಸೀದಿ ವಿವಾದ ಇತ್ಯರ್ಥಗೊಳಿಸಲು ಸುಪ್ರೀಂಕೋರ್ಟ್ ಮೂವರು ಸದಸ್ಯರ ಸಮತಿ ನೇಮಕ ಮಾಡಿತ್ತು.ಆದರೆ ಕೆಲವೊಂದು ಪಕ್ಷಗಳು ಸಂಧಾನ ಸಮಿತಿ ಬಗ್ಗೆ ವಿರೋಧ ಸೂಚಿಸಿದ್ದವು.

ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಈ ಸಮಿತಿ ರಚಿಸಿದ್ದು, ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು, ಸಮಿತಿಯು ಗುರುವಾರ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ. ಇಬ್ರಾಹಿಂ ಕಲೀಫುಲ್ಲಾ, ಆರ್ಟ್‌ ಆಫ್‌ ಲೀವಿಂಗ್‌ ಫೌಂಡೇಷನ್‌ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಸಂಧಾನ ಸಮಿತಿಯ ಸದಸ್ಯರಾಗಿದ್ದಾರೆ. ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸಮಿತಿಗೆ ಎಂಟು ವಾರಗಳ  ಕಾಲಾವಕಾಶ ನೀಡಲಾಗಿತ್ತು.

ಏತನ್ಮಧ್ಯೆ, ದಾವೆ ಹೂಡಿದವರ ವಕೀಲ ಗೋಪಾಲ್ ಸಿಂಗ್ ವಿಶಾರದ್ ಅವರು  ಸಂಧಾನ ಸಮತಿ ಕಡೆಯಿಂದ ಯಾವುದೇ ಬೆಳವಣಿಗೆಗಳು ಆಗದೇ ಇರವುದರಿಂದ ಆ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು.

ಅಯೋಧ್ಯೆ ವಿವಾದ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ತೀರ್ಪು ನೀಡಿ ಮೂರು ಕಕ್ಷಿದಾರರ ನಡುವೆ ವಿವಾದಿತ ನಿವೇಶನವನ್ನು ಸಮಾನವಾಗಿ ಹಂಚಿಕೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 14 ಮೇಲ್ಮನವಿಗಳು ದಾಖಲಾಗಿವೆ. 

ಸಂಧಾನಕಾರರು...

ನ್ಯಾ.ಎಫ್‌.ಎಂ.ಐ.ಖಲೀಫುಲ್ಲಾ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಇಬ್ರಾಹಿಂ ಖಲೀಫುಲ್ಲಾ (68) ಅವರು ದಕ್ಷಿಣ ತಮಿಳುನಾಡಿನ ಕಾರೈಕುಡಿಯವರು. ಕಾರ್ಮಿಕ ಕಾನೂನಿನಲ್ಲಿ ಪರಿಣತ. 2000ರಲ್ಲಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕ. 2012ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ. ವಕೀಲರಾಗಿ 20 ವರ್ಷ, ನ್ಯಾಯಮೂರ್ತಿಯಾಗಿ 16 ವರ್ಷ ಅನುಭವ.

***
ಶ್ರೀ ಶ್ರೀ ರವಿಶಂಕರ್

ಶ್ರೀ ಶ್ರೀ ರವಿಶಂಕರ್ ಗುರೂಜಿ (62) ಅವರ ಹುಟ್ಟೂರು ತಮಿಳುನಾಡಿನ ತಂಜಾವೂರಿನ ಪಾಪನಾಶಂ. 1981ರಲ್ಲಿ ಬೆಂಗಳೂರಿನಲ್ಲಿ ‘ಆರ್ಟ್‌ ಆಫ್‌ ಲಿವಿಂಗ್‌’ ಆರಂಭಿಸಿದ ಅವರು ಈಗ ಆಧ್ಯಾತ್ಮಿಕ ಗುರುವಾಗಿ ಖ್ಯಾತರಾಗಿದ್ದಾರೆ. ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಂಬಂಧಪ್ಟಟವರ ಮನವೊಲಿಸಲು ಈ ಹಿಂದೆ ಪ್ರಯತ್ನಿಸಿದ್ದರು.

ಶ್ರೀರಾಂ ಪಂಚು

ವಕೀಲ ಶ್ರೀರಾಂ ಪಂಚು ಅವರು ಭಾರತದ ಅತ್ಯುತ್ತಮ ಸಂಧಾನಕಾರರಲ್ಲಿ ಒಬ್ಬರು ಎಂದು ಸ್ವತಃ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ‘ಮಧ್ಯಸ್ಥಿಕೆ’ಯನ್ನು ಪ್ರಚುರಪಡಿಸಿದ ಹೆಗ್ಗಳಿಕೆ ಇವರದು. ಸಿಂಗಪುರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ದೇಶದ ಕೆಲವು ಪ್ರಮುಖ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿದ್ದಾರೆ. ಅಸ್ಸಾಂ ಮತ್ತು ನಾಗಾಲ್ಯಾಂಡ್ ನಡುವಣ 500 ಚದರ ಕಿ.ಮೀ. ಭೂಮಿಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸಲು ಸುಪ್ರೀಂ ಕೋರ್ಟ್‌ ಇವರನ್ನು ಸಂಧಾನಕಾರರಾಗಿ ನೇಮಕ ಮಾಡಿತ್ತು. ಇವರು ಚೆನ್ನೈನವರು.

ಇದನ್ನೂ ಓದಿ:

* ಅಯೋಧ್ಯೆ: ಇಂದು ನಿರ್ಧಾರ
ಅಯೋಧ್ಯೆ ವಿವಾದ ಸಂಧಾನದ ಮೂಲಕ ಬಗೆಹರಿಸಿ: ಸುಪ್ರೀಂ ಆದೇಶ
ಅಯೋಧ್ಯೆ ಪ್ರಕರಣ: ಸಂಧಾನ ಸಮಿತಿಯಲ್ಲಿರುವ ಮೂವರೂ ತಮಿಳುನಾಡಿನವರು

 

Post Comments (+)