ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Time Line: ಅಯೋಧ್ಯೆ ಧ್ವಂಸ ಪ್ರಕರಣ ವ್ಯಾಜ್ಯಕ್ಕೆ ಒಂದೂವರೆ ಶತಮಾನ

ರಾಮಜನ್ಮ ಭೂಮಿ–ಬಾಬ್ರಿ ಮಸೀದಿ ವಿವಾದ
Last Updated 9 ನವೆಂಬರ್ 2019, 1:45 IST
ಅಕ್ಷರ ಗಾತ್ರ

ಮೊಘಲ್ ದೊರೆ ಬಾಬರ್ 1528ರಲ್ಲಿ ಅಯೋಧ್ಯೆಯಲ್ಲಿದ್ದ ಮಂದಿರವನ್ನು ಧ್ವಂಸ ಮಾಡಿ ಆ ಜಾಗದಲ್ಲಿ ಮಸೀದಿ ನಿರ್ಮಿಸಿದ ಎನ್ನುವುದು ಹಿಂದೂಗಳ ಪ್ರತಿಪಾದನೆ. ಬ್ರಿಟಿಷರ ಆಳ್ವಿಕೆಯಲ್ಲಿ ಮಂದಿರ–ಮಸೀದಿ ವಿಚಾರ ಮುನ್ನೆಲೆಗೆ ಬಂದ ನಂತರದ ಬೆಳವಣಿಗೆಗಳು ಈ ರೀತಿ ಇವೆ. ಹಿಂದೂ– ಮುಸ್ಲಿಮರ ನಡುವೆ ಘರ್ಷಣೆಗೆ ಕಾರಣವಾಗಿದ್ದ ಈ ಘಟನೆಗಳು ಭಾರತದ ರಾಜಕಾರಣದ ದಿಕ್ಕನ್ನೂ ಬದಲಿಸಿತು. ಅಯೋಧ್ಯೆಯ ಈ ವಿವಾದಿತ ನಿವೇಶನದ ಒಡೆತನ ಯಾರದ್ದು ಎಂಬ ಈ ವ್ಯಾಜ್ಯದ ತೀರ್ಪು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಸಮಾನ ಹಂಚಿಕೆ: ಹೈಕೋರ್ಟ್‌ ತೀರ್ಪು
ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ನಾಲ್ಕು ದಾವೆಗಳು ದಾಖಲಾಗಿದ್ದವು. 2010ರಲ್ಲಿ ಹೈಕೋರ್ಟ್‌ ಈ ವಿವಾದದ ತೀರ್ಪು ಪ್ರಕಟಿಸಿತ್ತು. ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ವಿರಾಜಮಾನ್‌ ನಡುವೆ ವಿವಾದಿತ 2.77 ಎಕರೆ ಸ್ಥಳವನ್ನು ಸಮಾನವಾಗಿ ಹಂಚಲಾಗಿತ್ತು.

1859 ವಿವಾದಿತ ಸ್ಥಳವನ್ನು ಹಿಂದೂ–ಮುಸ್ಲಿಮರಿಗೆ ಹಂಚಿಕೆ ಮಾಡಿ ದೈವಾರಾಧನೆ ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ ಬ್ರಿಟಿಷ್ ಸರ್ಕಾರ

1885 ಕೋರ್ಟ್ ಮೆಟ್ಟಿಲೇರಿದ ಮಂದಿರ–ಮಸೀದಿ ವಿಚಾರ. ವಿವಾದಿತ ಸ್ಥಳದ ಮಾಲೀಕತ್ವಕ್ಕಾಗಿ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಮಹಾಂತ ರಘುವರ್ ದಾಸ್ ಅರ್ಜಿ

1949 ಡಿಸೆಂಬರ್‌ನಲ್ಲಿ ವಿವಾದಿತ ಸ್ಥಳದಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಕೆಲವು ಹಿಂದೂಗಳು. ಅಂದಿನಿಂದ ಪೂಜೆ ಆರಂಭ

1950 ರಾಮನ ವಿಗ್ರಹವನ್ನು ಅಲ್ಲೇ ಉಳಿಸಿಕೊಳ್ಳಲು ಮತ್ತು ಪೂಜೆ ಮುಂದುವರಿಸಲು ಹಿಂದೂಗಳಿಗೆ ಅವಕಾಶ ನೀಡುವಂತೆ ಕೋರಿ ಮಹಾಂತ ರಾಮಚಂದ್ರ ಪರಮಹಂಸ ದಾಸ್ ನ್ಯಾಯಾಲಯಕ್ಕೆ ಅರ್ಜಿ

1959 ವಿವಾದಿತ ಸ್ಥಳದ ಮಾಲೀಕತ್ವವನ್ನು ತಮಗೆ ವರ್ಗಾಯಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಿರ್ಮೋಹಿ ಅಖಾಡ

1961 ವಿವಾದಿತ ಸ್ಥಳದ ಮಾಲೀಕತ್ವ ತಮ್ಮದು ಎಂದು ಪ್ರತಿಪಾದಿಸಿ ನ್ಯಾಯಾಲಯದ ಮೊರೆ ಹೋದ ಸುನ್ನಿ ವಕ್ಫ್ ಮಂಡಳಿ

1986 ಪೂಜೆ ಮುಂದುವರಿಸಲು ಹಿಂದೂಗಳಿಗೆ ಅವಕಾಶ ನೀಡಿದ ಫೈಜಾಬಾದ್ ನ್ಯಾಯಾಲಯ

1990– ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ‘ರಥಯಾತ್ರೆ’ ಆರಂಭಿಸಿದ ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ

1992 ಡಿಸೆಂಬರ್ 6 ಅಯೋಧ್ಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ

2002 ರಾಮ ಜನ್ಮಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಆರಂಭಿಸಿದ ಅಲಹಾಬಾದ್ ಹೈಕೋರ್ಟ್

2005 ವಿವಾದಿತ ಸ್ಥಳದಲ್ಲಿ ದಾಳಿ ನಡೆಸಲು ಯತ್ನಿಸಿದ ಐವರು ಉಗ್ರರ ಹತ್ಯೆ

2010 ಮಾಲೀಕತ್ವ ಪ್ರಕರಣದ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್. ರಾಮಲಲ್ಲಾ (ಬಾಲರಾಮ), ನಿರ್ಮೋಹಿ ಅಖಾಡ ಮತ್ತು ಸುನ್ನಿ ಮಂಡಳಿಗೆ ನಿವೇಶನ ಸಮಾನವಾಗಿ ಹಂಚಿಕೆ

2010 ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋದ ಮೂವರು ಅರ್ಜಿದಾರರು

2011 ಹೈಕೋರ್ಟ್‌ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್

2018 ಪ್ರಕರಣದ ವಿಚಾರಣೆಗೆ 2019ರಲ್ಲಿ ಪೀಠ ನಿಗದಿಪಡಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್

2019 ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯ ಯತ್ನ ವಿಫಲ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಿಂದ ನಲವತ್ತು ದಿನಗಳ ವಿಚಾರಣೆ

ಸತತ ವೈಫಲ್ಯ ಕಂಡ ಸಂಧಾನ ಯತ್ನ
1990: ಹಿಂದೂ ಹಾಗೂ ಮುಸ್ಲಿಮರ ನಡುವೆ ಒಮ್ಮತ ಮೂಡಿಸಿ ಅಯೋಧ್ಯೆ ಸಮಸ್ಯೆಗೆ ಪರಿಹಾರ ಹುಡುಕಲು ಯತ್ನಿಸಿದವರಲ್ಲಿ ಎಸ್‌. ಚಂದ್ರಶೇಖರ್ ಮೊದಲಿಗರು. ಆಗ ಅವರು ಪ್ರಧಾನಿಯಾಗಿದ್ದರು. ಒಂದು ವರ್ಷದ ಬಳಿಕ ಮಾತುಕತೆ ಮುರಿದುಬಿದ್ದಿತು

1992: ಪ್ರಧಾನಿ ನರಸಿಂಹ ರಾವ್ ಅವರು ನಿವೃತ್ತ ನ್ಯಾಯಮೂರ್ತಿ ಎಂ.ಎಸ್. ಲಿಬರ್‍ಹಾನ್ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದರು. ಎರಡೂ ಕಡೆಯವರ ಜತೆ ಮಾತುಕತೆ ನಡೆಸಿದರೂ, ವಿವಾದ ತಾರ್ಕಿಕ ಅಂತ್ಯ ಕಾಣಲು ವಿಫಲವಾಯಿತು

2001: ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಮ್ಮ ಕಚೇರಿಯಲ್ಲಿ ಅಯೋಧ್ಯೆ ಘಟಕ ಸ್ಥಾಪಿಸಿದ್ದರು. ಮಾತುಕತೆ ಪ್ರಕ್ರಿಯೆಯ ಮೇಲೆ ನಿಗಾವಹಿಸುವುದು ಈ ಘಟಕದ ಕೆಲಸವಾಗಿತ್ತು. ಆದರೆ ಈ ಯತ್ನವೂ ವೈಫಲ್ಯ ಕಂಡಿತು

2002: ಕಂಚಿಯ ಜಯೇಂದ್ರ ಸರಸ್ವತಿ ಅವರು ಮಧ್ಯಸ್ಥಿಕೆ ವಹಿಸಿಕೊಳ್ಳಲು ಮುಂದಾದರು. ಅಯೋಧ್ಯೆ ವಿಚಾರದಲ್ಲಿ ನ್ಯಾಯಾ ಲಯದ ಆದೇಶಕ್ಕೆ ಬದ್ಧವಿರುವುದಾಗಿ ವಿಎಚ್‌ಪಿ ಹಾಗೂ ರಾಮ ಜನ್ಮಭೂಮಿ ನ್ಯಾಸದಿಂದ ಲಿಖಿತ ಹೇಳಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದರು. ಆದರೆ ಮಸೀದಿ ಒಳಗಡೆ ಪೂಜೆಗೆ ನಿರ್ಬಂಧ ವಿಧಿಸಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದ್ದರಿಂದ ವಿಎಚ್‌ಪಿ ತನ್ನ ಮಾತು ವಾಪಸ್ ಪಡೆಯಿತು

2003: ಶಂಕರಾಚಾರ್ಯ ಅವರೂ ಸಂಧಾನಕ್ಕೆ ಯತ್ನಿಸಿದ್ದರು. ಶ್ರೀಗಳ ಪ್ರಸ್ತಾವವನ್ನು ಒಪ್ಪಲಾಗದು ಎಂದುಕಕ್ಷಿದಾರರಾದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತಿರಸ್ಕರಿಸಿತ್ತು. ಈ ಬಳಿಕ ಶ್ರೀಗಳು ಮಧ್ಯಸ್ಥಿಕೆ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು

2004: ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ಅವರೂ ವಿವಾದ ಬಗೆಹರಿಸಲು ಯತ್ನಿಸಿ ವಿಫಲರಾದರು

2015: ಅತ್ಯಂತ ಹಳೆಯ ಅರ್ಜಿದಾರರಲ್ಲಿ ಒಬ್ಬರಾಗಿರುವ ಮೊಹಮ್ಮದ್ ಹಾಶಿಂ ಅನ್ಸಾರಿ ಅವರು ಹಿಂದೂಗಳ ಜೊತೆ ಎರಡು ಬಾರಿ ಸಂಧಾನಕ್ಕೆ ಮುಂದಾಗಿದ್ದರು. ಆದರೆ 2016ರಲ್ಲಿ ತಮ್ಮ 96ನೇ ವಯಸ್ಸಿನಲ್ಲಿ ಅವರು ನಿಧನರಾದ ಬಳಿಕ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಮಸೀದಿಯೊಳಗೆ ರಾಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದನ್ನು ವಿರೋಧಿಸಿ 1949ರಲ್ಲಿ ಪ್ರತಿಭಟನೆ ನಡೆಸಿದ್ದ ಅನ್ಸಾರಿ ಬಂಧನಕ್ಕೆ ಒಳಗಾಗಿದ್ದರು

2017: ರವಿಶಂಕರ್ ಗುರೂಜಿ ಮೂರು ಅಂಶಗಳ ಸಂಧಾನಸೂತ್ರ ಮಂಡಿಸಿದ್ದರು. ಅರ್ಜಿದಾರರು ತಿರಸ್ಕರಿಸಿದ ಕಾರಣ ಶಾಂತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿತು

2018: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೌಲಾನಾ ಸಲ್ಮಾನ್ ಅವರು ನ್ಯಾಯಾಲಯದ ಹೊರಗಡೆ ವಿವಾದ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದ್ದರು. ಶ್ರೀಶ್ರೀ ರವಿಶಂಕರ್ ಅವರನ್ನು ಭೇಟಿಯಾಗಿ ಸಂಧಾನಸೂತ್ರ ರಚನೆಯಲ್ಲಿ ತೊಡಗಿದ್ದರು. ಆದರೆ ಇವರ ಸಲಹೆಗಳು ತಿರಸ್ಕೃತಗೊಂಡವು

2019:ವಿವಾದದ ಸೌಹಾರ್ದಯುತ ಪರಿಹಾರಕ್ಕಾಗಿ ಮಾಜಿ ನ್ಯಾಯಮೂರ್ತಿ ಎಫ್‌ಎಂಐ ಖಲೀಫುಲ್ಲಾ ನೇತೃತ್ವದಲ್ಲಿ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತು. ಶ್ರೀಶ್ರೀ ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ ಪಂಚು ಅವರು ಸಮಿತಿಯ ಇತರ ಸದಸ್ಯರಾಗಿದ್ದರು. ಯಾವುದೇ ಸೌಹಾರ್ದಯುತ ಪರಿಹಾರ ಲಭ್ಯವಾಗದ ಕಾರಣ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT