ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಂಸಕ್ಕೂ ಮುನ್ನ ವಿವಾದಿತ ನಿವೇಶನದ ಚಿತ್ರಣ

Last Updated 9 ನವೆಂಬರ್ 2019, 18:42 IST
ಅಕ್ಷರ ಗಾತ್ರ

ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ಇತಿಹಾಸವು 1850ರಷ್ಟು ಹಳೆಯದು. 1850ರ ದಶಕದಲ್ಲೇ ಹಿಂದೂ ಮುಸ್ಲಿಮರ ನಡುವೆ ಸಂಘರ್ಷ ನಡೆದಿತ್ತು. ಹೀಗಾಗಿ ಈ ವಿವಾದಿತ ನಿವೇಶನದ ಮಧ್ಯೆ ಬೇಲಿ ಮತ್ತು ತಡೆಗೋಡೆ ನಿರ್ಮಿಸಿದ್ದ ಬ್ರಿಟಿಷರು, ಹಿಂದೂ–ಮುಸ್ಲಿಮರ ಪೂಜಾಸ್ಥಳಗಳನ್ನು ಪ್ರತ್ಯೇಕಿಸಿದ್ದರು. ಇದು ಬ್ರಿಟಿಷರ ದಾಖಲೆಗಳಲ್ಲಿ ಇದೆ. ಈ ಭೂವಿವಾದದ ಪ್ರಕರಣದಲ್ಲಿ ಬ್ರಿಟಿಷರ ದಾಖಲೆಗಳನ್ನು ಅಲಹಾಬಾದ್ ಹೈಕೋರ್ಟ್‌ ಪರಿಗಣಿಸಿದೆ. ಹೈಕೋರ್ಟ್‌ ನೀಡಿದ್ದ ತೀರ್ಪಿನ ಪ್ರತಿಯಲ್ಲಿ ಉಲ್ಲೇಖಿಸಲಾದ ವಿವರಗಳ ಆಧಾರದಲ್ಲಿ ರಚಿಸಲಾಗಿದ್ದ ವಿವಾದಿತ ನಿವೇಶನ ಮತ್ತು ಕಟ್ಟಡಗಳ ಚಿತ್ರ

01. ರಾಮ ಛಬೂತರಾ
ರಾಮನ ಜನ್ಮಸ್ಥಳ ಎಂದು ಗುರುತಿಸಲಾಗುತ್ತಿದ್ದ ಈ ಜಾಗದಲ್ಲಿ ದೊಡ್ಡ ಜಗುಲಿಯಂತಹ ರಚನೆ ಇತ್ತು. 1850ರ ನಂತರ ಅಯೋಧ್ಯೆಗೆ ಭೇಟಿ ನೀಡಿದ್ದ ವಿದೇಶಿ ಯಾತ್ರಿಕರು ತಮ್ಮ ಪ್ರವಾಸ ಕಥನಗಳಲ್ಲಿ ಅವಧ್‌ನ (ಇಂದಿನ ಅಯೋಧ್ಯೆ) ರಾಮಜನ್ಮಭೂಮಿಯಲ್ಲಿ ರಾಮ ಛಬೂತರಾ ಇರುವುದನ್ನು ಗುರುತಿಸಿದ್ದಾರೆ. ಇದಕ್ಕೂ ಹಿಂದಿನ ಕಾಲದ ಪ್ರವಾಸ ಕಥನದಲ್ಲಿ ಇಂತಹ ರಚನೆ ಇರುವ ಬಗ್ಗೆ ಉಲ್ಲೇಖವಿಲ್ಲ. ಆದರೆ, ಈ ಜಾಗದಲ್ಲಿ 1850ಕ್ಕೂ ಮುನ್ನ ಆರಾಧನೆ ನಡೆಯುತ್ತಿತ್ತು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಈ ಜಗುಲಿಯ ಮೇಲೆ ರಾಮ ಪಾದುಕೆ ಮತ್ತು ರಾಮಲಲ್ಲಾನ ವಿರಾಜಮಾನ್‌ನ ವಿಗ್ರಹವನ್ನು ಇರಿಸಿ ಪೂಜೆ ನಡೆಸಲಾಗುತ್ತಿತ್ತು. 1949ರ ಡಿಸೆಂಬರ್ 23ರಂದು ಈ ವಿಗ್ರಹವನ್ನು ಮಸೀದಿಯ ಮುಖ್ಯ ಗುಮ್ಮಟದ ಕೆಳಗೆ ಪ್ರತಿಷ್ಠಾಪಿಸಲಾಯಿತು.

1992ರ ಡಿಸೆಂಬರ್ 6ರಂದು ಈ ಜಗಲಿಯನ್ನು ಧ್ವಂಸ ಮಾಡಲಾಯಿತು.

02. ಹನುಮಾನ್‌ ದ್ವಾರ
ಮಸೀದಿಯ ಮುಂಭಾಗದಲ್ಲಿ ಇರುವ ದ್ವಾರವನ್ನು ಹನುಮಾನ್ ದ್ವಾರ ಎಂದು ಕರೆಯಲಾಗುತ್ತದೆ. ವಿವಾದಿತ ನಿವೇಶನದ ಪೂರ್ವ ದಿಕ್ಕಿನಲ್ಲಿ ಈ ದ್ವಾರವಿದೆ. ಹಿಂದೂಗಳ ಓಡಾಟಕ್ಕೆ ಈ ದ್ವಾರವನ್ನು ನಿಗದಿಮಾಡಲಾಗಿತ್ತು.

03. ಕಬ್ಬಿಣದ ಬೇಲಿ ಮತ್ತು ತಡೆಗೋಡೆ
ರಾಮ ಛಬೂತರ್, ಸೀತಾ ರಸೋಯಿಗಳನ್ನು ಬಾಬರಿ ಮಸೀದಿಯಿಂದ ಬೇರ್ಪಡಿಸುವ ಉದ್ದೇಶದಿಂದ ಬ್ರಿಟೀಷರು ನಿರ್ಮಿಸಿದ ಬೇಲಿ ಮತ್ತು ತಡೆಗೋಡೆ. ಅಲಹಾಬಾದ್ ಹೈಕೋರ್ಟ್‌ ಈ ಬೇಲಿಯನ್ನು ಸಾಕ್ಷ್ಯವಾಗಿ ಪರಿಗಣಿಸಿದೆ. ‘ಬ್ರಿಟೀಷರೇ ಈ ಬೇಲಿ ನಿರ್ಮಿಸಿದ್ದರು ಅಂದರೆ, ಹಿಂದೂ ಮತ್ತು ಮುಸ್ಲಿಮರು ಈ ನಿವೇಶನದಲ್ಲಿ ಏಕಕಾಲದಲ್ಲಿ ಆರಾಧನೆ ನಡೆಸುತ್ತಿದ್ದರು ಎಂಬುದು ಸಾಬೀತಾಗುತ್ತದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು. 1992ರಲ್ಲಿ ಇದನ್ನು ಧ್ವಂಸ ಮಾಡಲಾಗಿದೆ.

04. ಸಿಂಹ ದ್ವಾರ
ಮಸೀದಿಯ ಎಡಪಾರ್ಶ್ವ, ಅಂದರೆ ಉತ್ತರ ದಿಕ್ಕಿನಲ್ಲಿರುವ ದ್ವಾರವನ್ನು ಸಿಂಹದ್ವಾರ ಎಂದು ಕರೆಯಲಾಗುತ್ತಿತ್ತು. ಮುಸ್ಲಿಮರ ಓಡಾಟಕ್ಕೆಂದು ಬ್ರಿಟಿಷರು ನಿಗದಿ ಮಾಡಿದ್ದ ದ್ವಾರವಿದು.

05. ಸೀತಾ ರಸೋಯಿ
ರಾಮನ ಪತ್ನಿ ಸೀತಾ ಮೊದಲ ಬಾರಿ ಅಡುಗೆ ಮಾಡಿದ ಜಾಗ ಎಂದು ಈ ಸ್ಥಳವನ್ನು ಗುರುತಿಸಲಾಗುತ್ತದೆ. 1850ರ ನಂತರ ಇಲ್ಲಿ ಮಂದಿರ ನಿರ್ಮಿಸಲಾಗಿತ್ತು ಎಂದು ದಾಖಲೆಗಳು ಹೇಳುತ್ತವೆ. 1992ರಲ್ಲಿ ಈ ಮಂದಿರವನ್ನೂ ಧ್ವಂಸ ಮಾಡಲಾಗಿದೆ. ಇವೆಲ್ಲವನ್ನೂ ಅಲಹಾಬಾದ್ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.

06. ಬಾಬರಿ ಮಸೀದಿ
ಭಾರತದ ಮೊದಲ ಮೊಘಲ್‌ ದೊರೆ ಬಾಬರ್‌ನ ಆದೇಶದ ಮೇರೆಗೆ ಈ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಇಲ್ಲಿ ಇದ್ದ ಶಾಸನದಲ್ಲಿ ಉಲ್ಲೇಖಿಸಲಾಗಿದೆ. 1528ರಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಶಾಸನ ಹೇಳುತ್ತದೆ. ಆದರೆ, ಔರಂಗಜೇಬ್‌ ಇಲ್ಲಿದ್ದ ದೇವಾಲಯವನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಿದ ಎಂಬ ಪ್ರತೀತಿ. ಈ ಎರಡೂ ಅಂಶಗಳನ್ನು ಹೈಕೋರ್ಟ್‌ ಪರಿಶೀಲಿಸಿತ್ತು. ಆದರೆ ಎರಡನೇ ಅಂಶವನ್ನು ಪುಷ್ಟೀಕರಿಸುವ ಯಾವ ಆಧಾರಗಳೂ ಇಲ್ಲ ಎಂಬುದನ್ನೂ ನ್ಯಾಯಾಲಯ ಪರಿಗಣಿಸಿತ್ತು.

ಕ್ರಿಸ್ತಪೂರ್ವ 100ರ ನಂತರ ಇಲ್ಲಿ ಯಾವ ಮಂದಿರಗಳನ್ನು ನಿರ್ಮಿಸಿದ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಅಲ್ಲದೆ, ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಯಿತು ಎಂಬುದನ್ನು ಯಾವ ದಾಖಲೆಗಳೂ ಉಲ್ಲೇಖಿಸಿಲ್ಲ ಎಂಬುದನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಯಿತು ಎಂಬುದರಲ್ಲಿ ಹುರುಳಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ ಹೇಳಿತ್ತು.

07. ಮಸೀದಿಯ ನಡುಗುಮ್ಮಟ
1949ರ ಡಿಸೆಂಬರ್‌ 23ರಂದು ಈ ಗುಮ್ಮಟದ ಅಡಿ ರಾಮಲಲ್ಲಾ ವಿರಾಜಮಾನ್‌ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಅಂದಿನಿಂದ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದನ್ನು ನಿಲ್ಲಿಸಿದರು. 1992ರ ಡಿಸೆಂಬರ್ 6ರಂದು ಇಡೀ ಮಸೀದಿಯನ್ನು ಧ್ವಂಸ ಮಾಡಲಾಯಿತು. ನಡುಗುಮ್ಮಟ ಇದ್ದ ಜಾಗದಲ್ಲೇ ರಾಮನ ತಾತ್ಕಾಲಿಕ ಮಂದಿರ ನಿರ್ಮಿಸಲಾಗಿದೆ. ಈ ವ್ಯಾಜ್ಯದಲ್ಲಿ ವಾದಿಯಾಗಿಯನ್ನಾಗಿ ಮಾಡಲಾಗಿರುವ ರಾಮಲಲ್ಲಾ ವಿರಾಜಮಾನ್‌ಗೆ ಈ ಜಾಗವನ್ನು ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್‌ ತೀರ್ಪು ನೀಡಿತ್ತು

ಆಧಾರ: ಅಯೋಧ್ಯೆ ವಿವಾದಿತ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್‌ ನೀಡಿದ್ದ ತೀರ್ಪು


***

13,500 ಚದರ ಅಡಿ:ವಿವಾದಿತ ಬಾಬರಿ ಮಸೀದಿ ಮತ್ತು ರಾಮ ಛಬೂತರ್–ಸೀತಾ ರಸೋಯಿ ದೇವಾಲಯಗಳಿದ್ದ ನಿವೇಶನದ ವಿಸ್ತೀರ್ಣ
2.77 ಎಕರೆ:ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದಿತ ಪ್ರದೇಶದ ವಿಸ್ತೀರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT