ಮಂಗಳವಾರ, ಸೆಪ್ಟೆಂಬರ್ 22, 2020
21 °C
ಪಾಕ್‌ ವಿಮಾನ ಹೊಡೆದುರುಳಿಸಿದ ಯೋಧನಿಗೆ ಮೂರನೇ ಅತ್ಯುನ್ನತ ಗೌರವ

ಬಾಲಾಕೋಟ್‌ ಹೀರೊಗೆ ವೀರಚಕ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್‌–16 ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿಗೆ ಸ್ವಾತಂತ್ರ್ಯ ದಿನದಂದು ವೀರಚಕ್ರ ಗೌರವ ನೀಡಲಾಗುವುದು. ಇದು ಯುದ್ಧ ಕಾಲದ ಮೂರನೇ ಅತ್ಯಂತ ದೊಡ್ಡ ಗೌರವವಾಗಿದೆ. 

ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಪ್ರತಿಕೂಲ ಸನ್ನಿವೇಶದಲ್ಲಿಯೂ ಅತ್ಯಂತ ಶಾಂತ ಮತ್ತು ಸಮಚಿತ್ತದ ಅವರ ನಡವಳಿಕೆ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಸುಮಾರು ಎರಡು ದಶಕಗಳ ಹಿಂದೆ ಕಾರ್ಗಿಲ್‌ ಯುದ್ಧದ ಬಳಿಕ ಇದೇ ಮೊದಲಿಗೆ ಯುದ್ಧ ಕಾಲದ ಶೌರ್ಯ ಪ್ರಶಸ್ತಿಯನ್ನು ವರ್ಧಮಾನ್‌ ಅವರಿಗೆ ನೀಡಲಾಗಿದೆ. 

ಬಾಲಾಕೋಟ್‌ ಮೇಲೆ ಫೆ. 26ರಂದು ವಾಯು ದಾಳಿ ನಡೆಸಲಾಗಿತ್ತು. ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಅಭಿನಂದನ್‌ ಚಲಾಯಿಸುತ್ತಿದ್ದ ಮಿಗ್‌–21 ಬೈಸನ್‌ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು. ಪ್ಯಾರಾಚೂಟ್‌ ಮೂಲಕ ಹೊರಕ್ಕೆ ಜಿಗಿದಿದ್ದ ಅಭಿನಂದನ್‌ ಅವರು ಗಾಯಗೊಂಡಿದ್ದರು.  

ಪಾಕಿಸ್ತಾನ ನೆಲದಲ್ಲಿ ಇಳಿದಿದ್ದ ಅವರನ್ನು ಅಲ್ಲಿನ ಪಡೆಯು ಫೆ. 27ರಂದು ಬಂಧಿಸಿತ್ತು. ಅ‌ವರ ಬಂಧನದ ಬಳಿಕ ಭಾರತ–ಪಾಕಿಸ್ತಾನದ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮಾರ್ಚ್‌ 1ರಂದು ರಾತ್ರಿ ಅವರನ್ನು ಪಾಕಿಸ್ತಾನವು ಬಿಡುಗಡೆ ಮಾಡಿತ್ತು.

ಪಾಕಿಸ್ತಾನದೊಳಗೆ ಇರುವ ಬಾಲಾಕೋಟ್‌ನ ಜೈಷ್‌–ಎ–ಮೊಹಮ್ಮದ್‌ ಉಗ್ರಗಾಮಿ ಶಿಬಿರಗಳ ಮೇಲೆ ಭಾರತದ ವಾಯುಪಡೆಯ ವಿಮಾನಗಳು ಬಾಂಬ್‌ ದಾಳಿ ನಡೆಸಿದ್ದವು.

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಪುಲ್ವಾಮಾ ದಾಳಿಯ ಎರಡು ವಾರ ಬಳಿಕ ಭಾರತದ ವಾಯುಪಡೆ ಈ ಕ್ರಮ ಕೈಗೊಂಡಿತ್ತು. 

ಮರಳಿ ಯುದ್ಧ ವಿಮಾನಕ್ಕೆ: ಮುಂದಿನ ಕೆಲವೇ ವಾರಗಳಲ್ಲಿ ಅಭಿನಂದನ್‌ ಅವರು ಯುದ್ಧ ವಿಮಾನದ ಪೈಲಟ್‌ ಆಗಿ ನಿಯೋಜನೆಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿರುವ ಭಾರತೀಯ ವಾಯುಪ್ರದೇಶ ವೈದ್ಯಕೀಯ ಸಂಸ್ಥೆಯು ಅವರ ಸಮಗ್ರ ಪರೀಕ್ಷೆ ನಡೆಸಿದೆ. ಅವರು ಯುದ್ಧ ವಿಮಾನ ಹಾರಿಸಲು ಸಮರ್ಥರಿದ್ದಾರೆ ಎಂದ ಪ್ರಮಾಣಪತ್ರವನ್ನು ನೀಡಿದೆ. 

ಯುದ್ಧ ವಿಮಾನದ ಪೈಲಟ್‌ ಸ್ಥಾನಕ್ಕೆ ಮರಳಬೇಕು ಎಂಬ ಅಪೇಕ್ಷೆಯನ್ನು ಪಾಕಿಸ್ತಾನದಿಂದ ಮರಳಿದ ಬಳಿಕ ಅವರು ವ್ಯಕ್ತಪಡಿಸಿದ್ದರು.

ಮಿಂಟಿ ಅಗರ್‌ವಾಲ್‌ಗೆ ಗೌರವ

ಭಾರತೀಯ ವಾಯುಪಡೆಯ ಸಂಚಾರ ನಿಯಂತ್ರಕಿ, ಸ್ಕ್ವಾಡ್ರನ್‌ ಲೀಡರ್‌ ಮಿಂಟಿ ಅಗರ್‌ವಾಲ್‌ ಅವರಿಗೆ ಯುದ್ಧ ಸೇವಾ ಪದಕ ಘೋಷಿಸಲಾಗಿದೆ. ಇದೇ ಮೊದಲ ಬಾರಿ ಮಹಿಳೆಯೊಬ್ಬರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಫೆ. 27ರಂದು ಅತಿಕ್ರಮಣ  ನಡೆಸಿದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ತಡೆಯಲು ಭಾರತದ ವಿವಿಧ ವಾಯುನೆಲೆಗಳಿಂದ ಆಕಾಶಕ್ಕೆ ನೆಗೆದ ಭಾರತದ ವಾಯುಪಡೆಯ ವಿಮಾನಗಳನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ್ದಕ್ಕಾಗಿ ಅವರಿಗೆ ಈ ಗೌರವ ಒಲಿದಿದೆ. 

ವಾಯು ಸೇನಾ ಪದಕ

ಫೆ.26ರಂದ ಬಾಲಾಕೋಟ್‌ ಮೇಲೆ ವಾಯು ದಾಳಿ ನಡೆಸಿದ ಮಿರಾಜ್‌–2000 ಯುದ್ಧ ವಿಮಾನಗಳ ಪೈಲಟ್‌ಗಳಿಗೂ ವಾಯು ಸೇನಾ ಪದಕ ಘೋಷಿಸಲಾಗಿದೆ. ಭಾರತೀಯ ವಾಯುಪಡೆಯು ಈ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಗ್ರೂಪ್‌ ಕ್ಯಾಪ್ಟನ್‌ ಸೌಮಿತ್ರ ತಮಸ್ಕರ್‌, ವಿಂಗ್‌ ಕಮಾಂಡರ್‌ ಪ್ರಣವ್‌ ರಾಜ್‌, ಸ್ಕ್ವಾಡ್ರನ್‌ ಲೀಡರ್‌ಗಳಾದ ರಾಹುಲ್‌ ಬಸೋಯ, ಪಂಕಜ್‌ ಅರವಿಂದ್‌ ಭುಜ್ಡೆ, ಕಾರ್ತಿಕ್‌ ನಾರಾಯಣ್‌ ರೆಡ್ಡಿ ಮತ್ತು ಶಶಾಂಕ್‌ ಸಿಂಗ್‌ ಅವರು ವಾಯುಸೇನಾ ಪದಕ ಪಡೆಯಲಿದ್ದಾರೆ. 

ಕೋರ್‌ ಆಫ್‌ ಎಂಜಿನಿಯರ್ಸ್‌ನ ಯೋಧ ಪ್ರಕಾಶ್‌ ಜಾಧವ್‌ ಅವರಿಗೆ ಎರಡನೇ ಅತ್ಯುನ್ನತ ಪದಕ ಕೀರ್ತಿ ಚಕ್ರ ನೀಡಲು ನಿರ್ಧರಿಸಲಾಗಿದೆ. ಇದು ಮರಣೋತ್ತರ ಗೌರವ. 

ಭೂಸೇನೆ, ನೌಕಾಪಡೆ, ಸಿಆರ್‌ಪಿಎಫ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಪಡೆಯ 14 ಯೋಧರಿಗೆ ಶೌರ್ಯ ಚಕ್ರ ಗೌರವ ನೀಡಲು ಉದ್ದೇಶಿಸಲಾಗಿದೆ. ಇವರಲ್ಲಿ ಏಳು ಯೋಧರು ಮರಣೋತ್ತರವಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಲ್ಲಿ ಎಂಟು ಮಂದಿ ಭೂಸೇನೆ, ಒಬ್ಬರು ನೌಕಾಪಡೆ ಮತ್ತು ಐವರು ಸಿಆರ್‌ಪಿಎಫ್‌ ಜಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಪಡೆಗೆ ಸೇರಿದವರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು