ಕೊಲಿಸ್ಟಿನ್ ತಯಾರಿಕೆ, ಮಾರಾಟಕ್ಕೆ ನಿಷೇಧ
ನವದೆಹಲಿ : ಆಹಾರಕ್ಕಾಗಿ ಸಾಕಲಾಗುವ ಪ್ರಾಣಿಗಳು, ಕೋಳಿ ಮತ್ತು ಮೀನುಗಳಿಗೆ ನೀಡಲಾಗುತ್ತಿರುವ ಕೊಲಿಸ್ಟಿನ್ ಎಂಬ ಆ್ಯಂಟಿಬಯೊಟಿಕ್‌ನ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ.
ಆಹಾರಕ್ಕಾಗಿ ಸಾಕಲಾಗುವ ಪ್ರಾಣಿಗಳು, ಕೋಳಿ, ಮೀನುಗಳಿಗೆ ಕೊಲಿಸ್ಟಿನ್ ನೀಡಿದರೆ ಅದನ್ನು ತಿನ್ನುವ ಮನುಷ್ಯರಲ್ಲಿ ಈ ಆ್ಯಂಟಿಬಯೊಟಿಕ್‌ಗೆ ಪ್ರತಿರೋಧ ಬೆಳೆಯುತ್ತದೆ. ಇದು ಅಪಾಯ ಉಂಟು ಮಾಡಬಹುದು ಎಂಬ ಕಾರಣಕ್ಕೆ ನಿಷೇಧ ಹೇರಲಾಗಿದೆ.
ಔಷಧಕ್ಕೆ ಸಂಬಂಧಿಸಿದ ತಾಂತ್ರಿಕ ವಿಚಾರಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡುವ ಅತ್ಯುನ್ನತ ಸಮಿತಿಯಾದ ಔಷಧ ತಾಂತ್ರಿಕ ಸಲಹಾ ಸಮಿತಿಯು (ಡಿಟಿಎಬಿ) ಕೊಲಿಸ್ಟಿನ್ ವಿಚಾರವನ್ನು ಪರಿಶೀಲಿಸಿ, ನಿಷೇಧ ಹೇರಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಔಷಧಕ್ಕೆ ಪ್ರತಿರೋಧ ಹೊಂದಿರುವ ಬ್ಯಾಕ್ಟೀರಿಯಾಗಳ ಸೋಂಕಿಗೆ ಕೊನೆಯ ಅಸ್ತ್ರವಾಗಿ ಮನುಷ್ಯರಿಗೆ ಕೊಲಿಸ್ಟಿನ್ ಅನ್ನು ನೀಡಲಾಗುತ್ತದೆ. ಆದರೆ, ಕೊಲಿಸ್ಟಿನ್‌ಯುಕ್ತ ಮಾಂಸವನ್ನು ಮನುಷ್ಯ ತಿಂದರೆ ಈ ಔಷಧಕ್ಕೆ ದೇಹದಲ್ಲಿ ಪ್ರತಿರೋಧ ಬೆಳೆಯುತ್ತದೆ. ಹಾಗಾಗಿ, ಕೊನೆಯ ಅಸ್ತ್ರವಾಗಿ ಕೊಲಿಸ್ಟಿನ್ ಬಳಸಿದರೂ ಅದರಿಂದ ಪ್ರಯೋಜನ ಆಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಾಣಿ ಮತ್ತು ಕೋಳಿಗಳು ಬೇಗ ಬೆಳೆಯಲಿ ಎಂಬ ಕಾರಣಕ್ಕಾಗಿ ವಿವೇಚನಾರಹಿತವಾಗಿ ಕೊಲಿಸ್ಟಿನ್ ನೀಡಲಾಗುತ್ತಿದೆ. ಕೋಳಿ ಸಾಕಣೆಯಲ್ಲಿ ಕೊಲಿಸ್ಟಿನ್‌ನ ಅತಿಯಾದ ಬಳಕೆಯೇ ಭಾರತದಲ್ಲಿ ಆ್ಯಂಟಿಬಯೊಟಿಕ್‌ಗಳಿಗೆ ಪ್ರತಿರೋಧ ಹೆಚ್ಚಲು ಕಾರಣ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.