ಮಂಗಳವಾರ, ಏಪ್ರಿಲ್ 20, 2021
29 °C

ತಿರಂಗಾ ಟಿವಿ ನೌಕರರಿಗೆ ಸಂಬಳ ನೀಡಿಲ್ಲ, ಕಪಿಲ್ ಸಿಬಲ್‌ನ್ನು ಮಲ್ಯ ಎಂದ ಬರ್ಖಾ ದತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಆರಂಭಿಸಿದ್ದ ತಿರಂಗಾ ಟಿವಿ ನಷ್ಟದಲ್ಲಿದ್ದು, ನೌಕರರಿಗೆ ಸಂಬಳ ನೀಡಿಲ್ಲ. ಈ ಬಗ್ಗೆ ಪತ್ರಕರ್ತೆ ಬರ್ಖಾ ದತ್ ಪ್ರಶ್ನಿಸಿದ್ದು, ಕಪಿಲ್ ಸಿಬಲ್ ಅವರನ್ನು ವಿಜಯ್ ಮಲ್ಯ ಅವರಿಗೆ ಹೋಲಿಸಿದ್ದಾರೆ.

 ಕಳೆದ ಕೆಲವು ವಾರಗಳಿಂದ ತಿರಂಗಾ ಟಿವಿ, ಹಲವಾರು ನೌಕರರನ್ನು ಕೆಲಸದಿಂದ ತೆಗೆದುಹಾಕಿತ್ತು. ಅಷ್ಟೇ ಅಲ್ಲದೆ ಕೆಲವೊಂದು ಡಿಟಿಎಚ್ ಪ್ಲಾಟ್‌ಫಾರಂನಿಂದ ತಿರಂಗಾ ಟಿವಿಯನ್ನು ತೆಗೆಯಲಾಗಿತ್ತು. ವಾರಗಳ ಹಿಂದೆ ತಿರಂಗಾ ಟಿವಿಯ ನೌಕರರು ತಮ್ಮ ಕಷ್ಟದ ಪರಿಸ್ಥಿತಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಕ್ಕೆ ಅವರನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ. ಇದೀಗ ಬರ್ಖಾ ದತ್ ಸರಣಿ ಟ್ವೀಟ್ ಮೂಲಕ ತಿರಂಗಾ ಟಿವಿಯ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಈಗಾಗಲೇ 200  ನೌಕರರನ್ನು ತಿರಂಗಾ ಟಿವಿ ಕೆಲಸದಿಂದ ತೆಗೆದು ಹಾಕಿದೆ. ತಮ್ಮ ನೌಕರರಿಗೆ ಸರಿಯಾದ ಸಂಬಳ ನೀಡದೆ ಟಿವಿ ವ್ಯವಸ್ಥಾಪಕರು ಈ ಕೆಲಸ ಮಾಡಿದ್ದಾರೆ. ಸಾರ್ವಜನಿಕರ ಮುಂದೆ ಪೂಜ್ಯರಂತೆ ನಟಿಸುವ ಆ ವ್ಯಕ್ತಿ ಪತ್ರಕರ್ತರನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎಂದು ಕಪಿಲ್ ಸಿಬಲ್ ವಿರುದ್ಧ ಕಿಡಿ ಕಾರಿದ್ದಾರೆ.

ಹಲವಾರು ಪತ್ರಕರ್ತರು ತಮ್ಮ ಕೆಲಸ ತೊರೆದು Harvest TV (ಆನಂತರ ತಿರಂಗಾ ಟಿವಿ ಎಂದು ಹೆಸರು ಬದಲಿಸಲಾಯಿತು) ಸೇರಿದ್ದರು. ಪ್ರಸ್ತುತ ಸಂಸ್ಥೆ ವೃತ್ತಿಪರ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಕನಿಷ್ಟ 2 ವರ್ಷ ಇಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಕಪಿಲ್ ಸಿಬಲ್ ಭರವಸೆ ನೀಡಿದ್ದರಿಂದ ಪತ್ರಕರ್ತರು ತಿರಂಗಾ ಟಿವಿ ಸೇರಿದ್ದರು. ಆದರೆ ಮುಂದಿನ 48ಗಂಟೆಗಳಲ್ಲಿ ನಡೆಯಲಿರುವ ಎಲ್ಲ ಲೈವ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಬರ್ಖಾ ತಿಳಿಸಿದ್ದಾರೆ.

 ತಮ್ಮ ನೌಕರರ ಪರಿಸ್ಥಿತಿಯನ್ನು ಕಪಿಲ್ ಸಿಬಲ್ ಪತ್ನಿ ಅರ್ಥ ಮಾಡಿಕೊಂಡಿಲ್ಲ ಎಂದು ಬರ್ಖಾ ದೂರಿದ್ದಾರೆ. ಪ್ರೊಮಿತಾ ಸಿಬಲ್ ಅವರು ಮಾಂಸದ ಕಾರ್ಖಾನೆಯೊಂದನ್ನು ನಡೆಸುತ್ತಿದ್ದರು. ಅಲ್ಲಿನ ಕಾರ್ಮಿಕರಿಗೆ ನಯಾ ಪೈಸೆ ನೀಡದೆ ನಾನು ಕಾರ್ಖಾನೆಯನ್ನು ಮುಚ್ಚಿದ್ದೆ. 6 ತಿಂಗಳ ಸಂಬಳ ಕೊಡಿ ಎಂದು ಕೇಳಲು ಈ ಪತ್ರಕರ್ತರು ಯಾರು? ಎಂದು ಸಿಬಲ್ ಪತ್ನಿ ಹೇಳಿದ್ದಾಗಿ ಬರ್ಖಾ ಆರೋಪಿಸಿದ್ದಾರೆ.

ಕಪಿಲ್ ಸಿಬಲ್ ಅವರು ಪ್ರತಿದಿನ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಾರೆ, ಹೀಗಿದ್ದರೂ ಅವರು  200 ನೌಕರರಿಗೆ ಕಂಪನಿ ನಿಯಮ ಪ್ರಕಾರ 6 ತಿಂಗಳ ಸಂಬಳ ಕೊಡಲಿಲ್ಲ, ಕನಿಷ್ಟ ಪಕ್ಷ 3 ತಿಂಗಳ ಸಂಬಳವಾದರೂ ಕೊಡಬಹುದಿತ್ತಲ್ಲವೇ? 200ಕ್ಕಿಂತಲೂ ಹೆಚ್ಚು ನೌಕರರ ಜೀವನದ ಜತೆ ಅವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಬರ್ಖಾ ಟ್ವೀಟಿಸಿದ್ದಾರೆ.

ತಮ್ಮ ವಾಹಿನಿ ಸರಿಯಾಗಿ ಕಾರ್ಯ ನಿರ್ವಹಿಸದಂತೆ ತಡೆದು ನೌಕರರನ್ನು ಕೈಬಿಡುವಂತೆ ಮಾಡಿದ ಪರಿಸ್ಥಿತಿಗೆ ಮೋದಿಯವರೇ ಕಾರಣ ಎಂದು ದೂರಲು ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಚಿಂತನೆ ನಡೆಸಿದ್ದರು ಎಂದಿದ್ದಾರೆ ಬರ್ಖಾ. ಆದರೆ ಇದರಲ್ಲಿ ಮೋದಿ ಸರ್ಕಾರದ ಪಾತ್ರವೇನೂ ಇಲ್ಲ. ಹಾಗಾಗಿ ಈ ರೀತಿ ದೂರಲು ಅವರಿಗೆ ಸಾಧ್ಯವಾಗಲಿಲ್ಲ. ನೌಕರರ ಪ್ರಶ್ನೆಗಳನ್ನು ಎದುರಿಸುವ ಬದಲು ಇಲ್ಲಿ ಅಂಗಡಿ ಮುಚ್ಚಿ ಈ ದಂಪತಿಗಳು ಲಂಡನ್‌ಗೆ ಹೋದರು. ಅವರೊಬ್ಬ ಮಲ್ಯ ಎಂದು ಬರ್ಖಾ ಹೇಳಿದ್ದಾರೆ.

ತಿರಂಗಾ ಟಿವಿಯಲ್ಲಿ ಡೆಮಾಕ್ರಸಿ ಲೈವ್ ಶೋ ನಡೆಸಿಕೊಡುತ್ತಿದ್ದ ಬರ್ಖಾ ದತ್, ಸಿಬಲ್ ಅವರನ್ನು ಮಲ್ಯ ಅವರಿಗೆ ಹೋಲಿಸಿದ್ದಕ್ಕಾಗಿ ತನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಿಬಲ್ ದಂಪತಿ ಬೆದರಿಕೆಯೊಡ್ಡಿದ್ದು  ಇಮೇಲ್‌ನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ಬರ್ಖಾ ಈ ರೀತಿ ಮಾಡಲು ನಿರಾಕರಿಸಿದ್ದು, ವಾಹಿನಿಯ ನೌಕರರ ಬೆಂಬಲವಿದೆ ನಾನು ಈ ಕೇಸು ವಾದಿಸುತ್ತೇನೆ ಎಂದಿದ್ದಾರೆ. 

ಅದೇ ವೇಳೆ  ಕಪಿಲ್ ಸಿಬಲ್ ಮತ್ತು ಅವರ ಪತ್ನಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳನ್ನು ಕುತಿಯಾ (ಹೆಣ್ಣು ನಾಯಿ) ಎಂದಿದ್ದಾರೆ ಎಂದು ಬರ್ಖಾ ಆರೋಪಿಸಿದ್ದು, ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಒಂದು ವರ್ಷಗಳ ಕಾಲ ತಿರಂಗಾ ಟಿವಿ ತನಗೆ ಮತ್ತು ಇತರ ಹಿರಿಯ ಉದ್ಯೋಗಿಗಳಿಗೆ ಸಂಬಳ ನೀಡಿಲ್ಲ, ಸಂಬಳ ನೀಡಲು ಅವರು ನಿರಾಕರಿಸಿದ್ದಾರೆ. ತಮಗೆ ಬಾಕಿ ಇರುವ ಸಂಬಳವನ್ನು ನೀಡಿ ಎಂದು ಕಪಿಲ್ ಸಿಬಲ್ ಅವರಿಗೆ ಟ್ವೀಟ್ ಮಾಡಿ ಎಂದು ವಾಹಿನಿಯ ನೌಕರರಿಗೆ ಬರ್ಖಾ ಮನವಿ ಮಾಡಿದ್ದಾರೆ.

ಆದಾಗ್ಯೂ, ಬರ್ಖಾ ಅವರು ಈ ವಾಹಿನಿ ಬಿಟ್ಟು ಹೊರನಡೆಯುವ ಉದ್ದೇಶ ಹೊಂದಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಓಪ್ ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ. ತಿರಂಗಾ ಟಿವಿಯಲ್ಲಿ ಈಗಲೂ ಬರ್ಖಾ ದತ್ ಅವರ ಡೆಮಾಕ್ರಸಿ ಲೈವ್ ಕಾರ್ಯಕ್ರಮದ ಪ್ರೊಮೊ ಪ್ರಸಾರವಾಗುತ್ತಿದೆ.  ಜುಲೈ 11ರಂದು ಡೆಮಾಕ್ರಸಿ ಲೈವ್ ಕಾರ್ಯಕ್ರಮ ತಿರಂಗಾ ಟಿವಿಯಲ್ಲಿ ಪ್ರಸಾರವಾಗಿತ್ತು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು