ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳ ಮಗುವಿಗಾಗಿ ಹಾಲು ನೀಡಲು ಶ್ರಮಿಕ್ ರೈಲಿನ ಹಿಂದೆ ಓಡಿದ ಕಾನ್‌ಸ್ಟೆಬಲ್

Last Updated 3 ಜೂನ್ 2020, 15:32 IST
ಅಕ್ಷರ ಗಾತ್ರ

ಭೋಪಾಲ್‌: ಎರಡು ದಿನಗಳಿಂದ ನಾಲ್ಕು ತಿಂಗಳ ಕೂಸಿಗೆ ಉಣಿಸಲು ಹಾಲು ಸಿಗದೆ, ರೈಲಿನಿಂದ ಇಳಿದು ಹುಡುಕಲೂ ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ತಾಯಿಗೆ ರೈಲ್ವೆ ಸುರಕ್ಷಾ ಪಡೆ (ಆರ್‌ಪಿಎಫ್‌) ಕಾನ್‌ಸ್ಟೆಬಲ್‌ ಒಬ್ಬರು ಮಾಡಿರುವ ಸಹಾಯ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಕೈಯಲ್ಲಿ ರೈಫಲ್‌, ಮತ್ತೊಂದರಲ್ಲಿ ಹಾಲಿನ ಪಾಕೆಟ್‌ ಹಿಡಿದು ರೈಲಿನ ಪಕ್ಕ ಓಡಿರುವ ದೃಶ್ಯಗಳು ವೈರಲ್‌ ಆಗಿವೆ.

ಕರ್ನಾಟಕದ ಬೆಳಗಾವಿಯಿಂದ ಶ್ರಮಿಕ್‌ ವಿಶೇಷ ರೈಲಿನಲ್ಲಿ ನಾಲ್ಕು ತಿಂಗಳ ಮಗುವಿನೊಂದಿಗೆ ಗೋರಖ್‌ಪುರಕ್ಕೆ ಹೊರಟ ಸಫಿಯಾ ಹಾಶ್ಮಿ ಹಾಲು ತೆಗೆದುಕೊಳ್ಳುವುದನ್ನು ಮರೆತರು. ನಿರಂತರ ರೈಲು ಪ್ರಯಾಣದಲ್ಲಿ ಹಾಲು ಸಿಗದೆ ಕಣ್ಣೀರಾದ ಸಫಿಯಾ, ರೈಲು ನಿಂತ ನಿಲ್ದಾಣಗಳಲ್ಲಿ ಮಗುವಿಗಾಗಿ ಹಾಲು ಒದಗಿಸುವಂತೆ ಅಂಗಲಾಚುತ್ತಿದ್ದರು. ಆದರೆ, ಆಕೆಗೆ ಸಹಕಾರ ಸಿಕ್ಕಿದ್ದು ಭೋಪಾಲ್‌ ರೈಲ್ವೆ ನಿಲ್ದಾಣದಲ್ಲಿ.

ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಇಂದರ್‌ ಕುಮಾರ್‌ ತಾಯಿಯ ಮನವಿಗೆ ಓಗೊಟ್ಟು ಹಾಲು ತರುವಷ್ಟರಲ್ಲಿ ರೈಲು ಮುಂದಕ್ಕೆ ಚಲಿಸಿತ್ತು. ನಿಲ್ದಾಣದಿಂದ ಹೊರಟಿದ್ದ ರೈಲಿನ ಹಿಂದೆ ವೇಗವಾಗಿ ಓಡಿದ ಇಂದರ್ ಕುಮಾರ್‌ ಕೊನೆಗೂ ತಾಯಿಗೆ ಹಾಲಿನ ಪಾಕೆಟ್‌ ತಲುಪಿಸಿದರು. ಸಹಾಯಕ್ಕಾಗಿ ನಡೆದ ಪರಿಶ್ರಮ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಲು ಸಿಗುವುದಕ್ಕೂ ಮುನ್ನ ಸಫಿಯಾ ಎರಡು ದಿನಗಳಿಂದ ಮಗುವಿಗೆ ಬಿಸ್ಕತ್‌ ಮತ್ತು ನೀರು ಕುಡಿಸುತ್ತ ಮುಂದುವರಿದಿದ್ದರು. ಇಂದರ್‌ ಕುಮಾರ್‌ರಿಂದಾಗಿ ಮಗುವಿಗೆ ಹಾಲು ನೀಡಲು ಸಾಧ್ಯವಾಯಿತು. ಗೋರಖ್‌ಪುರ್ ತಲುಪುತ್ತಿದ್ದಂತೆ ಸಫಿಯಾ ಇಂದರ್‌ ಅವರಿಗೆ ತಲುಪುವಂತೆ ವಿಡಿಯೊ ಸಂದೇಶ ರವಾನಿಸಿದ್ದಾರೆ. 'ನೀವು ನಿಜವಾದ ಹೀರೊ...' ಎಂದು ಧನ್ಯವಾದ ಅರ್ಪಿಸಿದ್ದಾರೆ.

'ರೈಲು ಮುಂದುವರಿದಂತೆ ಭರವಸೆ ಕಳೆದುಕೊಂಡೆ. ಆದರೆ, ದೂರದಲ್ಲಿ ಯಾರೋ ಬಹಳ ವೇಗವಾಗಿ ಓಡಿ ಬರುತ್ತಿದ್ದಂತೆ ಕಂಡಿತು. ಹೇಗೋ ಅವರು ನನಗೆ ಹಾಲಿನ ಪಾಕೆಟ್‌ ನೀಡಿದರು. ನೇರವಾಗಿ ಅವರಿಗೆ ಧನ್ಯವಾದ ಅರ್ಪಿಸಲೂ ಸಾಧ್ಯವಾಗಲಿಲ್ಲ. ಇಂದರ್‌ ಭಾಯ್‌ ನೀವೇ ನಿಜವಾದ ಹೀರೊ' ಎಂದು ಸಫಿಯಾ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT