ಶುಕ್ರವಾರ, ಜನವರಿ 24, 2020
28 °C
ಮೇ 15ರಿಂದ ಎನ್‌ಪಿಆರ್ –ಡಿಸಿಎಂ l ಸ್ಪಷ್ಟವಾಗಿ ತಿರಸ್ಕರಿಸುವಂತೆ ನಿತೀಶ್‌ ಕುಮಾರ್‌ಗೆ ಜೆಡಿ(ಯು) ಪತ್ರ

ಬಿಹಾರ: ಮೈತ್ರಿಯಲ್ಲಿ ಪೌರತ್ವ ಜಟಾಪಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಗೆ ದೇಶವ್ಯಾಪಿ ಇನ್ನಷ್ಟು ವಿರೋಧ ವ್ಯಕ್ತವಾಗಿದ್ದು ಬಿಹಾರದಲ್ಲಿ ಮೈತ್ರಿ ಪಕ್ಷಗಳಾದ ಜೆಡಿ (ಯು) ಮತ್ತು ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಜೆಡಿ (ಯು) ಪ್ರಧಾನ ಕಾರ್ಯದರ್ಶಿ ಪವನ್‌ ವರ್ಮಾ ಅವರು ಪಕ್ಷದ ಅಧ್ಯಕ್ಷರೂ ಆದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ‘ಒಡೆದು ಆಳುವ ಸಿಎಎ– ಎನ್‌ಪಿಆರ್–ಎನ್‌ಆರ್‌ಸಿ ಯೋಜನೆ’ ಯನ್ನು ಸ್ಪಷ್ಟ ಮಾತುಗಳಲ್ಲಿ ತಿರಸ್ಕರಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

ಈ ಯೋಜನೆ ಹಿಂದೆ ದೇಶವನ್ನು ಇಬ್ಭಾಗಿಸುವ ಮಹಾಪಾತಕದ ಹುನ್ನಾರವಿದೆ. ಅನಗತ್ಯವಾಗಿ ಸಾಮಾಜಿಕ ಅಶಾಂತಿ ಸೃಷ್ಟಿಸುವ ಸಂಚಿದೆ ಎಂದು ವರ್ಮಾ ಕಿಡಿಕಾರಿದ್ದಾರೆ.

ಬಿಹಾರದ ಉಪಮುಖ್ಯಮಂತ್ರಿ, ಬಿಜೆಪಿಯ ಸುಶೀಲ್‌ ಮೋದಿ ಅವರು, ರಾಜ್ಯದಲ್ಲಿ ಮೇ 15ರಿಂದ 28ರವರೆಗೆ ರಾಷ್ಟ್ರೀಯ ನಾಗರಿಕ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕಟಿಸಿದ ಹಿಂದೆಯೇ ಮೈತ್ರಿಪಕ್ಷವಾದ ಜೆಡಿ(ಯು)ನಿಂದ ಈ ಹೇಳಿಕೆ ಹೊರಬಿದ್ದಿದೆ.

ಉಪ ಮುಖ್ಯಮಂತ್ರಿ ಹೇಳಿಕೆಗೆ ಜೆಡಿ (ಯು) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕೈಗಾರಿಕಾ ಸಚಿವ ಶ್ಯಾಮ್‌ ರಜಾಕ್‌ ಆಕ್ಷೇಪ ವ್ಯಕ್ತಪಡಿಸಿದ್ದು, ‘ಎನ್‌ಪಿಆರ್ ಕುರಿತು ಯಾವುದೇ ತೀರ್ಮಾನ ಪ್ರಕಟಿಸುವ ಅಧಿಕಾರ ಇರುವುದು ಮುಖ್ಯಮಂತ್ರಿಗೆ ಮಾತ್ರ’ ಎಂದು ಹೇಳಿದ್ದಾರೆ.

‘ಬಿಹಾರ ಸರ್ಕಾರ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಂತಿಮ ನಿರ್ಧಾರವನ್ನೇ ತೆಗೆದುಕೊಳ್ಳದಿರುವಾಗ, ಎನ್‌ಪಿಆರ್‌ ಪರಿಷ್ಕರಣೆ ಕುರಿತು ಯಾರಾದರೂ ಹೇಗೆ ದಿನಾಂಕ ಪ್ರಕಟಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

‘ಸಾರ್ವಜನಿಕವಾಗಿರುವ ಆತಂಕ ಮತ್ತು ನೀವು ನಂಬಿರುವ ಜಾತ್ಯತೀತ ಚಿಂತನೆಗೆ ಪೂರಕವಾಗಿ ಸಿಎಎ–ಎನ್‌ಪಿಆರ್‌– ಎನ್‌ಆರ್‌ಸಿಯನ್ನು ತಿರಸ್ಕರಿಸಬೇಕು. ದೇಶವನ್ನು ಒಡೆದು ಆಳುವ ಹುನ್ನಾರವನ್ನು ಈ ಮೂಲಕ ಖಂಡಿಸಬೇಕು’ ಎಂದು ಪವನ್‌ ವರ್ಮಾ ಪತ್ರದಲ್ಲಿ  ಒತ್ತಾಯಿಸಿದ್ದಾರೆ.

‘ಬಹಿರಂಗ, ಸ್ಪಷ್ಟವಾದ ಹೇಳಿಕೆಯು ನೀವು ನಂಬಿದ ಸಿದ್ಧಾಂತಗಳನ್ನು ಬಲಪಡಿಸುವಲ್ಲಿ ದಿಟ್ಟ ಹೆಜ್ಜೆಯಾಗಲಿದೆ. ಅಲ್ಪಾವಧಿಯ ಲಾಭಕ್ಕಾಗಿ ರಾಜಕಾರಣದಲ್ಲಿ ಪಾಲಿಸಿಕೊಂಡು ಬಂದಿರುವ ಸಿದ್ಧಾಂತಗಳನ್ನು ತ್ಯಾಗ ಮಾಡಲಾಗದು‘ ಎಂದು ಪ್ರತಿಪಾದಿಸಿದ್ದಾರೆ.

‘ರಾಹುಲ್, ಪ್ರಿಯಾಂಕಾರಿಂದ ಪ್ರಚೋದನೆ’

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದೇಶದ ಜನರನ್ನು ಹಾದಿತಪ್ಪಿಸುತ್ತಿದ್ದು, ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭಾನುವಾರ ಆರೋಪಿಸಿದರು.

‘ಸಿಎಎಯಿಂದಾಗಿ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಯಾರೊಬ್ಬರೂ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ. ನೆರೆಯ ಮೂರು ದೇಶಗಳಲ್ಲಿ ನೊಂದ ಅಲ್ಪಸಂಖ್ಯಾತರಿಗೆ ದೇಶದ ಪೌರತ್ವ ನೀಡುವುದು ಕಾಯ್ದೆಯ ಉದ್ದೇಶ, ಯಾರಿಂದಲೂ ಅವರ ಹಕ್ಕು ಕಸಿದುಕೊಳ್ಳುವುದಲ್ಲ’ ಎಂದು ಸ್ಪಷ್ಟಪಡಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ವಿರುದ್ಧವೂ ಹರಿಹಾಯ್ದ ಶಾ, ‘ಅವರು ಐದು ವರ್ಷಗಳ ಹಿಂದೆ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಹಾದಿತಪ್ಪಿಸಿ ಅಧಿಕಾರಕ್ಕೆ ಬಂದಿದ್ದಾರೆ’ ಎಂದು ಟೀಕಿಸಿದರು.

ಜಾಗೃತಿ ಅಭಿಯಾನಕ್ಕೆ ಚಾಲನೆ:ಈ ಮಧ್ಯೆ, ಅಮಿತ್‌ ಶಾ ಮತ್ತು ಇತರೆ ಮುಖಂಡರು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಭಾನುವಾರ ದೆಹಲಿಯ ಲಜಪತ್ ನಗರ ನಿವಾಸಿ, ಅಫ್ಗಾನಿಸ್ತಾನದಿಂದ ಮರಳಿದ
ಸಿಖ್‌ನ ಮನೆಯಿಂದ ಭಾನುವಾರ ಚಾಲನೆ ನೀಡಿದರು. 

ತಪ್ಪುಗ್ರಹಿಕೆ ಬೇಡ: ರಾಜನಾಥ್‌ ಸಿಂಗ್

ಲಖನೌ: ‘ಸಿಎಎ ಕುರಿತು ಜನರಿಗೆ ತಪ್ಪುಗ್ರಹಿಕೆ ಬೇಡ. ಭಾರತೀಯ ಸಂಸ್ಕೃತಿ ‘ಸರ್ವಧರ್ಮ ಸಂಭವ್’ ಎಂದು ಬೋಧಿಸುತ್ತದೆ. ಜಾತಿ, ಧರ್ಮದ ಹೆಸರಲ್ಲಿ ಭಾರತೀಯರ ನಡುವೆ ತಾರತಮ್ಯ ಎಸಗಲಾಗದು’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಕಾಯ್ದೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಸ್ವಕ್ಷೇತ್ರಕ್ಕೆ ಆಗಮಿಸಿದ್ದ ಅವರು, ನ್ಯಾಯಮೂರ್ತಿ ಖೇಮ್‌ ಕರಣ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಕಾಯ್ದೆಗೆ ಇಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅಧಿಕಾರಿಗಳ ಪ್ರಕಾರ ಸಂಬಂಧಿತ ಘರ್ಷಣೆಯಲ್ಲಿ 19 ಮಂದಿ ಸತ್ತಿದ್ದಾರೆ.

***

ಸಿಎಎ ವಿರೋಧಿಸಿ ಪ್ರತಿಭಟಿಸುತ್ತಿರುವವನ್ನು ವಿಚಾರಣೆಯೇ ಇಲ್ಲದೆ ಜೈಲಿನಲ್ಲಿ ಇಡುವ ಉತ್ತರ ಪ್ರದೇಶದ ಸರ್ಕಾರ ಕ್ರಮ ನಾಚಿಕೆಗೇಡಿನದು, ಖಂಡನಾರ್ಹ.
–ಮಾಯಾವತಿ, ಬಿಎಸ್‌ಪಿ ನಾಯಕಿ

ಎನ್‌ಪಿಆರ್ ಶಾಸನಬದ್ಧ ಕ್ರಮ. ಪಶ್ಚಿಮ ಬಂಗಾಳ, ಕೇರಳ, ರಾಜಸ್ಥಾನ ಸೇರಿದಂತೆ ಯಾವುದೇ ರಾಜ್ಯಗಳು ಈ ಪ್ರಕ್ರಿಯೆಯಿಂದ ಹಿಂದೆ ಸರಿಯಲು ಆಗುವುದಿಲ್ಲ.
–ಸುಶೀಲ್‌ ಮೋದಿ, ಉಪಮುಖ್ಯಮಂತ್ರಿ, ಬಿಹಾರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು