ಸೋಮವಾರ, ಆಗಸ್ಟ್ 26, 2019
28 °C

ಮೂರೂ ಪಡೆಗಳಿಗೆ ಏಕೈಕ ದಂಡನಾಯಕ: ಮೊದಲ ಸಿಡಿಎಸ್‌ ಬಿಪಿನ್ ರಾವತ್?

Published:
Updated:

ಬೆಂಗಳೂರು: ದೇಶದ ಮೂರೂ ಸಶಸ್ತ್ರ ಪಡೆಗಳಿಗೆ ಒಬ್ಬರೇ ಮುಖ್ಯಸ್ಥರನ್ನು ನೇಮಿಸುವ ಪ್ರಸ್ತಾವಕ್ಕೆ (ಸಿಡಿಎಸ್‌- ಚೀಫ್ ಆಫ್ ಡಿಫೆನ್ಸ್‌ ಸ್ಟಾಫ್) ಇದೀಗ ಹೊಸ ವೇಗ ದೊರೆತಿದೆ. ಪ್ರಸ್ತುತ ಭೂಸೇನೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರೇ ಮೊದಲ ಸಿಡಿಎಸ್‌ ಆಗಬಹುದು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಸುಧಾರಣೆ ಅಗತ್ಯ, ಭಾರತೀಯ ಸೇನೆಯ ಮುಂದಿದೆ ಹಲವು ಸವಾಲುಗಳು

ಪ್ರಧಾನಿ ನರೇಂದ್ರ ಮೋದಿ ತಮ್ಮ ಗುರುವಾರದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಡಿಎಸ್‌ ನೇಮಕಾತಿ ವಿಚಾರ ಪ್ರಸ್ತಾಪಿಸಿದ್ದರು. ಕಾರ್ಗಿಲ್ ಯುದ್ಧದ ನಂತರ ನೇಮಿಸಿದ್ದ ಪರಾಮರ್ಶೆ ಸಮಿತಿಯು ದೇಶಕ್ಕೆ ಸಿಡಿಎಸ್‌ ಅಗತ್ಯ ಕುರಿತು ಶಿಫಾರಸು ಮಾಡಿತ್ತು.

'ಸಿಡಿಎಸ್‌ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆಗಳನ್ನು ಕೊಡಲು ಉನ್ನತ ಮಟ್ಟದ ಅನುಸ್ಥಾಪನಾ ಸಮಿತಿಯೊಂದನ್ನು ನೇಮಿಸಲಾಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ 'ಹಿಂದೂಸ್ತಾನ್‌ ಟೈಮ್ಸ್‌' ವರದಿ ಮಾಡಿದೆ.

ಅನುಷ್ಠಾನ ಸಮಿತಿಯು ಮೂರು ತಿಂಗಳ ಒಳಗೆ (ನವೆಂಬರ್) ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಸಮಿತಿಯಲ್ಲಿ ರಕ್ಷಣಾ ಕಾರ್ಯದರ್ಶಿ, ಸಶಸ್ತ್ರಪಡೆಗಳ ಮುಖ್ಯಸ್ಥರು ಮತ್ತು ಇಂಟಿಗ್ರೇಟೆಡ್ ಡಿಫೆನ್ಸ್‌ ಸ್ಟಾಫ್ ಇರುತ್ತಾರೆ.

ಭೂಸೇನೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್‌ನಲ್ಲಿ ನಿವೃತ್ತರಾಗುತ್ತಿದ್ದಾರೆ. ಅವರು ದೇಶದ ಅತಿ ಹಿರಿಯ ಮಿಲಿಟರಿ ಕಮಾಂಡರ್. ಹೀಗಾಗಿ ಅವರೇ ಮೊದಲ ಸಿಡಿಎಸ್ ಆಗಿ ನೇಮಕಗೊಳ್ಳಬಹುದು ಎನ್ನುವ ನಿರೀಕ್ಷೆ ವ್ಯಕ್ತವಾಗುತ್ತಿದೆ. 

ಸಿಡಿಎಸ್ ಸ್ಥಾನಮಾನ: ಇದು ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ ಸಮನಾದ ಸ್ಥಾನವೇ ಅಥವಾ ಅದಕ್ಕೂ ಮಿಗಿಲಾದ ಅಧಿಕಾರ ಹೊಂದಿರುತ್ತದೆಯೋ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಅಧಿಕಾರ ಅವಧಿ ಎಷ್ಟು ದಿನ ಎಂಬುದೂ ಅಂತಿಮಗೊಂಡಿಲ್ಲ.

'ವಿದೇಶದ ಸಶಸ್ತ್ರಪಡೆಗಳ ಜೊತೆಗೆ ಸಹಕಾರ, ರಕ್ಷಣಾ ಪಡೆಗಳ ನಿಯೋಜನೆ, ತರಬೇತಿ, ನಿರ್ವಹಣೆಯನ್ನು ಈವರೆಗೆ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಪ್ರತ್ಯೇಕವಾಗಿ ನಿರ್ವಹಿಸುತ್ತಿದ್ದರು. ಇನ್ನು ಮುಂದೆ ಈ ಎಲ್ಲ ಅಧಿಕಾರಗಳು ಸಿಡಿಎಸ್‌ ಸ್ಥಾನದಲ್ಲಿ ಕೇಂದ್ರೀಕೃತಗೊಳ್ಳುತ್ತವೆ' ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಹೇಳಿದೆ. 

'ಸಿಡಿಎಸ್‌ ಅಧಿಕಾರಾವಧಿ ಮತ್ತು ಜವಾಬ್ದಾರಿಯ ಬಗ್ಗೆ ಅನುಸ್ಥಾಪನಾ ಸಮಿತಿ ತನ್ನ ಅಭಿಪ್ರಾಯ ತಿಳಿಸಲಿದೆ. ಆದರೆ ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ' ಎಂದು ಇಂಟಿಗ್ರೇಟೆಡ್ ಡಿಫೆನ್ಸ್‌ ಸ್ಟಾಫ್ (ಐಡಿಎಸ್) ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಭದ್ರತೆಯ ಜವಾಬ್ದಾರಿ: ದೇಶದ ರಕ್ಷಣೆ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ಮುಖ್ಯ ಪಾತ್ರವನ್ನು ಸಿಡಿಎಸ್‌ ಇನ್ನು ಮುಂದೆ ನಿರ್ವಹಿಸುತ್ತಾರೆ. ಮೂರೂ ಸಶಸ್ತ್ರಪಡೆಗಳ ಮುಖ್ಯಸ್ಥರು (ನೌಕಾಪಡೆ, ವಾಯುಪಡೆ ಮತ್ತು ಭೂಸೇನೆ) ತಮ್ಮ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳುವ ಜವಾಬ್ದಾರಿ ಹೊಂದಿದ್ದರೆ, ಸಿಡಿಎಸ್‌ ದೇಶದ ಒಟ್ಟಾರೆ ಭದ್ರತೆಯ ಹೊಣೆ ಹೊತ್ತಿರುತ್ತಾರೆ ಎನ್ನುವುದು ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶಕರಾಗಿದ್ದ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಅವರ ಅಭಿಪ್ರಾಯ.

’ಕಾರ್ಗಿಲ್‌ ಪರಾಮರ್ಶೆ ಸಮಿತಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಎರಡು ದಶಕಗಳ ಕಾಲ ಸುದೀರ್ಘ ಚರ್ಚೆ ನಡೆಯಿತು. ಸಿಡಿಎಸ್‌ ನೇಮಕವು ಸಶಸ್ತ್ರ ಪಡೆಗಳ ಸನ್ನದ್ಧತೆಯನ್ನು ಸುಧಾರಿಸುವುದರ ಜೊತೆಗೆ ಮೂರೂ ಪಡೆಗಳ ನಡುವೆ ಹೊಂದಾಣಿಕೆಯನ್ನು ಸುಧಾರಿಸುವುದರ ಜೊತೆಗೆ ಸಮಯ ಮತ್ತು ಸಂಪನ್ಮೂಲಗಳ ಉಳಿತಾಯದ ಸಾಧ್ಯತೆಯನ್ನೂ ಹೆಚ್ಚಿಸಿದೆ’ ಎನ್ನುವ ಅವರ ಹೇಳಿಕೆಯನ್ನೂ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

 

 

Post Comments (+)