ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿದ್ದ ಯೋಧರಲ್ಲಿ ಶಸ್ತ್ರ: ಬಿಜೆಪಿ–ಕಾಂಗ್ರೆಸ್‌ ವಾಗ್ಯುದ್ಧ

Last Updated 18 ಜೂನ್ 2020, 20:30 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಗಡಿ ಕಾಯಲು ಸೈನಿಕರನ್ನು ಶಸ್ತ್ರಾಸ್ತ್ರ ನೀಡದೆ ಕಳುಹಿಸಿದ್ದು ಏಕೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಗುರುವಾರ ಪ್ರಶ್ನಿಸಿದ್ದಾರೆ. ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಇದಕ್ಕೆ ತಿರುಗೇಟು ನೀಡಿದ್ದಾರೆ.

‘ವಾಸ್ತವಾಂಶ ಏನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳೋಣ. ಗಡಿಗೆ ಹೋಗುವ ಯೋಧರು ತಮ್ಮ ಜತೆ ಸದಾ ಶಸ್ತ್ರ ಹೊಂದಿರುತ್ತಾರೆ. ಗಸ್ತು ಠಾಣೆಯಿಂದ ಹೊರಗೆ ಕಾಲಿರಿಸುವಾಗಲಂತೂ ಅವರಲ್ಲಿ ಶಸ್ತ್ರ ಇದ್ದೇ ಇರುತ್ತದೆ’ ಎಂದು ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

‘ಗಾಲ್ವನ್‌ನಲ್ಲಿ ಜೂನ್‌ 15ರಂದು ಇದ್ದ ಯೋಧರು ಕೂಡ ಶಸ್ತ್ರ ಹೊಂದಿದ್ದರು. ಮುಖಾಮುಖಿ ಸಂದರ್ಭದಲ್ಲಿ ಶಸ್ತ್ರ ಬಳಸಬಾರದು ಎಂಬುದು ದೀರ್ಘ ಕಾಲದಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿ (1996 ಮತ್ತು 2005ರ ಒಪ್ಪಂದ ಪ್ರಕಾರ)’ ಎಂದು ಟ್ವೀಟ್‌ನಲ್ಲಿ ಅವರು ವಿವರಿಸಿದ್ದಾರೆ.

ಗಡಿ ಕಾಯುವ ಯೋಧರ ಸುರಕ್ಷತೆಯ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತೀವ್ರ ವಾಗ್ಯುದ್ಧ ನಡೆದಿದೆ.ಗಾಲ್ವನ್‌ ಕಣಿವೆಯಲ್ಲಿ ಆಗಿರುವ ಲೋಪದ ಹೊಣೆಗಾರಿಕೆ ಯಾರದ್ದು ಎಂದು ಪ್ರಶ್ನಿಸಿ ರಾಹುಲ್‌ ಅವರು ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಗಡಿಯಲ್ಲಿ ಚೀನಾದ ಸೈನಿಕರ ಜತೆ ಮುಖಾಮುಖಿಯಲ್ಲಿ ತೊಡಗಿದ್ದ ಯೋಧರಿಗೆ ಬೆಂಬಲ ವ್ಯವಸ್ಥೆ ಏಕೆ ಇರಲಿಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಕೆ.ಸಿ. ವೇಣುಗೋಪಾಲ್‌ ಮತ್ತು ರಣದೀಪ್‌ ಸುರ್ಜೇವಾಲಾ ಕೇಳಿದ್ದಾರೆ. ‌ಗಡಿಯಲ್ಲಿ ದಾಳಿ ನಡೆಯಲಿದೆ ಎಂಬ ಮಾಹಿತಿ ಸರ್ಕಾರಕ್ಕೆ ಮೊದಲೇ ದೊರೆಯಲಿಲ್ಲ ಏಕೆ ಎಂದು ಜೈಪುರದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ರಾಹುಲ್‌ ಅವರು ಅತ್ಯಂತ ಅಪ್ರಬುದ್ಧರಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದ್ದಾರೆ.

ಚೀನಾ ಜತೆಗಿನ ಒಪ್ಪಂದದ ಪ್ರಕಾರ, ವಾಸ್ತವ ನಿಯಂತ್ರಣ ರೇಖೆಯ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬಂದೂಕು ಮತ್ತು ಸ್ಫೋಟಕ ಬಳಸುವಂತಿಲ್ಲ ಎಂಬ ಮೂಲಭೂತ ಮಾಹಿತಿಯೇ ರಾಹುಲ್‌ ಅವರಿಗೆ ತಿಳಿದಿಲ್ಲ. ಕಾಂಗ್ರೆಸ್‌ ಆಳ್ವಿಕೆಯ ಅವಧಿಯಲ್ಲಿ ಚೀನಾದ ಜತೆಗೆ ಯಾವೆಲ್ಲ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂಬ ಬಗೆಗಿನ ಪುಸ್ತಕಗಳನ್ನು ಲಾಕ್‌ಡೌನ್‌ನ ಅವಧಿಯಲ್ಲಿ ರಾಹುಲ್‌ ಓದುವುದು ಒಳ್ಳೆಯದು ಎಂದು ಪಾತ್ರ ವ್ಯಂಗ್ಯವಾಡಿದ್ದಾರೆ.ಗಡಿ ಸಂಘರ್ಷದ ಬಗ್ಗೆ ಶುಕ್ರವಾರ ಸರ್ವ ಪಕ್ಷ ಸಭೆಯನ್ನು ಪ್ರಧಾನಿ ಕರೆದಿದ್ದಾರೆ. ಅದರ ಮುನ್ನಾದಿನವೇ ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರ ನಡೆದಿದೆ.

ಚೀನಾ ಕಂಪನಿಗೆ ಗುತ್ತಿಗೆ

ಕೇಂದ್ರ ಸರ್ಕಾರವು ಚೀನಾದ ಮುಂದೆ ತಲೆಬಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆರೋಪಿಸಿದ್ದಾರೆ.

‘ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರವು ಚೀನಾಕ್ಕೆ ಗಟ್ಟಿ ಸಂದೇಶ ರವಾನಿಸಬೇಕಿತ್ತು. ಆದರೆ, ದೆಹಲಿ–ಮೀರಠ್‌ ಸೆಮಿ ಸ್ಪೀಡ್‌ ರೈಲು ಕಾರಿಡಾರ್‌ ನಿರ್ಮಾಣ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಲಾಗಿದೆ. ಈ ಮೂಲಕ ಸರ್ಕಾರವು ಚೀನಾಕ್ಕೆ ತಲೆ ಬಾಗಿದೆ. ಕಾರಿಡಾರ್‌ ಯೋಜನೆಯನ್ನು ನಿರ್ಮಿಸುವ ಸಾಮರ್ಥ್ಯ ಇರುವ ಭಾರತೀಯ ಕಂಪನಿಗಳು ಹಲವಿವೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT