ಗುರುವಾರ , ಡಿಸೆಂಬರ್ 3, 2020
20 °C

ಲೋಕಸಭಾ ಚುನಾವಣೆ: ಬಿಹಾರದಲ್ಲಿ ಬಿಜೆಪಿ–ಜೆಡಿಯುಗೆ ಸಮಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಮತ್ತು ಬಿಜೆಪಿ ನಡುವೆ ಕಗ್ಗಂಟಾಗಿದ್ದ ಸ್ಥಾನ ಹೊಂದಾಣಿಕೆ ಸಮಸ್ಯೆಗೆ ಎರಡೂ ಪಕ್ಷಗಳು ಶುಕ್ರವಾರ ಪರಿಹಾರ ಕಂಡುಕೊಂಡಿವೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ಸಮನಾಗಿ ಸ್ಥಾನಗಳನ್ನು ಹಂಚಿಕೊಳ್ಳುವ ಒಮ್ಮತದ ನಿರ್ಧಾರಕ್ಕೆ ಬಂದಿವೆ.

ಎನ್‌ಡಿಎ ಉಳಿದ ಮಿತ್ರ ಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷಗಳಿಗೂ (ಆರ್‌ಎಲ್‌ಎಸ್‌ಪಿ) ನ್ಯಾಯೋಚಿತ ಪಾಲು ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ನಿತೀಶ್‌ ಕುಮಾರ್‌ ಶುಕ್ರವಾರ ಸ್ಥಾನ ಹೊಂದಾಣಿಕೆ ಕುರಿತು ಚರ್ಚಿಸಿದ ಬಳಿಕ ಈ ಒಮ್ಮತದ ನಿರ್ಧಾರಕ್ಕೆ ಬಂದರು.

ಹೆಚ್ಚು ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದ್ದ ಬಿಜೆಪಿ ತನ್ನ ಪಟ್ಟನ್ನು ಸಡಿಲಿಸಿತೇ ಎಂಬ ಪ್ರಶ್ನೆಗೆ, ‘ಹೊಸದಾಗಿ ಮೈತ್ರಿಕೂಟ ಸೇರಿದ ಪಕ್ಷದ ಜತೆ ಹೊಂದಾಣಿಕೆ ಅನಿವಾರ್ಯ’ ಎಂದು ಶಾ ಪ್ರತಿಕ್ರಿಯಿಸಿದ್ದಾರೆ.

ಎನ್‌ಡಿಎಯ ನಾಲ್ಕು ಅಂಗಪಕ್ಷಗಳ ಜತೆ ಸಮಾಲೋಚನೆ ಬಳಿಕ ಸೀಟು ಹೊಂದಾಣಿಕೆ ಸೂತ್ರ ಅಂತಿಮಗೊಳ್ಳಲಿದೆ. ಇನ್ನೂ ಮೂರ‍್ನಾಲ್ಕು ದಿನಗಳಲ್ಲಿ ಸೀಟು ಹಂಚಿಕೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ನಿತೀಶ್‌ ಕುಮಾರ್‌ ತಿಳಿಸಿದ್ದಾರೆ. ಇದಕ್ಕೂ ಮೊದಲು ಅವರು ಮೋದಿ ಅವರನ್ನು ಭೇಟಿಯಾಗಿದ್ದರು.

ಕಳೆದ ಬಾರಿ ಸೀಟು ಹಂಚಿಕೆ ಹೀಗಿತ್ತು

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದ 40 ಕ್ಷೇತ್ರಗಳ ಪೈಕಿ ಎನ್‌ಡಿಎ 31 ಸ್ಥಾನಗಳಲ್ಲಿ ಜಯ ಗಳಿಸಿತ್ತು.

30 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ 22 ಕಡೆ, ಮಿತ್ರಪಕ್ಷಗಳಾದ ಎಲ್‌ಜೆಪಿ ಆರು ಮತ್ತು ಆರ್‌ಎಲ್‌ಎಸ್‌ಪಿ ಮೂರು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು. 

ಆಗ ಯುಪಿಎ ಜತೆ ಕೈಜೋಡಿಸಿದ್ದ ಜೆಡಿಯು ಕೇವಲ ಎರಡು ಸೀಟು ಗಳಿಸಿತ್ತು. ಆರ್‌ಜೆಡಿ ನಾಲ್ಕು ಮತ್ತು ಕಾಂಗ್ರೆಸ್‌ ಎರಡು ಸ್ಥಾನಗಳಲ್ಲಿ ಜಯಗಳಿಸಿದ್ದವು.

2009ರಲ್ಲಿ ಒಟ್ಟಾಗಿ ಚುನಾವಣೆ ಎದುರಿಸಿದ್ದ ಜೆಡಿಯು–ಬಿಜೆಪಿ ಕ್ರಮವಾಗಿ 26 ಮತ್ತು 14 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.

* ಬಿಹಾರದಲ್ಲಿ ಬಿಜೆಪಿ–ಜೆಡಿಯು ಸೇರಿದಂತೆ ಎನ್‌ಡಿಎಯ ಎಲ್ಲ ನಾಲ್ಕು ಅಂಗಪಕ್ಷಗಳು ಒಟ್ಟಿಗೆ ಲೋಕಸಭಾ ಚುನಾವಣೆ ಎದುರಿಸಲಿವೆ

ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು