ಬುಧವಾರ, ಜೂನ್ 23, 2021
26 °C

ಮಹಾ ಸಿಎಂ ಪ್ರಹಸನದಿಂದ ಲೂಟಿಗೆ ಬ್ರೇಕ್ ಎಂದ ಅನಂತ್; ನಿರಾಕರಿಸಿದ ಫಡಣವೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಾರಾಷ್ಟ್ರದಲ್ಲಿ ಬಹುಮತ ಇಲ್ಲವೆಂದು ತಿಳಿದಿದ್ದರೂ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾಗಿದ್ದೇಕೆ ಎನ್ನುವುದಕ್ಕೆ ಸದಾ ಒಂದಿಲ್ಲೊಂದು ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರಣ ನೀಡಿದ್ದಾರೆ.

ಬಿಜೆಪಿಯು ಮುಂಜಾನೆಯೇ ದೇವೇಂದ್ರ ಫಡಣವೀಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಉದ್ದೇಶಪೂರ್ವಕ ಪೂರ್ವನಿಯೋಜಿತ ನಾಟಕ ಎಂದು ಅವರು ಹೇಳಿದ್ದಾರೆ.

'ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡಣವೀಸ್ ಅವರು 80 ಗಂಟೆಗಳ ಮುಖ್ಯಮಂತ್ರಿಯಾಗಿರುವುದು ಮತ್ತು ರಾಜೀನಾಮೆ ನೀಡಿದ್ದು ನಿಮಗೆಲ್ಲರಿಗೂ ತಿಳಿದಿದೆ. ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿದ್ದೇಕೆ  ಎಂದು ಹಲವರು ನಮ್ಮನ್ನು ಪ್ರಶ್ನಿಸಿದ್ದರು' ಎಂದ ಅನಂತ್ ಕುಮಾರ್ ಹೆಗಡೆ, ಬಹುಮತ ಇಲ್ಲವೆಂಬುದು ನಮಗೆ ಗೊತ್ತಿತ್ತು. ಆದರೆ ಮಹಾರಾಷ್ಟ್ರದ ಖಜಾನೆಯಲ್ಲಿರುವ ನಿಧಿಯನ್ನು ರಕ್ಷಿಸುವುದಕ್ಕಾಗಿ ಈ ರೀತಿ ನಾಟಕವಾಡಬೇಕಾಯಿತು ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. 

BJP leader Ananth K Hegde in Uttara Kannada yesterday: You all know our man in Maharashtra became CM for 80 hours. Then, Fadnavis resigned. Why did he do this drama? Didn't we know that we don't have majority and yet he became CM. This is the question everyone is asking. pic.twitter.com/DsWKV2uJjs

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡಣವೀಸ್ ಅವರಿಗೆ ಕೇಂದ್ರದ ಸುಮಾರು ₹ 40,000 ಕೋಟಿ ಅನುದಾನ ಬಳಕೆಯ ಅಧಿಕಾರವಿತ್ತು. ಆದರೆ ಕಾಂಗ್ರೆಸ್-ಎನ್‌ಸಿಪಿ ಮತ್ತು ಶಿವಸೇನಾ ಸರ್ಕಾರ ರಚನೆಯಾದರೆ ಅಭಿವೃದ್ಧಿಗಾಗಿ ಬಂದಿದ್ದ ಅನುದಾನ ದುರ್ಬಳಕೆಯಾಗುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಹೀಗಾಗಿ ಅಲ್ಲೊಂದು ನಾಟಕ ಸೃಷ್ಟಿಯಾಯಿತು. ಫಡಣವೀಸ್ ಅವರು 15 ಗಂಟೆಗಳ ಮುಖ್ಯಮಂತ್ರಿಯಾದರು ಮತ್ತು ₹ 40,000 ಕೋಟಿ ಅನುದಾನವನ್ನು ಕೇಂದ್ರಕ್ಕೆ ಹಿಂತಿರುಗಿಸಿದರು ಎಂದು ತಿಳಿಸಿದ್ದಾರೆ.

ಫಡಣವೀಸ್ ಸ್ಪಷ್ಟನೆ

ನಾನು ಮುಖ್ಯಮಂತ್ರಿಯಾಗಿದ್ದಾಗ ಈ ರೀತಿಯ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರು ಸ್ಪಷ್ಟನೆ ನೀಡಿದ್ದು, ಇಂತಹ ಆರೋಪಗಳು ಆಧಾರ ರಹಿತ ಎಂದು ತಿಳಿಸಿದ್ದಾರೆ. 

ಅನಂತ್ ಕುಮಾರ್ ಹೆಗಡೆ ಈ ರೀತಿ ಹೇಳಿರುವುದು ಕಳೆದ ಕೆಲವು ದಿನಗಳಿಂದ ವಾಟ್ಸ್ ಆಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶದ ಆಧಾರದಲ್ಲಿ ಎಂದು ಎಎನ್‌ಐ ಸಂಪಾದಕಿ ಸ್ಮಿತಾ ಪ್ರಕಾಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಶಿವಸೇನಾ ನಾಯಕ ಸಂಜಯ್ ರಾವುತ್, ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿರುವಂತೆ ಫಡಣವೀಸ್ 80 ಗಂಟೆ ಮುಖ್ಯಮಂತ್ರಿಯಾಗಿದ್ದದ್ದು ಕೇಂದ್ರಕ್ಕೆ ಅನುದಾನ ವಾಪಸ್ ನೀಡಲು ಎಂದಾದರೆ ಇದು ಮಹಾರಾಷ್ಟ್ರಕ್ಕೆ ಬಗೆದ ದ್ರೋಹ ಎಂದು ಕಿಡಿಕಾರಿದ್ದಾರೆ. 

ಮಹಾರಾಷ್ಟ್ರದಲ್ಲಿ ಏಕೈಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯು ರಾಜ್ಯಪಾಲರ ಸರ್ಕಾರ ರಚನೆಯ ಆಹ್ವಾನವನ್ನು ಕೈಬಿಟ್ಟು ಹೊರನಡೆದಿತ್ತು. ಮುಖ್ಯಮಂತ್ರಿ ಹುದ್ದೆ ಹಂಚಿಕೆ ವಿಚಾರವಾಗಿ ಶಿವಸೇನಾ ಪಟ್ಟು ಸಡಿಲಿಸಿದ ಕಾರಣದಿಂದಾಗಿ ಮೈತ್ರಿಯಲ್ಲಿ ಒಡಕುಂಟಾಗಿ ಪರ್ಯಾಯ ಮಾರ್ಗಗಳತ್ತ ಶಿವಸೇನಾ ಮುಖ ಮಾಡಿತ್ತು. ಈ ವೇಳೆ ರಾಜ್ಯದಲ್ಲಿ ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ ಸೇರಿ ಸರ್ಕಾರ ರಚಿಸುವ ಮಾತುಕತೆ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ್ದರು. ನವೆಂಬರ್ 23ರಂದು ಮುಂಜಾನೆ 5.47ಕ್ಕೆ ರಾಷ್ಟ್ರಪತಿ ಆಳ್ವಿಕೆಯನ್ನ ಹಿಂತೆಗೆದುಕೊಂಡ ಬಳಿಕ ಶಿವಸೇನಾದ ಅಜಿತ್ ಪವಾರ್ ಅವರೊಂದಿಗೆ ಸೇರಿ ಬಿಜೆಪಿಯ ದೇವೇಂದ್ರ ಫಡಣವೀಸ್ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದನ್ನು ಪ್ರಶ್ನಿಸಿ ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂ ತೀರ್ಪು ನೀಡಿದಾಗ ದೇವೇಂದ್ರ ಫಡಣವೀಸ್ ರಾಜೀನಾಮೆ ನೀಡಿ ಹೊರನಡೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು