ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ರಾಜಸ್ಥಾನ ಸರ್ಕಾರ ಉರುಳಿಸಲು ಯತ್ನ: ದೂರು ಸಲ್ಲಿಕೆ

ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಿಡಿ
Last Updated 12 ಜೂನ್ 2020, 15:37 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ಸರ್ಕಾರ ಉರುಳಿಸಲು ನಡೆಯುತ್ತಿರುವ ಷಡ್ಯಂತ್ರಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ವಿಶೇಷ ಕಾರ್ಯಾಚರಣೆ ತಂಡಕ್ಕೆ ದೂರು ಸಲ್ಲಿಸಲಾಗಿದೆ.

ಕಾಂಗ್ರೆಸ್‌ ಪಕ್ಷದ ಮುಖ್ಯ ಸಚೇತಕ ಮಹೇಶ್‌ ಜೋಶಿ ಈ ದೂರು ಸಲ್ಲಿಸಿದ್ದಾರೆ. ರಾಜಕೀಯ ಮತ್ತು ಇತರ ವ್ಯಕ್ತಿಗಳು ರಾಜ್ಯಸಭಾ ಚುನಾವಣೆಯಲ್ಲಿ ಪ್ರಭಾವ ಬೀರಿ ಕಾಂಗ್ರೆಸ್‌ ಶಾಸಕರನ್ನು ಸೆಳೆಯುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ ಎಂದು ದೂರಿದ್ದಾರೆ.

‘ಕಾಂಗ್ರೆಸ್‌ ಮತ್ತು ಪಕ್ಷೇತರ ಶಾಸಕರಿಗೆ ಬಿಜೆಪಿ ನಾಯಕರು ಕರೆ ಮಾಡುತ್ತಿದ್ದಾರೆ. ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಏನು ನಡೆಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ರಾಜಸ್ಥಾನದಲ್ಲಿ ಪ್ರಯೋಗ ಮಾಡಲಾಗುತ್ತಿದೆ. ಹೀಗಾಗಿ, ಹಣ ವರ್ಗಾವಣೆಯ ಸಂಘಟಿತ ಅಪರಾಧದ ಬಗ್ಗೆ ತನಿಖೆ ನಡೆಸುವಂತೆ ಪಕ್ಷ ದೂರು ಸಲ್ಲಿಸಿದೆ’ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ತಿಳಿಸಿದ್ದಾರೆ.

‘ಕೋವಿಡ್‌–19 ಸಂಕಷ್ಟದ ಕಾಲದಲ್ಲಿಯೂ ಬಿಜೆಪಿ ವರಿಷ್ಠರು ಸರ್ಕಾರಗಳನ್ನು ಉರುಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಮಾತ್ರ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವಕ್ಕೆ ಇದು ಒಳ್ಳೆಯದಲ್ಲ’ ಎಂದು ಹೇಳಿದ್ದಾರೆ.

ಸದ್ಯ ಕಾಂಗ್ರೆಸ್‌ ಶಾಸಕರು ದೆಹಲಿ ಹೆದ್ದಾರಿಯಲ್ಲಿರುವ ಶಿವ ವಿಲಾಸ್‌ ರೆಸಾರ್ಟ್‌ನಲ್ಲಿ ತಂಗಿದ್ದಾರೆ. ಮುಖ್ಯಮಂತ್ರಿ ಗೆಹ್ಲೋಟ್‌ ಅವರು ಸಹ ಗುರುವಾರ ಇದೇ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು.

ಮುಖ್ಯಮಂತ್ರಿಯಿಂದಲೇ ರಾಜಕೀಯ ನಾಟಕ:ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಪ್ರತಿಪಾದಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ,ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಸೃಷ್ಟಿ ಎಂದು ಟೀಕಿಸಿದ್ದಾರೆ.

ಆಧಾರರಹಿತ ಆರೋಪಗಳನ್ನು ಬಿಜೆಪಿ ವಿರುದ್ಧ ಮಾಡಲಾಗುತ್ತಿದೆ. ನೈಜ ಸಾಕ್ಷ್ಯಾಧಾರಗಳನ್ನು ಕಾಂಗ್ರೆಸ್‌ ಪ್ರಸ್ತುತ ಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT