ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಿಗೊಮ್ಮೆ ಬ್ಲಾಂಕೆಟ್‌ ಶುಚಿ!

ರಾಜಧಾನಿ, ಆಗಸ್ಟ್‌ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲುಗಳಲ್ಲೇ ನೈರ್ಮಲ್ಯದತ್ತ ನಿರ್ಲಕ್ಷ್ಯ
Last Updated 6 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಮುಂಬೈ: ದೇಶದ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬೈ ಮಧ್ಯೆ ಓಡುವ ಪ್ರತಿಷ್ಠಿತ ರಾಜಧಾನಿ ಎಕ್ಸ್‌ಪ್ರೆಸ್‌ ಮತ್ತು ‘ಆಗಸ್ಟ್‌ ಕ್ರಾಂತಿ’ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸುವ ಬ್ಲಾಂಕೆಟ್‌ಗಳನ್ನು ತಿಂಗಳಿಗೆ ಒಂದು ಬಾರಿ ಮಾತ್ರ ತೊಳೆಯಲಾಗುತ್ತದೆ!

ಕಂದು ಹಾಗೂ ಕಪ್ಪು ಬಣ್ಣದ ಈ ಬ್ಲಾಂಕೆಟ್‌ಗಳನ್ನು ತಿಂಗಳಿಗೆ ಒಂದು ಸಲವಷ್ಟೇ ತೊಳೆಯುತ್ತಿರುವ ಆಘಾತಕಾರಿ ಮಾಹಿತಿ ಆ ರೈಲುಗಳನ್ನು ಬಳಸುವ ಪ್ರಯಾಣಿಕರಿಗೇ ಗೊತ್ತಿರಲಿಲ್ಲ. ಆದರೆ, ಪಶ್ಚಿಮ ರೈಲ್ವೆ ವಲಯದ ಅಧಿಕಾರಿಗಳೇ ಈಗ ಮಾಹಿತಿ ಒದಗಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಜತಿನ್‌ ದೇಸಾಯಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಮುಂಬೈ ಸೆಂಟ್ರಲ್‌ನ ಸಹಾಯಕ ವಿಭಾಗೀಯ ವ್ಯವಸ್ಥಾಪಕ ಶ್ಯಾಮ್‌ಕಾಂತ್‌ ಮೋಹಿತೆ ಈ ಮಾಹಿತಿಯನ್ನು ನೀಡಿದ್ದಾರೆ. ಬಿಳಿಯ ಹೊದಿಕೆಗಳನ್ನು ಪ್ರತಿದಿನವೂ ತೊಳೆಯಲಾಗುತ್ತದೆ. ಆದರೆ, ಬ್ಲಾಂಕೆಟ್‌ಗಳನ್ನು ಮಾತ್ರ ತಿಂಗಳಿಗೆ ಒಂದು ಬಾರಿಯಂತೆ ಶುಚಿಗೊಳಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

‘ಕೊವಿಡ್‌–19 ವೈರಸ್‌ ಭೀತಿ ಎಲ್ಲೆಡೆ ಹರಡಿರುವಾಗ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ. ಆದರೆ, ರೈಲ್ವೆ ಇಲಾಖೆ ಶುಚಿತ್ವದ ವಿಷಯವಾಗಿ ತೋರಿರುವ ನಿರ್ಲಕ್ಷ್ಯ ಆಶ್ಚರ್ಯ ತಂದಿದೆ’ ಎಂದು ದೇಸಾಯಿ ಪ್ರತಿಕ್ರಿಯಿಸಿದ್ದಾರೆ.

‘ಆಗಸ್ಟ್‌ ಕ್ರಾಂತಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆಯೇ? ಹೊದಿಕೆ ಮತ್ತು ತಲೆದಿಂಬಿನ ಚೀಲಗಳನ್ನು ಶುಚಿಯಾಗಿ ಇಡಲಾಗಿದೆಯೇ’ ಎಂಬ ಪ್ರಶ್ನೆಗೆ, ‘ಶುಚಿತ್ವ ಕಾಪಾಡಲಾಗಿದೆ’ ಎಂಬ ಉತ್ತರವನ್ನು ನೀಡಲಾಗಿದೆ.

‘ಬ್ಲಾಂಕೆಟ್‌ಗಳ ಶುಚಿತ್ವ ಕಾಪಾಡಲಾಗಿದಯೇ’ ಎಂಬ ಮತ್ತೊಂದು ಪ್ರಶ್ನೆಗೆ, ‘ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ’ ಎಂದು ಮಾಹಿತಿ ನೀಡಲಾಗಿದೆ.

ದೇಸಾಯಿ ಅವರು ಮೂರನೇ ಪ್ರಶ್ನೆಯಲ್ಲಿ ‘ಪ್ರಯಾಣಿಕರಿಗೆ ಎಷ್ಟು ಸಲ ಉಪಯೋಗಿಸಿದ ಬೆಡ್‌ಶೀಟ್‌, ತಲೆದಿಂಬಿನ ಚೀಲ ಮತ್ತು ಬ್ಲಾಂಕೆಟ್‌ಗಳನ್ನು ನೀಡಲಾಗುತ್ತದೆ’ ಎಂದು ಕೇಳಿದ್ದಾರೆ. ‘ಪ್ರತಿಸಲವೂ ತಾಜಾ
ಹೊದಿಕೆ ನೀಡಲಾಗುತ್ತದೆ’ ಎಂಬ ಉತ್ತರ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT