ಸೋಮವಾರ, ಮೇ 17, 2021
23 °C
ಕೇರಳ ಹೈಅಲರ್ಟ್‌

ದಕ್ಷಿಣ ಭಾರತದಲ್ಲಿ ದಾಳಿಗೆ ಉಗ್ರರ ಯೋಜನೆ;ಗುಜರಾತ್‌ ಕರಾವಳಿಯಲ್ಲಿ ದೋಣಿಗಳು ಪತ್ತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪುಣೆ: ದಕ್ಷಿಣ ಭಾರತದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಸೇನೆಗೆ ಗುಪ್ತಚರ ಮಾಹಿತಿ ದೊರೆತಿದೆ. ಗುಜರಾತ್‌ನ ಸರ್‌ ಕ್ರೀಕ್‌ ವಲಯದಲ್ಲಿ ಯಾರೊ ಬಿಟ್ಟು ಹೋಗಿರುವ ದೋಣಿಗಳು ಪತ್ತೆಯಾಗಿರುವುದಾಗಿ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಜಲ ಮಾರ್ಗದ ಮೂಲಕ ಪಾಕಿಸ್ತಾನದ ಕಮಾಂಡೊಗಳು ಒಳನುಸುಳುವ ಪ್ರಯತ್ನ ನಡೆಸಲಿದ್ದಾರೆ ಎಂದು ಗುಪ್ತಚರ ಮಾಹಿತಿ ದೊರೆತಿದ್ದ ಹಿನ್ನೆಲೆಯಲ್ಲಿ ಗುಜರಾತ್‌ನ ಬಂದರುಗಳಲ್ಲಿ ವಾರದ ಹಿಂದೆ ಹೈ ಅಲರ್ಟ್‌ ಘೋಷಣೆಯಾಗಿತ್ತು. ಕಚ್‌ ಪ್ರದೇಶದ ಮೂಲಕ ಗುಜರಾತ್‌ ಪ್ರವೇಶಿಸಿ ಭಯೋತ್ಪಾದಕ ದಾಳಿ ನಡೆಸುವ ಯೋಜನೆ ರೂಪಿಸಿರುವುದಾಗಿ ಗುಪ್ತಚರ ಮಾಹಿತಿ ರವಾನೆಯಾಗಿತ್ತು. ಅದಾಗಿ ವಾರದ ನಂತರ ದಕ್ಷಿಣ ಭಾರತದಲ್ಲಿ ದಾಳಿಯ ಕಟ್ಟೆಚ್ಚರ ರವಾನೆಯಾಗಿದೆ. 

ಇದನ್ನೂ ಓದಿ: ಸರ್ ಕ್ರೀಕ್ ಕೊಲ್ಲಿ ಕಥೆ

‘ಭಾರತದ ದಕ್ಷಿಣ ಭಾಗದಲ್ಲಿ ಉಗ್ರರ ದಾಳಿ ಸಾಧ್ಯತೆ ಕುರಿತು ಬಹಳಷ್ಟು ಮಾಹಿತಿ ತಿಳಿದುಬಂದಿದೆ. ಸರ್‌ ಕ್ರೀಕ್‌ ವಲಯದಲ್ಲಿಯೂ ವಾರಸುದಾರರು ಇಲ್ಲದ ದೋಣಿಗಳು ಪತ್ತೆಯಾಗಿವೆ‘ ಜನರಲ್‌ ಆಫೀಸರ್‌ ಕಮಾಂಡಿಂಗ್‌(ಸದರ್ನ್ ಕಮಾಂಡ್) ಎಸ್‌.ಕೆ.ಸೈನಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. 

ಇದನ್ನೂ ಓದಿ: ಜಲ ಮಾರ್ಗವಾಗಿ ಪಾಕ್ ಉಗ್ರರು ದೇಶದೊಳಗೆ ನುಸುಳುವ ಎಚ್ಚರಿಕೆ: ಗುಪ್ತಚರ ದಳ

ಸೇನಾಧಿಕಾರಿಗಳ ಎಚ್ಚರಿಕೆ ಸಂದೇಶದ ಬೆನ್ನಲೇ ಕೇರಳ ಪೊಲೀಸ್‌ ಮುಖ್ಯಸ್ಥರು ಎಲ್ಲ ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ರವಾನಿಸಿದೆ. ಕರಾವಳಿ ಭಾಗದಲ್ಲಿ ವಿಶೇಷ ಎಚ್ಚರಿಕೆ ವಹಿಸುವುದು, ಜನಜಂಗುಳಿ ಇರುವು ಬಸ್‌ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣ ಹಾಗೂ ಶಾಪಿಂಗ್‌ ಮಾಲ್‌ಗಳಲ್ಲಿ ನಿಗಾವಹಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

‘ಪಾಕಿಸ್ತಾನ ಮೂಲಕ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯು ನೀರಿನ ಆಳದಿಂದ ನಡೆಸಬಹುದಾದ ದಾಳಿಯ ತರಬೇತಿಯನ್ನು ತನ್ನ ಸದಸ್ಯರಿಗೆ ನೀಡುತ್ತಿದೆ‘ ಎಂದು ಗುಪ್ತಚರ ಮಾಹಿತಿ ಆಧರಿಸಿ ನೌಕಾ ಪಡೆಯ ಮುಖ್ಯಸ್ಥ ಕರಂಬಿರ್‌ ಸಿಂಗ್‌ ಅವರು ಈ ಹಿಂದೆ ಪ್ರಸ್ತಾಪಿಸಿದ್ದರು. 

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಗುವಿನ ವಾತಾವರಣ ಮನೆ ಮಾಡಿದೆ. ಜಮ್ಮು–ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಲಾಗಿದೆ. ಪಾಕಿಸ್ತಾನ ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿತ್ತು ಹಾಗೂ ಪಾಕಿಸ್ತಾನದಲ್ಲಿ ಭಾರತದ ರಾಯಭಾರಿಯನ್ನು ಕರೆಸಿಕೊಂಡು ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ, ಭಾರತ ಇದು ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು