ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುನಾಡ ಅನ್ನದಾತರ ಬಜೆಟ್ ಕನಸು

Last Updated 4 ಜುಲೈ 2019, 12:42 IST
ಅಕ್ಷರ ಗಾತ್ರ

ಭಾರತದಲ್ಲಿ ರಾಜಸ್ಥಾನ ಹೊರತುಪಡಿಸಿದರೆ, ಅತಿ ಹೆಚ್ಚು ಮಳೆಯಾಶ್ರಿತ ಕೃಷಿ ಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಮಾತ್ರವಲ್ಲ, ಅತಿ ಹೆಚ್ಚು ನೀರಿನ ಕೊರತೆ ಹಾಗೂ ತೀವ್ರ ತರಹದ ಬರ ಎದುರಿಸುತ್ತಿರುವ ರಾಜ್ಯವೂ ಹೌದು.

ಪ್ರಸ್ತುತ ರಾಜ್ಯದಲ್ಲಿರುವ ತೀವ್ರ ಬರಗಾಲ ಮತ್ತು ಅಷ್ಟೇ ತೀವ್ರವಾಗಿರುವ ನೀರಿನ ಪರಿಸ್ಥಿತಿಯನ್ನು ಸುಧಾರಿಸಲು ‘ನೆಲ –ಜಲ’ ಸಂರಕ್ಷಣೆಗಾಗಿ ದೂರಗಾಮಿ ಯೋಜನೆಯೊಂದು ರೂಪಿಸಬೇಕಾದದ್ದು ಇಂದಿನ ಅನಿವಾರ್ಯ. ನಾಳೆ (ಜುಲೈ 5) ಮಂಡನೆಯಾಗುವ ಈ ಬಾರಿಯ ಕೇಂದ್ರ ಆಯವ್ಯಯದಲ್ಲಿ ಕರ್ನಾಟಕದ ಒಣಭೂಮಿ / ಮಳೆಯಾಶ್ರಿತ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಬಹುದು ಎನ್ನುವ ನಿರೀಕ್ಷೆ ಹಲವರಲ್ಲಿದೆ. ಈ ಪ್ಯಾಕೇಜ್‌ನಡಿ ಸಮುದಾಯ ಆಧಾರಿತ ನೆಲ–ಜಲ ಸಂರಕ್ಷಣೆಯ ಯೋಜನೆಗಳು, ಸಮುದಾಯದಿಂದಲೇ ಬರ ಸಹಿಷ್ಣು ಬೆಳೆ/ತಳಿಗಳ ಅಭಿವೃದ್ಧಿ, ರೈತ ಸಹಭಾಗಿತ್ವದ ಮಾರುಕಟ್ಟೆ, ಗ್ರಾಮೀಣ ನಿರುದ್ಯೋಗಿ ಯುವಕರಿಗೆ, ಹಳ್ಳಿಗಳಲ್ಲೇ ಉದ್ಯೋಗ ಲಭ್ಯವಾಗುವಂತಹ ಕೃಷಿ ಆಧಾರಿತ ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರವನ್ನು ಹಳ್ಳಿಗಳಲ್ಲೇ ಸ್ಥಾಪಿಸಿದರೆ ಅನುಕೂಲ ಎನ್ನುವ ಆಶಯಗಳು ವ್ಯಕ್ತವಾಗಿವೆ.

ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದ ಬಳಿ ಸಜ್ಜೆ ಬಿತ್ತನೆಯಲ್ಲಿ ತೊಡಗಿರುವರೈತರು.
ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದ ಬಳಿ ಸಜ್ಜೆ ಬಿತ್ತನೆಯಲ್ಲಿ ತೊಡಗಿರುವರೈತರು.

‌ನೆಲ–ಜಲ ಸಂರಕ್ಷಣೆಗೆ ಆದ್ಯತೆ

ಪ್ರಸ್ತುತ ಕರ್ನಾಟಕ ಸರ್ಕಾರ ಮಣ್ಣು–ನೀರಿನ ಸಂರಕ್ಷಣೆಗಾಗಿ ‘ಜಲಾಮೃತ’ ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರವೂ ಇದೇ ಕಾರ್ಯಕ್ಕಾಗಿ ‘ಅಟಲ್ ಭೂ-ಜಲ ಸುಧಾರಣೆ’ ಯೋಜನೆ ಜಾರಿಗೆ ತಂದಿದೆ. ರಾಜ್ಯದಲ್ಲಿ ಈ ಎರಡೂ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಕೇಂದ್ರ ಸರ್ಕಾರ ಈ ಬಜೆಟ್ ನಲ್ಲಿ ‘ಜಲಾಮೃತ’ ಯೋಜನೆಗೆ ಹೆಚ್ಚುವರಿ ಹಣ ನೀಡಬೇಕು. ಈ ಹಣದಿಂದ ಸಮುದಾಯ ಆಧಾರಿತ ಯೋಜನೆ ರೂಪಿಸಬೇಕು. ತರಬೇತಿ, ಚಟುವಟಿಕೆಗಳ ಅನುಷ್ಠಾನ, ಮಾದರಿಗಳನ್ನು ಸೃಜನೆ, ಸಮುದಾಯಗಳಿಗೆ ತಂತ್ರಜ್ಞಾನಗಳನ್ನು ವರ್ಗಾಯಿಸುವ ಕೆಲಸ ಮಾಡಬೇಕು.

ಜಲಾನಯ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಆದರೆ, ಜಲಾನಯನ ಪ್ರದೇಶ ಅಭಿವೃದ್ಧಿಯಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೆ, ಮಹಾರಾಷ್ಟ್ರದ ಪಾನಿ ಪೌಂಡೇಷನ್ ಸೇರಿದಂತೆ ದೇಶದಲ್ಲಿ ಹಲವು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಮುದಾಯ ಸಂಘಟನೆಗಳು ನಾಲ್ಕೈದು ವರ್ಷಗಳಿಂದ ಮಣ್ಣು – ನೀರಿನ ಸಂರಕ್ಷಣೆ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿವೆ. ಮಾದರಿಗಳನ್ನೂ ಸೃಷ್ಟಿಸಿವೆ. ಇಂಥ ಯಶಸ್ವಿ ಚಟುವಟಿಕೆಗಳನ್ನು ಸರ್ಕಾರ ಮಾದರಿಗಳನ್ನಾಗಿ ಪರಿಗಣಿಸಬಹುದು.

ನೆಲ-ಜಲ ಸಂರಕ್ಷಣೆ ಎನ್ನುವುದು, ಕೃಷಿ ಚಟುವಟಿಕೆಗಳ ಭಾಗವಾಗಿಸಬೇಕು. ಇದಕ್ಕಾಗಿ ಕಡಿಮೆ ನೀರು ಕೇಳುವ ಹಾಗೂ ಬರ ನಿರೋಧಕ ತಳಿಗಳ ಅಭಿವೃದ್ಧಿ, ತೋಟಗಾರಿಕಾ ಬೆಳೆಗಳಲ್ಲಿ ಕಡಿಮೆ ನೀರು ಬಳಸುವಂತಹ ತಾಂತ್ರಿಕತೆಗೆ ಒತ್ತು ನೀಡಬೇಕು. ಇದನ್ನು ವಿಶ್ವವಿದ್ಯಾಲಯಗಳ ಪ್ರಯೋಗಾಲಯದಿಂದ ಆರಂಭಿಸುವ ಬದಲು, ಸಮುದಾಯದ ಅಂಗಳದಲ್ಲಿರುವ ತಳಿಗಳನ್ನೇ ಗುರುತಿಸುವ ಮತ್ತು ಅವುಗಳನ್ನು ಅಭಿವೃದ್ಧಿಪಡಿಸಿ, ರೈತರಿಗೆ ಹಂಚುವಂತಹ ಕೆಲಸವಾಗಬೇಕು.

ಈ ನಿಟ್ಟಿನಲ್ಲಿ ನೆಲ-ಜಲ ಸಂರಕ್ಷಿಸುತ್ತಿರುವ ಸಮುದಾಯ ಮತ್ತು ವ್ಯಕ್ತಿಗಳನ್ನು ಗುರುತಿಸಿ, ಅವರನ್ನೇ ಸಂಪನ್ಮೂಲ ವ್ಯಕ್ತಿಯಾಗಿ ಬಳಸಿಕೊಳ್ಳಬೇಕು. ಇವರ ನೇತೃತ್ವದಲ್ಲೇ ತರಬೇತಿ- ಯೋಜನೆಗಳನ್ನು ರೂಪಿಸಬೇಕು. ಇದರಿಂದ ಸರ್ಕಾರದ ಹಣ ಸಮುದಾಯಕ್ಕೆ ತಲುಪಿ, ಸಮುದಾಯದ ಮೂಲಕವೇ ಯೋಜನೆ ಅನುಷ್ಠಾನಗೊಳ್ಳುತ್ತದೆ. ಆಗ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ರೈತರು/ಯುವ ಸಮೂಹಕ್ಕೇ ಹಣ ತಲುಪುತ್ತದೆ. ಈ ಕಾರ್ಯಗಳಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನೂ ಬಳಸಬಹುದು. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ.

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿರೈತರುಟ್ಯಾಕ್ಟರ್ ಮೂಲಕ ಗದ್ದೆಯನ್ನು ಉಳುತ್ತಿರುವ ದೃಶ್ಯ. ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿರೈತರುಟ್ಯಾಕ್ಟರ್ ಮೂಲಕ ಗದ್ದೆಯನ್ನು ಉಳುತ್ತಿರುವ ದೃಶ್ಯ. ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ

ಕೃಷಿ ಆಧಾರಿತ ಉದ್ಯೋಗ

ನವಣೆ, ಸಾಮೆ, ಸಜ್ಜೆ, ಹಾರಕ, ಬರಗು, ಊದಲು, ರಾಗಿ, ಜೋಳದಂತಹ ಸಿರಿಧಾನ್ಯಗಳು ಬೆಳೆಗಳ ನಾಡು ಕರ್ನಾಟಕ. ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿವು. ವಿಪರ್ಯಾಸವೆಂದರೆ, ಇಲ್ಲಿ ಬೆಳೆಯುವ ಸಿರಿಧಾನ್ಯಗಳು ಖರೀದಿಯಾಗಿ, ಬೇರೆಡೆ ಉಪ ಉತ್ಪನ್ನಗಳಾಗಿ, ತಮ್ಮೂರಿನ ಅಂಗಡಿಗಳಲ್ಲೇ ಮಾರಾಟವಾಗುತ್ತವೆ. ಬೆಳೆದವರೇ ಆ ಉತ್ಪನ್ನಗಳನ್ನು ಖರೀದಿಸುವಂತಾಗಿದೆ. ಇದು ಸಿರಿಧಾನ್ಯಕ್ಕೆ ಮಾತ್ರವಲ್ಲ, ತೆಂಗು, ಅಡಿಕೆ ಸೇರಿದಂತೆ ಹಲವು ಹಣ್ಣಿನ ಬೆಳೆಗಳು ಮತ್ತು ಧಾನ್ಯಗಳಿಗೂ ಅನ್ವಯವಾಗುತ್ತದೆ. ಇದನ್ನು ತಪ್ಪಿಸಲು ಯಾವ ಬೆಳೆಗಳನ್ನು ಪ್ರಧಾನವಾಗಿ ಬೆಳೆಯುತ್ತಾರೋ, ಆ ಪ್ರದೇಶಗಳಲ್ಲೇ ಬೆಳೆ ಮೌಲ್ಯವರ್ಧಿಸುವ ಘಟಕಗಳನ್ನು ಸ್ಥಾಪಿಸಬೇಕು. ದಶಕಗಳ ಇಂಥ ಪ್ರಯತ್ನಗಳನ್ನು ಸರ್ಕಾರ ನಡೆಸಿತ್ತು. ಆಗ ತೆಂಗು ಬೆಳೆಯುವ ಪ್ರದೇಶದಲ್ಲಿ ನಾರಿನ ಘಟಕ, ಬಿಸ್ಕೀಟ್ ತಯಾರಿಕೆ ಕಾರ್ಖಾನೆ, ಎಣ್ಣೆಕಾಳು ಬೆಳೆಯುವ ಪ್ರದೇಶಗಳಲ್ಲಿ ಎಣ್ಣೆ ತಯಾರಿಕಾ ಘಟಕಗಳನ್ನು ತೆರೆಯಲಾಗಿತ್ತು. ಇದರಿಂದ ಸ್ಥಳೀಯ ರೈತರಿಗೆ/ ಯುವಕರಿಗೆ ಉದ್ಯೋಗ ಲಭ್ಯವಾಗುವ ಜತೆಗೆ, ಇದೇ ಘಟಕದಿಂದ ಸ್ಥಳೀಯ ಉತ್ಪನ್ನಗಳ ಖರೀದಿಯಾಗುತ್ತಿತ್ತು. ಆಗ ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಹೋಗುವ ಪರಿಸ್ಥಿತಿ ಇರಲಿಲ್ಲ. ಆದರೆ, ಇಂಥ ಯೋಜನೆಗಳನ್ನು ಸರ್ಕಾರವೂ ಮುಂದುವರಿಸಲಿಲ್ಲ. ಸಮುದಾಯಗಳೂ ಆಸಕ್ತಿ ತೋರಲಿಲ್ಲ.

ಈ ಬಜೆಟ್‌ನಲ್ಲಿ ಕರ್ನಾಟಕದ ’ಗ್ರಾಮೀಣ ಭಾಗದ ಉದ್ಯೋಗ ಸೃಜನೆ’ಗಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಹಣ ತೆಗೆದಿಡಬೇಕು. ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆ ಮಾಡಿಕೊಂಡು ಉದ್ಯೋಗ ಸೃಷ್ಟಿಸುವ ಘಟಕಗಳನ್ನು ಆರಂಭಿಸಲು ಆದ್ಯತೆ ನೀಡಬೇಕು. ಕೇಂದ್ರದಲ್ಲಿ ಕೌಶಲ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಸಚಿವಾಲಯವಿದೆ. ಅದನ್ನು ಬಳಸಿಕೊಂಡು, ಕೃಷಿ ಉತ್ಪನ್ನ ತಯಾರಿಕಾ ಘಟಕಗಳ ಬದಿಯಲ್ಲೇ ತರಬೇತಿ / ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು. ಎಸ್ ಎಸ್ ಎಸ್ ಎಲ್ ಸಿ ಪಾಸಾದ, ಪಿಯುಸಿ ಫೇಲಾದ ಹಳ್ಳಿಯ ಮಕ್ಕಳಿಗೆ ಇಲ್ಲಿ ತರಬೇತಿ ನೀಡಿ ಘಟಕಗಳಲ್ಲಿ ಉದ್ಯೋಗ ನೀಡುವಂತಾಗಬೇಕು.

ಈಗಂತೂ ಗ್ರಾಮೀಣ ಭಾಗಕ್ಕೂ ಮೊಬೈಲ್ ಫೋನ್, ಇಂಟರ್ನೆಟ್, ಮಾಹಿತಿ ತಂತ್ರಜ್ಞಾನ ಲೋಕ ವಿಸ್ತರಿಸಿಕೊಂಡಿವೆ. ಹೀಗಾಗಿ ನಗರ ಭಾಗದಲ್ಲಿರುವ ಸೌಲಭ್ಯಗಳನ್ನು ಕೃಷಿ ಉತ್ಪನ್ನ ತಯಾರಿಕಾ ಘಟಕಗಳಿಗೂ ನೀಡಬಹುದು. ಹೀಗೆ ಮಾಡುವುದರಿಂದ ‘ವ್ಯಕ್ತಿ ಗೌರವ’ದ ಜತೆಗೆ ಉದ್ಯೋಗವೂ ಸಿಕ್ಕರೆ, ಹಳ್ಳಿಗಳಿಂದ ವಲಸೆ ಹೋಗುವುದನ್ನು ತಪ್ಪಿಸಬಹುದು.

ಪ್ರಸ್ತುತ ಸಿರಿಧಾನ್ಯಗಳನ್ನು ಬೆಳೆಯುವ –ಬಳಸುವ ಪ್ರಮಾಣ ಹೆಚ್ಚಾಗಿದೆ. ಆದರೆ, ಬೆಳೆಯುವ ಸ್ಥಳಗಳಲ್ಲಿ (ಹಳ್ಳಿ ಮಟ್ಟದಲ್ಲಿ) ಸಂಸ್ಕರಣಾ ಘಟಕಗಳಿಲ್ಲದೇ ಬೆಳೆಗಾರರು ಒದ್ದಾಡುತ್ತಿದ್ದಾರೆ. ಹೀಗಾಗಿ ಪುನಃ ಈ ಬೆಳೆಗಳು ಕಂಪನಿಗಳ ಪಾಲಾಗುವ ಹಾಗಾಗಿದೆ. ಸರ್ಕಾರ ಬಜೆಟ್‌ನಲ್ಲಿ ಗ್ರಾಮ ಪಂಚಾಯ್ತಿಗೊಂದು ಸಮುದಾಯ ಆಧಾರಿತ ಸಿರಿಧಾನ್ಯ ಘಟಕಗಳನ್ನು ಸ್ಥಾಪಿಸಲು ಹಣ ತೆಗೆದಿಡಬೇಕು. ಸಿರಿಧಾನ್ಯ ಸಂಸ್ಕರಣಾ ಸಂಶೋಧನೆ ಮತ್ತು ಪಂಚಾಯತ ಮಟ್ಟದಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕು. ಅಲ್ಲಿ ತಯಾರಾಗುವ ಧಾನ್ಯಗಳು, ಆಯಾ ಜಿಲ್ಲೆಯಾದ್ಯಂತ ಮಾರಾಟವಾಗಿ, ಹೆಚ್ಚಾದದ್ದನ್ನು ಪಟ್ಟಣ / ನಗರಗಳಿಗೆ ಕಳಿಸುವಂತೆ ಆಗಬೇಕು.

ಸಿರಿಧಾನ್ಯ ಬೆಳವಣಿಗೆಯನ್ನು ರೈತರು ನೋಡಿಕೊಂಡರೆ, ಸಂಸ್ಕರಣೆ, ತಯಾರಿಕೆ, ಮಾರುಕಟ್ಟೆ, ಉಸ್ತುವಾರಿಯನ್ನು ಆಯಾ ಭಾಗದ ಯುವ ಸಮೂಹಕ್ಕೆ ವಹಿಸಬಹುದು. ಇದರಿಂದ ಆಯಾ ಊರಿನ ಬ್ರಾಂಡ್‌ಗಳನ್ನು ಸೃಷ್ಟಿ ಮಾಡಲು ಸಾಧ್ಯವಿದೆ.

ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಹೊಲದಲ್ಲಿ ರೈತರುಶೇಂಗಾ ಬಿತ್ತನೆಯಲ್ಲಿ ತೊಡಗಿದ್ದಾರೆ. (ಪ್ರಜಾವಾಣಿ ಚಿತ್ರ ಈರಪ್ಪ ನಾಯ್ಕರ್)
ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಹೊಲದಲ್ಲಿ ರೈತರುಶೇಂಗಾ ಬಿತ್ತನೆಯಲ್ಲಿ ತೊಡಗಿದ್ದಾರೆ. (ಪ್ರಜಾವಾಣಿ ಚಿತ್ರ ಈರಪ್ಪ ನಾಯ್ಕರ್)

ಸುಸ್ಥಿರ ಮಾರುಕಟ್ಟೆಗೆ ಆದ್ಯತೆ

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳದ್ದೇ ಹಾವಳಿ. ಇ-ಟ್ರೇಡರ್ಸ್, ಇ-ಕಾಮರ್ಸ್‌ನಂಥ ಉನ್ನತ ತಂತ್ರಜ್ಞಾನದ ಮಾರುಕಟ್ಟೆ ವ್ಯವಸ್ಥೆ ಸರ್ಕಾರ ಜಾರಿಗೆ ತಂದರೂ, ಮಧ್ಯವರ್ತಿಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ.

ಅದಕ್ಕಾಗಿಯೇ ಪ್ರತಿ ಬಜೆಟ್‌ನಲ್ಲೂ ರೈತರು ‘ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಉತ್ತಮ ಮಾರುಕಟ್ಟೆ ವ್ಯವಸ್ಥೆ’ ಜಾರಿಗಾಗಿ ಒತ್ತಾಯಿಸುತ್ತಾರೆ. ಅದು ಈ ವರ್ಷವೂ ಮುಂದುವರಿದದೆ. ರೈತರು ನಿರೀಕ್ಷಿಸುವ ಇಂಥ ಅಂಶಗಳ ಜತೆಗೆ, ರೈತರೇ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದಕ್ಕೆ ಉತ್ತೇಜನ ನೀಡಬೇಕು. ‘ಪಕ್ಕದ ಆಂಧ್ರಪ್ರದೇಶದಲ್ಲಿ ‘ರೈತ ಬಜಾರ್’ ಆರಂಭಿಸಿದ್ದಾರೆ. ಮಧ್ಯವರ್ತಿಗಳನ್ನು ದೂರಿಡಲು ಕೈಗೊಂಡಿರುವ ಮಾದರಿ ಅದು. ಅಂಥ ಮಾರುಕಟ್ಟೆ ವ್ಯವಸ್ಥೆ ಕರ್ನಾಟಕದಲ್ಲೂ ಜಾರಿಯಾಗಬೇಕು’ ಎನ್ನುವುದು ಕೃಷಿ ಕಾರ್ಯಕರ್ತ ಜಿ.ಕೃಷ್ಣಪ್ರಸಾದ್ ಅಭಿಪ್ರಾಯ.

ರೈತ ಸಂತೆಗಳಿಗೆ ವಿಶೇಷ ಉತ್ತೇಜನ ನೀಡಬೇಕು. ಹೆದ್ದಾರಿ ಬದಿಯಲ್ಲಿ ಸಂತೆಗಳು ನಡೆಸಲು ಉತ್ತೇಜಿಸಬೇಕು. ರಾಜ್ಯದಲ್ಲಿ ಸಾವಿರಾರು ಮಹಿಳಾ ಸಂಘಗಳಿವೆ. ಲಕ್ಷಾಂತರ ಸದಸ್ಯರಿದ್ದಾರೆ. ಸಾವಿರಾರು ಒಕ್ಕೂಟಗಳಿವೆ. ಈಗೀಗ ರೈತ ಉತ್ಪಾದಕ ಕಂಪನಿಗಳು ಚಾಲನೆಯಲ್ಲಿವೆ. ಇವೆಲ್ಲವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ರಾಜಕಾರಣಿಗಳನ್ನು ಹೊರತುಪಡಿಸಿ ಮಾರುಕಟ್ಟೆ ವ್ಯವಸ್ಥೆ ರೂಪಿಸಬೇಕು. ಇಂಥ ಯೋಜನೆಗೆ ಹೆಚ್ಚು ಹಣಕಾಸಿನ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಉತ್ತಮ ಮಾರುಕಟ್ಟೆ ಜತೆಗೆ, ರೈತರಿಗೆ ಆದಾಯ ಭದ್ರತೆ (Farmer income security) ಇಂದಿನ ತುರ್ತು. ದೇಶ ಭದ್ರತೆ ಮಾಡುವ ಸೈನಿಕರಿಗೆ ಸಂಬಳ, ಸವಲತ್ತು ಕೊಡವಂತೆ ದೇಶದ ಜನರ ಆಹಾರ ಭದ್ರತೆ ನೋಡಿಕೊಳ್ಳುವ ರೈತ ಕುಟುಂಬಕ್ಕೂ ಮಾಸಿಕ ವೇತನದ ಭದ್ರತೆ ನೀಡಬೇಕು. ಈಗಿರುವ ವಾರ್ಷಿಕ ₹6ಸಾವಿರ ಪ್ರೋತ್ಸಾಹ ಧನ ಸಾಕಾಗುವುದಿಲ್ಲ.

ಕೃಷಿ ಪ್ರವಾಸೋದ್ಯಮಕ್ಕೆ ಒತ್ತು

ಸಾವಯವ ಕೃಷಿ ನೀತಿ ಜಾರಿಗೆ ತಂದ ಎರಡನೇ ರಾಜ್ಯ ಕರ್ನಾಟಕ. ದೇಶದಲ್ಲೇ ಮೊದಲ ಬಾರಿಗೆ ಕೃಷಿ ನೀತಿ ತಂದ ರಾಜ್ಯ ನಮ್ಮದು. ಇಲ್ಲಿ ಮಧ್ಯಮವರ್ಗ, ಮೇಲ್ಮಧ್ಯಮವರ್ಗದಲ್ಲಿ ಕೃಷಿಕರು ಹೆಚ್ಚಾಗಿದ್ದಾರೆ. ಸಾವಯವ ಕೃಷಿಕರ ಸಂಖ್ಯೆ ಹೆಚ್ಚಿದೆ. ವೈವಿಧ್ಯಮಯ ಬೆಳೆಗಳಿರುವ ತೋಟಗಳಿವೆ. ಸಹಜ ಕೃಷಿ, ಜೈವಿಕ ಕೃಷಿ, ನೈಸರ್ಗಿಕ ಕೃಷಿ, ಕಾಡು ಕೃಷಿ ಸೇರಿದಂತೆ ಹಲವು ಪರಿಸರ ಪ್ರಿಯ ಕೃಷಿ ಪದ್ಧತಿಗಳಿವೆ. ಹೈಟೆಕ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೆಲೆ ಬೆಳೆಯಲಾಗುತ್ತಿದೆ. ಇನ್ನೊಂದೆಡೆ ದಾಖಲೆ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಾ, ಮೌಲ್ಯವರ್ಧನೆ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ’ಅಗ್ರಿಕಲ್ಚರಲ್‌ ಟೂರಿಸಂ’ ಆರಂಭಕ್ಕೆ ಬಜೆಟ್‌ನಲ್ಲಿ ಒತ್ತು ನೀಡಬೇಕು. ಈ ಯೋಜನೆ ದೇಶಕ್ಕೆ ಮಾದರಿಯಾಗುತ್ತದೆ. ಇದರಿಂದ ನಮ್ಮ ರಾಜ್ಯದ ರೈತರಿಗೂ ಉತ್ತೇಜನ ಸಿಗುತ್ತದೆ. ಕೃಷಿ ಉತ್ಪನ್ನಗಳ ಮಾರಾಟ, ಸಿರಿಧಾನ್ಯಗಳ ಪದಾರ್ಥಗಳ ಮಾರುಕಟ್ಟೆ ಜಾಗತಿಕವಾಗಿ ವಿಸ್ತರಿಸಿಕೊಳ್ಳಲು ಸಹಾಯವಾಗುತ್ತದೆ. ‘ಕರ್ನಾಟಕದ ಸಿರಿಧಾನ್ಯದ’ ಬ್ರಾಂಡ್ ಸ್ಥಾಪನೆಯಾಗುತ್ತದೆ.

ಇನ್ನು ಜಾಗತೀಕರಣದ ನಂತರ ಕರ್ನಾಟಕದ ತೋಟಗಾರಿಕಾ ಕ್ಷೇತ್ರ ಜಾಗತಿಕವಾಗಿ ವಿಸ್ತರಣೆಗೊಂಡಿದೆ. ಕಾಫಿ, ಸಂಬಾರ ಪದಾರ್ಥಗಳು ಸಾಗರೋತ್ತರ ಮಾರುಕಟ್ಟೆಯನ್ನೂ ಹೊಂದಿವೆ. ವಿದೇಶಗಳಲ್ಲಿ, ನಮ್ಮ ರಾಜ್ಯದ ಚಾಪು ಮೂಡಿಸಿರುವ ಬೆಳೆಗಳಿವು. ಪ್ಲಾಂಟೇಷನ್ ಕ್ರಾಪ್ ಹೆಚ್ಚಾಗುವ ಜತೆಗೆ, ಬಯೋಟೆಕ್ನಾಲಜಿ, ಬೀಜೋತ್ಪಾದನೆ.. ಹೀಗೆ ಕೃಷಿ ಕ್ಷೇತ್ರ ತಾಂತ್ರಿಕವಾಗಿಯೂ ಮುಂದುವರಿದಿದೆ.

ಕೃಷಿ – ತೋಟಗಾರಿಕಾ ಕ್ಷೇತ್ರದಲ್ಲಿ ಇಷ್ಟೆಲ್ಲ ವೈವಿಧ್ಯಮಯ ಮತ್ತು ಪ್ರಗತಿ ಕಂಡಿರುವ ರಾಜ್ಯ, ‘ಉತ್ಪಾದನೆ’ಯಲ್ಲಿ ಹಿಂದೆ ಬಿದ್ದಿದೆ. ಇದನ್ನು ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಹಣಕಾಸು ಆಯೋಗವೇ ಉಲ್ಲೇಖಿಸಿದೆ. ಹೌದು, ನಮ್ಮ ರಾಜ್ಯ ಭತ್ತ, ತರಕಾರಿ, ದ್ವಿದಳಧಾನ್ಯ ಉತ್ಪಾದನೆಯಲ್ಲಿ ತಮಿಳುನಾಡು. ತರಕಾರಿ, ಆಂಧ್ರಕ್ಕೆ ಸರಿಸಾಟಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ತಾನು ಮಂಡಿಸುವ ಈ ಬಾರಿಯ ಬಜೆಟ್ ನಲ್ಲಿ ಕರ್ನಾಟಕದ ಕೃಷಿ – ತೋಟಗಾರಿಕಾ ಕ್ಷೇತ್ರ ಆಮೂಲಾಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.

ನೀರಾವರಿ ಆಶ್ರಿತ ಜಮೀನುಗಳಲ್ಲಿ ಅವೈಜ್ಞಾನಿಕವಾಗಿ ನೀರು ಮತ್ತು ರಾಸಾಯನಿಕಗಳ ಬಳಸಿದ್ದರಿಂದ ಉತ್ಪಾದಕತೆ ಇಳಿಯುತ್ತಿದೆ. ತ್ವರಿತ ನೀರಾವರಿ ಯೋಜನೆಗಳಿಗೇ ಇನ್ನೂ ಹಣ ನೀಡುವ ಬದಲು, ನೀರಾವರಿ ಕ್ಷೇತ್ರದಲ್ಲಾಗಿರುವ ಆಗಿರುವ ಸಮಸ್ಯೆ ಸುಧಾರಿಸಲು (ಮಣ್ಣಿನ ಸಂರಕ್ಷಣೆ) ಸಮುದಾಯಾಧಾರಿತ ಯೋಜನೆ ಆರಂಭಿಸಬೇಕು ಎನ್ನುತ್ತಾರೆ ಕೃಷಿ ಚಿಂತಕಕೆ.ಪಿ. ಸುರೇಶ್.

ತೋಟಗಾರಿಕಾ ಬೆಳೆಗಳ ಅಭಿವೃದ್ಧಿ, ಸಾವಯವ ಉತ್ಪನ್ನಗಳು – ಸಿರಿಧಾನ್ಯ ಬೆಳೆವಣಿಗೆಗೆ ಆದ್ಯತೆ ನೀಡಬೇಕು. ’ಸಾವಯವ ಕೃಷಿ – ಸಿರಿಧಾನ್ಯ ಕೃಷಿ ಪ್ರವಾಸೋದ್ಯಮ’ಕ್ಕೆ ಹೆಚ್ಚಿನ ಒತ್ತು ನೀಡಬೇಕು ಎನ್ನುವುದು ಕೃಷಿ ಬೆಲೆ ಆಯೋಗದ ಅಧ್ಯಕ್ಷಪ್ರಕಾಶ ಕಮ್ಮರಡಿ ಅವರ ಅಭಿಪ್ರಾಯ.

ಗಮನ ನೀಡಬೇಕಾದ ಅಂಶಗಳು

• ಮೈಕ್ರೋ ಇರಿಗೇಷನ್, ಮಣ್ಣು ಸಂರಕ್ಷಣೆಯ ಪಾಲಿಸಿ, ಪ್ರತಿ ವರ್ಷ ಮಣ್ಣಿನ ಫಲವತ್ತತೆ ಪರೀಕ್ಷೆ ಮತ್ತು ಪರಿಹಾರಕ್ಕೆ ಆದ್ಯತೆ ನೀಡಲು ಹಣ ತೆಗೆದಿಡಬೇಕು.

• ರೈತರ ಆದಾಯ ದ್ವಿಗುಣ ಎನ್ನುವ ಬದಲಿಗೆ, ರೈತರ ಜೀವನ ಭದ್ರತೆಗೆ ವ್ಯವಸ್ಥಿತವಾದ ಹಣಕಾಸು ಯೋಜನೆ ರೂಪಿಸಬೇಕು (ಈಗ ಕೊಡುವ ವಾರ್ಷಿಕ ರೂ 6ಸಾವಿರ ರೂಪಾಯಿ ಯಾವುದಕ್ಕೂ ಸಾಲುವುದಿಲ್ಲ)

• ರಾಜ್ಯದಲ್ಲಿ ಮಾದರಿ ತಾಲ್ಲೂಕಿಗೆ ಒಂದರಂತೆ 10 ಎಕರೆಯಲ್ಲಿ ಮಾದರಿ ತೋಟಗಾರಿಕಾ ತಾಕುಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಹಣಕಾಸು ನೆರವು ನೀಡಬೇಕು.

• ಮೌಲ್ಯವರ್ಧಿತ ಉತ್ಪನ್ನಗಳಿಗೆ ಆದ್ಯತೆ, ಗ್ರಾಮಗಳಿಂದ ಪಟ್ಟಣಕ್ಕೆ ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಂಚಾರಿ ಶೈತ್ಯಗಾರದ ವ್ಯವಸ್ಥೆಗಾಗಿ ಹಣ ತೆಗೆದಿಡುವುದು.

(ಕೃಷಿ ಕ್ಷೇತ್ರದ ನಿರೀಕ್ಷೆಗಳಿಗೆ ಪೂರಕ ಮಾಹಿತಿ ಒದಗಿಸಿದವರು: ಕೆ.ಪಿ.ಸುರೇಶ್, ಕೃಷಿ ಚಿಂತಕರು, ಜಿ.ಕೃಷ್ಣಪ್ರಸಾದ್, ಕೃಷಿ ಕಾರ್ಯಕರ್ತರು ಹಾಗೂ ಡಾ. ಪ್ರಕಾಶ್ ಕಮ್ಮರಡಿ, ಕೃಷಿ ಬೆಲೆ ಆಯೋಗದ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT