ಮಂಗಳವಾರ, ಮಾರ್ಚ್ 9, 2021
18 °C
ವರ್ಷಕ್ಕೆ ₹6ಸಾವಿರ ನೀಡುವ ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆ ಪ್ರಕಟ

ಅನ್ನದಾತನ ಸೆಳೆಯುವ ಕಸರತ್ತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರೀಕ್ಷೆಯಂತೆ ಕೃಷಿ ಸಮುದಾಯವನ್ನು ಸೆಳೆಯಲು ಪ್ರಯತ್ನ ನಡೆಸಿರುವ ನರೇಂದ್ರ ಮೋದಿ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ–ಕಿಸಾನ್‌)’ ಎನ್ನುವ ಹೊಸ ಯೋಜನೆ ಪ್ರಕಟಿಸಿದೆ.

ಸುಮಾರು 12 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಖಚಿತ ಆದಾಯ ನೀಡುವ ಯೋಜನೆ ಇದಾಗಿದೆ. ಪ್ರತಿ ವರ್ಷ ₹6 ಸಾವಿರಗಳನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲು ಉದ್ದೇಶಿಸಲಾಗಿದೆ. ತಲಾ ₹2 ಸಾವಿರಗಳನ್ನು ಮೂರು ಕಂತುಗಳಲ್ಲಿ ಪಾವತಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಎರಡು ಹೆಕ್ಟೇರ್‌ವರೆಗೆ ಕೃಷಿ ಜಮೀನು ಹೊಂದಿರುವ ರೈತರಿಗೆ ಈ ಯೋಜನೆಯ ಲಾಭ ದೊರೆಯಲಿದೆ.

2018ರ ಡಿಸೆಂಬರ್‌1ರಿಂದಲೇ ಈ ಯೋಜನೆಯ ಲಾಭ ರೈತರಿಗೆ ದೊರೆಯಲಿದೆ. ಹೀಗಾಗಿ ಮೊದಲ ಕಂತು 2019ರ ಮಾರ್ಚ್‌ ಒಳಗೆ ರೈತರಿಗೆ ದೊರೆಯಲಿದೆ.

ಪ್ರಸಕ್ತ ಹಣಕಾಸು ವರ್ಷದಿಂದಲೇ ಈ ಯೋಜನೆ ಜಾರಿಯಾಗುವುದರಿಂದ 2018–19ನೇ ಸಾಲಿನಲ್ಲಿ ₹20 ಸಾವಿರ ಕೋಟಿ ಮೀಸಲಿಡಲು ಉದ್ದೇಶಿಸಲಾಗಿದೆ. 2019–20ನೇ ಹಣಕಾಸು ವರ್ಷದಲ್ಲಿ ಈ ಯೋಜನೆಗೆ ₹75 ಸಾವಿರ ಕೋಟಿ ಮೀಸಲಿಡಲು ಪ್ರಸ್ತಾಪಿಸಲಾಗಿದೆ.

‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ತುರ್ತು ಅಗತ್ಯಗಳಿಗೆ ನೆರವಾಗಲಿದೆ. ವಿಶೇಷವಾಗಿ ಬೆಳೆ ಕೊಯ್ಲು ಸಂದರ್ಭದಲ್ಲಿ ಹೆಚ್ಚು ಅನುಕೂಲವಾಗಲಿದೆ’ ಎಂದು ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋಲು ಅನುಭವಿಸಿದ ಬಳಿಕ ರೈತ ಸಮುದಾಯವನ್ನು ಸೆಳೆಯಲು ಎನ್‌ಡಿಎ ಸರ್ಕಾರ ಇಂತಹ ಯೋಜನೆ ಪ್ರಕಟಿಸುವ ನಿರೀಕ್ಷೆ ಇತ್ತು.

ಬಡ್ಡಿಯಲ್ಲಿ ವಿನಾಯಿತಿ: ಪಶು ಸಂಗೋಪನೆ ಮತ್ತು ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಕಿಸಾನ್‌ ಕ್ರೆಡಿಟ್‌ ಕಾರ್ಡ್ ಮೂಲಕ ಸಾಲ ಪಡೆದರೆ ಬಡ್ಡಿಯಲ್ಲಿ ಶೇಕಡ 2ರಷ್ಟು ವಿನಾಯಿತಿ ನೀಡಲಾಗುವುದು. ಸಕಾಲಕ್ಕೆ ಸಾಲ ಮರುಪಾವತಿಸಿದರೆ ಬಡ್ಡಿಯಲ್ಲಿ ಹೆಚ್ಚುವರಿಯಾಗಿ ಶೇಕಡ 3ರಷ್ಟು ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ. ಎಲ್ಲ ರೈತರು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹೊಂದುವಂತೆ ಉತ್ತೇಜಿಸಲು ವಿಶೇಷ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರಳ ಅರ್ಜಿ ನಮೂನೆಯನ್ನು ರೂಪಿಸಲಾಗುವುದು.

ಕಾಮಧೇನು ಆಯೋಗ ರಚನೆ

ಗೋವು ಸಂಪನ್ಮೂಲ ಹೆಚ್ಚಿಸಲು ಮತ್ತು ಉತ್ಪನ್ನಗಳ ವೃದ್ಧಿಯ ಆಶಯದೊಂದಿಗೆ ರಾಷ್ಟ್ರೀಯ ಕಾಮಧೇನು ಆಯೋಗ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ತಳಿಗಳ ಅಭಿವೃದ್ಧಿಗೆ ಆದ್ಯತೆ ನೀಡುವುದನ್ನು ಪ್ರಸ್ತಾಪಿಸಲಾಗಿದೆ.

ಈ ಆಯೋಗವು ಗೋವುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ಮತ್ತು ಕಲ್ಯಾಣ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಿದೆ. ಪಶು ಸಂಗೋಪನೆ ಮತ್ತು ಮೀನುಗಾರಿಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ‘ರಾಷ್ಟ್ರೀಯ ಗೋಕುಲ ಮಿಷನ್‌’ಗೆ ಪ್ರಸಕ್ತ ಹಣಕಾಸು ವರ್ಷದಲ್ಲೇ ₹750 ಕೋಟಿಗೆ ಅನುದಾನವನ್ನು ಹೆಚ್ಚಿಸಲಾಗಿದೆ.

ಅಲೆಮಾರಿಗಳಿಗಾಗಿ ಸಮಿತಿ ರಚನೆ

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳನ್ನು ಗುರುತಿಸಿ, ಯೋಜನೆಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಲು ಉದ್ದೇಶಿಸಲಾಗಿದೆ. ನೀತಿ ಆಯೋಗದ ಅಡಿಯಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಇದುವರೆಗೆ ಅಧಿಕೃತವಾಗಿ ವರ್ಗಿಕರಿಸದೇ ಇರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳನ್ನು ಗುರುತಿಸುವ ಕಾರ್ಯವನ್ನು ಸಂಪೂರ್ಣಗೊಳಿಸುವುದು ಈ ಸಮಿತಿಯ ಹೊಣೆಯಾಗಿದೆ ಎಂದು ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಮಧ್ಯಂತರ ಬಜೆಟ್‌ನಲ್ಲಿ ಅನುದಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ ₹76,801 ಕೋಟಿ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿಗಿಂತ ಶೇ 35.6 ರಷ್ಟು ಅನುದಾನ ಹೆಚ್ಚಿಸಲಾಗಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಕ್ಕೆ ₹50,086 ಕೋಟಿ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿಗಿಂತ ಶೇ 28 ರಷ್ಟು ಅನುದಾನ ಹೆಚ್ಚಿಸಲಾಗಿದೆ.

ನರೇಗಾ: ಶೇ 11 ರಷ್ಟು ಹೆಚ್ಚು ಅನುದಾನ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ₹60,000 ಕೋಟಿ ಮೀಸಲಿಡಲಾಗಿದೆ.

ಕಳೆದ ಬಾರಿಯ ಬಜೆಟ್‌ನಲ್ಲಿ ನೀಡಿದ್ದ ಅನುದಾನಕ್ಕಿಂತ ಶೇ 11 ರಷ್ಟು ಹೆಚ್ಚು ಅನುದಾನ ಈಗ ಒದಗಿಸಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದ ನಡುವೆ ವ್ಯತ್ಯಾಸ ಇರಬಾರದು ಎಂಬ ಉದ್ದೇಶದಿಂದ ಸಂಪರ್ಕದ ಕೊಂಡಿಯಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಅಗತ್ಯಬಿದ್ದರೆ ಈ ಅನುದಾನವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

ಬಡವರಿಗೆ ಕಡಿಮೆ ದರದಲ್ಲಿ ಆಹಾರ

ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಆಹಾರಧಾನ್ಯ ದೊರೆಯುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. 2018–2019ರಲ್ಲಿ ₹1,70,000 ಕೋಟಿ ಇದಕ್ಕಾಗಿ ವೆಚ್ಚ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಆಹಾರಧಾನ್ಯ ದೊರಕಿಸಲು ಸರ್ಕಾರ ಬದ್ಧವಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ (ಪಿಎಂಜಿಎಸ್‌ವೈ) ಅಡಿಯಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಮಧ್ಯಂತರ ಬಜೆಟ್‌ನಲ್ಲಿ ₹19,000 ಕೋಟಿ ಮೀಸಲಿಡಲಾಗಿದೆ. 17.84 ಲಕ್ಷ ವಾಸಸ್ಥಳದ ಪೈಕಿ 15.80 ಲಕ್ಷ ಸ್ಥಳಗಳಲ್ಲಿ ಪಕ್ಕಾ ರಸ್ತೆಗಳನ್ನು ನಿರ್ಮಿಸಲಾಗಿದೆ. ಉಳಿದ ರಸ್ತೆಗಳ ಕಾಮಗಾರಿ ಮುಗಿಯುವ ಹಂತದಲ್ಲಿದೆ.

ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ

ಮೀನುಗಳ ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲೇ ಎರಡನೇ ಸ್ಥಾನ ಹೊಂದಿದೆ. ಹೀಗಾಗಿ, ಈ ಕ್ಷೇತ್ರದ ಸುಸ್ಥಿರ ಮತ್ತು ಹೆಚ್ಚಿನ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಪ್ರತ್ಯೇಕ ಇಲಾಖೆ ಸ್ಥಾಪನೆಯಿಂದ ಮೀನುಗಾರಿಕೆ ಉತ್ಪನ್ನಗಳ ರಫ್ತು ಮಾಡಲು ಉತ್ತೇಜನ ದೊರೆಯಲಿದೆ ಎಂದು ಭಾರತೀಯ ರಫ್ತು ಸಂಘಟನೆ ಒಕ್ಕೂಟ ತಿಳಿಸಿದೆ.

ಪ್ರಸ್ತುತ ರಫ್ತು ವಹಿವಾಟಿನಲ್ಲಿ ₹49,924 ಕೋಟಿ ದಾಟಿರುವ ಈ ಕ್ಷೇತ್ರ 2020–21ಕ್ಕೆ ₹71,295 ಕೋಟಿ ದಾಟುವ ನಿರೀಕ್ಷೆ ಇದೆ. ಮೀನುಗಾರಿಕೆ ಕ್ಷೇತ್ರವು ಸುಮಾರು 1.45 ಕೋಟಿ ಜನರ ಬದುಕಿಗೆ ಆಧಾರವಾಗಿದೆ.

**

ತೆರಿಗೆ ಹೊರೆಯಿಲ್ಲದ ರೈತ, ಮಹಿಳಾ, ಕಾರ್ಮಿಕರ ಪರ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಮಹತ್ವ ನೀಡಿ, ಅಭಿವೃದ್ಧಿಗಾಗಿ ರೂಪಿಸಿದ ಬಜೆಟ್‌.

-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

**

ಬಜೆಟ್‌ನಲ್ಲಿ ಕಾರ್ಮಿಕರಿಗೆ ನೆರವು ನೀಡಲಾಗಿದ್ದು, ರೈತರಿಗೆ ಸಿಹಿ ಸುದ್ದಿ ನೀಡಲಾಗಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಶಕ್ತಿ ಕೊಡಲಾಗಿದೆ. ಮೀನುಗಾರರು ಹಾಗೂ ಹೈನುಗಾರರಿಗೆ ಭದ್ರತೆ ಒದಗಿಸಲಾಗಿದೆ. ಆದಾಯ ತೆರಿಗೆ ಮಿತಿ ದ್ವಿಗುಣಗೊಳಿಸಲಾಗಿದೆ. ಒಟ್ಟಾರೆ ಅಭಿವೃದ್ಧಿಶೀಲ ರಾಷ್ಟ್ರದ ಹೆಗ್ಗುರುತು ಈ ಬಜೆಟ್.

–ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

**

ರೈತರಿಗೆ ವರ್ಷಕ್ಕೆ ₹6,000 ನೆರವು ನೀಡುವ ಯೋಜನೆಗೆ 2 ಹೆಕ್ಟೇರಿನ ಮಿತಿ ಹೇರಿದ್ದು ಸರಿಯಲ್ಲ. ಇಂದು ಇಡೀ ದೇಶದಲ್ಲಿ ಕೃಷಿ ವಲಯವು ಸಂಕಷ್ಟದಲ್ಲಿದ್ದು, ರೈತರೆಲ್ಲರೂ ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗ, ಜಮೀನಿನ ಒಡೆತನದ ಮೇಲೆ ಯಾವುದೇ ಮಿತಿ ಹೇರದೆ ಎಲ್ಲ ರೈತರಿಗೂ ಈ ನೆರವನ್ನು ನೀಡಬೇಕಾಗಿತ್ತು. ಇದರಿಂದ ರೈತ ಸಮುದಾಯಕ್ಕೆ ಸಾರ್ವತ್ರಿಕವಾಗಿ ಸಹಾಯಹಸ್ತ ಚಾಚಿದಂತೆ ಆಗುತ್ತಿತ್ತು.

–ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವ

**

ಬಜೆಟ್‌ ಕೇವಲ ರಾಜಕೀಯ ದೃಷ್ಟಿ ಹೊಂದಿದ್ದು, ರೈತರು, ಸಾಮಾನ್ಯ ಜನರು ಹಾಗೂ ಯುವಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹಳೇ ಗಾಡಿಗೆ ಆಯುಧ ಪೂಜೆ ಮಾಡಿದಂತೆ ಈ ಬಜೆಟ್ ಇದೆ. ಬಜೆಟ್‌ನಲ್ಲಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಸಾಲಮನ್ನಾ ಘೋಷಿಸಬಹುದಿತ್ತು.‌

–ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

**

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ದ್ವಿಗುಣಗೊಳಿಸುವ ಮೂಲಕ ತೆರಿಗೆ ಪಾವತಿಸುವವರಿಗೆ ಮತ್ತಷ್ಟು ಉತ್ತೇಜನ ನೀಡಲಾಗಿದೆ. ರಿಯಲ್‌ ಎಸ್ಟೇಟ್‌ ವಲಯದಲ್ಲಿ ಸಾಕಷ್ಟು ಉದ್ಯೋಗ ಅವಕಾಶಕ್ಕೆ ಅವಕಾಶ ಇದೆ. ಈ ವಲಯಕ್ಕೂ ಪ್ರೋತ್ಸಾಹ ನೀಡಲಾಗಿದೆ. ಇದೊಂದು ಉತ್ತಮ ಬಜೆಟ್‌. ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ವೇಳೆ, ನಮ್ಮ ಮೆಟ್ರೊ, ಉ‍ಪನಗರ ರೈಲು ಯೋಜನೆ ಹಾಗೂ ರೈಲ್ವೆಗೆ ಹೆಚ್ಚಿನ ಅನುದಾನ ನೀಡಬೇಕು.

–ಸುಧಾಕರ ಎಸ್‌.ಶೆಟ್ಟಿ, ಎಫ್‌ಕೆಸಿಸಿಐ ಅಧ್ಯಕ್ಷ

**

ನಾಲ್ಕು ವರ್ಷಗಳಿಂದ ಸುಳ್ಳು ಹೇಳಿಕೆಗಳನ್ನು ನೀಡಿದ ರೀತಿಯಲ್ಲೇ ಈಗ ಜುಮ್ಲಾ ಬಜೆಟ್‌ ಅನ್ನು ಕೇಂದ್ರ ಸರ್ಕಾರ ನೀಡಿದೆ. ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯಿಸಿದ್ದ ಕೇಂದ್ರ ಸರ್ಕಾರ, ಪಿಂಚಣಿ ಯೋಜನೆ ಘೋಷಿಸಿ ಅವರ ಮೂಗಿಗೆ ತುಪ್ಪ ಸವರಿದೆ.

–ದಿನೇಶ್ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

**

ರೈತ ಪರ, ಮಹಿಳಾ ಸಬಲೀಕರಣ, ಆರೋಗ್ಯಯುಕ್ತ ಹಾಗೂ ಸಶಕ್ತ ಭಾರತ ನಿರ್ಮಾಣದ ಗುರಿ ಹೊತ್ತ ಬಜೆಟ್‌ ಇದು. ಎಲ್ಲ ವರ್ಗದ ಜನರ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿಟ್ಟುಕೊಂಡು ಮಂಡನೆಯಾದ ಬಜೆಟ್‌ ಇದು.

–ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

**

ಇವನ್ನೂ ಓದಿ...

ನಿಮ್ಮ ಆದಾಯಕ್ಕೂ ಇದೆಯೇ ತೆರಿಗೆ ವಿನಾಯಿತಿ? ಬಜೆಟ್‌ ಬಳಿಕ ಆಗಿದ್ದೇನು?

ರಾಷ್ಟ್ರೀಯ ಕಾಮಧೇನು ಆಯೋಗ ರಚನೆ, ಗೋಕುಲ ಮಿಷನ್‌ಗೆ ₹750 ಕೋಟಿ​

ಮಧ್ಯಮ ವರ್ಗ, ರೈತ, ಕಾರ್ಮಿಕರಿಗೆ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ​

‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಸ್ಥಾ‍ಪನೆ, ರೈತರ ಖಾತೆಗೆ ₹6 ಸಾವಿರ

ಎಸ್‌ಸಿ, ಎಸ್‌ಟಿ ಅನುದಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಳ​

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ: ₹93 ಸಾವಿರ ಕೋಟಿ ಅನುದಾನ ​

ವೇತನದಾರರಿಗೆ ಬಜೆಟ್‌ ಬೋನಸ್: ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ​

ಕೇಂದ್ರ ಬಜೆಟ್‌ 2019: ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ​

ರೈಲ್ವೆಗೆ ₹1.6 ಲಕ್ಷ ಕೋಟಿ: ಕಾವಲುರಹಿತ ಕ್ರಾಸಿಂಗ್‌ಗಳು ಬಂದ್‌​

ಹೆಚ್ಚಿದೆ ಆದಾಯ, ಪ್ರಕಾಶಿಸುತ್ತಿದೆ ಭಾರತ: ಪೀಯೂಷ್ ಗೋಯಲ್

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್’​

ಆಯುಷ್ಮಾನ್ ಭಾರತ್‌ ಯೋಜನೆಯಡಿ 10 ಲಕ್ಷ ಜನರಿಗೆ ಚಿಕಿತ್ಸೆ

ನಾನು ರೂಪಿಸಿದ್ದ ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ: ಸಿದ್ದರಾಮಯ್ಯ ಆರೋಪ​

ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪನೆ, ಲಕ್ಷ ಡಿಜಿಟಲ್‌ ಗ್ರಾಮ ನಿರ್ಮಾಣಕ್ಕೆ ಒತ್ತು

ಕೇಂದ್ರ ಬಜೆಟ್‌ 2019: ಇವರು ಹೀಗಂದರು...​

* ಈ ಬಜೆಟ್ ಅರ್ಥ ಮಾಡಿಕೊಳ್ಳಬೇಕಿರುವುದು ಹೀಗೆ...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು