ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಾಲಯ | ಸಿಎಎ, ಐಎಲ್‌ಪಿ ಚರ್ಚೆಗೆ ಕರೆದಿದ್ದ ಸಭೆಯಲ್ಲಿ ಘರ್ಷಣೆ: ಸಾವು

Last Updated 29 ಫೆಬ್ರುವರಿ 2020, 19:21 IST
ಅಕ್ಷರ ಗಾತ್ರ

ಶಿಲ್ಲಾಂಗ್‌: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಇನ್ನರ್‌ ಲಿಮಿಟ್‌ ಸಿಸ್ಟಂ (ಐಎಲ್‌ಪಿ) ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಖಾಸಿ ವಿದ್ಯಾರ್ಥಿ ಸಂಘಟನೆ (ಕೆಎಸ್‌ಯು) ಸದಸ್ಯರು ಹಾಗೂ ಬುಡಕಟ್ಟು ಜನಾಂಗಕ್ಕೆ ಸೇರದ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಕೆಎಸ್‌ಯು ಸದಸ್ಯರೊಬ್ಬರು ಮೃತಪಟ್ಟಿದ್ದಾರೆ.

ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯ ಇಚ್ಛಾಮತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಗರದ ಇನ್ನೊಂದೆಡೆ, ಇರಿತದಿಂದಾಗಿ ತರಕಾರಿ ವರ್ತಕರೊಬ್ಬರು ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರೆ.

ಕೆಎಸ್‌ಯು ಸದಸ್ಯರು ಸಿಎಎ ವಿರೋಧಿಸಿ ಹಾಗೂಇನ್ನರ್‌ ಲೈನ್‌ ಪರ್ಮಿಟ್‌(ಐಎಲ್‌ಪಿ) ಅನುಷ್ಠಾನಕ್ಕೆ ಆಗ್ರಹಿಸಿ ರ್‍ಯಾಲಿ ನಡೆಸುತ್ತಿದ್ದರು. ಸಂಭಾವ್ಯ ಘರ್ಷಣೆ ಕಡಿವಾಣಕ್ಕೆ ಶುಕ್ರವಾರ ರಾತ್ರಿಯೇ ಕರ್ಫ್ಯೂ ಹೇರಲಾಗಿತ್ತು. ಶನಿವಾರ ಬೆಳಗ್ಗೆ ಎಂಟು ಗಂಟೆಗೆ ಕರ್ಫ್ಯೂ ಹಿಂಪಡೆಯಲಾಗಿತ್ತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದೇ ಇರಲು,ಶನಿವಾರ ಮಧ್ಯಾಹ್ನದಿಂದ ಶಿಲ್ಲಾಂಗ್‌ನ ಕೆಲ ಪ್ರದೇಶಗಳಲ್ಲಿ ಮತ್ತೆ ಕರ್ಫ್ಯೂ ಹೇರಲಾಗಿದೆ.

‘ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಆರು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ 48 ಗಂಟೆ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ದಿನಕ್ಕೆ 5 ಎಸ್‌ಎಂಎಸ್‌ ಕಳುಹಿಸಲು ಅವಕಾಶ ನೀಡಲಾಗಿದೆ. ಸದಾರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಮುಂದುವರಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಐದು ಹೆಚ್ಚುವರಿ ಶಸ್ತ್ರ ಸಜ್ಜಿತ ಪೊಲೀಸ್‌ ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಆರು ಜನರ ಬಂಧನ: ರ್‍ಯಾಲಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಮೇಘಾಲಯ ಗೃಹ ಸಚಿವ ಲಾಹ್ಕಮೆನ್‌ ರಿಂಬುಯಿ, ಈ ಕುರಿತು ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮೇಘಾಲಯ ರಾಜ್ಯಪಾಲ ತಥಾಗತ ರಾಯ್‌, ‘ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಶಾಂತಿ ಕಾಪಾಡಬೇಕು’ ಎಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಕೊನ್ರಾಡ್‌ ಸಂಗ್ಮಾ, ‘ಘರ್ಷಣೆ ಕುರಿತಂತೆ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಲಾಗುವುದು. ಸಂತ್ರಸ್ತರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ನೀಡುವುದಾಗಿ’ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT