ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೀತಿಸುವ ಭಾರತದಲ್ಲಿ ಹೀಗಾಗಬಾರದಿತ್ತು...’- ಜಲೀಲ್‌ ಕುಟುಂಬದ ನೋವಿನ ನುಡಿ

ಗೋಲಿಬಾರ್‌ನಲ್ಲಿ ಮೃತರಾದ ಜಲೀಲ್‌ ಕುಟುಂಬದ ನೋವಿನ ನುಡಿ
Last Updated 24 ಡಿಸೆಂಬರ್ 2019, 10:11 IST
ಅಕ್ಷರ ಗಾತ್ರ

ಮಂಗಳೂರು: ‘ಯಾರನ್ನಾದರೂ ಸಾಯಿಸಲೇಬೇಕು ಎಂಬ ಉದ್ದೇಶದಿಂದಲೇ ಪೊಲೀಸರು ಗುಂಡು ಹೊಡೆದಿದ್ದರು. ನಾವು ತುಂಬಾ ಪ್ರೀತಿಸುವ ಭಾರತ ದೇಶದಲ್ಲಿ ಹೀಗೆ ಆಗಬಾರದು...’

– ಇವು ಗುರುವಾರ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ನಗರದ ಕಂದಕ್‌ ನಿವಾಸಿ ಜಲೀಲ್‌ ಅವರ ಅತ್ತಿಗೆ ಶಕೀನಾ ಅವರ ನೋವಿನ ನುಡಿಗಳು. ಸೋಮವಾರ ಮೃತರ ಮನೆಗೆ ಭೇಟಿನೀಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಎದುರು ಈ ರೀತಿ ಅವರು ನೋವು ತೋಡಿಕೊಂಡರು.

‘ಯಾರಿಗೂ ಈ ರೀತಿಯ ಅನ್ಯಾಯ ಆಗಬಾರದು. ಎಷ್ಟು ಪ್ರೀತಿಯ ಅಪ್ಪ. ಆ ಅಪ್ಪನನ್ನು ತಂದುಕೊಡಲು ಯಾರಿಗಾದರೂ ಸಾಧ್ಯವಿದೆಯೇ? ನಮಗೆ ನ್ಯಾಯ ಕೊಡಿಸಿ’ ಎಂದು ಅವರು ಆಗ್ರಹಿಸಿದರು.

‘ನಾವು ಹೇಗೆ ಭಾರತ ಮಾತೆಯ ಮಕ್ಕಳೋ, ಹಾಗೆಯೇ ನೀವೆಲ್ಲರೂ ಭಾರತ ಮಾತೆಯ ಮಕ್ಕಳು. ಯಾರಿಗೂ ಅನ್ಯಾಯ ಆಗಬಾರದು’ ಎಂದು ಸಿದ್ದರಾಮಯ್ಯ ಸಾಂತ್ವನ ಹೇಳಿದರು.

‘ಪೊಲೀಸರು ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಕೆಲವೇ ಅಡಿ ಅಂತರದಿಂದ, ಎಲ್ಲಿಗೆ ಗುಂಡು ತಾಗಬೇಕು ಎಂಬುದನ್ನೂ ನಿಖರವಾಗಿ ಗುರುತಿಸಿ ಹೊಡೆದಿದ್ದಾರೆ. ಆರು, ಐದು, ನಾಲ್ಕು ಹೀಗೆ ಅಡಿಗಳ ಅಂತರದಲ್ಲಿ ಹೊಡೆದಿದ್ದಾರೆ. ಪೊಲೀಸರನ್ನು ನಾವು ನಂಬುತ್ತೇವೆ. ದಾರಿ ದಾಟಿಸುವುದಕ್ಕೂ ಅವರನ್ನು ನಂಬುತ್ತೇವೆ. ಅವರೇ ಭಕ್ಷಕರಾದರೆ ನಾವು ಏನು ಮಾಡಬೇಕು ಹೇಳಿ ಸರ್‌. ಪ್ರತಿಯೊಂದಕ್ಕೂ ಆಚೆ, ಈಚೆ ನೋಡುವಾಗ ಪೊಲೀಸರಿದ್ದಾರಾ ನೋಡುತ್ತೇವೆ’ ಎಂದು ಶಕೀನಾ ಹೇಳಿದರು.

‘ಯಾವ ಪ್ರತಿಭಟನೆಗೂ ಹೋಗಿರಲಿಲ್ಲ. ಮನೆಯಲ್ಲಿ ಊಟ ಮಾಡಿ ಕುಳಿತಿದ್ದರು. ಜನರ ಗುಂಪು ಏನಿರಬಹುದು ಎಂದು ನೋಡಲು ಕೆಳಗಿಳಿದು ಹೋಗಿದ್ದರು. ಐದೇ ನಿಮಿಷದಲ್ಲಿ ಗುಂಡು ಹೊಡೆದು ಕೊಂದರು. ಕಣ್ಣಿಗೆ ಗುಂಡಿಟ್ಟರು’ ಎಂದರು.

ಗೋಲಿಬಾರ್‌ ನಡೆಸಿದ ಪೊಲೀಸರು ಮತ್ತು ನಗರ ಪೊಲೀಸ್‌ ಕಮಿಷನರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತರ ಕುಟುಂಬದವರು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ನ್ಯಾಯಾಂಗ ತನಿಖೆಗೆ ಪಟ್ಟು ಹಿಡಿಯುವುದಾಗಿ ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT