ಮಂಗಳವಾರ, ಜೂನ್ 28, 2022
26 °C
ದೆಹಲಿ ಚುನಾವಣೆ: 650 ಜನ ಕಣದಲ್ಲಿ

ದೆಹಲಿ ಚುನಾವಣೆ: ತರಹೇವಾರಿ ಅಭ್ಯರ್ಥಿಗಳು!

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಫೆಬ್ರುವರಿ 8ರಂದು ನಡೆಯಲಿರುವ ಚುನಾವಣೆಯ ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಸಂಖ್ಯೆ 650.

ಅವರಲ್ಲಿ, ಸ್ಕೂಟರ್‌ ಖರೀದಿಗೆ ₹ 27,500 ಸಾಲ ಮಾಡಿರುವುದಾಗಿ ಘೋಷಿಸಿರುವ 25ರ ಯುವಕ, ಭಕ್ತಿಗೀತೆಗಳ ಗಾಯಕ, ನಾಮಫಲಕ ಬರೆಯುವ ಪೇಂಟರ್‌, ವಕೀಲರು, ವೈದ್ಯರು ಸೇರಿದಂತೆ ವಿವಿಧ ವೃತ್ತಿಯಲ್ಲಿ ತೊಡಗಿದವರು ಸ್ಪರ್ಧಿಸಿರುವುದು ವಿಶೇಷ.

ಇನ್ನು ಕೆಲವರು ಮತದಾರರಲ್ಲಿ ಗೊಂದಲ ಉಂಟುಮಾಡಲೆಂದೇ ಸ್ಪರ್ಧಿಸಿರಬಹುದು ಎಂಬ ಭಾವನೆಯನ್ನೂ ಹುಟ್ಟುಹಾಕಿದೆ.

ಪ್ರಮುಖ ರಾಜಕೀಯ ಪಕ್ಷಗಳಾದ ಆಮ್‌ ಆದ್ಮಿ ಪಕ್ಷ (ಆಪ್‌), ಬಿಜೆಪಿ ಮತ್ತು ಕಾಂಗ್ರೆಸ್‌ ಅಲ್ಲದೆ, ಸಣ್ಣಸಣ್ಣ ಪಕ್ಷಗಳೂ ಚುನಾವಣೆ ಎದುರಿಸಲು ಸನ್ನದ್ಧವಾಗಿವೆ.

ಆಪ್‌ ಅಭ್ಯರ್ಥಿಗಳನ್ನು ಕಟ್ಟಿಹಾಕಲೆಂದೇ ಆಪ್‌ಕಿ ಅಪನೀ ಪೀಪಲ್ಸ್ ಪಾರ್ಟಿ (ನಿಮ್ಮದೇ ಸ್ವಂತ ಪೀಪಲ್ಸ್‌ ಪಕ್ಷ), ಅಂಜಾನ್‌ ಆದ್ಮಿ ಪಾರ್ಟಿ (ಅನಾಮಧೇಯ ವ್ಯಕ್ತಿಯ ಪಕ್ಷ), ಆಮ್‌ ಆದ್ಮಿ ಸಂಘರ್ಷ್‌ ಪಾರ್ಟಿ (ಜನ ಸಾಮಾನ್ಯರ ಸಂಘರ್ಷ ಪಕ್ಷ)ಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಸತ್ಯ ಬಹುಮತ ಪಾರ್ಟಿ, ಮಜದೂರ್‌ ಕಿರಾಯಾದಾರ್‌ ವಿಕಾಸ ಪಾರ್ಟಿ ಎಂಬ ಹೆಸರಿನ ಪಕ್ಷಗಳ ಅಭ್ಯರ್ಥಿಗಳೂ ಸ್ಪರ್ಧಿಸಿದ್ದಾರೆ.

ಸಬ್ಸೇ ಬಡಿ ಪಾರ್ಟಿ (ಎಲ್ಲರಿಗಿಂತ ದೊಡ್ಡ ಪಕ್ಷ)ಯ ಅಭ್ಯರ್ಥಿಯೂ ಅಖಾಡದಲ್ಲಿದ್ದು, ‘ನಮ್ಮದು ಜಗತ್ತಿನಲ್ಲೇ ಅತಿ ಹೆಚ್ಚು ಸದಸ್ಯರು ನೋಂದಣಿ ಮಾಡಿಸಿ
ಕೊಂಡಿರುವ ಪಕ್ಷ’ ಎಂದು ಹೇಳಿಕೊಂಡಿದ್ದಾರೆ. ಟಿಪ್ಪು ಸುಲ್ತಾನ್‌ ಅವರ ಹೆಸರಿನ ಪಕ್ಷವೂ ಉಮೇದುವಾರಿಕೆ ಸಲ್ಲಿಸಿದೆ.

ತಿಲಕ್‌ ನಗರದಲ್ಲಿ ಸ್ಪರ್ಧಿಸಿರುವ ಎಂಟು ಜನ ಅಭ್ಯರ್ಥಿಗಳ ಪೈಕಿ ಹಾಲಿ ಶಾಸಕ ಜರ್ನೇಲ್‌ ಸಿಂಗ್‌ಗೆ ಎದುರಾಳಿಗಳಾಗಿ ಅದೇ ಹೆಸರಿನ ಇಬ್ಬರು ಕಣದಲ್ಲಿದ್ದರೆ, ಇದೇ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್‌ ಬಬ್ಬರ್‌ ಅವರ ಹೆಸರಿನ ಮತ್ತಿಬ್ಬರು ಸ್ಪರ್ಧೆಗಿಳಿದಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಸ್ಪರ್ಧಿಸಿರುವ ನವದೆಹಲಿ ಕ್ಷೇತ್ರ ಅತಿ ಹೆಚ್ಚು ಅಭ್ಯರ್ಥಿಗಳನ್ನು ಒಳಗೊಂಡಿದ್ದು, ಕಣದಲ್ಲಿರುವವರ ಒಟ್ಟು ಸಂಖ್ಯೆ 28. ಇವರಲ್ಲಿ 11 ಜನ ಪಕ್ಷೇತರರಾಗಿದ್ದು, ಒಂದಿಬ್ಬರು ಪಿಎಚ್‌.ಡಿ ಪದವೀಧರರಾಗಿದ್ದಾರೆ. ಸಮಾಜವಾದಿ ಪಕ್ಷ (ಎಸ್‌.ಪಿ)ವು ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವಾದರೂ, ಇಲ್ಲಿನ ಬದ್ಲಿ ಕ್ಷೇತ್ರದಿಂದ ಎಸ್‌.ಪಿ.ಯ ಹಿರಿಯ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಹೆಸರಿನ ಒಬ್ಬ ಅಭ್ಯರ್ಥಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು