ಭಾನುವಾರ, ಜನವರಿ 17, 2021
19 °C

ಅರೆನಗ್ನ ದೇಹದ ಮೇಲೆ ಮಕ್ಕಳಿಂದ ಪೇಂಟಿಂಗ್ ಮಾಡಿಸಿಕೊಂಡ ರೆಹಾನಾ: ಜಾಮೀನಿಗೆ ಅರ್ಜಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಮಕ್ಕಳಿಂದ ತನ್ನ ದೇಹದ ಮೇಲೆ ಚಿತ್ರ ರಚಿಸಿಕೊಂಡ ಆರೋಪದಲ್ಲಿ ಹೋರಾಟಗಾರ್ತಿ ರೆಹಾನಾ ಫಾತಿಮಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾಗಿದ್ದ ಫಾತಿಮಾ ಆ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದರು. ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು 2018ರಲ್ಲಿ ಸುಪ್ರೀಂ ಕೋರ್ಟ್ ತೆರವು ಮಾಡಿತ್ತು. ಬಳಿಕ ದೇಗುಲ ಪ್ರವೇಶಿಸಲು ಫಾತಿಮಾ ಮುಂದಾಗಿದ್ದರು.

ಅರೆನಗ್ನವಾಗಿ ಮಲಗಿರುವ ರೆಹಾನಾ ದೇಹದ ಮೇಲೆ ಇಬ್ಬರು ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

‘ರೆಹಾನಾ ಅವರ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ದೇಹದ ಮೇಲೆ ಚಿತ್ರ ರಚಿಸಲು ಬಳಸಿಕೊಂಡಿದ್ದಾರೆ. ಆ ಚಿತ್ರವನ್ನು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದಾರೆ’ ಎಂದು ವಕೀಲ, ಬಿಜೆಪಿ ಕಾರ್ಯಕರ್ತ ಅರುಣ್ ಪ್ರಕಾಶ್ ಎಂಬುವವರು ಮಂಗಳವಾರ ತಿರುವಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ರಹಾನಾ ಮೇಲೆ ಬಾಲ ನ್ಯಾಯ ಕಾಯ್ದೆ, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗಿಯಾಗಿದ್ದ ಫಾತಿಮಾ, ತನ್ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಇತ್ತೀಚೆಗೆ ಹೇಳಿದ್ದರು. ಶಬರಿಮಲೆ ವಿಚಾರವಾಗಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪದಲ್ಲಿ 2018ರ ನವೆಂಬರ್‌ನಲ್ಲಿ ಆಕೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಆಕೆಯನ್ನು ಬಿಎಸ್‌ಎನ್‌ಎಲ್ ಕೆಲಸದಿಂದ ಅಮಾನತು ಮಾಡಿತ್ತು. ತನಿಖೆಯ ಬಳಿಕ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಇದನ್ನೂ ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ: ರೆಹಾನಾ ಫಾತಿಮಾ ವಿರುದ್ಧ ದೂರು

ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ 

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವಿರುದ್ಧ ದನಿ ಎತ್ತಿದ್ದ ರೆಹಾನಾ ಫಾತಿಮ ಅವರಿಗೆ, ಮಕ್ಕಳಿಂದಲೇ ಅರೆನಗ್ನ ದೇಹದ ಮೇಲೆ ಚಿತ್ರ ಬರೆಸಿಕೊಳ್ಳುವುದು ತಪ್ಪೆಂದು ಕಾಣಲಿಲ್ಲವೇ ಎಂದು ಹಲವರು ಸಾಮಾಜಿಕ ತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು