ಗುರುವಾರ , ಮೇ 28, 2020
27 °C

ಕಚೇರಿಗೆ ಮರಳಿದ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಮೂರು ತಿಂಗಳ ಬಳಿಕ ಬುಧವಾರ ಕಚೇರಿಗೆ ಮರಳಿದ್ದಾರೆ. ವರ್ಮಾ ಅವರನ್ನು ದೀರ್ಘ ರಜೆಯ ಮೇಲೆ ಕಳುಹಿಸಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಅಕ್ಟೋಬರ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಪಡಿಸಿತ್ತು. 

ಅಕ್ಟೋಬರ್‌ 24ರ ಬೆಳಗಿನ ಜಾವ 2 ಗಂಟೆಗೆ ದೆಹಲಿಯ ಸಿಬಿಐ ಮುಖ್ಯಕಚೇರಿಯ ಹತ್ತನೇ ಮಹಡಿಯಲ್ಲಿರುವ ಅಲೋಕ್‌ ವರ್ಮಾ ಅವರ ಕಚೇರಿಗೆ ಬೀಗ ಜಡಿಯಲಾಗಿತ್ತು. ಎಂ.ನಾಗೇಶ್ವರ ರಾವ್‌ ಅವರನ್ನು ಹಂಗಾಮಿ ಮುಖ್ಯಸ್ಥರಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದೊಂದಿಗೆ ವರ್ಮಾ ಮತ್ತೆ ತಮ್ಮ ಕಚೇರಿಗೆ ಮರಳಲು ಸಾಧ್ಯವಾಗಿದ್ದರೂ, ಅವರ ವಿರುದ್ಧದ ಆರೋಪಗಳ ಕುರಿತು ಸಿವಿಸಿ ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೂ, ಅವರು ಯಾವುದೇ ಹೊಸ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ.

ಮೂಲಗಳ ಪ್ರಕಾರ ವರ್ಮಾ ಅವರು ಎಫ್‌ಐಆರ್‌ ದಾಖಲಿಸುವ ಹಾಗೂ ಹಂಗಾಮಿ ಮುಖ್ಯಸ್ಥ ನಾಗೇಶ್ವರ ರಾವ್‌ ತೆಗೆದುಕೊಂಡಿರುವ ವರ್ಗಾವಣೆ ನಿರ್ಧಾರಗಳನ್ನು ರದ್ದು ಪಡಿಸುವುದು ಸಾಧ್ಯವಿದೆ ಎನ್ನಲಾಗಿದೆ. ವರ್ಮಾ ಅವರ ಅಧಿಕಾರ ಅವಧಿ ಜನವರಿ 31ರಂದು ಕೊನೆಗೊಳ್ಳಲಿದೆ. 

ವರ್ಮಾ ವಿರುದ್ಧದ ಆರೋಪಗಳ ತನಿಖೆಯ ನಂತರದ ತೀರ್ಮಾನವನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಉನ್ನತ ಸಮಿತಿಯೇ ತೆಗೆದುಕೊಳ್ಳಬೇಕು. ಒಂದು ವಾರದ ಒಳಗೆ ಸಮಿತಿಯು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿದೆ.

ಆಂತರಿಕ ಕಲಹದ ಕಾರಣ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಕೇಂದ್ರ ಸರ್ಕಾರವು 2018ರ ಅಕ್ಟೋಬರ್ 23ರಂದು ಆದೇಶಿಸಿತ್ತು. ಅವಧಿಗೂ ಮುನ್ನವೇ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಈ ಆದೇಶದ ವಿರುದ್ಧ ಅಲೋಕ್ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು