ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ: ಕಚ್ಚಾಡುತ್ತಿದ್ದ ನಿರ್ದೇಶಕ–ವಿಶೇಷ ನಿರ್ದೇಶಕರಿಗೆ ಕಡ್ಡಾಯ ರಜೆ

ಸಿಬಿಐಗೆ ಮಧ್ಯರಾತ್ರಿ ಸರ್ಜರಿ
Last Updated 24 ಅಕ್ಟೋಬರ್ 2018, 19:03 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐಯಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಉಂಟಾಗಿರುವ ಒಳಜಗಳವನ್ನು ಸರಿಪಡಿಸಲು ಅಭೂತಪೂರ್ವವಾದ ಕ್ರಮವನ್ನೇ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿ ಕೈಗೊಂಡಿದೆ. ಕಚ್ಚಾಟದಲ್ಲಿ ತೊಡಗಿರುವ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ಅವರ ನಂತರದ ಹಿರಿಯ ಅಧಿಕಾರಿಯಾದ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಹಿರಿಯ ಐಪಿಎಸ್‌ ಅಧಿಕಾರಿ ಎಂ.ನಾಗೇಶ್ವರ ರಾವ್‌ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಆದರೆ, ಸರ್ಕಾರದ ಕ್ರಮಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿನ ಅವ್ಯವಹಾರ ಆರೋಪದ ಬಗ್ಗೆ ತನಿಖೆಗೆ ಮುಂದಾದುದೇ ಅಲೋಕ್‌ ಅವರನ್ನು ರಜೆ ಮೇಲೆ ಕಳುಹಿಸಿದ್ದರ ಹಿಂದಿನ ನೈಜ ಕಾರಣ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಪಾದಿಸಿದ್ದಾರೆ.

ತಮ್ಮನ್ನು ರಜೆ ಮೇಲೆ ಕಳುಹಿಸಿದ ಕ್ರಮವನ್ನು ಅಲೋಕ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕರಣ ಶುಕ್ರವಾರ ವಿಚಾರಣೆಗೆ ಬರಲಿದೆ.

ಇದೇ 15ರಂದು ಅಸ್ತಾನಾ ವಿರುದ್ಧ ಲಂಚ ಪಡೆದ ಆರೋಪದಲ್ಲಿ ಸಿಬಿಐಯಲ್ಲಿ ಎಫ್‌ಐಆರ್‌ ದಾಖಲಾಗುವುದರೊಂದಿಗೆ ಅಸ್ತಾನಾ ಮತ್ತು ಅಲೋಕ್‌ ನಡುವೆ ನಡೆಯುತ್ತಿದ್ದ ಶೀತಲ ಸಮರ ಬಯಲಿಗೆ ಬಂದಿತ್ತು. ಇಬ್ಬರೂ ಪರಸ್ಪರರ ವಿರುದ್ಧ ಆರೋಪ ಮಾಡಿಕೊಂಡದ್ದು ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು.

ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವಣ ಸಂಘರ್ಷ ಬೀದಿ ಜಗಳದ ಮಟ್ಟಕ್ಕೆ ಬಂದರೂ ಸರ್ಕಾರ ಮೌನ ತಾಳಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ಸರ್ಕಾರದ ಮಧ್ಯಪ್ರವೇಶ ಬಹಳ ನಿಧಾನವಾಯಿತು. ಹಾಗಾಗಿಯೇ ಈ ಸಂಘರ್ಷ ಇಡೀ ದೇಶದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆಯಿತು ಎಂದು ಕೆಲವು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಅಸ್ತಾನಾ ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಿಸಬೇಕು ಎಂದು ಕೇಂದ್ರ ಸರ್ಕಾರ ಬಯಸಿತ್ತು. ಆದರೆ, ಭಾರಿ ವಿರೋಧದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಅವರಿಗೆ ವಿಶೇಷ ನಿರ್ದೇಶಕ ಹುದ್ದೆಗೆ ಬಡ್ತಿ ನೀಡುವುದನ್ನೂ ಅಲೋಕ್‌ ವಿರೋಧಿಸಿದ್ದರು. ಹೀಗಾಗಿ ಹಿಂದಿನಿಂದಲೇ ಈ ಇಬ್ಬರು ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.

ಕತ್ತಲಲ್ಲೇ ಕಾರ್ಯಾಚರಣೆ

ಮಂಗಳವಾರ

ಹಗಲು: ಸಿಬಿಐ ನಿರ್ದೇಶಕ ಮತ್ತು ವಿಶೇಷ ನಿರ್ದೇಶಕರ ಎಲ್ಲ ಅಧಿಕಾರಗಳನ್ನು ವಾಪಸ್‌ ಪಡೆಯಬೇಕು ಎಂದು ಶಿಫಾರಸು ಮಾಡಿದ ಕೇಂದ್ರ ಜಾಗೃತಿ ಆಯೋಗ (ಸಿವಿಸಿ)

ರಾತ್ರಿ 9: ಅಸ್ತಾನಾ ವಿರುದ್ಧದ ತನಿಖೆಗೆ ದೆಹಲಿ ಹೈಕೋರ್ಟ್‌ ತಡೆ ನೀಡಿಲ್ಲ. ಹಾಗಾಗಿ ಅವರ ಎಲ್ಲ ಅಧಿಕಾರ ರದ್ದತಿಗೆ ಸಿಬಿಐ ನಿರ್ದೇಶಕರಿಂದ ಶಿಫಾರಸು

ಮಧ್ಯರಾತ್ರಿಗೆ ಮುನ್ನ: ಪ್ರಧಾನಿ ನೇತೃತ್ವದಲ್ಲಿ ಸಂಪುಟದ ನೇಮಕಾತಿ ಸಮಿತಿಯ ಸಭೆ; ಸಿವಿಸಿ ಶಿಫಾರಸು ಅನ್ವಯ ಅಲೋಕ್‌ ಮತ್ತು ಅಸ್ತಾನಾ ಅವರಿಗೆ ಕಡ್ಡಾಯ ರಜೆ ಮೇಲೆ ತೆರಳಲು ಸೂಚನೆ; ಮಧ್ಯಂತರ ನಿರ್ದೇಶಕರಾಗಿ ನಾಗೇಶ್ವರ ರಾವ್‌ ನೇಮಕ

ಮಧ್ಯರಾತ್ರಿ 1 ಗಂಟೆ: ನಾಗೇಶ್ವರ ರಾವ್‌ಗೆ ನೇಮಕದ ಮಾಹಿತಿ ರವಾನೆ. ತಕ್ಷಣವೇ ಅಧಿಕಾರ ಸ್ವೀಕಾರ. ಅಲೋಕ್‌ ಮತ್ತು ಅಸ್ತಾನಾ ಕಚೇರಿಗೆ ಬೀಗ ಹಾಕಲು ಸೂಚನೆ, ಈ ಇಬ್ಬರಿಗೆ ನೀಡಿದ್ದ ಚಾಲಕರು ವಾಪಸ್‌, ಇಬ್ಬರಿಗೂ ಮಾಹಿತಿ ರವಾನೆ (ತಮಗೆ ಬೆಳಿಗ್ಗೆ 6 ಗಂಟೆಗಷ್ಟೇ ಮಾಹಿತಿ ನೀಡಲಾಗಿದೆ ಎಂದು ಅಲೋಕ್‌ ಹೇಳಿದ್ದಾರೆ)

ಬುಧವಾರ

ಬೆಳಿಗ್ಗೆ 10.30: ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅಲೋಕ್‌, ಸಿಬಿಐನ ಹಲವು ಅಧಿಕಾರಿಗಳ ವರ್ಗಾವಣೆ ಮಾಹಿತಿ ಬಹಿರಂಗ

ಮಧ್ಯಾಹ್ನ 12.15: ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಹಣಕಾಸು ಸಚಿವ ಅರುಣ್‌ ಜೇಟ್ಲಿ

ಮಧ್ಯಾಹ್ನ 2.30: ‘ಸಿಬಿಐಯಲ್ಲಿ ಒಳಜಗಳ ತಾರಕಕ್ಕೆ ಏರಿದೆ. ಸಂಸ್ಥೆಯ ವಿಶ್ವಾಸಾರ್ಹತೆ, ಘನತೆಗೆ ಧಕ್ಕೆಯಾಗಿದೆ’ ಎಂದು ಹೇಳಿಕೆ ಬಿಡುಗಡೆ ಮಾಡಿದ ಕೇಂದ್ರ

ಮಧ್ಯಾಹ್ನ ನಂತರ: ವಿರೋಧ ಪಕ್ಷಗಳಿಂದ ಕೇಂದ್ರದ ನಿರ್ಧಾರದ ವಿರುದ್ಧ ಆಕ್ರೋಶ

ಕಚೇರಿಗೆ ಬೀಗ

ಅಲೋಕ್‌ ಮತ್ತು ಅಸ್ತಾನಾ ಅವರ ಕಚೇರಿಗೆ ಬೀಗ ಹಾಕಲಾಗಿದೆ. ಅವರಿಗೆ ಒದಗಿಸಲಾಗಿದ್ದ ವಾಹನ ಚಾಲಕರನ್ನು ವಾಪಸ್‌ ಪಡೆಯಲಾಗಿದೆ. ಅಲೋಕ್‌ ಮತ್ತು ಅಸ್ತಾನಾ ಅವರಿಗೆ ಇದ್ದ ಎಲ್ಲ ಅಧಿಕಾರಗಳನ್ನು ಹಿಂದಕ್ಕೆ ಪಡೆಯಲಾಗಿದೆ.

ಜ್ಯೇಷ್ಠತೆ ಉಲ್ಲಂಘನೆ

ಮಧ್ಯಂತರ ನಿರ್ದೇಶಕರಾಗಿ ನೇಮಕವಾಗಿರುವ ನಾಗೇಶ್ವರ ರಾವ್‌ ಅವರು 1986ರ ತಂಡದ ಒಡಿಶಾ ಕೇಡರ್‌ನ ಅಧಿಕಾರಿ. ಸಿಬಿಐಯಲ್ಲಿ ಅವರಿಗಿಂತ ಸೇವಾ ಜ್ಯೇಷ್ಠತೆ ಹೊಂದಿರುವ, ಹೆಚ್ಚುವರಿ ನಿರ್ದೇಶಕ ಸ್ಥಾನದಲ್ಲಿರುವ ಮೂವರು ಅಧಿಕಾರಿಗಳಿದ್ದಾರೆ. ಅವರಲ್ಲಿ ಎ.ಕೆ. ವರ್ಮಾ ಅವರೂ ಒಬ್ಬರು. ವರ್ಮಾ ವಿರುದ್ಧವೂ ಅಸ್ತಾನಾ ಅವರು ದೂರು ನೀಡಿದ್ದಾರೆ.

ರಜೆ ಮೇಲೆ ಕಳಿಸುವ ಅಧಿಕಾರವಿಲ್ಲ: ಕಾಂಗ್ರೆಸ್‌

ಸಿಬಿಐ ನಿರ್ದೇಶಕರನ್ನು ರಜೆಯಲ್ಲಿ ಕಳುಹಿಸುವಂತೆ ಶಿಫಾರಸು ಮಾಡಲು ಸಿವಿಸಿಗೆ ಏನು ಅಧಿಕಾರವಿದೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.ಸಿಬಿಐ ನಿರ್ದೇಶಕರ ವರ್ಗಾವಣೆ ಅಥವಾ ಬಡ್ತಿಯಂತಹ ವಿಚಾರದಲ್ಲಿಯೂ ಆಯ್ಕೆ ಸಮಿತಿಯ ಸಮ್ಮತಿ ಬೇಕು ಎಂಬುದು ನಿಯಮ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ. ಮಧ್ಯಂತರ ನಿರ್ದೇಶಕರ ನೇಮಕ ನಿರ್ಧಾರವೂ ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ.

ಸಿಬಿಐ ನಿರ್ದೇಶಕರ ಆಯ್ಕೆಗೆ ಪ್ರಧಾನಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರು ಸದಸ್ಯರಾಗಿರುವ ಸಮಿತಿ ಇದೆ. ಈ ಸಮಿತಿ ನೇಮಿಸಿದ ನಿರ್ದೇಶಕರನ್ನು ಅದರ ಅನುಮತಿ ಇಲ್ಲದೇ ರಜೆಯಲ್ಲಿ ಕಳುಹಿಸಿರುವುದು ನಿಯಮಗಳ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT